ಚೆನ್ನಾಗಿರೋ ಕತೆ ಬೇಕಂದ್ರೆ ಚೆನ್ನೈಯೇ ಸರಿ...!

ಸತ್ಯಮೂರ್ತಿ ಆನಂದೂರು
ಬೆಂಗಳೂರು
smanandur@vikrantakarnataka.com
ಕನ್ನಡದಲ್ಲಿ
ಕತೆಗಳೇ ಇಲ್ಲ ಎಂದು ಸಿನಿಮಾದವರು ಹೇಳುತ್ತಿರುವುದು ಮಾತ್ರವಲ್ಲ,
ರಿಮೇಕ್ ಚಿತ್ರಗಳನ್ನು ಮಾಡಲು ಮದ್ರಾಸಿಗೆ ದಂಡಿಯಾಗಿ ಹೋಗುತ್ತಾರೆ.

`ಕನ್ನಡದಲ್ಲಿ
ಕತೆಗಳೆಲ್ಲಿವೆ? ಕತೆ ಬೇಕಾಗಿದ್ರೆ ಚೆನ್ನೈಗೇ ಹೋಗಬೇಕು?' ಎಂಬ ಮಾತು
ಚಾಮಿಯ ಕಿವಿಗೆ ಬಿದ್ದದ್ದು ಅತ್ಯಂತ ಅಚಾನಕವಾಗಿ. ಪಾಪ ಬಾಬು ಎಂಬ ನಿರ್ಮಾಪಕರೂ,
ನಾಗಣ್ಣ ಎಂಬ ನಿರ್ದೇಶಕರೂ ಇಡೀ ಕರ್ನಾಟಕವನ್ನೆಲ್ಲಾ ಜಾಲಾಡಿ ಹುಡುಕಿದರೂ
ಒಂದು ಕತೆ ಸಿಗದೇ ಹೋಟೆಲ್ ಕಾನಿಷ್ಕದಲ್ಲಿ ಉಸ್ಸೆಂದು ಕೂತಿದ್ದಾಗ
ಚಾಮಿ ಹೋಗಬೇಕೆ? ಚಾಮಿಯನ್ನು ಕಂಡ ಕೂಡಲೇ ನಿರ್ಮಾಪಕ ಬಾಬುಗೆ
ಸಿಟ್ಟು ಹಣೆಯವರಗೆ ಏರಿಯಾಗಿತ್ತು. ಇನ್ನು ನೆತ್ತಿಯವರಗೆ
ಏರಿದರೆ ಕಷ್ಟ ಎಂದು ಚಾಮಿ ದೇಶಾವರಿ ನಗೆಯೊಂದಿಗೆ ಮಾತು ಶುರುಮಾಡಿದ.
ಹಾಗೆ
ನೋಡಿದರೆ ಚಾಮಿಗೆ ಸಿನಿಮಾ ಟಚ್ ಸ್ವಲ್ಪ ಕಡಿಮೆಯೇ. ಎಲ್ಲೋ
ರಾಜಕಾರಣಿಗಳನ್ನು ಮಾತಾಡಿಸುತ್ತಿದ್ದ ಚಾಮಿಗೆ ಈ ಬಾಬಣ್ಣ, ಮಂಜಣ್ಣ,
ಗುರುವಣ್ಣ ಎಲ್ಲಾ ಒಂದು ರೀತಿಯಲ್ಲಿ ಸಂಬಂಧವಿಲ್ಲದ ಫ್ರೆಂಡ್ಸ್. ಬಾಬಣ್ಣ
ಕೊಂಚ ಖುಷಿಯ ಮೂಡಿಗೆ ಬಂದರೂ ಅವರ ಕೋಪ ಇನ್ನೂ ಇಳಿದಿರಲಿಲ್ಲ.
ಆದರೆ ತೀರಾ ವಿಕೋಪದ ಕೋಪಕ್ಕೆ ಹೋಗದೇ, `ನೀವು ಪ್ರೆಸ್‌ನೋರು,
ರಿಮೇಕು, ಕನ್ನಡದ ಕತೇನೆ ಅಲ್ಲ, ತಮಿಳು ಕಾಪಿ... ಹೀಗೆ ಬರೀತಾನೇ
ಇರ್‍ತೀರಿ, ನಿಮಗೆ ನಮ್ಮ ಕಷ್ಟ ಏನಾದರೂ ಗೊತ್ತಾ? ನಾನು, ನಾಗಣ್ಣ ಮೂರು
ವಾರದಿಂದ ಕತೆ ಹುಡುಕ್ತಾನೇ ಇದೀವಿ, ಬರೀ ಡಬ್ಬಾ ಕತೆಗಳೇ ಸಿಕ್ತಾವೆ
ಹೊರತು, ನಮಗೆ ಬೇಕಾದ ಕತೇನೇ ಸಿಕ್ಕಿಲ್ಲ... ಅದ್ಕೆ ಚೆನ್ನೈಗೆ ಹೊರ್‍ಟಿದ್ದೀವಿ,
ಬರ್‍ತೀರಾ... ಅಲ್ಲಿ ಲಾಟ್ ಲಾಟ್ ಕತೆ ರಾಶಿ ಹಾಕೋದನ್ನ ನೋಡ್ತೀರಾ?'
ಎಂದು ಆಹ್ವಾನ ಕೊಟ್ಟೇಬಿಟ್ಟರು. ಚಾಮಿಯೂ ಮರುಮಾತಿಲ್ಲದೇ
ಒಪ್ಪಿಕೊಂಡ.
`ನಿಮಗೆ ಎಂಥ ಕದೈ ವೇಣು? ಸೊಲ್ಲುಮಾ...? ಎಂದು ಆ ತಮಿಳು
ಕತೆಗಾರ ನಾಗಣ್ಣ, ಬಾಬುರನ್ನು ಕೇಳಿದ. ಬಾಬು ಒಂದು ಸಾರಿ ಹೆಮ್ಮೆಯಿಂದ
ಚಾಮಿಯ ಮುಖ ನೋಡಿದರು. ಅಲ್ಲಿ ನೋಡಿದರೆ ಕ್ಯಾಸೆಟ್‌ಗಳ ದೊಡ್ಡ
ರ್‍ಯಾಕು. ಒಂದೊಂದು ವಿಭಾಗಕ್ಕೆ ಹಂಡ್ರೆಡ್ ಡೇಸ್, ಸಿಲ್ವರ್ ಜ್ಯುಬಿಲಿ,
ಗೋಲ್ಡನ್ ಜ್ಯುಬಿಲಿ, ಆಲ್ ಟೈಂ ಹಿಟ್ಸ್... ಇತ್ಯಾದಿ ಬೋರ್ಡುಗಳು. ಚಾಮಿ
ಅವಕ್ಕಾದ.
`ನೀವೇ
ಆರಿಸಿಕೊಡಿ. ಸೂಪರ್ ಹಿಟ್ ಆಗ್ಬೇಕು. ನೋಡೋರು ಕುರ್ಚಿ ಹಿಡ್ಕೊಂಡು ಹಾಗೇ
ಕೂತಿರ್‍ಬೇಕು, ಅಂತಾ ಕತೆ ನೋಡಿ...' ಎಂದರು ನಾಗಣ್ಣ.
`ಯಾರು
ಹೀರೋ, ಸಿಂಗಲ್ ಹೀರೋವಾ? ಅಥವಾ ಕಾಂಬಿನೇಷನ್ನಾ? ಒಂದೇ ಹೀರೊಯಿನ್ನಾ?
ಸಾಂಗಿಗೆ ಬೇರೆ ಹೀರೋಯಿನ್ ಹಾಕ್ತೀರಾ? ಸೆಂಟಿಮೆಂಟಲ್ ಕದೈಯಾ...?
ಆ ತಮಿಳುಮಣಿ ಹೇಳುತ್ತಿದ್ದಂತೆಯೇ ಬಾಬು ಬಾಯಿ ಹಾಕಿ, `ಒಳ್ಳೆ ಸೆಂಟಿಮೆಂಟಲ್
ಕಾಮಿಕ್ ಫ್ಯಾಮಿಲಿ ಲವ್ ಸ್ಟೋರಿ... ನಮ್ಮ ವಿಷ್ಣು ಸಾರಿಗೆ...' ಎಂದರು.
`ವಿಷ್ಣು ಸಾರ್ ಅಂದ್ರೆ... ಹಾಂ... ಸೂರಪ್ಪ... ಹಾಗಾದ್ರೆ ಅವ್ರಿಗೆ ಟೀನೇಜ್
ಸ್ಟೋರಿ ಬೇಡ... ಸಿಲ್ವರ್ ಜ್ಯುಬಿಲಿ ಯಾವ್ದಾದರೂ ಕೊಡ್ಲಾ? ರಜನೀಕಾಂತ್
ಸಿನಿಮಾ ಇದೆ. ಕೊಂಜ ಚೇಂಜ್ ಮಾಡಿದ್ರೆ ಸೂಪರ್ ಹಿಟ್... ಅಥವಾ
ಗೋಲ್ಡನ್ ಜ್ಯುಬಿಲಿ ನೋಡ್ಲಾ?' ಎಂದು ಕೇಳಿದ ತಮಿಳು ಮಣಿ.
`ಗೋಲ್ಡನ್
ಜ್ಯುಬಿಲಿ ಯಾರ್‍ದು?' ಕೇಳಿದರು ನಾಗಣ್ಣ.
`ಶಿವಾಜಿದು ಇದೆ. ಎಂಜಿಆರ್ ಇದೆ, ಶಿವಾಜಿ ಪ್ರಭು, ಕಮಲಹಾಸನ್...
ಯಾರ್‍ದು ಬೇಕಾದ್ರೂ ನೋಡಿ.'
`ರಜನೀಕಾಂತ್
ಸಿನಿಮಾ ಥರಾನೇ ಇರ್‍ಲಿ... ಆದ್ರೆ ಹಾಡು ಕೊಂಜ ಕಮಲಹಾಸನ್ ಸ್ಟೈಲ್
ಇರ್‍ಬೇಕು. ಆಕ್ಟಿಂಗ್‌ಗೆ ಸ್ಕೋಪ್ ಬೇಕು, ಹಾಗಾಗಿ ಎಲ್ಲಾದ್ರೂ ಶಿವಾಜಿ ಗಣೇಶನ್
ಸಿನಿಮಾದ ಕತೆ ಸೇರಿದರೆ ಒಳ್ಳೇದು... ಇನ್ನು ಫೈಟು... ತೆಲುಗು
ರಾಜಶೇಖರ್ ಥರ ಇರ್‍ಬೇಕು...' ಬಾಬು ಹೇಳುತ್ತಲೇ ಹೋದರು.
`ಓ... ಹಾಗಾದ್ರೆ ನಿಮಗೆ ಕಾಂಬಿನೇಷನ್ ಕತೆ ಬೇಕು ಅಂದಹಾಗಾಯ್ತು.
ಅದನ್ನು ಮೊದಲೇ ಹೇಳೋದಲ್ವಾ? ಕನ್ನಡದಲ್ಲಿ ಸುಮಾರು ಜನ ಬಂದು
ಕಾಂಬಿನೇಷನ್ ಕತೆ ತಗೊಂಡು ಹೋಗಿದ್ದಾರೆ. ಅದಾದ್ರೆ ಸ್ವಲ್ಪ ರೇಟ್
ಜಾಸ್ತಿ ಆಗುತ್ತಲ್ಲ...' ಎಂದು ಮಣಿ ರಾಗ ಎಳೆದ.
`ಕಾಸ್ಟ್
ಬಗ್ಗೆ ಏನೂ ಯೋಚ್ನೆ ಮಾಡ್ಬೇಡಿ. ತೀರಾ ಜಾಸ್ತಿ ಅಲ್ಲದಿದ್ರೂ
ಕಮ್ಮಿಯಂತೂ ಕೊಡಲ್ಲ... ಯಾಕಂದ್ರೆ ಈ ಸಿನಿಮಾ ಎಂಥ ಕಾಂಬಿನೇಷನ್
ಇರಬೇಕು ಅಂದ್ರೆ... ಇದುವರೆಗೂ ಕನ್ನಡದಲ್ಲಿ ಯಾವನೂ ಇಂಥ
ಚಿತ್ರಾನ ರಿಮೇಕ್ ಮಾಡಿರ್‍ಬಾರ್ದು. ಅಲ್ದೆ ರಿಮೇಕ್ ಅಂತಾನೂ
ಗೊತ್ತಾಗ್ಬಾರ್ದು' ಎಂದು ಚಾಮಿ ಇರುವುದನ್ನು ನೆನೆದು ಒಳಗೇ ನಾಲಿಗೆ
ಕಚ್ಚಿಕೊಂಡರು ಬಾಬು.
`ಹಾಗಾದ್ರೆ
ನಿಮಗೆ ಆಲ್‌ಟೈಂ ಹಿಟ್ಟೇ ಸರಿ...' ಎಂದ ಮಣಿ ಮೇಲಿನ ರ್‍ಯಾಕ್‌ನಿಂದ
ಒಂದಷ್ಟು ಕ್ಯಾಸೆಟ್‌ಗಳನ್ನು ಇಳಿಸತೊಡಗಿದ. ಒಂದೊಂದನ್ನೇ ತೆಗೆದು,
ಅದರ ಗುಣವಾಚಕಗಳನ್ನು ಹೇಳುತ್ತಾ, `...ಇದು ಎಂಜಿಆರ್, ರಜನಿ,
ಶಿವಾಜಿ, ಗೌಂಡಮಣಿ, ಸೆಂದಿಲ್, ರಘುವರನ್ ಕಾಂಬಿನೇಷನ್...' ಎನ್ನುತ್ತಿರುವಾಗಲೇ
ಚಾಮಿ ತೆಪ್ಪಗಿರಲಾಗದೆ ತನ್ನ ಸಿನಿಮಾ ಅಜ್ಞಾನವನ್ನು ಪ್ರದರ್ಶಿಸುತ್ತಾ,
`...ಎಂಜಿಆರ್ ಟೈಮಲ್ಲಿ ಈ ರಘುವರನ್, ಗೌಂಡಮಣಿ ಇದ್ದರಾ ಬಾಬು...'
ಎಂದು ಬಾಯಿ ತೆರೆದೇ ಬಿಟ್ಟ.
ಮಣಿ,
ಬಾಬು ಕೋಪದಿಂದ ಉರಿಯ ತೊಡಗಿದರು. ನಾಗಣ್ಣ ಸಮಾಧಾನ ಮಾಡುತ್ತಾ,
`ಚಾಮಿ, ನಿನಗೆ ಕಾಂಬಿನೇಷನ್ ಅಂದ್ರೆ ಏನಂತ ಗೊತ್ತಿಲ್ಲ, ಇಲ್ಲಿಂದ ಹೋಗೋವರೆಗೂ
ಬಾಯಿ ತೆಗೀಬೇಡ...' ಎಂದು ಗುಟ್ಟಾಗಿ ಗದರಿದರು.
`... ವ್ಯವಹಾರ ಗೊತ್ತಿಲ್ದೆ ಪ್ರೆಸ್ನೋರ ಥರಾ ಮಾತಾಡ್ತಾರಲ್ಲ,
ಯಾರು ಸಾರ್?' ಎಂದು ಮಣಿ ಕೇಳಿದರೂ ನಾಗಣ್ಣ ಗುಟ್ಟು ಬಿಡದೇ ನಗುತ್ತಾ
ಮಾತು ತೇಲಿಸಿದರು.
`ನೋಡಿ ಬಾಬು, ಈ ಪಿಚ್ಚರ್ ಸ್ಟಾರ್ಟಿಂಗು ಶಿವಾಜಿ ಫಿಳಂ ಥರಾ... ಅಂದ್ರೆ ಫ್ಯಾಮಿಲಿ
ಪ್ರಿಸ್ಟೀಜ್‌ಗಾಗಿ, ಜೀವಾನೇ ಕೊಡೋ ಮನುಷ್ಯ... ಆಮೇಲೆ ಎಂಜಿಆರ್ ಥರಾ
ದೇಶಭಕ್ತ... ರಜನಿ ರೀತಿ ಬಡವರ ಬಂಧು... ಅವನ ಜೊತೆ ಸೆಂದಿಲ್
ಗೌಂಡಮಣಿ ಥರದ ಕಾಮಿಡಿ ಟ್ರಾಕು... ಅಲ್ಲಿ ರಘುವರನ್ ಥರದ ವಿಲನ್.
ಅವನು ಮೊದಲು ಹೀರೋಗೆ ಫ್ರೆಂಡು.. ಇಂಡರ್‌ವಲ್ ನಂತರ ವಿಲನ್
ಆಗ್ತಾನೆ. ಆಗ ಇಂಡರ್‌ವಲ್‌ನಲ್ಲಿ ಒಂದು ಪ್ಯಾತೋ ಹಾಕಿದ್ರೆ... ಆಹಾ..! ಬೇಕಾದ್ರೆ
ಒಂದು ಹಾಡನ್ನು ಸ್ವಿಡ್ಜರ್‍ಲೆಂಡ್‌ನಲ್ಲೂ ಹಾಕ್ಕೋಬಹುದು. ಅಥವಾ ಇಲ್ಲೇ
ಗೋಲ್ಡನ್ ಬೀಚ್‌ನಲ್ಲೂ ಮಾಡಬಹುದು. ಒಟ್ಟಿನಲ್ಲಿ ಫುಲ್ ಸೆಂಟಿಮೆಂಟ್
ಫ್ಯಾಮಿಲಿ ಸ್ಟೋರಿ...'
`ಇದಾಗಬುದೇನೋ
ಅಲ್ವೇ ನಾಗಣ್ಣ...' ನಾಗಣ್ಣ ಒಪ್ಪಿಕೊಂಡರು. ಬಾಬುಗೆ ತಲೆಬಿಸಿಯೆಲ್ಲಾ
ಕಡಿಮೆಯಾಗಿ ಒಂದು ಸಲ ನಿಟ್ಟುಸಿರುಬಿಟ್ಟರು.
ಮಣಿ
ಮತ್ತೂ ಮುಂದುವರಿದು ಹೇಳಿದ. `ರಮೇಶ, ಅಂಬರೀಶ್, ದೇವರಾಜ್,
ಶಿವರಾಜ್ ಯಾರಿಗೆ ಬೇಕಾದ್ರೂ ಕಾಂಬಿನೇಷನ್ ಕತೆ ಇದೆ...
ಯಾರಾದ್ರೂ ಇದ್ರೆ ಕಳ್ಸಿ ಬಾಬು... ಬೇಕಾದ್ರೆ ಕಮಿಷನ್ ಕೊಡೋಣ...'
ಎಂದು ಮಣಿ ಹತ್ತು ಲಕ್ಷದ ಚೆಕ್‌ನ್ನು ಬಾಬು ಕೈಯಿಂದ
ತೆಗೆದುಕೊಳ್ಳುತ್ತಾ ಹೇಳಿದ.
`ಬೆಂಗಳೂರಿನಲ್ಲೇ ನಾವು ಕತೆ ಹುಡುಕುತ್ತಾ ಕೂತಿದ್ರೆ ಇನ್ನು ಐದು
ವರ್ಷನಾದ್ರೂ ಹೀಗೆ ಕೂತಿರಬೇಕಾಗಿತ್ತು, ಏನಂತೀರಿ ಚಾಮಿ...? ಎಂದರು
ಬಾಬು. ಚಾಮಿ ಪೆಚ್ಚಾಗಿ ನಕ್ಕ.