ಕೊನೆಯ ಹನಿಯಂತೆ..
ಕವಿಕಿರಣ
kiransf@hotmail.com
ಹಕ್ಕಿ ಹಾರುತಿದೆ ನೋಡೆ ಸಖಿ,
ನೆನಪುಗಳ ರೆಕ್ಕೆ ಕಟ್ಟಿ
ಭಾವದ ಹಕ್ಕಿ ಹಾರುತಿದೆ ನೋಡೆ...
ಎದೆಯ ಅಣೆಕಟ್ಟು ಒಡೆದು
ಹರಿಯುತಿದೆ ಜಲವು ನೋಡೆ
ಭಾವ ಭಾಗೀರಥಿಯ ತಡೆಯಲು ನೋಡಿದೆ
ಎಂಥ ಹುಚ್ಚು ನೋಡೆ ನನಗೆ...
ಏಕತಾನತೆಯ ನಡುವೆ ಬೆರೆವ ಬಿಸಿಯ ಉಸಿರಿಗೆ
ಏರಿಳಿವ ಎದೆಯ ತಾಳಕೆ
ಮೌನ ತಾಂಡವವಾಡುತಿದೆ...
ನರನಾಡಿಗಳ ರುಧಿರ, ಅಧರಗಳವರೆಗೆ ಬಂದು
ಆ ಮೌನಕೆ ಹಿಮ್ಮೇಳವಾಗುತ್ತಿದೆ...
ಮುಮ್ಮೇಳದ ಕಣ್ಣ ನೋಟ,
ನಿಜವ ನುಡಿಯದೆ ತಗ್ಗಿದೆ..
ಹೀಗೇಕಾಗುತಿದೆ ಹೇಳೆ ಗೆಳತಿ....
ಎಲ್ಲಿಂದಲೋ ಬಂದ ಭಾವ
ಎದೆಯ ಚುಚ್ಚಿ, ಮನಸಾ ಮುಚ್ಚಿ
ಕಣ್ಣುಮುಚ್ಚಾಲೆಯಾಡಲು ಕರೆದಿದೆ ನೋಡೆ...
ಮಧುರ ಭಾವವು ಅಧರಗಳವರೆಗೆ ಬಂದು
ಮಾತಾಗದೆ ಹಿಂದಿರುಗಿದೆ...
ನಾನೇ ಕಟ್ಟಿದ ನೆನಪುಗಳ ಬುತ್ತಿ
ಬಿಚ್ಚಿಕೊಳ್ಳದೆ ಸುತ್ತಿದೆ...
ಎಲ್ಲರ ನಗುವಲಿ
ಮಗುವಾದ ನಾನಿಂದು ಹಗುರಾಗಲು ನೋಡಿದೆ...
ಎಲ್ಲವೂ ಭಾರವೇ... ಹಗುರವೆಂಬುದೇ ಇಲ್ಲ..
ಎದೆಯು ಭಾರವಾಗುತಿದೆ,
ಮೌನ ಹಗುರಾಗಿ ತೇಲಿದೆ...
ನಾನಿದ್ದಲ್ಲಿಯೇ ಇದ್ದೇನೆ...
ಎಲ್ಲವೂ ದೂರವಾದಂತೆನಿಸುತಿದೆ...
ನಾನು ಒಂಟಿಯಾದಂತೆನಿಸುತಿದೆ...
ಮಳೆಯ ನಂತರದ ಕೊನೆಯ ಹನಿಯಂತೆನಿಸುತಿದೆ...
ಇನ್ನಷ್ಟು
ನನ್ನವಳು
ಕವನ
ನಿನಗಾಗಿ
ಕಾರಣ (ಹನಿಗವನ)
ಪ್ರಿಯ
ಗೆಳತಿ
ನಾನು-ನೀನು
ಆತ್ಮವಿಲ್ಲದವಳ ಹೇಗೆ ನೋಡಲಿ