ಹಣತೆ ಕಿರಿದಾದರೇನು ಬೆಳಕು ಕಿರಿದೆ?
(೨೭ ಅಕ್ಟೋಬರ್ ೨೦೦೬ರ ಸಂಚಿಕೆಯ ಸಂಪಾದಕೀಯ)

ಸತ್ಯಮೂರ್ತಿ ಆನಂದೂರು
ಬೆಂಗಳೂರು
smanandur@vikrantakarnataka.com
ಬಂತೇ ದೀಪಾವಳಿ? ಇಷ್ಟೊಂದು ಹಣತೆಗಳಲ್ಲಿ
ಎಣ್ಣೆಯಿಲ್ಲ
ಬರೀ ಮಾತುಗಳ ಕಡ್ಡಿ ಗೀಚುವೆಯಯಲ್ಲ
ನಿನಗೆ ನಾಚಿಕೆಯಿಲ್ಲ?
ಕವಿ ಜಿಎಸ್‌ಎಸ್ ಸುಮಾರು ನಾಲ್ಕು ದಶಕದ ಹಿಂದೆ ಬರೆದ ಈ ಸಾಲುಗಳು
ಪ್ರತಿ ದೀಪಾವಳಿಯ ಸಂದರ್ಭದಲ್ಲೂ ಹೊಸ ಹೊಸ ಅರ್ಥಗಳನ್ನು
ಹೊಮ್ಮಿಸುತ್ತ ನಮ್ಮೆದೆಯಲ್ಲಿ ಪ್ರತಿಧ್ವನಿಸತೊಡಗುತ್ತದೆ;
ಕವಿಯ ಆಶಯದ ಹಲವು ಚಿಗುರುಗಳು ಭಸ್ಮವಾದ ವಾಸ್ತವದ
ಚಿತ್ರ ಕಣ್ಣೆದುರು ದೃಶ್ಯಗಳಾಗಿ ನಿಲ್ಲುತ್ತವೆ. ಮತ್ತೆ ಕರ್ನಾಟಕ
ಕರಾವಳಿಯಲ್ಲಿ ಸ್ಫೋಟಿಸಿದ ಗಲಭೆಗಳು ಕಡ್ಡಿ ಗೀಚುವವರ,
ಪ್ರಶಾಂತ ವಾತಾವರಣವನ್ನು ಕಲಕುವ ವಿಘ್ನ ಸಂತೋಷಿಗಳಿಗೆ
ಚೆಲ್ಲಾಟದ ತಾಣವಾಗಿ ಇದೀಗ ಶಾಂತ ಸ್ಥಿತಿಗೆ ತಲುಪಿದೆ.
ನಮ್ಮ ಬಹುತೇಕ ಪತ್ರಿಕೆಗಳಲ್ಲಿ ಇದೊಂದು
ಮತೀಯ ಗಲಭೆಯೆಂದೂ, ಇದಕ್ಕೆ ಪೊಲೀಸರು, ರಾಜಕಾರಣಿಗಳು
ಕಾರಣರೆಂದೂ ವರದಿಯಾಯ್ತು. ಬಹುಶಃ ಇಂಥ ಸಂದರ್ಭಗಳಲ್ಲಿ
ಪತ್ರಿಕೆಗಳ ಕಣ್ಣಿಗೆ ಸಿಲುಕುವ ಎರಡೇ ಗುಂಪುಗಳಿವು. ಅದನ್ನು
ಬಿಟ್ಟರೆ ಒಬ್ಬೊಬ್ಬರು ಒಂದೊಂದು ಜನಾಂಗದ ಪರವಾಗಿ ನಿಂತು
ಮತ್ತೊಂದು ಜನಾಂಗವನ್ನು ಹೀನಾಮಾನ ಬೈಯುತ್ತ ಇಡೀ
ವೈಷಮ್ಯದ ವರ್ತನೆಗೆ ಅವರೇ ಕಾರಣೀಭೂತರೆಂದು ಫರ್ಮಾನು
ಹೊರಡಿಸಿ ತೃಪ್ತಿಪಟ್ಟುಕೊಂಡರು.
ಆದರೆ ಕರಾವಳಿಯಲ್ಲಿ ನಡೆದ, ನಡೆಯುತ್ತಿರುವ ಒಂದು ಕ್ಷುಲ್ಲಕ ಕಾರಣ
ಪ್ರತಿ ವರ್ಷ, ಸಾಧ್ಯವಾದರೆ ವರ್ಷಕ್ಕೆರಡು ಬಾರಿ ಪುನರಾವರ್ತನೆ
ಹೊಂದುತ್ತಿರುವುದನ್ನು ಕಾಣುತ್ತಲೇ ಇದ್ದೇವೆ. ಅದು ಗೋಹತ್ಯೆಗೆ
ಸಂಬಂಧಿಸಿದ್ದು. ಕರಾವಳಿಯ ಉದ್ದಕ್ಕೂ ಗೋಮಾಂಸ ತಿನ್ನುವವರಲ್ಲಿ
ಹಿಂದೂ-ಮುಸ್ಲಿಮರೆಂಬ ಭೇದವೇ ಇಲ್ಲ. ಮೀನು ತಿನ್ನುವಷ್ಟೇ
ಸಂಖ್ಯೆಯಲ್ಲಿ ಗೋಮಾಂಸ ಭಕ್ಷಣೆಯ ಕಾಯಕವೂ
ನಡೆಯುತ್ತಿದೆ. ಬಹುತೇಕ ಜನರಿಗೆ ಅದು ಆಹಾರ ಪದ್ಧತಿಯೂ
ಹೌದು. ಆದರೆ ಕಟಾವಿನ ಕಾಯಕ ಮಾಡುವವರು ಮುಸ್ಲಿಮರು
ಮಾತ್ರ. ಹಾಗಾಗಿ ಗಲಾಟೆ ಎದ್ದಾಗಲೆಲ್ಲ ಮುಸ್ಲಿಮರ ಮೇಲೆ
ಗೋಮಾಂಸದ ಅಥವಾ ಗೋಹತ್ಯೆ ಎನ್ನುವ ಕಾರಣ ಧುತ್ತೆಂದು
ನಿಲ್ಲುತ್ತದೆ. ಇದು ಹಿಂದೂ ಮೂಲಭೂತವಾದಿಗಳ ನಿರಂತರ
ಚಲಾವಣೆಯ ಒಂದು ದಾಳ.
ಅಂದಮಾತ್ರಕ್ಕೆ ಇಲ್ಲಿ ಮುಸ್ಲಿಂ ಮೂಲಭೂತವಾದಿಗಳೇನೂ ಸಾಚಾ ಅಲ್ಲ.
ಇವರಷ್ಟೇ ಕಠೋರವಾಗಿ ಹಿಂಸೆಯಲ್ಲಿ, ಸಾಮಾನ್ಯ ಜನರ ನೆಮ್ಮದಿ
ಹಾಳುಗೆಡುವುವ ಕ್ರಿಯೆಯಲ್ಲಿ ನಂಬಿಕೆಯುಳ್ಳವರು ಅವರು.
ಇತ್ತೀಚೆಗೆ ನಡೆದ ದಸರಾದಲ್ಲಿ ಬಪ್ಪನಾಡು ಕ್ಷೇತ್ರದ ಟ್ಯಾಬ್ಲೋ
ಬಂದಾಗ ಈ ಮೂಲಭೂತವಾದಿಗಳು ಕ್ಯಾತೆ ತೆಗೆದರು. ಬಪ್ಪಬ್ಯಾರಿ
ದೇವಿಗೆ ಶರಣಾಗಿ ಕೂತಿರುವ ದೃಶ್ಯ ಅವರ ನಂಬಿಕೆಯನ್ನು
ಕೆಣಕಿತಂತೆ. ಎಷ್ಟೋ ವರ್ಷಗಳಿಂದ `ಬಪ್ಪನಾಡು ಕ್ಷೇತ್ರ ಮಹಾತ್ಮೆ'
ಎಂಬ ಯಕ್ಷಗಾನ, ಬಪ್ಪಬ್ಯಾರಿಯಾಗಿ ದಿವಂಗತ ಶೇಣಿ
ಗೋಪಾಲಕೃಷ್ಣಭಟ್ಟರ ಅಭಿನಯ ಜನಮಾನಸದಲ್ಲಿ ಅಚ್ಚಳಿಯದೆ
ಉಳಿದಿದೆ. ಆದರೆ ಈಗ ಮುಸ್ಲಿಂ ಮೂಲಭೂತವಾದಿಗಳಿಗೆ ಇದು
ಸಕಾರಣವಾದ ದಾಳವಾಗಿ ಪ್ರಚೋದನೆಗೆ ಕಾರಣವಾಯಿತು.
ಒಬ್ಬರಿಗೆ ಗೋಹತ್ಯೆಯ ಕಾರಣವಾದರೆ ಇನ್ನೊಬ್ಬರಿಗೆ ಬಪ್ಪಬ್ಯಾರಿ! ಕದನ
ಆರಂಭವಾಗಿ ಕರಾವಳಿಯ ನೆಲದ ಮೇಲೆ ಹೆಣಗಳುರುಳಿದಾಗಲೇ ಈ
ಕ್ಷುದ್ರ ಮನಸ್ಸಿನ ಪಾತಕಿಗಳಿಗೆ ಸಮಾಧಾನವಾದದ್ದು...
ದೀಪಾವಳಿಯ ದೀಪದ ಬಗ್ಗೆ, ಸಣ್ಣ ಹಣತೆಯೊಂದು ಕತ್ತಲ ಗರ್ಭ ಸೀಳಿ
ಬೆಳಕನ್ನು ಚೆಲ್ಲುವ ಬಗ್ಗೆ ಮಾತನಾಡುವ ಮೊದಲು ನೊಂದ
ಜೀವಗಳಿಗೆ ಕವಿವಾಣಿಯ ಮೂಲಕವೇ ಒಂದು ಸಾಂತ್ವನದ ನುಡಿ...
ಹಣತೆ ಹಚ್ಚುತ್ತೇನೆ
ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ
ಇರುವಷ್ಟು ಹೊತ್ತು, ನನ್ನ ಮುಖ ನೀನು,
ನಿನ್ನ ಮುಖ ನಾನು
ನೋಡಬಹುದೆಂಬ ಒಂದೇ ಆಸೆಯಿಂದ.
ಹಣತೆಯಷ್ಟೇ ಸರಳವಾದ ಮಾತು; ಅದರ ಬೆಳಕಿನ ಪ್ರಖರತೆ ಎಲ್ಲ
ಮನಸ್ಸುಗಳನ್ನು ತುಂಬಲಿ ಎಂಬುದೇ ನಮ್ಮ ಆಶಯ. ದೀಪಾವಳಿಯ
ಈ ಸಂಭ್ರಮ ಎಲ್ಲರಿಗೂ ಸುಖ ತರಲಿ... ಪತ್ರಿಕೆಯ ಓದುಗರು,
ಬರಹಗಾರರು, ಏಜೆಂಟರು, ಜಾಹೀರಾತುದಾರರು ಹಾಗೂ ಹಿತೈಷಿಗಳಿಗೆ
ದೀಪದ ಹಬ್ಬದ ಶುಭ ಹಾರೈಕೆಗಳು.
ಇನ್ನಷ್ಟು
ಒಂದು
ಆತ್ಮ ವಿಶ್ವಾಸದ ಕೋಲ್ಮಿಂಚು
ನಕಲಿಗೆ
ಹಾಳಾದ ಅಸಲೀ ಸಮಯ
ಇತಿಹಾಸದ
ಗಾಯ ಕೆರೆಯುವ ಮುನ್ನ
ಎಲ್ಲ
ತತ್ವದ ಎಲ್ಲೆ ಮೀರಿ...
ಮಾಗಿದ
ಮನಸ್ಸು; ಹರೆಯದ ಹುಮ್ಮಸ್ಸು
ಸಿದ್ಧರಾಮಯ್ಯ
ಕಷ್ಟಗಳು ನೂರೆಂಟು...
ಹೊನ್ನ
ರಾಶಿಯಲ್ಲ; ಬೊಗಸೆ ಪ್ರೀತಿ
ನಿಮ್ಮ
ಪತ್ರಿಕೆಯ ಸ್ಪೆಷಾಲಿಟಿ ಏನು?
ಹಾರುವ
ಕುದುರೆಯ ಬೆನ್ನ ಏರಿ ...