ಕೃಷ್ಣಾ ಸರಕಾರವಿದ್ದಾಗ,
ವಿದೇಶದ ಗಣ್ಯರನ್ನು ಸೆಳೆಯಲು, ತಮ್ಮ ರಾಜ್ಯದಲ್ಲಿ ವಿದೇಶಿ ಬಂಡವಾಳ ಹೂಡಿಸಲು
ಆಂಧ್ರದ ನಾಯ್ಡು, ಕರ್ನಾಟಕದ ಕೃಷ್ಣರ ನಡುವೆ ಸ್ಪರ್ಧೆಯೇ ನಡೆಯಿತು.
ಅಂದು ಜನವರಿ ೨೩,
೨೦೦೦ನೇ ಇಸವಿ.
`ಸಾರಿ ಸರ್, ಅವ್ರು
ದಿಲ್ಲಿಗೆ ಹೋಗಿದಾರೆ. ಈಗ ಸೀಸನ್ನು, ಇನ್ನು ಎರಡು ತಿಂಗಳು ಬರೋದಿಲ್ಲ' ಎಂದು
ಮುಖ್ಯಮಂತ್ರಿಗಳ ಮನೆಯಿಂದ ಉತ್ತರ ಬಂದಾಗ ಚಾಮಿ ಅವಾಕ್ಕಾದ. ದಿಲ್ಲಿಯಲ್ಲಿ ಇವರಿಗೇನು
ಕೆಲಸ? ಮುಖ್ಯಮಂತ್ರಿಗಳೇ ದಿಲ್ಲಿಗೆ ಹೋಗಬೇಕಾದರೆ ಏನಾದ್ರೂ ಮಂತ್ರಿಮಂಡಲದಲ್ಲಿ ಭಿನ್ನಮತದ
ಗಾಳಿ ಬೀಸುತ್ತಿದೆಯೇ? ಸೀಸನ್ನು ಅಂದ್ರೆ ಇದ್ಯಾವ ಸೀಸನ್? - ನೂರಾರು ಪ್ರಶ್ನೆಗಳು ಮುತ್ತತೊಡಗಿದವು.
ಯಾರಾದರೂ ಮಿನಿಸ್ಟ್ರುಗಳನ್ನು
ಹಿಡಿದು ದಿಲ್ಲಿಗೆ ಹೋಗಲೇಬೇಕು ಎಂದು ಅಂದುಕೊಳ್ಳುತ್ತಿರುವಾಗಲೇ ಟಿ.ಜಾನ್ ಎಂಬ ವಿಮಾನಮಂತ್ರಿಯವರೂ
ದಿಲ್ಲಿಗೆ ಹೊರಟಿದ್ದರಿಂದ ಚಾಮಿಗೆ ಪುಕ್ಕಟೆ ದಿಲ್ಲಿಗೆ ಹೋಗುವ ಅವಕಾಶ ಸಿಕ್ಕಿತು.
`...ಆಂಧ್ರದ ಮುಖ್ಯಮಂತ್ರಿ
ಚಂದ್ರಬಾಬು ನಾಯ್ಡು ದಿಲ್ಲಿಯ ಏರ್‌ಪೋರ್ಟಿನಲ್ಲೇ ಉಳಿದುಕೊಂಡು ಫಾರಿನ್‌ನಿಂದ ಬರುವ
ಎಲ್ಲಾ ಇಂಡಸ್ಟ್ರಿಯವರನ್ನೂ ಹಿಡಿದು ತಮ್ಮ ಬುಟ್ಟಿಗೆ ಹಾಕಿಕೊಳ್ತಿದ್ದಾರೆ ಮಾರಾಯ್ರೆ. ನಮ್ಮ
ಕಡೆ ಬರುವ ಜನ ಎಲ್ಲಾ ಹೈದ್ರಾಬಾದ್‌ಗೆ ಹೋಗ್ತಿದ್ದಾರೆ. ಕಂಪ್ಯೂಟರ್ ಇಂಡಸ್ಟ್ರಿಗಳನ್ನು
ಇಲ್ಲೇ ಬರುವ ಹಾಗೆ ಮಾಡುವ ಅಂದರೆ ಆ ಬಾಬು ಬಿಡ್ತಾ ಇಲ್ಲ. ಅದಕ್ಕೆ ನಮ್ಮ ಸಿಯೆಮ್
ನಾವೇನು ಕಡಿಮೆ ಅಂತ ಕರ್ನಾಟಕದ್ದೂ ಒಂದು ಮಳಿಗೆ ಹಾಕಿದ್ದಾರೆ. ಈಗ ಫಾರಿನರ್ ಬರುವ
ಸೀಸನ್ ಆದ್ದರಿಂದ ವ್ಯಾಪಾರವನ್ನು ಈಗಲೇ ಕುದಿರಿಸಿಕೊಳ್ಳಬೇಕು ಅನ್ನುವುದು ನಮ್ಮ
ಸಿಎಮ್ ಪ್ಲಾನ್.... ಹೇಗಿದೆ?' ಎಂದು ಜಾನ್ ಮೆಚ್ಚುಗೆಯಿಂದ ಮುಖ್ಯಮಂತ್ರಿಗಳ
ಕಾರ್ಯವನ್ನು ಹೊಗಳತೊಡಗಿದರು.
ದಿಲ್ಲಿ ಏರ್‌ಪೋರ್ಟಿಗೆ
ಚಾಮಿ ಹೋದರೆ ಅದೊಂದು ಸಂತೆ ಥರ ಆಗಿಹೋಗಿತ್ತು. ಒಂದು ಕಡೆ ಕರ್ನಾಟಕದ ಮಳಿಗೆ.
`ಭವಿಷ್ಯದ ಸಿಂಗಪೂರ್‌ಗೆ ... ಸಿಲಿಕಾನ್ ಕಣಿವೆಗೆ ಅಂದದ ಬೆಂಗಳೂರಿಗೆ ನಿಮಗೆಲ್ಲಾ ಸ್ವಾಗತ'
ಎಂಬ ನಿಯಾನ್ ಲೈಟಿನ ಬೋರ್ಡ್ ಝಗಮಗಿಸುತ್ತಿದ್ದರೆ, ಅತ್ತ ಕಡೆಯ ಹೈದ್ರಾಬಾದ್
ಮಳಿಗೆಯಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್‌ನಲ್ಲಿ ರಚಿತವಾದ, ಸ್ವಯಂಚಾಲಿತ ಸಿನಿಮಾ
ತಾರೆಯರ ಬೃಹತ್ ಚಿತ್ರಗಳು ರಾರಾಜಿಸುತ್ತಿದ್ದವು. ಅಷ್ಟರಲ್ಲಿ ಫ್ರಾನ್ಸಿನ ವಿಮಾನವೊಂದು
ನಿಧಾನವಾಗಿ ನೆಲದ ಮೇಲೆ ತೇಲುತ್ತಾ ಬಂದು ನಿಂತುಕೊಂಡಿತು.
ಇತ್ತ ಹೆಗಲಿಗೆ ಲ್ಯಾಪ್‌ಟಾಪ್
ನೇತುಹಾಕಿಕೊಂಡಿದ್ದ ಹಾರ್‍ಮೋನಿಯಂ ಪೆಟ್ಟಿಗೆ ಹಿಡಿದ ಮಾಸ್ತರ ರೀತಿ ಕಾಣುತ್ತಿದ್ದ ಕೃಷ್ಣರ
ನೇತೃತ್ವದಲ್ಲಿ ಶಿವಕುಮಾರ್, ಜಾನ್, ಬಿಕೆಸಿ ಮುಂತಾದವರ ಗ್ಯಾಂಗ್ ಗಡಿಬಿಡಿಯಿಂದ ವಿಮಾನ
ನಿಂತ ಕಡೆ ಓಡತೊಡಗಿದರೆ, ಅತ್ತ ಅದೇ ರೀತಿ ಸಂಗೀತ ಮಾಸ್ತರಂತೆ ಕಾಣುತ್ತಿದ್ದ ನಾಯ್ಡು,
ಜಯಪ್ರದಾ ಮುಂತಾದವರ ಜೊತೆ ವಿಮಾನದಿಂದ ಜನ ಇಳಿಯುವ ಏಣಿಯತ್ತ
ಓಡತೊಡಗಿದರು.
`ಯಾರ್ರೀ, ಬೆಂಗ್ಳೂರ್...
ಬೆಂಗ್ಳೂರ್... ಸಿಲಿಕಾನ್ ವ್ಯಾಲಿ, ಸಿಂಗಪೂರ್ ಸಿಟಿ... ಯಾರ್ರೀ... ಯಾರ್ರೀ....' ಎಂದು ಮೈಕಿನಲ್ಲಿ
ಕೂಗುತ್ತಾ ಕೃಷ್ಣಾ ಸಾಗಿದ್ದರೆ, ಅತ್ತ ನಾಯ್ಡು ಕೂಡ ಗಟ್ಟಿದನಿಯಲ್ಲಿ `ಎಲೆಕ್ಟ್ರಾನಿಕ್ ಸಿಟಿ
ಹೈದ್ರಾಬಾದ್.... ಹೈದ್ರಾಬಾದ್... ಒಮ್ಮೆ ಬಂದರೆ ಮತ್ತೊಮ್ಮೆ, ಮಗದೊಮ್ಮೆ ಬರಲೇಬೇಕೆನಿಸುವ
ಸೈಬರಾಬಾದ್... ಬನ್ನಿ... ನೀವು ಇಲ್ಲಿ ಇಂಡಸ್ಟ್ರೀ ಶುರು ಮಾಡಿದರೆ ಬೇಕಾದಷ್ಟು
ಸವಲತ್ತುಗಳು ಉಚಿತ!' ಎಂದು ಘೋಷಿಸತೊಡಗಿದರು.
ಅವರ ಘೋಷಣೆ ಮುಗಿಯುತ್ತಿದ್ದಂತೆಯೇ
ಜಯಪ್ರದಾ, `ಒಂದು ವರ್ಷ ರಾಮೋಜಿ ಫಿಲಂ ಸಿಟಿಯಲ್ಲಿ ವಿಹಾರ ಫ್ರೀ... ಎರಡು ವರ್ಷ ಹುಸೇನ್
ಸಾಗರದಲ್ಲಿ ಇಡೀ ಫ್ಯಾಮಿಲಿಗೆ ಬೋಟಿಂಗ್ ಫ್ರೀ...' ಎಂದು ಇನ್ನಷ್ಟು ಕೊಡುಗೆಗಳನ್ನು ಸಾರತೊಡಗಿದರು.
ಕೃಷ್ಣ
ಸಿಡಿಮಿಡಿಗೊಂಡರು. ಅದರಲ್ಲೂ ನಾಯ್ಡು ಕೆಲವು ದೊಡ್ಡ ಸೂಟ್‌ಕೇಸಿನ ಜನರನ್ನು
ಕೈಹಿಡಿಡು ಎಳೆದುಕೊಂಡೇ ಹೋಗುವುದನ್ನು ಕಂಡು ತಾಳಲಾಗಲಿಲ್ಲ. `ರೀ
ಶಿವಕುಮಾರ್, ಈ ನಾಯ್ಡುದು ತೀರಾ ಅತಿಯಾಯ್ತು. ನಮ್ಮಲ್ಲೂ ಏನೇನಿದೆ ಅಂತ ನೀವೂ
ಜೋರಾಗಿ ಕೂಗ್ರಿ...' ಎಂದು ತಾಕೀತು ಮಾಡುತ್ತಲೇ,
ಶಿವಕುಮಾರ್ `ಟ್ವಿಂಟಿಫೋರ್
ಅವರ್‍ಸ್ ವಾಟರ್ ಫ್ರೀ... ಎಲೆಕ್ಟ್ರಿಸಿಟಿ ಫ್ರೀ... ನಮ್ಮ ರಸ್ತೆಗಳೋ ಸೋನಾಲಿ ಬೇಂದ್ರೆಯ
ನುಣುಪಿನ ಥೈಸ್! ನಮ್ಮ ಫ್ಲೈ ಓವರ್‌ಗಳು ಶಾಂಪೂ ಹಾಕಿ ತೊಳೆದ ಕರಿಷ್ಮಾಳ
ತಲೆಗೂದಲಿನಂತೆ ನುಣುಪು... ಅಲಸೂರ್ ಲೇಕ್‌ನಲ್ಲಿ ಬೋಟಿಂಗ್... ಕಿಡ್ಸ್‌ಕೆಂಪಿನಲ್ಲಿ ಶಾಪಿಂಗ್...
ಆಯಿಯೇ ಸಾಬ್ ಆಯಿಯೇ... ಬೆಂಗಳೂರು ಈಸ್ ಸಿಂಗಪೂರ್!' ಲಯಬದ್ಧವಾಗಿ
ಕೂಗತೊಡಗಿದರು.
`ನಾನೇನೋ
ಅಂದ್ಕೊಂಡಿದ್ದೆ ಕಣ್ರೀ... ಪರವಾಗಿಲ್ಲ ನೀವೂನೂ. ಒಳ್ಳೆ ಬಿಸಿನೆಸ್ ಟ್ಯಾಕ್ಟಿಕ್ಸ್ ಇದೆ...' ಎಂದು
ಕೃಷ್ಣ ಹೊಗಳುತ್ತಿರುವಾಗಲೇ ಜಾನ್ ಬ್ಯಾಗಿನಿಂದ ರೇಷ್ಮೆ ಸೀರೆ, ಊದುಬತ್ತಿ, ಗಂಧದ
ಕೆತ್ತನೆಯ ಮೂರ್ತಿಗಳನ್ನು ಬಂದವರಿಗೆಲ್ಲಾ ಹಂಚಲಾರಂಭಿಸಿದ್ದರು.
ಅಷ್ಟರಲ್ಲಿ ಜನ ಎಲ್ಲಾ
ಈ ಕಡೆ ಬರುತ್ತಿರೋದು ಕಂಡು ನಾಯ್ಡುಗೆ ತಲೆಬಿಸಿಯಾಯಿತು. ಮತ್ತೆ ಜಯಪ್ರದಾರನ್ನು
ಛೂಬಿಟ್ಟರು. ಆಕೆ ಮತ್ತೆ ಜೋರಾಗಿ `ರಾಂಡಿ ಸಾರ್... ರಾಂಡಿ. ಬೆಂಗಳೂರ್‌ನಲ್ಲಿರೋದು
ಒಂದೇ ಫ್ಲೈಓವರ್, ಅದೂ ಕೂಡ ಇನ್ನೂ ಸರಿಯಾಗಿ ಓಪನ್ ಆಗಿಲ್ಲ. ಸೈಬರ್ ಸಿಟಿ ಸೈಬರಾಬಾದ್‌ನಲ್ಲಿ
ಏಳು ಫ್ಲೈ ಒವರ್ ಇವೆ. ಜುಮ್ ಅಂತ ಮೋಡದ ಮೇಲೆ ಹೋದ ಹಾಗೆ ಹೋಗಬಹುದು.
ಬ್ಯಾಂಗಲೂರ್ ರೋಡ್ಸ್ ನೋಡಿದ್ರೆ ಝಂಡು ಬಾಮ್‌ಗೆ ಒಳ್ಳೆ ಸೆಂಟರ್ ಆಗಬಹುದು. ಸೈಬರ್‌ಗೆ
ಏನಿದ್ರೂ ಹೈದ್ರಾಬಾದ್! ರಾಂಡಿ ಸಾರ್! ರಾಂಡಿ' ಎಂದು ಜೋರಾಗಿ ಆಂಟಿ ಪ್ರಾಪಗಾಂಡಾ ಶುರು ಮಾಡಿದರು.
ಕೃಷ್ಣ
ಶಿವಕುಮಾರ್ ಕಿವಿಯಲ್ಲಿ ಪಿಸುಗುಟ್ಟುತ್ತಾ, `ನಾವೂ ಯಾರಾದ್ರೂ ಫಿಲಂಸ್ಟಾರ್‌ಗಳನ್ನು
ಕರೆದುಕೊಂಡು ಬಂದಿದ್ರೆ ಚೆನ್ನಾಗಿತ್ತು ಕಣ್ರೀ' ಎಂದರು.
...ನಮ್ಮಲ್ಲಿ
ಯಾರಿದ್ದಾರೆ ಸಾರ್? ಭಾರತಿ, ಸರೋಜಾದೇವಿ ಎಲ್ಲಾ ಹಳಬರಾದ್ರು. ಇರೋ ಹೊಸಬರೆಲ್ಲಾ
ಚೈಲ್ಡ್ ಆರ್ಟಿಸ್ಟ್ ಥರಾ ಇದಾರೆ, ಇನ್ನು ಬೊಂಬಾಟ್ ಹಿರೋಯಿನ್ ಬೇಕಂದ್ರೂ ಹೈದ್ರಾಬಾದಿಗೆ ಹೋಗಬೇಕು.
ಅವ್ರನ್ನ ಕರಕೊಂಡು ಬಂದು ಅವ್ರು ನಮಗೇ ತಿರುಗಿಬಿದ್ರೆ ಕಷ್ಟ ಅಲ್ವಾ ಸಾರ್?' ಎಂದು
ಶಿವಕುಮಾರ್ ಅಸಲೀ ಸಮಸ್ಯೆಯನ್ನು ಮುಂದಿಟ್ಟರು.
ಅಷ್ಟರಲ್ಲಿ ಯಾರೋ
ಒಂದಿಬ್ಬರು ಕೃಷ್ಣರ ಹತ್ತಿರ ಬರುತ್ತಿದ್ದವರನ್ನು ನಾಯ್ಡು ಕಡೆಯವರು
ಎಳೆದುಕೊಂಡು ಹೋಗುತ್ತಿರುವುದನ್ನು ಕಂಡು ಕೃಷ್ಣರಿಗೆ ತಡೆಯಲಾಗಲಿಲ್ಲ. `ರೀ ನಾಯ್ಡು
ಸ್ವಲ್ಪ ಸಭ್ಯವಾಗಿ ವರ್ತಿಸಿ. ನಾವು ಈಗ ನಿಮ್ಮಷ್ಟೇ ಕಂಪ್ಯೂಟರ್‌ನಲ್ಲಿ ಪವರ್‌ಫುಲ್ ಅನ್ನೋದು
ತಿಳಿದಿರಲಿ' ಎಂದರು ಖಾರವಾಗಿ.
`ನನಗೆ ಗೊತ್ತಿಲ್ವೇ?
ನಿಮ್ಮ ಹತ್ರ ಇರೋ ಕಂಪ್ಯೂಟರ್‌ಗಳು ನಮ್ಮಲ್ಲಿ ಮಕ್ಕಳ ಆಟದ ಸಾಮಾನುಗಳು,
ಹಳ್ಳಿಗಳಲ್ಲಿ ಅದನ್ನ ಇಟ್ಕೊಂಡು ಗೇಮ್ಸ್ ಆಡ್ತಾರೆ ತಿಳೀತಾ'
ಕೃಷ್ಣರಿಗೂ ಉರಿ ಹತ್ತಿತು.
`ನಿಮಗೆ ಕುಡಿಯೋ ನೀರು ಬೇಕಾದ್ರೆ ನಾವು ಕೊಡಬೇಕು ನೆನಪಿರಲಿ' ಎಂದು ಕಟುವಾಗಿ
ಎಚ್ಚರಿಸಿದರು.
`ಅದು ಹ್ಯಾಗೆ
ತಗೋಬೇಕು ಅಂತ ನಮಗೂ ಗೊತ್ತಿದೆ, ಅವೆಲ್ಲಾ ಬೆದರಿಕೆ ಹಾಕಬೇಡಿ' ಎಂದು ಮರುಸವಾಲು
ಎಸೆದರು. ಮಾತಿಗೆ ಮಾತು ಬೆಳೆದು ವಿಕೋಪ ತಲುಪಿ, ಇನ್ನೇನು ಕತ್ತಿನಪಟ್ಟಿಯವರಗೆ
ಬಂತು ಅನ್ನುವಾಗ, ಜಪಾನ್, ಜರ್ಮನಿಯಿಂದ ಇನ್ನೆರಡು ವಿಮಾನಗಳು ಬಂದು ನಿಂತವು.
ಎಲ್ಲರೂ ಅತ್ತ ಓಡಿದರು.
`ಬನ್ನಿ ಸಾರ್, ಬೆಂಗ್ಳೂರ್..
ಅಲ್ಸೂರ್ ಮೆ ಬೋಟಿಂಗ್, ಕಿಡ್ಸ್‌ಕೆಂಪ್ ಮೆ ಶಾಪಿಂಗ್...'
`ರಾಂಡಿ ಸಾರ್ ರಾಂಡಿ..
ಹುಸೇನ್ ಸಾಗರದಲ್ಲಿ ಬೋಟಿಂಗ್ ಫ್ರೀ... ರಾಮೋಜಿ ಫಿಲಂ ಸಿಟಿಯಲ್ಲಿ ಸೈಟ್ ಸೀಯಿಂಗ್ ಫ್ರೀ...'
ಇತ್ಯಾದಿ ಮಾರಾಟದ ಘೋಷಣೆಗಳು ಗೌಜು ಮತ್ತೆ ಆ ವಿಮಾನಗಳ ಸುತ್ತ
ಕೇಳತೊಡಗಿದವು.