Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಹೃತಿಕ್ ಮದುವೇಲಿ ನನ್ನ ತಾಯಿ ಅಂತ ಕರೀತಿಯೇನೋ?!

ಸತ್ಯಮೂರ್ತಿ ಆನಂದೂರು

ಬೆಂಗಳೂರು

 

ಬೆಂಗಳೂರಲ್ಲಿ ಹೃತಿಕ್ ರೋಷನ್ ಮದುವೆ ನಡೆಯಿತು. ವರದಿ ಮಾಡಲು ಹೋದ ಪತ್ರಕರ್ತರು ಅಲ್ಲಿ ಅಂಧಾಭಿಮಾನಿಗಳಿಗಿಂತಲೂ ಕೆಟ್ಟದಾಗಿ ನಡೆದುಕೊಳ್ಳ ತೊಡಗಿದ್ದರು.

 

ಡಿಸೆಂಬರ್ ೨೪, ೨೦೦೦

ಚಾಮಿ ಅದೆಲ್ಲೋ ಹೋದವನು ಆ ದಾರಿಯಲ್ಲಿ ನೆರೆದಿದ್ದ ಪೊಲೀಸರನ್ನು, ಜನಜಂಗುಳಿಯನ್ನು ಕಂಡು ಅವಕ್ಕಾದ. ಒಂದು ದೊಡ್ಡ ಗೇಟಿನ ಮುಂದೆ ಸುಮಾರು ನೂರು-ನೂರೈವತ್ತು ಜನ ಸೇರಿದ್ದರು. ಕಾರ್ಗಿಲ್ ಯುದ್ಧದಲ್ಲಿ ಸಜ್ಜಾಗಿ ನಿಂತಿದ್ದ ಸೈನಿಕರ ಹಾಗೆ ದೊಡ್ಡ ದೊಡ್ಡ ಮಿಷಿನ್‌ಗನ್ ತರಹ ವಿಡಿಯೋ ಕ್ಯಾಮರಾಗಳು; ಕೆಲವರ ಕತ್ತಿನಲ್ಲಿ ಗ್ರೆನೇಡುಗಳ ರೀತಿಯ ಕ್ಯಾಮರಾಗಳು, ಇನ್ನೂ ಕೆಲವರ ಕೈಯಲ್ಲಿ ಪೇಪರು, ಪೆನ್ನು... ಪತ್ರಕರ್ತರಿರಬಹುದೇ?!

 

`ಏನ್ಸಾರ್, ಇಲ್ಲೇನಾದ್ರೂ ಸಿನಿಮಾ ಶೂಟಿಂಗ್ ನಡೀತಿದೆಯಾ?' ಚಾಮಿ ಪ್ರಶ್ನೆ ಕೇಳುತ್ತಲೇ ನೂರಾರು ಕಣ್ಣುಗಳ ದೃಷ್ಟಿ ಚಾಮಿಯನ್ನು ಮಿಸೈಲ್ ಥರ ಅಟ್ಯಾಕ್ ಮಾಡಿದವು. ಚಾಮಿಗೆ ಏನೊಂದೂ ತಿಳಿಯಲಿಲ್ಲ. ವಿಷಯ ಗಂಭೀರದ್ದಿರಬಹುದು!

 

`...ಅಥವಾ ಶಿವರಸನ್ ಥರ ಯಾರಾದ್ರೂ ಟೆರರಿಸ್ಟ್ ಮನೆ ಒಳಗೆ ಸಿಕ್ಕಿ ಬಿದ್ದಿದಾರಾ...?

`ಅಪಶಕುನ... ಬ್ಯಾಡ್ ಒಮೆನ್!... ಥೂ...' ಎಂದು ಮತ್ತಷ್ಟು ದನಿಗಳು ಹಿಂತಿರುಗಿದವು ಗುರ್ರೆಂದು ಮತ್ತೆ ಗೇಟಿನ ಒಳಗೆ ಒಂದೊಂದೂ ಕ್ಷಣವನ್ನೂ ಕಾಯತೊಡಗಿದವು.

 

ಚಾಮಿಗೆ ಮತ್ತೆ ತಲೆಬಿಸಿಯಾಯಿತು. ಯಾವುದಾದರೂ ಭಿನ್ನಮತದ ಸಭೆ, ಇಲ್ಲವೇ ಹೆಗಡೆಯವರ ಹೊಸ ಪಕ್ಷದ ಉದಯ ಆಗುತ್ತಿರಬಹುದೇ? ಯಾಕಂದ್ರೆ ಇಲ್ಲದಿದ್ದರೆ ಇಷ್ಟು ಜನ ಪತ್ರಕರ್ತರು ಸೇರುತ್ತಲೇ ಇರಲಿಲ್ಲ...!

 

`ಗೌರ್‍ಮೆಂಟ್ ಯಾವಾಗ ಬೀಳಿಸ್ತಾರಂತೆ?... ಮತ್ತೆ ಬೈ ಎಲೆಕ್ಷನ್ನಾ?'

ಈ ಬಾರಿ ಚಾತಕಪಕ್ಷಿಗಳಂತೆ ಗೇಟಿನ ಸಂದಿಗೊಂದಿಗಳಲ್ಲಿ ಇಣುಕುತ್ತಿದ್ದವರಿಗೆ ಮಿತಿ ಮೀರಿದ ಕೋಪ ಬಂತು. ಒಬ್ಬಳಿಗಂತೂ ತಡೆಯಲಾಗಲಿಲ್ಲ... `ಯೂ ಕಂಟ್ರೀ... ಬ್ರೂಟ್!' ಎಂದು ಚಾಮಿಯನ್ನು ವಾಚಾಮಗೋಚರ ಉಗಿಯತೊಡಗಿದಳು. ಅಷ್ಟರಲ್ಲಿ ಯಾರೋ ಇನ್ನೊಬ್ಬರಿಗೆ ಚಾಮಿಯ ಬಗ್ಗೆ ತುಸು ಅನುಕಂಪ ಬಂತೆಂದು ಕಾಣುತ್ತದೆ.

 

`ರೀ ಮಿಸ್ಟರ್... ಇಡೀ ದೇಶಾನೇ ಸೆಲೆಬ್ರೇಟ್ ಮಾಡ್ತಿದೆ... ಇವತ್ತು ಹೃತಿಕ್ ರೋಷನ್...' ಮುಂದೆ ಹೇಳಲಾಗದೆ ಆಕೆ ಗದ್ಗತಿತಳಾದಳು. ಕನ್‌ಫ್ಯೂಷಿಯಸ್ ಚಾಮಿಗೆ ಇನ್ನಷ್ಟು ಗೊಂದಲವಾಯಿತು.

 

`ಹಂಗಂದ್ರೆ...? ಗ್ಲೋಬಲೈಸೇಷನ್... ಲಿಬರಲೈಸೇಷನ್ ಥರದ್ದಾ ಈ ಹೃತಿಕ್ ರೋಷನ್?'

ಚಾಮಿಗೆ ಸ್ವಲ್ಪ ಹೆಚ್ಚು ಕಡಿಮೆ ಆಗಿದ್ರೂ ಗೂಸಾ ಬೀಳುತ್ತಿತ್ತು. ಇದ್ದವರಲ್ಲಿ ಒಬ್ಬ ಬಂದು ತಡೆದ. ಚಾಮಿಯನ್ನು ಪಕ್ಕಕ್ಕೆ ಕರೆದು ಯಾರಿಗೂ ಕೇಳಿಸದ ಹಾಗೆ ಉಸಿರಿದ.

 

`ಹೃತಿಕ್ ರೋಷನ್ ಅಂದ್ರೆ ಹಿಂದೆ ರಾಜೇಶ್ ಖನ್ನಾ ಇದ್ನಲ್ಲಾ ಆ ಥರದ ದೊಡ್ಡ ಸ್ಟಾರು... ಇವತ್ತು ಅವನ ಮದುವೆ. ಅದ್ಕೆ ನಮ್ಮನ್ನೆಲ್ಲಾ ಇನ್‌ವೈಟ್ ಮಾಡಿದಾರೆ. ನಮ್ಮ ಆಫೀಸಿನಲ್ಲಿ ನ್ಯೂಸ್ ಎಡಿಟರ್ ಕಾಲು ಹಿಡಿದು ಇಲ್ಲಿಗೆ ರಿಪೋರ್ಟಿಂಗ್‌ಗೆ ಹಾಕಿಸ್ಕೊಂಡಿದೀನಿ. ಇಲ್ಲಿ ಎಲ್ಲರೂ ಹಾಗೆ ಮಾಡಿದ್ದಾರೆ. ಯಾಕಂದ್ರೆ ರಿಪೋರ್ಟಿಂಗ್‌ಗಿಂತ ಇಂಥ ಪ್ರೆಸ್ಟೀಜಿಯಸ್ ಅಕೇಷನ್ ಮುಂದೆ ಸಿಗೋದು ಕಷ್ಟ. ನಿನ್ನೆ ರಾತ್ರಿಯಿಂದ ನಾವೆಲ್ಲಾ ಇಲ್ಲೇ ಕಾಯ್ತಿದ್ದೀವಿ...'

 

`ಓಹೋ... ಹಾಗಾ! ಹಂಗಾದ್ರೆ ಮದುವೆ ತೋರಿಸ್ತಾರೆ ಅನ್ನಿ...' ಎಂದು ಚಾಮಿ ಎಲ್ಲ ವಿಚಾರ ತಿಳಿದು ನಿರಾಳವಾಗಿ ಆ ಗುಂಪಿನ ಜತೆ ಸೇರಿಕೊಂಡ. ಚಾಮಿಯ ಲೆಕ್ಕದಲ್ಲೇ ಸುಮಾರು ಏಳೂವರೆ ಗಂಟೆ ಕಾದರೂ ಗೇಟಿನ ಒಳಗೆ ಹೋಗುವುದಂತೂ ಸಾಧ್ಯವಾಗಲಿಲ್ಲ. ಕೆಲವರು ಕಾಲು ನೋವಾದರೂ ಏನೂ ಆಗಲಿಲ್ಲ ಎಂಬಂತೆ ಹುರುಪು ತೋರಿಸುತ್ತಿದ್ದರು... ಇನ್ನು ಕೆಲವರು ಆಗಾಗ್ಗೆ ಮುಖ ಒರೆಸಿಕೊಳ್ಳುತ್ತಾ ಲವಲವಿಕೆಯಿಂದ ಇರುವವರಂತೆ ಇರಲು ಯತ್ನಿಸುತ್ತಿದ್ದರು.

 

`ಇದೇನ್ರೀ ಇದು... ಎಷ್ಟು ಹೊತ್ತಿನವರಗೆ ಕಾಯಬೇಕ್ರಿ... ಚಾಮಿ ಅಸಹನೆಯಿಂದ ಗೊಣಗಿದ.

`ರೀ... ಮಿಸ್ಟರ್... ಹೃತಿಕ್ ಮದುವೆ ಅಂದಮೇಲೆ ಕಾಯಬೇಕ್ರೀ... ಬೀಯಿಂಗ್ ಎ ಪ್ರೆಸ್‌ಮನ್, ಈ ಥರ ಮಾತಾಡೋಕೆ ನಾಚಿಕೆ ಆಗಲ್ವ...?' ಎಂದು ಆ ತುದಿಯಲ್ಲಿದ್ದ ಡೆಲ್ಲಿ ರಿಪೋರ್ಟರ್‌ಳ ಮಾತು ಕೇಳಿ ಚಾಮಿ ಬೆದರಿ ತೆಪ್ಪಗಾದ.

 

ನಿಂತು ನಿಂತು ಬೇಜಾರಾದ ಪತ್ರಕರ್ತರು ತಮ್ಮ ತಮ್ಮೊಳಗೆ ಮಾತಾಡಿಕೊಳ್ಳತೊಡಗಿದರು.

`ಯು ನೋ ಜೈ... ಊಟಕ್ಕೆ ಮಟನ್‌ನ ಈಜಿಪ್ಟ್‌ನಿಂದ ಇಂಪೋರ್ಟ್ ಮಾಡಿಕೊಂಡರಂತೆ... ಎಂಥಾ ಮಟನ್ ಗೊತ್ತಾ... ಬಾಯಿಗೆ ಹಾಕಿಕೊಂಡರೆ ಹಾಗೇ ಕರಗಿ ಹೋಗುತ್ತಂತೆ'.

 

`ಮಟನ್ ಇರ್‍ಲಿ... ಬಾಸ್ಮತಿ ರೈಸ್ ತಂದುಕೊಟ್ಟಿದ್ದು ದುಬೈನ ವೆರಿ ಬಿಗ್ ಇಂಡಸ್ಟ್ರಿಯಲಿಸ್ಟ್ ಅಂತೆ. ಅದರಲ್ಲಿ ಬಿರಿಯಾನಿ ಮಾಡಿದ್ರೆ ಫಿಫ್ಟಿ ಕಿಲೋಮೀಟರ್ ರೇಡಿಯಸ್‌ವರಗೆ ಗಂ ಅನ್ನುತಂತೆ. ನೋಡಿ ಆಗ್ಲಿಂದ ಎಷ್ಟು ಚೆನ್ನಾಗಿ ಸ್ಮೆಲ್ ಹೊಡಿತಾ ಇದೆ...'

 

`ಅದಿರ್‍ಲಿ... ಸೂಸಾನ್‌ಗೆ ಚೈನಾದಿಂದ ಸಿಲ್ಕ್ ತಗೊಂಡು ಹೋಗಿ ಅಮೇರಿಕಾದಲ್ಲಿ ಡ್ರ್ರೆಸ್ ರೆಡಿ ಮಾಡಿಸಿ... ಸೌದಿನಲ್ಲಿ ಎಂಬ್ರಾಯಿಡರಿ ವರ್ಕ್ ಮಾಡಿಸಿದರಂತೆ...'

 

`ಡೈಮಂಡ್ಸ್‌ನ ಜೋಹಾನ್ಸ್‌ಬರ್ಗ್‌ನಿಂದಲೇ ತರಿಸಿದರಂತೆ... ಎಷ್ಟು ಪ್ಯೂರ್ ಅಂತೆ ಗೊತ್ತಾ...?'

ಚಾಮಿಗೆ ಒಂಥರಾ ಇರುಸುಮುರುಸಾಯಿತು. ತಾನೇಕೆ ಹಿಂಜರಿಯಲಿ ಎಂದು `ಅದೇನು ಮಹಾ..... ಒಗ್ಗರಣೆ ಸಾಸಿವೇನಾ ಸ್ವಿಡ್ಜರ್ಲೆಂಡಿಂದ ತರಿಸಿದರಂತೆ... ಎಷ್ಟು ಗಂ ಅಂತಿದೆ ನೋಡಿ... ಜೀರಿಗೇನಾ ಜಿನಿವಾದಿಂದ... ಇಂಗನ್ನ ಇಥಿಯೋಪಿಯಾದಿಂದ....' ಎನ್ನುತ್ತಿದ್ದಂತೆಯೇ ಚಾಮಿಯ ಕೆನ್ನೆ ಮೇಲೆ ಒಂದೇಟು ರಪ್ ಎಂದು ಬಿತ್ತು.

 

`ಏನೋ... ಹೃತಿಕ್ ಮದುವೇಲೀ ತಮಾಷೆ ಮಾಡ್ತೀಯಾ... ಯೂ ಬ್ರೂಟ್' ಎಂದು ಒಬ್ಬಾಕೆ ಚಾಮಿಯ ಜುಬ್ಬಾ ಹಿಡಿದು ದರದರ ಎಳೆಯತೊಡಗಿದಳು.

 

`ಅಯ್ಯೋ ಸಾರಿ... ತಪ್ಪಾಯ್ತು ತಾಯಿ...' ಎಂದು ಚಾಮಿ ಗೋಗರೆಯತೊಡಗಿದ.

`ತಾಯಿ! ನನ್ನನ್ನು ತಾಯಿ ಅಂತೀಯಾ.... ಹೃತಿಕ್ ಮದುವೇಲಿ ನನ್ನ ತಾಯಿ ಅಂತ ಕರೀತೀಯೇನೋ ರ್‍ಯಾಸ್ಕಲ್ ! ಸೀ... ದಿಸ್ ಬ್ಲಡಿ ಬ್ರೂಟ್ ಕಾಲಿಂಗ್ ಮೀ... ತಾಯಿ... ವಾಟ್ ಎ ಶೇಮ್!' ಎಂದು ಇನ್ನೆರಡು ಬಾರಿಸಿದಳು. ಸೇರಿದ ಕ್ಯಾಮರಾ, ಪೇಪರ್ ಜನರೆಲ್ಲಾ ಒಂದೊಂದು ಬಾರಿಸತೊಡಗಿದರು. ಸದ್ಯ ಅಷ್ಟೊತ್ತಿಗೆ ಯಾರೋ ಬಂದಿದ್ದರಿಂದ ಗೂಸಾ ಕಾರ್ಯಕ್ರಮ ರದ್ದಾಗಿ ಎಲ್ಲ ಅಲ್ಲಿಗೆ ಓಡಿದರು. ಬಂದವರು ಟಿಪ್ಪು ಸಂಜಯ್ ಖಾನ್!

 

ವೈಕುಂಠದ ಬಾಗಿಲು ತೆರೆದಂತೆ ಗೇಟು ತೆಗೆದಾಕ್ಷಣ ಎಲ್ಲ ಓಡಿದರು. `ಸಾರಿ ನಿಮ್ಮನ್ನು ಕೂರಿಸಲು ನಮ್ಮ ಹತ್ರ ಚೇರಿಲ್ಲ...' ಎಂದು ಹೇಳುತ್ತಿದ್ದಂತೆಯೇ ಎಲ್ಲರೂ `ಪರವಾಗಿಲ್ಲ ಬಿಡಿ... ಈ ನೆಲವೇ ಸೋಫಾಸೆಟ್ ಇದ್ದ ಹಾಗಿದೆ... ನಾವು ಕೂತರೆ ಈ ನೆಲಾನೇ ಕೊಳೆಯಾಗಬಹುದೇನೋ...' ಅಷ್ಟರಲ್ಲಿ ಒಂದು ಚೇರು ಬಂತು.

`ಒಂದೇ ಚೇರು ಏನ್ಮಾಡೋದು?' ಸಂಜಯ್ ಪ್ರಶ್ನೆ.

`ತಾವು ಕೂತ್ಕಳಿ ಸಾರ್... ಆದ್ರೆ ಒಂದೇ ಒಂಚೂರು ಹೃತಿಕ್‌ನ ತೋರ್‍ಸಿ ಸಾರ್...'

`ಸಾರಿ... ಶಾಸ್ತ್ರ!!'

`ಒಂದೇ ಫೋಟೋ ಸಾರ್... ವಿ ಬೆಗ್ ಯು...'

`ಐ ವಿಲ್ ಟ್ರೈ...'

 

ಅಷ್ಟರಲ್ಲಿ ಮಹಡಿ ಮೇಲೆ ಒಬ್ಬ ಹುಡುಗ ಬಂದ. ಎಲ್ಲೋ ಪೋಸ್ಟರ್‌ಗಳಲ್ಲಿ ನೋಡಿದ್ದ ಹುಡುಗ. ಕ್ಯಾಮರಾದ ಜನ... `ಹೃತಿಕ್ ಐ ಲವ್ ಯೂ..... ಐ ಕಿಸ್ ಯೂ...' ಇತ್ಯಾದಿ ಕೂಗುತ್ತಲೇ ಫೋಟೋ ತೆಗೆಯುತ್ತಿದ್ದರು. `ವಾಟ್ ಎ ಲೌಲಿ ಸೀನ್ ಯಾರ್... ವಾಟ್ ಯ ಸ್ಮಾರ್ಟ್ ಗೈ!' ಎಂದು ಮತ್ತೆ ಗಲಿಬಿಲಿ, ಗದ್ದಲ ಆರಂಭವಾಯಿತು. ಯಾರೋ ಚಾಮಿಯ ಜುಬ್ಬಾ ಎಳೆದು ಹರಿದರು. ಇನ್ಯಾರೋ ಪೈಜಾಮಾ ಎಳೆದರು. ಅಷ್ಟರಲ್ಲಿ ಸಂಜಯ್ ಖಾನ್‌ನ ಪೊಲೀಸರು ಎಲ್ಲರನ್ನೂ ಓಡಿಸತೊಡಗಿದರು. ಚಾಮಿಯನ್ನು ನೋಡಿದ ಪೊಲೀಸರಿಗೆ ಇನ್ನಷ್ಟು ಕೋಪ ಬಂತು. ಸಂಜಯ್ ಖಾನ್ ಕೂಗಿದರು.

 

`ಬಾರ್‍ಸಿ ಆ ಬೆಗ್ಗರ್‌ಗೆ...'

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com