ಎದೆ ತುಂಬಿ ಹಾಡಿದ `ರಾಷ್ಟ್ರಕವಿ'
(೩ ನವೆಂಬರ್ ೨೦೦೬ರ ಸಂಚಿಕೆಯ ಸಂಪಾದಕೀಯ)

ಸತ್ಯಮೂರ್ತಿ ಆನಂದೂರು
ಬೆಂಗಳೂರು
smanandur@vikrantakarnataka.com
ಇದೇನೂ ಅಚ್ಚರಿಯ ಆಯ್ಕೆಯಾಗಿರಲಿಲ್ಲ. ರಾಷ್ಟ್ರಕವಿ
ಯಾರಾಗಬಹುದೆಂಬ ಸರ್ಕಾರದ ಆಯ್ಕೆಯ ಪ್ರಶ್ನೆ ಬಂದಾಗ ಮೊದಲು
ಕೇಳಿ ಬಂದುದೇ ಡಾ. ಜಿ.ಎಸ್. ಶಿವರುದ್ರಪ್ಪನವರ ಹೆಸರು. ಹಾಗೆ
ನೋಡಿದರೆ ಆಯ್ಕೆಗೆ ಇದ್ದುದು ಎರಡೇ ಹೆಸರು. ನವೋದಯದ
ಕಾಲದಿಂದಲೂ ಕಾವ್ಯದ ಹಣತೆಯನ್ನು ಆರದ ಹಾಗೆ ಜೋಪಾನ
ಮಾಡಿಕೊಂಡು ಬಂದ ಡಾ.ಜಿ.ಎಸ್. ಶಿವರುದ್ರಪ್ಪ ಹಾಗೂ ಚೆಂಬೆಳಕಿನ
ಕವಿ ಚೆನ್ನವೀರ ಕಣವಿ ಅವರದು. ಇವರಿಬ್ಬರ ಕಾವ್ಯದ ತೂಕದಲ್ಲಿ
ಗುಲಗಂಜಿಯ ಅಂತರ ಇರಬಹುದು. ಅಂತಿಮವಾಗಿ ಜಿಎಸ್‌ಎಸ್
ರಾಷ್ಟ್ರಕವಿಯಾದರು. ಕನ್ನಡದ ಮೂರನೇ ರಾಷ್ಟ್ರಕವಿ ಎಂಬ
ಹೆಗ್ಗಳಿಕೆ ಕಡೆಗೂ ನವೋದಯದ ಗಟ್ಟಿತನಕ್ಕೆ, ಸಹೃದಯ
ಮನಸ್ಸಿಗೆ, ಕ್ರಿಯಾಶೀಲ ಚೇತನಕ್ಕೆ ದಕ್ಕಿದಂತಾಯಿತು.
ಎಲ್ಲರ ಪ್ರೀತಿಯ ಜಿಎಸ್‌ಎಸ್ ಕುವೆಂಪು ಅವರ ಕಾಲದಿಂದಲೂ ಕಾವ್ಯದ
ಜೀವನದಿಯೊಡನೆ ನದಿಯಾಗಿ ಹರಿದು ಬಂದವರು. ಅವರ ಕಾವ್ಯದ
ಆಶಯಗಳೂ ಹಾಗೇಯೇ ಎಂದೂ ಉನ್ಮತ್ತ ಪ್ರವಾಹದಂತಾಗಲಿ,
ಧುಮ್ಮಿಕ್ಕುವ ಜಲಪಾತದಂತಾಗಲಿ ಅಲ್ಲ.
ಅದೊಂದು ಎಲ್ಲ ಕೊರಕಲುಗಳನ್ನು, ಕಲ್ಲು ಬಂಡೆಗಳನ್ನು, ಉಬ್ಬು
ತಗ್ಗುಗಳನ್ನು ತನ್ನ ಒಡಲೊಳಗೆ ತುಂಬಿಕೊಂಡು ಪ್ರಶಾಂತವಾಗಿ
ಹರಿಯುವ ಮಹಾನದಿ; ಬಿರುಗಾಳಿ, ಭೋರ್ಗರೆಯುವ ಮಳೆ,
ಯಾವುದಕ್ಕೂ ಪ್ರಚೋದನೆಗೊಳ್ಳದ ಪ್ರಶಾಂತ ನದಿ.
ರಾಷ್ಟ್ರಕವಿ ಅನ್ನುವುದು ಯಾವುದೇ ಪಟ್ಟವಲ್ಲ, ಪದವಿಯಲ್ಲ.
ಅದು ಜನಮಾನಸದಲ್ಲಿ ಬೆರೆತ ಸಾಂಸ್ಕೃತಿಕ ಲೋಕದ ಪ್ರತಿನಿಧಿಗೆ
ಸಲ್ಲುವ ಅತ್ಯುನ್ನತ ಗೌರವ. ಗೋವಿಂದ ಪೈ, ಕುವೆಂಪು ನಂತರ
ಅಂಥದೊಂದು ಸುಸಂಸ್ಕೃತ ಪರಂಪರೆಯನ್ನು ಮುಂದುವರಿಸಿದ
ಜಿಎಸ್‌ಎಸ್ ಅವರಿಗೆ ಸಂದ ಈ ಗೌರವದಿಂದ `ರಾಷ್ಟ್ರಕವಿ'ಯ ಸ್ಥಾನಕ್ಕೂ
ಒಂದು ಗೌರವ ಸಂದಂತಾಗಿದೆ. ಕವಿಯಿಂದ ಈ ಪ್ರಶಸ್ತಿಯ ಮೌಲ್ಯವೂ
ಮತೊಮ್ಮೆ ಹೆಚ್ಚಿದಂತಾಗಿದೆ.
ಕುವೆಂಪು ಅವರ ಆಪ್ತ ಶಿಷ್ಯರಲ್ಲಿ ಜಿಎಸ್‌ಎಸ್ ಒಬ್ಬರು. ತಮ್ಮ
ವ್ಯಕ್ತಿತ್ವವನ್ನು ಕುವೆಂಪು ಅವರಿಂದಲೇ ಸ್ಫೂರ್ತಿಯುತವಾಗಿ
ರೂಪಿಸಿಕೊಂಡ ಜಿಎಸ್‌ಎಸ್ ಬದುಕಿನುದ್ದಕ್ಕೂ ಕುವೆಂಪು ಅವರ
ಕಾವ್ಯದಂತೆಯೇ ಅವರ ಸಾಮಾಜಿಕ ಕಳಕಳಿಯನ್ನು ಜೀವನ
ಕ್ರಮವಾಗಿ ಅಳವಡಿಸಿಕೊಂಡವರು. ನೈತಿಕ ಬದುಕಿನ
ಅರ್ಥಪೂರ್ಣತೆಯೊಂದಿಗೆ ಕಾಲದ ಜೊತೆಯಲ್ಲಿ ಬದುಕಿದವರು. ಜಿಎಸ್‌ಎಸ್
ಕಾವ್ಯರಚನೆಯ ಮಧ್ಯಭಾಗದಲ್ಲೇ ನವ್ಯ ಪಂಥದ ಉತ್ಕರ್ಷದ
ಚಿಲುಮೆಯೊಡೆದಾಗ ಒಂದಷ್ಟು ಕಾಲ ಜಿಎಸ್‌ಎಸ್ ಆ ದನಿಗೂ
ಮಾರುಹೋದದ್ದಿದೆ. `ಸಾಮಗಾನ'ದ ಹಲವು ಪದ್ಯಗಳು ನವ್ಯದ
ದನಿ ಪಡೆದದ್ದೂ ಇದೆ. ಆದರೆ ನವೋದಯ ಆ ಕಂಪು ಮಾಸಲಿಲ್ಲ.
ಕುವೆಂಪು ಅವರಿಂದ ಜಿಎಸ್‌ಎಸ್ ಅದೆಷ್ಟು ಪ್ರಭಾವಿತರಾಗಿದ್ದರೆಂದರೆ
ಒಂದು ಪದ್ಯ ಕುವೆಂಪು ಕುರಿತಂತೆಯೇ ಇದೆಯೆಂದು ಅವರೇ
ಹೇಳಿಕೊಂಡಿದ್ದಾರೆ.
ಕಂಡ ಕಂಡ ಕಡೆ ಸೊಂಡಿಲು ಚಾಚುವ
ಆನೆಗೆ ಅಂಕುಶವಿಲ್ಲ
ಕಾಡುಕುದುರೆಗಳು ಹೂಡಿದ ರಥಕ್ಕೆ
ದಾರಿಯ ಹಂಗಿಲ್ಲ.
ನಿರಂಕುಶ ಕವಿಯಾಗಿ ಕುವೆಂಪು ಆ ಕಾಲದಲ್ಲಿ ನೀಡಿದ ಆ
ವೇಗೋತ್ಕರ್ಷವನ್ನು ಜಿಎಸ್‌ಎಸ್ ಗುರುತಿಸಿದ್ದು ಕಂಡಕಂಡ ಕಡೆ
ಸೊಂಡಿಲು ಚಾಚುವ ಆನೆಗೆ. ಅಂತಿಮವಾಗಿ ಈ ದಾರಿಯೇ ಅತ್ಯಂತ
ಸೂಕ್ತವಾದುದು ಎಂದು ನವ್ಯದ ಠೇಂಕಾರದ ಅಬ್ಬರವನ್ನು ತೊರೆದು
ಎದೆ ತುಂಬಿ ಹಾಡುವ ಕವಿಯಾದರು. ಕುವೆಂಪು ಅವರನ್ನು ಜಿಎಸ್‌ಎಸ್
ಗುರುತಿಸಿರುವಂತೆಯೇ ಜಿಎಸ್‌ಎಸ್ ಅವರ ಬರಹದ ವಿಸ್ತಾರ ಕೂಡ
ಅದೇ ಬಗೆಯದು. ತಮ್ಮದೇ ಸಾತ್ವಿಕ ಶೈಲಿಯಲ್ಲಿ, ಶಾಂತ
ರೀತಿಯಲ್ಲಿ, ಸರಳವಾದ ಭಾಷೆಯಲ್ಲಿ ಕವಿಯಾದರು;
ಭಾವಗೀತಕಾರರಾದರು; ಅತ್ಯುತ್ತಮ ಗದ್ಯ ಲೇಖಕರಾದರು;
ಸಹೃದಯ ವಿಮರ್ಶಕರಾದರು. ಗದ್ಯ, ಪದ್ಯ, ವಿಮರ್ಶೆ-ಹೀಗೆ
ಎಲ್ಲೆಡೆ, ಎಲ್ಲರ ಹೃದಯ ತಟ್ಟಿದ ಬರಹಗಾರರಾದರು; ಲಕ್ಷಾಂತರ
ಶಿಷ್ಯಕೋಟಿಗೆ ಪ್ರೀತಿಯ `ಜಿಎಸ್‌ಎಸ್' ಆದರು.
ಕನ್ನಡದ ಮೂರನೆಯ ರಾಷ್ಟ್ರಕವಿಗೆ ಹೃದಯ ತುಂಬಿದ
ನಮನ.
ಇನ್ನಷ್ಟು
ಹಣತೆ
ಕಿರಿದಾದರೇನು ಬೆಳಕು ಕಿರಿದೆ?
ಒಂದು
ಆತ್ಮ ವಿಶ್ವಾಸದ ಕೋಲ್ಮಿಂಚು
ನಕಲಿಗೆ
ಹಾಳಾದ ಅಸಲೀ ಸಮಯ
ಇತಿಹಾಸದ
ಗಾಯ ಕೆರೆಯುವ ಮುನ್ನ
ಎಲ್ಲ
ತತ್ವದ ಎಲ್ಲೆ ಮೀರಿ...
ಮಾಗಿದ
ಮನಸ್ಸು; ಹರೆಯದ ಹುಮ್ಮಸ್ಸು
ಸಿದ್ಧರಾಮಯ್ಯ
ಕಷ್ಟಗಳು ನೂರೆಂಟು...
ಹೊನ್ನ
ರಾಶಿಯಲ್ಲ; ಬೊಗಸೆ ಪ್ರೀತಿ
ನಿಮ್ಮ
ಪತ್ರಿಕೆಯ ಸ್ಪೆಷಾಲಿಟಿ ಏನು?
ಹಾರುವ
ಕುದುರೆಯ ಬೆನ್ನ ಏರಿ ...