Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

 

Friday, 01 September 2006 03:31 PM

ಎಲ್ಲಿ? ಬಾಯಿ ತೆಗೇರಿ....

ಹೆಂಡದಂಗ್ಡಿ ಮುಚ್ಚಿದ್ರೆ ರಸ್ತೆಗೆ ಟಾರ್ ಹಾಕೋದು ಹ್ಯಾಗ್ರೀ? ಐಟಿ ಡಾಟ್ ಕಾಮ್‌ಗೆ ಸಾವಿರಾರು ಕೋಟಿ ಇವನ್ನೆಲ್ಲಾ ಎಲ್ಲಿಂದ ತರ್‍ತೀರ್ರೀ...

 

ಸತ್ಯಮೂರ್ತಿ ಆನಂದೂರು

ಬೆಂಗಳೂರು

smanandur@vikrantakarnataka.com 

 

ಕಂಡಕಂಡಲ್ಲಿ ದ್ವಿಚಕ್ರ ವಾಹನಗಳ ಸವಾರರನ್ನು ತಡೆದು ನಿಲ್ಲಿಸಿ ಕೇಸು ದಾಖಲಿಸುತ್ತಿದ್ದ ಪೊಲೀಸರಿಂದ ಜನಸಾಮಾನ್ಯರು ರೋಸಿಹೋಗಿದ್ದರು.

 

ಚಾಮಿಗೆ ತುಸು ಭಯ ಆವರಿಸಿಕೊಂಡಿತು. ಇದೇನಿದು ಬೆಂಗಳೂರಿನಂಥ ಮಹಾನಗರದಲ್ಲಿ ರಾತ್ರಿ ಎಂಟು ಗಂಟೆಗೆಲ್ಲಾ ಪೊಲೀಸರು ಅಲ್ಲಲ್ಲಿ ಗಡಿ ಪಹರೆ ಕಾಯುವವರಂತೆ ನಿಂತಿರುವುದನ್ನು ಕಂಡು ಹೆದರಿಕೆಯಾಗತೊಡಗಿತು. ಅಲ್ಲಲ್ಲಿ ಸರ್ಕಲ್‌ಗಳಲ್ಲಿ ದ್ವಿಚಕ್ರ ವಾಹನಗಳನ್ನು ಹಿಡಿದು, ಚಾಲಕರ ಬಾಯಿ ಮೂಸಿ ದರದರನೆ ಎಳೆದೊಯ್ಯುತ್ತಿರುವ ದೃಶ್ಯ ಕಂಡು ಮೈ ಬೆವರತೊಡಗಿತು. ಯಾಕೋ ತಾನು ಇವತ್ತು ಬೆಳಗ್ಗೆ ಎದ್ದ ಕೂಡಲೇ ಕನ್ನಡಿ ನೋಡಿದ್ದೇ ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಯ್ತು ಎಂಬ ಅಮೂರ್ತ ಸತ್ಯವೊಂದು ಹೊಳೆದು ಹಾಗೇ ಮಾಯವಾಯ್ತು. ಪೊಲೀಸರ ಭಯದಿಂದ ಒಳಗಿದ್ದ ಒಂದೂವರೆ ಗ್ಲಾಸ್ ಬೀರೂ ಆವಿಯಾಗಿ ಹೋಗಿತ್ತು.

 

ಇದ್ದಕ್ಕಿದ್ದ ಹಾಗೆ ಚಾಮಿಗೆ ಅಪೂರ್ವ ವಾಸ್ತವವೊಂದು ದಿಗ್ ಎಂದು ಗೋಚರವಾದಂತಾಯ್ತು. ತಾನು ಹೇಗೂ ಬೈಕ್ ಅಥವಾ ಸ್ಕೂಟರ್ ಓಡಿಸುತ್ತಿಲ್ಲ, ಹಾಗಾಗಿ ಭಯವೇಕೆ?! ಇಷ್ಟು ಹೊಳೆದದ್ದೇ ಚಾಮಿ ಕಾಲುಗಳು ಬಿರಬಿರನೆ ಹೆಜ್ಜೆ ಹಾಕತೊಡಗಿದವು. ಎಲ್ಲ ಮರೆತು ಜೋರಾಗಿ ಹಾಕುತ್ತಿದ್ದ ಕಾಲುಗಳಿಗೆ ಇದ್ದಕ್ಕಿದ್ದ ಹಾಗೆ ಬ್ರೇಕ್ ಹಾಕಿದಂತಾಯ್ತು. ಭುಜದ ಮೇಲೆ ಧೊಪ್ ಎಂದು ಬಿದ್ದ ಕೈ ಪೊಲೀಸಪ್ಪಂದು ಎಂಬುದರಲ್ಲಿ ಯಾವುದೇ ಅನುಮಾನವಿರಲಿಲ್ಲ.

 

ಚಾಮಿ ತಿರುಗಿ ನೋಡಿದಾಗ ಅನುಮಾನ ನಿಜವಾಗಿತ್ತು. ಮಾನವ ಮೂತಿಯೊಂದು ಚಾಮಿಯ ಬಾಯಿ ಹತ್ತಿರ ಬಂದು ಸೊಯ್ಯಂದು ಉಸಿರೆಳೆದುಕೊಂಡು, `ಕರೆಕ್ಟ್ ಪಾರ್ಟಿ! ಹುಂ ನಡೀರಿ, ನಿಮ್ಮ ಗಾಡಿ ಎಲ್ಲಿ ತೋರ್‍ಸಿ?' ಎಂದು ಗದರಿತು. ಚಾಮಿ ಸುಮ್ಮನೆ ನಿಂತದ್ದು ಕಂಡು-

 

`ಗಾಡಿ ಎಲ್ಲಿ ತೋರಿಸ್ರೀ?' ಎಂದು ಗದರಿತು.

`ಗಾಡಿ? ಯಾವ ಗಾಡಿ? ಎಲ್ಲಿಗೆ ಬರಬೇಕು? ಯಾಕೆ?'

 

`ಕಣೀ ಕೇಳು... ಯಾಕೆ ಏನು ಅಂತ ಬೇರೆ ಕೇಳ್ತೀಯಾ? ಮಾತಾದ್ಡೆ ಮೊದ್ಲು ನಿನ್ನ ಗಾಡಿ ತೋರ್‍ಸು' ಎಂದು ಮತ್ತಷ್ಟು ಗದರತೊಡಗಿದ. ಅಷ್ಟರಲ್ಲಿ ಇನ್ನೊಬ್ಬ `ಅವನ್ನೇನು ಕೇಳ್ತೀಯಲೇ? ಅಲ್ಲೇ ಬಾರ್ ಎದುರು ಇದೆಯಲ್ಲಾ, ಅದೇ ಹಳೆ ಲ್ಯಾಂಬ್ರೆಟಾ, ಅದನ್ನೇ ಎತ್ತಾಕಿಕೊಂಡು ಹೋಗ್ಲಾ. ಅವಂದೇ ಅದು...' ಎಂದು ತಾಕೀತು ಮಾಡಿದ.

 

ಚಾಮಿಗೆ ಉಸಿರೇ ಬಂದ್ ಆದ ಹಾಗಾಯ್ತು. ಆ ಇಬ್ಬರೂ ಪೊಲೀಸರು ಚಾಮಿಯನ್ನು ಲೈಟಿನ ಮರೆಯಲ್ಲಿ ನಿಂತಿದ್ದ ಇನ್ಸ್‌ಪೆಕ್ಟರ್ ಹತ್ತಿರ ಕರೆದುಕೊಂಡು ಹೋದರು. ಇನ್ಸ್‌ಪೆಕ್ಟರ್ ಇನ್ನಷ್ಟು ಒರಟಾದ ದನಿಯಲ್ಲಿ ಗದರತೊಡಗಿದರು. ಅಷ್ಟುಹೊತ್ತಿಗಾಗಲೇ ಇಬ್ಬರು ಪೊಲೀಸರು ಹಳೆಯ ಸ್ಕೂಟರ್ ಜೊತೆಗೆ ಇನ್ನೊಂದೆರಡು ಬೈಕ್‌ಗಳನ್ನೂ ತಂದು ನಿಲ್ಲಿಸಿದ್ದರು.

 

`ಏನ್ರೀ ಮಿಸ್ಟರ್, ಡ್ರಿಂಕ್ಸ್ ಮಾಡಿ ಗಾಡಿ ಓಡಿಸೋಕೆ ನಾಚಿಕೆ ಆಗೋಲ್ವೆನ್ರಿ?'

`ಸಾರ್ ನಾನು ಒಂಚೂರು ಡ್ರಿಂಕ್ಸ್ ತಂಗೊಂಡಿದ್ದೇನೋ ನಿಜ, ಆದರೆ...'

`ಶಟಪ್! ಓಹೋ ಮಾತು ಬೇರೆ...'

`ಸಾರ್ ನನ್ನ ಮಾತು ಕೇಳಿ, ನಾನು ಬಾರ್ ಪಕ್ಕದಲ್ಲಿ ನಡಕೊಂಡು ಬರ್‍ತಿದ್ದೆ. ಕತ್ತಲೇಲಿ ನಿಂತುಕೊಂಡು ಇವರಿಬ್ರು ನನ್ನನ್ನು ಹಿಡುಕೊಂಡ್ರು.'

`ಬಾರ್ ಪಕ್ಕದಲ್ಲಿ ಅಲ್ದೆ ಇನ್ನೇನು ದಿನಸಿ ಅಂಗಡಿ ಪಕ್ಕ ನಿಂತು ನಿಮ್ಮನ್ನು ಹಿಡೀಬೇಕಿತ್ತಾ?'

`ಆದ್ರೂ, ಇದು ಒಂಥರಾ ಅನ್ಯಾಯ ಸಾರ್'

`ಹ್ಯಾಗ್ರೀ ಅನ್ಯಾಯ? ಸರ್ಕಾರದ ಬೊಕ್ಕಸದಲ್ಲಿ ಒಂದು ಕವಡೆ ಕೂಡ ಉಳಿದಿಲ್ಲ. ಹಳೆ ಸರ್ಕಾದವ್ರು

 

ಎಲ್ಲಾ ಕೆರೆದೂ ಕೆರೆದೂ ಬೊಕ್ಕಸಾನೂ ತೂತು ಮಾಡಿ ಹೋಗಿದ್ದಾರೆ. ಏನೋ ರಾಜ್ಯಕ್ಕೆ ಒಂಚೂರು ಆದಾಯ ಆಗ್ಲಿ ಅಂತ ಯೋಚಿಸಿದ್ರೆ ಅನ್ಯಾಯ ಅಂತೆ ಅನ್ಯಾಯ...!'

 

`ಸಾರ್ ಒಂದು ಕೆಲ್ಸಾ ಮಾಡಿ, ಈ ಬಾರ್‌ಗಳನ್ನಾದ್ರೂ ಮುಚ್ಚಿಸಿಬಿಡಿ, ಆಗ ಕುಡಿಯೋದೂ ತಪ್ಪುತ್ತೆ, ಕುಡ್ದು ಡ್ರೈವ್ ಮಾಡೋದೂ ತಪ್ಪುತ್ತೆ...'

 

`ರೀ ಮಿಸ್ಟರ್ ಸುಮ್ನೆ ಉಪದೇಶ ಕೊಡಬೇಡ್ರೀ... ಹೆಂಡದಂಗ್ಡೀ ಮುಚ್ಚಿದ್ರೆ ರಸ್ತೆಗೆ ಟಾರ್ ಹಾಕೋದು ಹ್ಯಾಗ್ರೀ? ಚರಂಡಿ ರಿಪೇರಿ, ವಾರಕ್ಕೊಂದು ದಿನಾನಾದ್ರೂ ನೀರು, ಹಳ್ಳಿಹಳ್ಳಿಗೆ ಕಂಪ್ಯೂಟರು, ಐಟಿ ಡಾಟ್ ಕಾಮ್‌ಗೆ ಸಾವಿರಾರು ಕೋಟಿ ಇವನ್ನೆಲ್ಲಾ ಎಲ್ಲಿಂದ ತರ್‍ತೀರ್ರೀ... ಏನೋ ಲಿಕ್ಕರ್‌ನಿಂದ ಸರ್ಕಾರಕ್ಕೆ ಆದಾಯ ಬರ್‍ತಾ ಇದೆ. ಹಾಗೇ ಲಿಕ್ಕರ್ ಹಾಕೋವ್ರಿಂದಲೂ ಒಂಚೂರು ಬರ್‍ಲಿ ಬಿಡಿ...'

 

`ಏನ್ಸಾರ್ ಬರೀ ಸ್ಕೂಟರು, ಬೈಕು, ಆಟೋದವ್ರನ್ನ ಮಾತ್ರ ಹಿಡೀತಿದೀರಲ್ಲ, ಆ ಕಾರ್, ಓಡ್ಸೋರು ಕುಡಿಯೋದೇ ಇಲ್ವೆ?

 

`ಶಟಪ್! ಹದ್ದು ಮೀರಿ ಮಾತಾಡ್ತಾ ಇದೀರಿ. ಕಾರಿನವ್ರು ಎಲ್ಲಾದ್ರೂ ಕುಡಿಯೋದು ನೋಡಿದೀರೇನ್ರೀ? ಪಾಪ, ಅವರಿಗೆ ಅವರ ಬಿಸಿನೆಸ್ಸಿಂದೇ ಚಿಂತೆಯಾಗಿರುವಾಗ ಇನ್ನು ಕುಡಿಯೋದೆ ಎಲ್ಲಿಂದ ಟೈಂ ಬರುತ್ರೀ? ಸುಮ್ನೆ ತಲೆ ಹರಟೆ ಮಾತಾಡಬೇಡಿ, ಇಲ್ಲೊಂದು ಸೈನ್ ಹಾಕಿ ನಾಳೆ ಸ್ಟೇಷನ್‌ಗೆ ಬಂದು ನೋಡ್ರೀ...'

 

`ಸ್ಟೇಷನ್‌ಗೆ ಯಾಕ್ಸಾರ್ ಬಂದು ನೋಡಬೇಕು?!'

ಯಾಕೆಂದ್ರೆ ತೀರ್ಮಾನ ಆಗೋದಾದ್ರೆ ಅಲ್ಲೇ ಆಗಿಬಿಡ್ಲಿ, ಸಾರ್ವಜನಿಕರಾದ ನಿಮಗೂ ಒಳ್ಳೆಯದಲ್ವೇ?'

 

`ಸಾರ್, ಹಾಗಾದ್ರೆ ನೀವು ಹಾಕೋ ದಂಡ ಸರ್ಕಾರಕ್ಕೆ ಸಿಗೋದಾದ್ರೂ ಹ್ಯಾಗೆ ಸಾರ್?'

 

`ಸುಮ್ನೆ ತಲೆಹರಟೆ ಮಾತಾಡ್ಬೇಡಿ, ಸ್ಟೇಷನ್ ಕೂಡ ಸರ್ಕಾರದ ಒಂದು ಭಾಗವೇ. ತೆರಿಗೆ ವಸೂಲಿಗೆ ಅದಕ್ಕಿಂತ ಬೇರೆ ಜಾಗ ಎಲ್ಲಿದೇರಿ?'

 

`ಇದು ನಿಜಕ್ಕೂ ಅನ್ಯಾಯ ಸಾರ್, ನೀವೇ ಕುಡಿಸೋದು, ನೀವೇ ಹಿಡಿದು ದಂಡ ಹಾಕೋದು, ಅದರಲ್ಲೂ ಅದನ್ನ ಪೊಲೀಸ್ನೋರ ಹತ್ರ ವಸೂಲು ಮಾಡಿಸೋದು...'

 

`ಶಟಪ್! ಸರ್ಕಾರಕ್ಕೆ ನೂರು ರೂಪಾಯಿ ವಸೂಲು ಮಾಡಿಕೊಡೋ ಪೊಲೀಸ್ನೋರು ಒಂದ್ಹತ್ತು ರೂಪಾಯಿ ತಿನ್ಲಿ ಬಿಡ್ರೀ... ಸ್ಟೇಷನ್ನಾದ್ರೂ ಉದ್ಧಾರ ಆಗುತ್ತೆ... ಸುಮ್ನೆ ತಲೆ ಹರಟೆ ಮಾಡಬೇಡಿ, ಇಲ್ಲಿ ಸೈನ್ ಹಾಕಿ, ನಾಳೆ ಸ್ಟೇಷನ್‌ಗೆ ಬಂದು ಗಾಡಿ ತಗೊಂಡು ಹೋಗಿ... ಹುಂ... ಬೇಗ ಬೇಗ...'

 

`ಸಾರ್ ನಾನು ಸೈನ್ ಹಾಕೊಲ್ಲ, ಯಾಕಂದ್ರೆ ಗಾಡಿ ನಂದಲ್ಲಾ... ಹ್ಹ ಹ್ಹ ಹ್ಹಾ...'

ಅಷ್ಟೊತ್ತಿಗೆ ಪಿಸಿಗಳು ಅಲ್ಲಿ ಬಂದರು ಒಬ್ಬಾತ `ಸಾರ್ ಇವರದ್ದಲ್ಲದಿದ್ರೆ ಇನ್ನೊಬ್ರದ್ರು... ಒಟ್ನಲ್ಲಿ ನಮಗೆ ಗಾಡಿ ಸಿಕ್ಕಿದೆ. ಹಾಗೆ ಪಾರ್ಟೀನೂ ಸಿಕ್ಕಿದೆ. ಅಷ್ಟೇ ಸಾಕು ಅಲ್ವಾ ಸಾರ್...'

 

`ಸಾರ್, ನೀವು ಏನೇ ಅಂದ್ರೂ ನಾನು ಸೈನ್ ಹಾಕೋದಿಲ್ಲ. ನಾಳೆ ನಾನು ಚೀಫ್ ಮಿನಿಸ್ಟರ್‌ನ ನೋಡಿ ಎಲ್ಲಾ ಹೇಳ್ತೀನಿ...' ಎಂದು ರೋಪು ಹಾಕತೊಡಗಿದ ಚಾಮಿ. ಪಿಸಿಗಳಿಬ್ಬರೂ ಮುಸುಮುಸು ನಗತೊಡಗಿದರು.

 

`ಓಹೋ ಚೀಫ್ ಮಿನಿಸ್ಟರ್‌ನ ನೋಡ್ತೀರೋ...? ನೋಡಿ ಚೆನ್ನಾಗಿ ನೋಡಿ...' ಎಂದು ಇನ್ಸ್‌ಪೆಕ್ಟರ್ ಕತ್ತಲೆ ಮರೆಯಲ್ಲಿದ್ದರು ಬೆಳಕಿಗೆ ಬಂದು `ನೋಡ್ರೀ, ಚೆನ್ನಾಗಿ ನೋಡಿಕೊಂಡು ಬಿಡಿ' ಎಂದು ತಲೆ ಮೇಲಿದ್ದ ಹ್ಯಾಟು, ಕನ್ನಡಕ ತೆಗೆದರು. ಚಾಮಿ ಅವಕ್ಕಾಗಿ ನಿಂತ!

 

ಇನ್ಸ್‌ಪೆಕ್ಟರ್ ವೇಷದಲ್ಲಿದ್ದವರು ಮುಖ್ಯಮಂತ್ರಿಗಳೇ !

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com