ಮನೆಯ ಒಳಗೂ ಹೊರಗೂ...
(೧ ಸೆಪ್ಟೆಂಬರ್ ೨೦೦೬ ರ ಸಂಚಿಕೆಯ ಸಂಪಾದಕೀಯ)

ಸತ್ಯಮೂರ್ತಿ ಆನಂದೂರು
ಬೆಂಗಳೂರು
smanandur@vikrantakarnataka.com
ನಿಮ್ಮ
ಪತ್ರಿಕೆಯ ಸ್ಪೆಷಾಲಿಟಿ ಏನು?
ಪತ್ರಿಕೆ ಹೊರಬರುವವರೆಗೂ ವಿಕ್ರಾಂತ
ಕರ್ನಾಟಕ ವಾರಪತ್ರಿಕೆಯ ಬಗೆಗೆ ಕೇಳಿಬಂದದ್ದು ಇಂಥ ಕುತೂಹಲದ
ಪ್ರಶ್ನೆಗಳೇ. ಕನ್ನಡದಲ್ಲಿ ಪತ್ರಿಕೆಗಳಿಗಂತೂ ಕೊರತೆಯಿಲ್ಲ.
ಆರೋಗ್ಯ, ಕಾನೂನು, ಧರ್ಮ, ವೈಚಾರಿಕತೆ, ಸಿನಿಮಾ, ರಾಜಕೀಯ...
ಹೀಗೆ ಆರಂಭವಾಗಿ ಅಡುಗೆ, ಗೃಹಾಲಂಕಾರ, ತೋಟಗಾರಿಕೆಯವರೆಗೆ ಸಾಗಿ,
ದಂಪತಿಗಳ ಸರಸದ ಪಿಸುಮಾತು, ವಿರಸದ ಬೊಬ್ಬೆಯವರೆಗೂ ಪತ್ರಿಕಾರಂಗ
ಚಾಚಿಕೊಂಡಿದೆ. ಹಾಗಾಗಿ ಪತ್ರಿಕಾರಂಗ ನುಗ್ಗದ ಕ್ಷೇತ್ರವೇ ಇಲ್ಲ
ಎಂದರೂ ತಪ್ಪಲ್ಲ.
ಎರಡನೇ ಸಂಚಿಕೆಯನ್ನು ಸಿದ್ಧಪಡಿಸುವ ಈ ಸಂದರ್ಭದಲ್ಲಿ
ಮೇಲಿನ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿರಬಹುದು.
ಇಲ್ಲೊಂದು ವಿಶೇಷ ಸಂಗತಿಯನ್ನು ನಿಮ್ಮ ಮುಂದಿಡುವುದು
ಸೂಕ್ತ. ಮೊದಲ ಸಂಚಿಕೆಗೆ ಮುಖಪುಟ ಲೇಖನ ಸಿದ್ಧಪಡಿಸುವಾಗಲೇ ಮುಖ್ಯಮಂತ್ರಿ
ಕುಮಾರಸ್ವಾಮಿಯವರ ಪಕ್ಷದಲ್ಲಿ ಭಿನ್ನಮತ ಬೆಂಕಿ ಹತ್ತಿಕೊಂಡು
ಉರಿಯತೊಡಗಿತ್ತು. ಆ ಬೆಂಕಿಯು ಜಾಸ್ತಿ ಕಾಣಿಸಿಕೊಂಡಿದ್ದು ಶಾಸಕರ ವಲಯದಲ್ಲಾದರೂ
ಕಿಡಿ ಹೊರಟಿದ್ದು ಮುಖ್ಯಮಂತ್ರಿಯವರ ಕುಟುಂಬದ ಅಡುಗೆ ಮನೆಯಿಂದ.
ಆದರೆ ಕುಮಾರಸ್ವಾಮಿಯವರು ಅನುಭವಿಸುತ್ತಿರುವ
ಸ್ವಯಂಕೃತ ಕಿರಿಕಿರಿಗಳು ಒಂದೆರಡಲ್ಲ. ಒಂದೆಡೆ ಗಣಿ ಹಗರಣ, ಇನ್ನೊಂದೆಡೆ
ಬಿಎಂಐಸಿ, ಮತ್ತೊಂದೆಡೆ ಭಿನ್ನಮತದ ಬಾವುಟ, ಇದರ ನಡುವೆ ಮನೆಯಲ್ಲೇ
ಹುಟ್ಟಿಕೊಂಡಿರುವ ಅಸಹನೆಯ ಅಪಸ್ವರ. ಇಡೀ ಮನೆಯಲ್ಲಿ
ಕುಮಾರ ಸಹೋದರ ರೇವಣ್ಣನವರನ್ನು ಮುಖ್ಯಮಂತ್ರಿಯಾಗಿಸುವ
ಬಗೆಗೆ ದೊಡ್ಡಮಟ್ಟದ ಲಾಬಿಯೇ ನಡೆದಿದೆ ಎಂಬುದನ್ನು ಅವರ ಆಪ್ತರೇ
ಹೇಳಿಕೊಳ್ಳುತ್ತಿದ್ದಾರೆ.
ತಮ್ಮ ಪರವಾಗಿ ನಿಂತ ಶಾಸಕರನ್ನು ಸಮಾಧಾನ
ಪಡಿಸುವುದು ಕುಮಾರ್‌ಗೆ ಕಷ್ಟವಾಗಲಿಕ್ಕಿಲ್ಲ. ಆದರೆ ಮನೆಯೊಳಗಣ
ಬೆಂಕಿ ಆರಿಸುವುದು ಮಾತ್ರ ಅವರ ಕೈಯಿಂದಾಗದ ಕೆಲಸ ಎಂದೇ ಭಾವಿಸಲಾಗುತ್ತದೆ.
ಯಾಕೆಂದರೆ ಈ ಎಲ್ಲ ಬೆಳವಣಿಗೆಗಳ ಲಗಾಮು ದೇವೇಗೌಡರ
ಕೈಯಲ್ಲಿದೆ.
ಈ ವಾರದ ಪತ್ರಿಕೆ ರೂಪಿಸುವ ಸಂದರ್ಭದಲ್ಲಿ
ಸರ್ಕಾರ ಯಾವುದೇ ಸಮಯದಲ್ಲಿ ಪತನವಾಗುವ ಲಕ್ಷಣಗಳು
ಗೋಚರಿಸುತ್ತಿವೆ. ಜನಾರ್ಧನರೆಡ್ಡಿಯವರು ಲಂಚದ ದಾಖಲೆಯನ್ನು
ಒಂದೊಂದಾಗಿ ಹೊರ ಹಾಕುತ್ತಿದ್ದರೆ, ದೇವೇಗೌಡರು ಸೋನಿಯಾಗಾಂಧಿ
ಬೆಂಗಳೂರಿಗೆ ಆಗಮಿಸುವುದನ್ನೇ ಕಾಯುತ್ತಿದ್ದಾರೆ. ಸರ್ಕಾರದ ಬಗ್ಗೆ
ಗೌಡರನ್ನು ಮಾತಾಡಿಸಲು ಹೋದಾಗ ಅವರು ಹೇಳಿದ್ದು : `ಈಗ ನಾನೇನೂ
ಮಾತಾಡಲ್ಲ, ಸೋನಿಯಾಗಾಂಧಿ ಬಂದು ಹೋಗಲಿ... ಆಮೇಲೆ ಮಾತಾಡ್ತೇನೆ.
ಅಂದರೆ ಏನರ್ಥ? ಇನ್ನೊಂದು ಚದುರಂಗದಾಟದ ಸಿದ್ಧತೆ
ಆರಂಭವಾಗಿದೆಯೇ?
ನಮ್ಮ ಸಾಂಸ್ಕೃತಿಕ ಲೋಕ ಸಾರ್ವಜನಿಕ ಬದುಕು
ಸಹನೀಯವಾಗಿ ಸಾಗಬೇಕಾದರೆ ನಮ್ಮನ್ನು ಆಳುವ ವ್ಯವಸ್ಥೆಗೆ ನೈತಿಕ
ಬಲ ತುಂಬುವ ಆತ್ಮವಿಶ್ವಾಸ ಅಗತ್ಯವಾಗುತ್ತದೆ. ಯುವ ಮುಖ್ಯಮಂತ್ರಿ
ಕುಮಾರಸ್ವಾಮಿಯವರನ್ನು ಈಗ ಕಂಗೆಡಿಸಿರುವುದು ಇಂಥ
ಧೃತಿಗೆಡಿಸುವ ವಿದ್ಯಮಾನಗಳೇ. ಮುಖ್ಯಮಂತ್ರಿ ಯೊಬ್ಬರು `ಕಡಿಮೆ
ಅವಧಿಯಲ್ಲಿ ಭ್ರಷ್ಟ ಎಂದು ಕರೆಸಿಕೊಂಡಿರುವುದಕ್ಕೆ
ದುಃಖವಾಗುತ್ತದೆ ಎನ್ನುವುದು; `ಬೇಕಾದರೆ ರಾಜೀನಾಮೆ
ಕೊಡುತ್ತೇನೆ ಎಂದು ನುಡಿಯುವುದು- ಇದೆಲ್ಲವೂ ನಮ್ಮ ಆಡಳಿತ
ವ್ಯವಸ್ಥೆಯ ಸ್ಥಿತಿಯನ್ನು ಮುಖಕ್ಕೆ ರಾಚುವಂತೆ ಬಣ್ಣಿಸುವ
ಗೋಡೆ ಬರಹದಂತೆ ಕಾಣುತ್ತದೆ.
`ಈ ಪತ್ರಿಕೆ ಕುಟುಂಬಕ್ಕೆ ಸೀಮಿತವಾಗಿರಲಿ,
ರಾಜಕೀಯ ಬೇಕಿಲ್ಲ' ಎಂದು ಗೆಳೆಯರೊಬ್ಬರು ಪತ್ರ ಬರೆದಿದ್ದರು.
ಆದರೆ ಇಂದು ಕುಮಾರಸ್ವಾಮಿಯವರ ಮನೆಯಂತೆ ಎಲ್ಲರ
ಕುಟುಂಬದೊಳಗೂ ರಾಜಕೀಯ ಆವರಿಸಿದೆ. ನಮ್ಮ ಸಾಮಾಜಿಕ ಬದುಕು
ಸಾಂಸ್ಕೃತಿಕ ಸುಖ-ದುಃಖಗಳು ಈ ವ್ಯವಸ್ಥೆಯ ಭಾಗವಾಗುತ್ತಿದೆ. ಹಾಗಾಗಿ
ಎಲ್ಲರೂ ಆಳುವವರ ಮೇಲೆ ಹದ್ದಿನ ಕಣ್ಣಿಟ್ಟು ವೈಯಕ್ತಿಕ ಬದುಕನ್ನು
ಎಚ್ಚರಿಕೆಯಿಂದ ರೂಪಿಸಿಕೊಳ್ಳಬೇಕಾಗುತ್ತದೆ.
ಪತ್ರಿಕೆಗೆ ಎಲ್ಲವೂ ಬೇಕು, ಎಲ್ಲರೂ ಬೇಕು, ನೆಮ್ಮದಿ,
ಶಾಂತಿ, ಖುಷಿ, ಕೌತುಕ, ಎಲ್ಲವೂ... ಹಾಗೆಯೇ ನಮ್ಮನ್ನು ಕಾಪಾಡಬಲ್ಲ
ಎಚ್ಚರ ಕೂಡ!