|
`ದುಡ್ಡು ತಗೊಂಡ್ರೆ ಅದು ಲಂಚ ಅಲ್ಲ'

ಸತ್ಯಮೂರ್ತಿ ಆನಂದೂರು
ಬೆಂಗಳೂರು
smanandur@vikrantakarnataka.com
ಹಿಂದೊಮ್ಮೆ ಮಾಲಕ ರೆಡ್ಡಿಯವರು ಆರೋಗ್ಯ
ಮಂತ್ರಿಯಾಗಿದ್ದ ಕಾಲ. ಆಗ ಆಸ್ಪತ್ರೆಗಳು ಲಂಚದ
ಕೇಂದ್ರವಾಗುತ್ತಿದ್ದರೆ, ಮಂತ್ರಿ ಮಾಲಕ ರೆಡ್ಡಿ ಅದು ಲಂಚ ಅಲ್ಲ ಟಿಪ್ಸ್
ಎಂಬ ಅಸಂಬದ್ಧ ಹೇಳಿಕೆ ನೀಡಿದರು.
ಚಾಮಿಗೆ ಇದು ವಿಚಿತ್ರ ಎನಿಸಿತು.
`ಏನ್ರೀ? ಏನ್ ಮಾತಾಡ್ತಿದೀರಾ ನೀವು? ಲಂಚ!...
ನಾವು ಸರ್ಕಾರಿ ಎಂಪ್ಲಾಯೀಸ್ ಅಂದ್ರೆ ಲಂಚಕ್ಕೆ ಕೈ ಹಾಕೋರು ಅಂತ
ಅಂದ್ಕೊಂಡಿದೀರೆನ್ರೀ? ಹುಶಾರ್! ಇನ್ನೊಂದು ಸರ್ತಿ ಲಂಚದ ಮಾತಾಡಿದ್ರೆ
ಚೆನ್ನಾಗಿರಲ್ಲ ನೋಡಿ. ಏನೋ ಪಾಪ ಅಂತ ಡಾಕ್ಯುಮೆಂಟ್ ತಕ್ಕೊಟ್ರೆ....
ಲಂಚ ಕೊಡೋಕೆ ಬರ್‍ತಾರೆ' ಎಂದು ಆ ರೆವಿನ್ಯೂ ಇಲಾಖೆಯ ಅಟೆಂಡರ್
ಗರ್ಜಿಸಿದಾಗ ಚಾಮಿಗೆ ಅರ್ಧ ಸಂತೋಷ, ಉಳಿದರ್ಧ ಮುಜುಗರವಾಗಿ ಭೂಮಿಗೆ
ಕುಸಿಯುವಂತಾದ.
`ಹಾಗಾದ್ರೆ ಒಟ್ಟು ನೂರಾ ಇಪ್ಪತ್ಮೂರು ರೂಪಾಯಿ
ಅಂತ ಹೇಳ್ತೀದೀರಲ್ಲ, ಇದು ಯಾವ ಲೆಕ್ಕದ್ದು ಸ್ವಾಮಿ?' ಎಂದು
ತುಸು ಅಂಜಿಕೆಯಿಂದಲೇ ಕೇಳಿದ ಚಾಮಿ.
`ನೋಡ್ರೀ ಹದಿನೈದು ರೂಪಾಯಿ ಡಾಕ್ಯುಮೆಂಟ್
ಚಾರ್ಜು, ಮೂರು ರೂಪಾಯಿ ಜೆರಾಕ್ಸು, ಐದು ರೂಪಾಯಿ ಅಟೆಂಡರ್ ನಿಮ್ಮನ್ನ
ಒಳಗೆ ಬಿಟ್ಟಿದ್ದಕ್ಕೆ... ಈಗ ಸರಿಯಾಯ್ತ?' ಸಕಲ ಲೆಕ್ಕವನ್ನು
ಚಾಚೂ ತಪ್ಪದಂತೆ ಒಪ್ಪಿಸಿದ.
ಚಾಮಿಗೆ ಇನ್ನೂ ಸಮಸ್ಯೆಯಾಯಿತು. ನಾನೇ
ತಪ್ಪಿದೆನೇ? ಅಥವಾ ನನ್ನ ಲೆಕ್ಕವೇ ಹೆಚ್ಚುಕಮ್ಮಿಯಾಗಿದೆಯೇ?
ಆದರೂ ಇನ್ನಷ್ಟು ಕುಗ್ಗಿದ ದನಿಯಲ್ಲಿ `...ಇಪ್ಪತ್ಮೂರು ರೂಪಾಯಿ ಸರಿಯಾಯ್ತು.
ಆದರೆ ನೀವು ಹೇಳಿದ್ದು ನೂರಾ ಇಪ್ಪತ್ಮೂರು ಉಳಿದ ನೂರು ರೂಪಾಯಿ
ಯಾವ ಲೆಕ್ಕದ್ದು...?
ಚಾಮಿ ಮಾತಿಗೆ ಇಡೀ ರೆವಿನ್ಯೂ ಕಚೇರಿಯೇ
ಛಾವಣಿ ಹಾರುವಂತೆ ಗೊಳ್ಳೆಂದು ನಕ್ಕಿತು. ಅಟೆಂಡರನಂತೂ ತಾನು
ಜೀವಮಾನದಲ್ಲೇ ಇಂಥ ದೊಡ್ಡ ಜೋಕು ಕೇಳದಿದ್ದವನ ಹಾಗೆ ಹೊಟ್ಟೆ
ಹಿಡಿದು, ಬಿದ್ದು ಬಿದ್ದು ನಗತೊಡಗಿದ. ಮತ್ತೆ ಚಾಮಿಯೇ ಮುಂದುವರಿದು,
`... ನೂರು ರೂಪಾಯಿ ಲಂಚ ಅಲ್ವೇ?' ಎಂದು ಭಯಗ್ರಸ್ತನಾಗಿ
ಕೇಳಿದ.
ನಗುತ್ತಿದ್ದ ಅಟೆಂಡರ್ ಹಠಾತ್ತನೆ ನಗು
ನಿಲ್ಲಿಸಿ, `ಇನ್ನೊಂದ್ಸಾರಿ ಲಂಚದ ಹೆಸರು ಎತ್ತಿದರೆ ಚುಬ್ಬಾ ಹರಿದು
ಜೋಳಿಗೆಗೆ ಹಾಕ್ತೀನಿ ಹುಶಾರ್! ಗಿವ್ ರೆಸ್ಪೆಕ್ಟ್ ಅಂಡ್ ಟೇಕ್ ರೆಸ್ಪೆಕ್ಟ್!'
ಎಂದು ಮತ್ತೆ ಇಡೀ ಸೀನನ್ನು ಟ್ರಾಜಿಕ್ ಮಾಡಿಹಾಕಿದ.
ಚಾಮಿ ನಗತೊಡಗಿದ. ಆದರೂ ಲೆಕ್ಕ
ತಿಳಿಯುವ ಚಿಕ್ಕ ಆಸೆ. ಜೊತೆಗೆ ಪತ್ರಕರ್ತನಲ್ಲವೇ ಎಂಬ ಭಂಡತನ
ಬೇರೆ. ಹಾಗಾಗಿ `... ಆ ನೂರು ರೂಪಾಯಿ ಲೆಕ್ಕ ಏನು ಅಂತಾ ಹೇಳಿದ್ರೆ
ಚೆನ್ನಾಗಿತ್ತು...' ಎಂದು ಹಲ್ಲು ಗಿಂಜತೊಡಗಿದ.
`ಓಹ್ ಅದಾ? ಛೆ, ಅದು ಟಿಪ್ಸು! ಟಿಪ್ಸಿಗೆಲ್ಲಾ ನೀವು
ಲಂಚಾ, ಸಂಥಿಂಗ್ ಅದೂ ಇದೂ ಅಂತ ಹೇಳಿದ್ರೆ ಕೋಪ ಬರೋದಿಲ್ವೇ? ಇನ್ನು
ಮುಂದೆ ನೀವು ಯಾವುದೇ ಗೌರ್‍ನಮೆಂಟ್ ಆಫೀಸ್‌ನಲ್ಲಿ ಲಂಚಾ, ಗಿಂಚಾ
ಅಂತ ಹೇಳಿ ಒದೆ ತಿನ್ನ ಬೇಡಿ. ಈ ಸರ್ಕಾರ ಬಂದಮೇಲೆ ಅವೆಲ್ಲಾ ಸ್ಟಾಪ್
ಆಗಿದೆ. ಈಗೇನಿದ್ರೂ ಬರೀ ಟಿಪ್ಸ್!!' ಎಂದು ಚಾಮಿಯ ಜುಬ್ಬದ ಜೇಬಿನಲ್ಲಿದ್ದುದನ್ನೆಲ್ಲಾ
ತೆಗೆದುಕೊಂಡು `ಸದ್ಯ ನನ್ ಹತ್ರ ಹೇಳಿ ಬಚಾವಾದ್ರಿ. ನಮ್
ಆಫೀಸರ್ ಕಿವಿಗೆ ಬಿದ್ದಿದ್ರೆ ಮಿನಿಸ್ಟ್ರು ಮಲಕಾ ರೆಡ್ಡಿಯವರಿಗೆ ಹೇಳಿ ನಿಮ್
ಮೇಲೆ ಕೇಸ್ ಹಾಕಿಸ್ತಿದ್ರು... ನಿಮ್ ನಸೀಬು ಚೆನ್ನಾಗಿತ್ತು' ಎಂದು ಹಾರ್ಧಿಕವಾಗಿ
ಬೀಳ್ಕೊಟ್ಟ.
ಒಂದೇ ಸಮನೆ ಗಿರಗಿರ ಸುತ್ತುತ್ತಿದ್ದ
ತಲೆಯನ್ನು ಹಿಡಿದುಕೊಂಡು ರಸ್ತೆಯಲ್ಲಿ ನಡೆಯುತ್ತಿದ್ದ ಚಾಮಿಗೆ,
ಇದ್ದಕ್ಕಿದ್ದಂತೆ ವಾರದ ಹಿಂದೆ ಆರೋಗ್ಯ ಇಲಾಖೆಯ ಅಮಾತ್ಯರಾದ ಮಲಕಾರೆಡ್ಡಿಯವರು
`ಯಾರಾದ್ರೂ ದುಡ್ಡು ತಗೊಂಡ್ರೆ ಅದು ಲಂಚಾ ಅಲ್ಲ ಟಿಪ್ಸು' ಎಂದು
ಹೇಳಿದ ಮಾತು ನೆನಪಿಗೆ ಬಂತು. ಏನೋ ಯಡವಟ್ಟಾಗಿದೆ,
ಎಂದುಕೊಂಡು ಇದಕ್ಕೆ ಸಿಎಮ್ಮನ್ನು ಮೀಟ್ ಮಾಡಿ ಹೇಳೋದೇ ಸರಿಯಾದ
ಕ್ರಮ ಎಂದುಕೊಂಡು ವಿಧಾನ ಸೌಧಕ್ಕೆ ದೌಡಾಯಿಸಿದ. ಅಲ್ಲಿ ಒಂದೆರಡು
ಕಡೆ ಹತ್ಹತ್ತು ರೂಪಾಯಿ ಟಿಪ್ಸ್ ಬಿಟ್ರೆ ಬೇರೆ ತೊಂದರೆ ಏನೂ ಆಗಲಿಲ್ಲ.
ಸಿಎಮ್ ರೂಮಿನಲ್ಲಿ ಮಲಕಾರೆಡ್ಡಿಯವರೂ ಇದ್ದುದರಿಂದ ಚಾಮಿಗೆ
ಇವತ್ತು ಏನಾದರೊಂದು ತೀರ್ಮಾನ ಆಗೇ ತೀರುತ್ತದೆ ಎಂದು ಇನ್ನಷ್ಟು
ಖುಷಿಯಾಯಿತು.
`ನಿಮ್ಮ ಆಡಳಿತದಲ್ಲಿ ಒಂದು ದೊಡ್ಡ ಸಮಸ್ಯೆ
ಆಗಿದೆ ಸಾರ್...' ಎಂದು ಚಾಮಿ ರಾಗ ಎಳೆದ.
`ನೀವು ಪತ್ರಕರ್ತರು ಭಾರಿ ಕಿಡಿಗೇಡಿಗಳು
ಕಣ್ರೀ, ಏನಾದರೊಂದು ಸಮಸ್ಯೆ ಸೃಷ್ಟಿ ಮಾಡ್ತಾನೇ ಇರ್‍ತೀರಿ...
ತುಂಬಾ ಚಾಲಾಕಿಗಳಪ್ಪ ನೀವು.... ನಾವು ಈಗ ತಾನೇ ವೈಟೂಕೆ ಸಮಸ್ಯೆ
ಮುಗಿಸಿ ಎಲ್ಲಾ ಓಕೆ ಮಾಡಿಕೊಂಡು ಸಂತೋಷದಲ್ಲಿದ್ದೀವಿ... ಈಗ
ಬೆಂಗಳೂರ್‌ನ ಸಿಂಗಪೂರ್ ಮಾಡೋಕೆ ಹೊರಟಿದ್ದೀವಿ. ಆಗ್ಲೆ ನೀವು ಇನ್ನೊಂದು
ಸಮಸ್ಯೆ ತಂದು ಬಿಟ್ಟೀದ್ದೀರಲ್ಲಾ ಚಾಮಿ... ಹೂಂ, ಹೇಳಿ...' ಎಂದು
ಸಿಎಮ್ ತುಸು ಅರೆಮನಸ್ಸಿನಿಂದಲೇ ಕೇಳಿದರು.
`ಅದೇ ಸಾರ್, ಗೌರ್‍ಮೆಂಟ್ ಆಫೀಸಿನಲ್ಲಿ ಟಿಪ್ಸ್ ಕಾಟ
ಜಾಸ್ತಿ ಆಗಿದೆ ಸಾರ್'
`ಏನ್ರೀ ಅದೂ.... ಟಿಪ್ಸ್ ಗಲಾಟೆ ರೆಡ್ಡಿ...?'
`ಅದೇ ಸಾರ್, ನಾವು ಲಂಚ ನಿರ್ಮೂಲನೆಗಾಗಿ
ಕ್ರಮ ತಗೋತಾ ಇದೀವಲ್ಲ ಸಾರ್... ಲಂಚ ನಿರ್ಮೂಲನೆ ಆಗೋಗಿದೆ ಸಾರ್.
ಈಗ ಎಲ್ಲೂ ಲಂಚ ಅನ್ನೋ ಮಾತೇ ಇಲ್ಲ...'
`ಅದ್ರ ಬದ್ಲು ಟಿಪ್ಸ್ ಅಂತಾ ಆಗಿದೆ ಸಾರ್...'
ಎಂದು ಚಾಮಿ ಬಾಯಿ ಹಾಕಿದ.
`ಸುಮ್ಮನಿರ್ರೀ ಸಾಕು... ಸಾರ್ ನಾನು
ಹೇಳ್ತೀನಿ. ಟಿಪ್ಸ್ ಅಂದ್ರೆ ಟು ಇನ್‌ಶ್ಯೂರ್ ಪ್ರಾಮ್ಟ್ ಸರ್ವೀಸ್ ಅಂತಾ ಇಂಗ್ಲೀಷಿನೋರೇ
ಹೇಳಿದ್ದಾರೆ. ಅದು ನಿಮಗೂ ಗೊತ್ತಿದೆ. ಈಗ ನಾವು ಎರಡು ಸಾವಿರ
ಇಸವಿಯಲ್ಲಿದ್ದೂ, ಅದೂ ಅಲ್ದೆ ಇಡೀ ಕರ್ನಾಟಕಾನಾ ಕಂಪ್ಯೂಟರ್ ಒಳ್ಗೆ ನೋಡ್ತಾ
ಇರೋವಾಗ ಲಂಚದ ಕಾಲದಲ್ಲೇ ಇರೋಕಾಗುತ್ತಾ ಸಾರ್? ನಾವೂ ಮುಂದುವರೀಬೇಕಲ್ಲವಾ?
ಈಗ ನೋಡಿ ಟಿಪ್ಸ್ ಅನ್ನೋದು ಕಂಪ್ಯೂಟರ್‌ಗೆ ಎಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತೆ.
ಕಂಟ್ರಾಕ್ಟ್ ಇಷ್ಟು, ಟಿಪ್ಸ್ ಇಷ್ಟು ಅಂತ ಆರಾಮಾಗಿ ಕಂಪ್ಯೂಟರ್‌ನಲ್ಲೇ ಲೆಕ್ಕ
ಮಾಡಬಹುದಲ್ವಾ ಸಾರ್?'
`ಅದು ಸರಿ ಸಾರ್, ಆದರೆ...' ಎಂದು ಚಾಮಿ ಮತ್ತೆ
ರಾಗ ಎಳೆಯುತ್ತಿದ್ದಂತೆಯೇ ಸಿಎಮ್ `ಶ್ಶ್' ಎಂದರು. ರೆಡ್ಡಿ
ಮುಂದುವರಿಸಿದರು.
`ಅಷ್ಟು ಮಾತ್ರ ಅಲ್ಲ, ಈಗಾಗ್ಲೇ ನಾವು ಕಂಪ್ಯೂಟರ್‌ನಲ್ಲಿ
ಟಿಫ್ ಫೈಲ್ ಅಂತಾ ಮಾಡ್ತಾ ಇದೀವಿ. ಅದನ್ನೇ ಬದಲಿಸಿ ಟಿಪ್ಸ್ ಫೈಲ್
ಅಂತ ಮಾಡಿದ್ರಾಯ್ತು. ಹಾಗೆಯೇ ಒಂದು ಒಳ್ಳೆಯ ಕಾಂಟ್ರಾಕ್ಟ್ ಫೈಲ್
ಇದೆ ಅಂದ್ಕೊಳಿ, ಅದರ ಮೇಲೆ ಟಿಪ್‌ಟಾಪ್ ಫೈಲ್ ಅಂತಾ ಬರೆದರೆ ಅದು
ಬಹಳ ಮುಖ್ಯವಾದುದು, ಭಾರೀ ಬೆಲೆ ಬಾಳುವಂಥಾದ್ದು ಅಂತ ನೋಡ್ತಾ
ಇದ್ದಾಗಲೇ ಗೊತ್ತಾಗಿಬಿಡುತ್ತಲ್ಲ ಸಾರ್. ಎಷ್ಟು ಸುಲಭ ನೋಡಿ...'
ಸಿಎಮ್ ಕೊಂಚ ಗಲಿಬಿಲಿಗೊಂಡರು. `ಅಲ್ರೀ ರೆಡ್ಡಿ
ಇವರೇನೋ ಲಂಚಾನೇ ಟಿಪ್ಸ್ ಆಗಿದೆ ಅಂತಾರಲ್ರೀ...'
ರೆಡ್ಡಿ ಸಿಡಿಮಿಡಿಗೊಂಡು ರೇಗುತ್ತಲೇ
ಹೇಳಿದರು: `ಸಾರಿ ಸಾರ್, ನಮ್ಮ ಸರ್ಕಾರದಲ್ಲಿ ಲಂಚ ಅನ್ನೋ ಮಾತೇ
ಇಲ್ಲ, ಬೇಕಾದ್ರೆ ಕಂಪ್ಯೂಟರ್ ಬೂಟ್ ಮಾಡಿ ನೀವೇ ನೋಡಿ ಏನಿದ್ರೂ ಮರ್ಯಾದೆಯಾಗಿ
ಟಿಪ್ಸ್!! ಓನ್ಲಿ ಟಿಪ್ಸ್!!!'
ಹಳೆಯ
ರಗಳೆಗಳು
ಎಲ್ಲಿ? ಬಾಯಿ ತೆಗೇರಿ....
ಚೆನ್ನಾಗಿರೋ ಕತೆ ಬೇಕಂದ್ರೆ ಚೆನ್ನೈಯೇ ಸರಿ...!
ಯಾರ್ರೀ ಬೆಂಗ್ಳೂರ್....ರಾಂಡಿ ಹೈದರಾಬಾದ್
ಪರಿಹಾರ ಸತ್ತೋರಿಗಾ....ಇದ್ದೋರಿಗಾ ?
ಹೃತಿಕ್ ಮದುವೇಲಿ ನನ್ನ ತಾಯಿ ಅಂತ
ಕರೀತಿಯೇನೋ?!
|