Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 11 October 2006 03:55 PM

ಖಾಯಿಲೆಯಲ್ಲದ ಖಾಯಿಲೆ, ಕೀಳರಿಮೆ

 

ರಹೀಂ ಉಜಿರೆ

raheem@vikrantakarnataka.com

* ಮೇಷ್ಟ್ರು ಕೇಳಿದ ಪ್ರಶ್ನೆಗೆ ಉತ್ತರ ಗೊತ್ತಿದ್ದರೂ ಅದನ್ನು ಹೇಳಲು ವಿದ್ಯಾರ್ಥಿ ಹಿಂಜರಿಯುತ್ತಾನೆ : ತನ್ನ ಉತ್ತರ ತಪ್ಪಿರಬಹುದು, ಅದನ್ನು ಕೇಳಿ ಉಳಿದ ವಿದ್ಯಾರ್ಥಿಗಳು ನಗಬಹುದೇ ಎಂಬ ಅನುಮಾನ ಆ ವಿದ್ಯಾರ್ಥಿಯದು.

* ಸಹೋದ್ಯೋಗಿ ಭಾರಿ ಪಾರ್ಟಿಯೊಂದಕ್ಕೆ ಆಹ್ವಾನ ಮಾಡಿರುತ್ತಾನೆ. ಹೋಗಲೂ ಮನಸ್ಸಿರುತ್ತದೆ. ಆದರೆ ಅಲ್ಲಿ ಸೇರುವ ಜನರು ತುಂಬ ಠಾಕುಠೀಕಾಗಿ ದಿರುಸು ತೊಟ್ಟು ಬಂದಿರುತ್ತಾರೆ. ಹೆಚ್ಚಿನವರಿಗೆ ಇಂಗ್ಲಿಷ್ ಬರುವುದರಿಂದ ಇಂಗ್ಲಿಷ್‌ನಲ್ಲೇ ಸಂಭಾಷಣೆ ಮಾಡುತ್ತಾರೆ. ಅಂಥ ಪಾರ್ಟಿಗೆ ಹೋಗಬೇಕೋ ಬೇಡವೋ ಎಂಬ ಸಂದಿಗ್ಧತೆ ಎದುರಾಗುತ್ತದೆ. ಕೊನೆಗೂ ಪಾರ್ಟಿ ಅಥವಾ ಕಾರ್ಯಕ್ರಮ ತಪ್ಪಿಸಿ ಸಹೋದ್ಯೋಗಿಯ ಅಸಮಾಧಾನಕ್ಕೆ ಈಡಾಗುತ್ತೇವೆ.

* ಎಲ್ಲ ಆಫೀಸುಗಳಲ್ಲೂ ವಾರಕ್ಕೊಮ್ಮೆ ಅಥವಾ ಎರಡು ಸಲ ಮೀಟಿಂಗು ನಡೆಯುವುದು ಸಾಮಾನ್ಯ. ಮೀಟಿಂಗಿನಲ್ಲಿ ಭಾಗವಹಿಸುವ ಎಲ್ಲ ಸದಸ್ಯರು ತಮ್ಮ ಸಲಹೆ-ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು. ಅನುಮಾನಗಳಿದ್ದರೆ ಅದನ್ನು ಪರಿಹರಿಸಿಕೊಳ್ಳಬಹುದು. ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಆಫೀಸಿನ ಬಹುತೇಕ ಕೆಲಸಗಾರರು ಮೀಟಿಂಗ್‌ನಲ್ಲಿ ಭಾಗವಹಿಸುತ್ತಾರೆ. ಆದರೆ ನೀವು ಗಮನಿಸಿ ನೋಡಿ, ಮೀಟಿಂಗ್‌ನಲ್ಲಿ ಕೆಲವೇ ಕೆಲವರು ಮಾತ್ರ ಮಾತನಾಡುತ್ತಿರುತ್ತಾರೆ. ಉಳಿದವರ ಬಳಿ ಮಾತನಾಡಲು ಸಾಕಷ್ಟು ಮಾತುಗಳಿದ್ದರೂ ಮೌನವಹಿಸುತ್ತಾರೆ; ತೀರಾ ಅಗತ್ಯವಿದ್ದರೂ ಮೌನ ಮುರಿಯುವುದಿಲ್ಲ.
 

ಮೇಲಿನ ಮೂರು ಪ್ರಸಂಗಗಳು ಕೀಳರಿಮೆಯ ಲಕ್ಷಣಗಳೇ. ತಮ್ಮನ್ನು ತಾವು ಕೀಳಂದಾಜು ಮಾಡುವುದೇ ಕೀಳರಿಮೆ (self pity). ಒಂದರ್ಥದಲ್ಲಿ ಇದು ಎಲ್ಲಾ ನೆಗಟಿವ್ ಯೋಚನೆಗಳ ತಾಯಿ. ಕೀಳರಿಮೆ ನಮ್ಮನ್ನು ಹಿಂದೇಟು ಹಾಕುವಂತೆ ಮಾಡುತ್ತದೆ; ಇನ್ನೊಬ್ಬರ ಜತೆ ಹೋಲಿಸಿ ನಮ್ಮನ್ನು ಮುನ್ನುಗ್ಗದಂತೆ ಪ್ರೇರೇಪಿಸುತ್ತದೆ. ಯಾವುದೇ ಸಾಧನೆ ಮಾಡಹೊರಟರೂ ಯಶಸ್ವಿಯಾಗದಂತೆ ನೋಡಿಕೊಳ್ಳುತ್ತದೆ. ಒಟ್ಟಿನಲ್ಲಿ ಅದು ನಮ್ಮ ವೈಯಕ್ತಿಕ ವಿಜಯಕ್ಕೆ ತಡೆಯೊಡ್ಡಿ, ಬದುಕನ್ನು ನೀರಸ ಮಾಡಿ ಬಿಡುತ್ತದೆ.
 

ಕೀಳರಿಮೆಯಿಂದ ನರಳುವ ವ್ಯಕ್ತಿ ಸದಾ ಇನ್ನೊಬ್ಬರಿಂದ ಅನುಕಂಪ ಬಯಸುತ್ತಿರುತ್ತಾನೆ ಮತ್ತು ಇತರರಿಂದ ಸಿಗುವ ಅನುಕಂಪದಿಂದಲೇ ಖುಷಿ ಕಾಣ ಬಯಸುತ್ತಾನೆ. ತನ್ನ ಬಗ್ಗೆ ತಾನೇ ಮರುಕಪಡುತ್ತಾನೆ. ಬೇರೆಯವರೆದುರು ತನ್ನ ದೌರ್ಬಲ್ಯಗಳನ್ನು, ಕೈಲಾಗದತನವನ್ನು ಅವರು ಕೇಳದೆಯೂ ಹೇಳಿಬಿಡುತ್ತಾನೆ; ಕೆಲವೊಮ್ಮೆ ತನ್ನನ್ನೇ ದೂಷಿಸಿಕೊಳ್ಳುವುದೂ ಇದೆ.
ಕೀಳರಿಮೆ ಮತ್ತು ಅಪರಾಧ ಪ್ರಜ್ಞೆ (guilty)ಯ ಮಧ್ಯದ ಗೆರೆ ತೀರ ತೆಳುವಾದದ್ದು. ಒಂದು ಮಿತಿಯಲ್ಲಿದ್ದರೆ ಅಪರಾಧ ಪ್ರಜ್ಞೆಯಿಂದ ಲಾಭವಿದೆ. ಅದು ನಮ್ಮನ್ನು ಆತ್ಮವಿಮರ್ಶೆಗೆ ತೊಡಗಿಸುತ್ತದೆ. ಆದರೆ ಕೀಳರಿಮೆ ಹಾಗಲ್ಲ; ಅದು ನಮ್ಮ ಉತ್ಸಾಹವನ್ನು-ಚೈತನ್ಯವನ್ನು ನಾಶಮಾಡುತ್ತದೆ.
 

ತಮ್ಮ ಕೀಳರಿಮೆಯನ್ನು ಮುಚ್ಚಿಕೊಳ್ಳುವ ಯತ್ನವಾಗಿ ಜನರು ನಾನಾ ರೀತಿಯ ವರ್ತನೆಗಿಳಿಯುತ್ತಾರೆ. ಅನಾವಶ್ಯಕವಾಗಿ ಮಾತನಾಡುವುದು, ನಗುವುದು ಅವುಗಳಲ್ಲೊಂದು! ಹೀಗೆ ಮಾಡುವುದರಿಂದ ಅವರಿಗೆ ತಾತ್ಕಾಲಿಕ ಖುಷಿ ಸಿಗುವುದಲ್ಲದೇ ತಮ್ಮಲ್ಲಿರುವ ಕೀಳರಿಮೆಯನ್ನು ಮರೆಯಬಯಸುತ್ತಾರೆ. ತಕ್ಷಣದ ಅವರ ಇಂಥ ವರ್ತನೆಗಳು ಎದುರಿಗಿರುವವರಿಗೆ ಏನೆಂದು ಅರ್ಥವಾಗಿರುವುದಿಲ್ಲ.
 

ಹೆಚ್ಚಿನವರಿಗೆ ಒಂದಲ್ಲ ಒಂದು ಕೀಳರಿಮೆ ಇದ್ದೇ ಇರುತ್ತದೆ. ಕೀಳರಿಮೆ ಬಾಲ್ಯಾವಸ್ಥೆಯಲ್ಲೇ ಪ್ರಾರಂಭವಾಗುತ್ತದೆ. ತನ್ನ ಮಕ್ಕಳನ್ನು ಎದುರು ಮನೆಯ ಮಕ್ಕಳ ಜತೆ ತಾಯಿ ಹೋಲಿಸಿ ಮಾತನಾಡಿದಾಗ, ಇತರೆ ವಿದ್ಯಾರ್ಥಿಗಳ ಸಾಧನೆಗಳನ್ನು ತನ್ನ ಮಕ್ಕಳ ಜತೆ ಹೋಲಿಸಿ, ಹಂಗಿಸಿದಾಗಲೆಲ್ಲ ಮಕ್ಕಳು ಕೀಳರಿಮೆಗೆ ಒಳಗಾಗುತ್ತಾರೆ. ತಾವು ಕೈಲಾಗದವರು ಎಂಬ ಭಾವನೆ ಮಕ್ಕಳಲ್ಲಿ ಮೂಡುತ್ತದೆ. ಸುಂದರವಲ್ಲದ ಮಾಮೂಲಿ ಹುಡುಗಿಯೊಬ್ಬಳಿಗೆ ತನ್ನದೇ ಕ್ಲಾಸಿನ ಸುರಸುಂದರಿ ವಿದ್ಯಾರ್ಥಿನಿಯನ್ನು ನೋಡಿದಾಗ, ಅವಳ ಜೊತೆ ಮಾತನಾಡುವಾಗ, ಒಟ್ಟಿಗೆ ನಡೆದುಕೊಂಡು ಹೋಗುವಾಗ ಕೀಳರಿಮೆ ಜಾಗೃತಿಯಾಗುತ್ತದೆ. ಇದು ಹುಡುಗಿಯರಿಗಷ್ಟೇ ಸೀಮಿತವಲ್ಲ. ನರಪೇತಲನಂತಿರುವ ಯುವಕ ಬಲಾರ್ಢ್ಯ ಯುವಕನ್ನು ನೋಡಿದಾಗ ಕೀಳರಿಮೆಗೆ ಒಳಗಾಗುತ್ತಾನೆ.
 

ಹೀಗೆ ಬಾಲ್ಯಾವಸ್ಥೆಯಲ್ಲಿಯೇ ಪ್ರಾರಂಭವಾಗುವ ಕೀಳರಿಮೆ ಕ್ರಮೇಣ ನಮ್ಮನ್ನಾವರಿಸಿ ಬದುಕನ್ನು ನರಕವನ್ನಾಗಿಸುತ್ತದೆ. ಇದು ಗಂಭೀರವಾದ ಖಾಯಿಲೆಯೇನಲ್ಲದಿರಬಹುದು; ಆದರೆ ಇದು ವ್ಯಕ್ತಿಯ ಗೆಲುವಿಗೆ ತೊಡಕಾಗಿ ಪರಿಣಮಿಸುತ್ತದೆ. ಉದಾಹರಣೆಗೆ : ಈಗ ಇರುವುದಕ್ಕಿಂತ ಒಳ್ಳೆಯ ಉದ್ಯೋಗಾವಕಾಶವೊಂದನ್ನು ಕೀಳರಿಮೆಯಿಂದಾಗಿ ಕಳೆದುಕೊಂಡರೆ ಅದರಿಂದ ನಷ್ಟವಾಗುವುದು ನಮಗೇ.
 

ಆತ್ಮವಿಮರ್ಶೆ ಮಾಡಿಕೊಳ್ಳುವುದು ಕೀಳರಿಮೆಯನ್ನು ಹೋಗಲಾಡಿಸುವುದಕ್ಕಿರುವ ಏಕೈಕ ಮಾರ್ಗ. ಮೈಬಣ್ಣ, ಎತ್ತರ ಮುಂತಾದ ದೈಹಿಕ ವಿಷಯಗಳಿಗೆ ಕೀಳರಿಮೆಗೊಳಗಾಗುವುದರಲ್ಲಿ ಅರ್ಥವೇ ಇಲ್ಲ. ಯಾಕೆಂದರೆ ಇವನ್ನು ನಾವು ಸರಿಪಡಿಸಿಕೊಳ್ಳುವುದು ಸಾಧ್ಯವಿಲ್ಲ. ಆದರೆ ನಮ್ಮ ಕೀಳರಿಮೆ ಸರಿಪಡಿಸಿಕೊಳ್ಳುವಂತಹದ್ದಾಗಿದ್ದರೆ ಉದಾ: ಮೈತೂಕ ಎಂದಿಟ್ಟಕೊಳ್ಳಿ, ಇನ್ನೊಬ್ಬರ ಸ್ಫುರದ್ರೂಪ ಶರೀರದೊಂದಿಗೆ, ನಮ್ಮ ದಢೂತಿ ದೇಹವನ್ನು ಹೋಲಿಸಿ ನೊಂದು ಕೀಳರಿಮೆಗೊಳಗಾಗುವ ಬದಲು, ಸರಿಯಾದ ಆಹಾರಕ್ರಮ ರೂಢಿಸಿಕೊಳ್ಳುವ ಮೂಲಕ -ದೈಹಿಕ ಚಟುವಟಿಕೆಯಿಂದಿರುವ ಮೂಲಕ ನಾವು ಅವರಂತಾಗಲು ಪ್ರಯತ್ನಿಸಬೇಕು.
 

ಇನ್ನೊಂದು, ಭಾಷೆ-ಕಲಿಕೆ-ಸಾಧನೆಯ ಬಗೆಗಿನ ಕೀಳರಿಮೆ. ಉತ್ತಮವಾಗಿ ಇಂಗ್ಲಿಷ್ ಮಾತನಾಡುವ ವ್ಯಕ್ತಿಯನ್ನು ನೋಡಿ ಕೀಳರಿಮೆಗೆ ಒಳಗಾಗುವ ಬದಲು, ಸ್ವಲ್ಪ ಕಷ್ಟಪಟ್ಟರೆ ಇಂಗ್ಲಿಷ್ ಕಲಿಯಬಹುದು. ಹಾಗೆಯೇ ಇನ್ನೊಬ್ಬರ ಸಾಧನೆಯನ್ನು ನೋಡಿ ಕೀಳರಿಮೆಗೆ ಒಳಗಾಗುವ ಬದಲು ಆ ಸಾಧನೆ ಮಾಡಲು ಅವನಿಗೆ ಹೇಗೆ ಸಾಧ್ಯವಾಯಿತು? ನಾನು ಹೇಗೆ ಪ್ರಯತ್ನಿಸಬಹುದು? ಎಂದು ಯೋಚಿಸಿ ಕಾರ್ಯಪ್ರವೃತ್ತರಾಗಬಹುದು.
 

ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಗುರಿಯ ಸ್ಪಷ್ಟ ನಿರ್ಧಾರ ನಮಗಿರಬೇಕು. ನಮ್ಮ ಗುರಿ ತಲುಪಲು ಏನೆಲ್ಲ ಶ್ರಮ ಬೇಕೋ ಅದಕ್ಕೆ ನಾವು ಸಿದ್ಧರಿರಬೇಕು. ಕೀಳರಿಮೆಯಿಟ್ಟುಕೊಂಡು ಕೊರಗದೆ, ಇನ್ನೊಬ್ಬರಿಗಾಗುವುದಾದರೆ ನನಗೇಕಾಗಬಾರದು ಎಂದು ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು. ಆಗ ಕೀಳರಿಮೆ ತನ್ನಂತಾನೇ ಕರಗಿ ಹೋಗದಿದ್ದರೆ ಕೇಳಿ.
 

ಇನ್ನಷ್ಟು

ಒಸಿಡಿ ಅಂದರೆ ಗೊತ್ತಾ?

ಉಸಿರಾಟ ನಿಯಂತ್ರಣ ಮತ್ತು ಅಭ್ಯಾಸದ ಅಗತ್ಯ - ಶಾಲಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com