ಆರೋಪಿಯ ಬಾಯಿಂದ ಸತ್ಯ ಹೊರಡಿಸಬಹುದೆ?
ರಹೀಂ
ಉಜಿರೆ
raheem@vikrantakarnataka.com
ಔಷಧ ಆಧಾರಿತ ಸತ್ಯಶೋಧ ಇತ್ತೀಚೆಗೆ ಜನಪ್ರಿಯವಾಗುತ್ತಿದೆ.
ರಾಸಾಯನಿಕಗಳನ್ನು ದೇಹಕ್ಕೆ ನುಗ್ಗಿಸಿ, ವ್ಯಕ್ತಿಯನ್ನು ಅರೆ
ಪ್ರಜ್ಞಾವಸ್ಥೆಗೆ ತಳ್ಳಿ, ಅವನ ಬಾಯಿಂದ ಸತ್ಯ ಸಂಗತಿಗಳನ್ನು
ಹೊರಹಾಕುವ ವಿಧಾನ ಹಲವು ಪ್ರಶ್ನೆಗಳಿಗೆ ದಾರಿ ಮಾಡಿದೆ. ಈ
ಪರೀಕ್ಷಾ ವಿಧಾನ ಮಾನವೀಯವಾದುದೇ? ಇದು
ನ್ಯಾಯಾಲಯಗಳಲ್ಲಿ ಪುರಸ್ಕೃತವಾಗುತ್ತದೆಯೇ? ಇತ್ಯಾದಿ.
ಇವೆರಡೂ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮೊದಲು
ಮನಸ್ಸು ಮತ್ತು ದೇಹಕ್ಕಿರುವ ಸಂಬಂಧದ ಬಗ್ಗೆ
ತಿಳಿದುಕೊಳ್ಳಬೇಕಾಗುತ್ತದೆ.
ನಮ್ಮ ಮನಸ್ಸು ಮತ್ತು ದೇಹಕ್ಕೆ ತುಂಬ ಹತ್ತಿರದ ಸಂಬಂಧವಿದೆ
ಎಂಬ ಸಂಗತಿ ಎಲ್ಲರಿಗೂ ತಿಳಿದದ್ದೇ. ಮನಸ್ಸಿನ ಮೇಲಾಗುವ ಪರಿಣಾಮ
ದೇಹವನ್ನೂ ತಟ್ಟುತ್ತದೆ: ಹಾಗೆಯೇ ದೇಹದ ಮೇಲಾಗುವ
ಪ್ರಭಾವ ಮನಸ್ಸನ್ನೂ ತಾಕುತ್ತದೆ. ಉದಾಹರಣೆಗೆ ನಾವು
ಆತಂಕಗೊಂಡಾಗ, ದುಗುಡಗೊಂಡಾಗ, ಭಯಗೊಂಡಾಗಲೆಲ್ಲ
ದೇಹದ ಅಂಗಾಗಳ ಮೇಲೆ ಅದರ ಪ್ರಭಾವವಾಗುತ್ತದೆ. ಉಸಿರಾಟದಲ್ಲಿ
ಏರುಪೇರು ಕಾಣಿಸಿಕೊಳ್ಳುವುದು, ಹಣೆಯಲ್ಲಿ ಬೆವರುವುದು,
ನಾಡಿಬಡಿತ ವೇಗ ಪಡೆದುಕೊಳ್ಳುವುದು, ರಕ್ತದ ಒತ್ತಡ
ಏರುವುದು- ಹೀಗೆ.
ದೇಹದಲ್ಲಾಗುವ ಇಂಥ ಪ್ರಕ್ರಿಯೆಗಳನ್ನು ಗಮನಿಸಿಯೇ ನಾವು
ಮಕ್ಕಳಿಗೆ `ನೀನು ಸುಳ್ಳು ಹೇಳುತ್ತಿದ್ದೀಯ' ಎಂದು
ಹೇಳುತ್ತಿರುತ್ತೇವೆ. ಪುಟ್ಟ ಮಕ್ಕಳು ಏನಾದರೂ ಸುಳ್ಳು ಹೇಳಿ
ಸಿಕ್ಕಿಬಿದ್ದಾಗ, ಅವರ ಮುಖಭಾವ, ಉಸಿರಾಟದ ವೇಗ, ಒಮ್ಮಿಂದೊಮ್ಮೆಲೇ
ಉತ್ಪತ್ತಿಯಾಗುವ ಬೆವರೇ ಅವರ ಸುಳ್ಳನ್ನು
ಅನಾವರಣಗೊಳಿಸುತ್ತದೆ.
ದೇಹ ಮತ್ತು ಮನಸ್ಸಿಗಿರುವ ಸಂಬಂಧದ ತಳಹದಿಯ ಮೇಲೆ
`ವಿಧಿ ವಿಜ್ಞಾನಶಾಸ್ತ್ರ' ರೂಪುಗೊಂಡಿತು. ಅದಕ್ಕೆ ಮುನ್ನ
ಕೊಲೆಗಾರರು, ದರೋಡೆಕೋರರು ಅಥವಾ ಇನ್ಯಾವುದಾದರೂ
ಅಕ್ರಮಗಳಲ್ಲಿ ಸಿಕ್ಕಿಹಾಕಿಕೊಂಡವರನ್ನು ದೈಹಿಕವಾಗಿ ದಂಡಿಸುವ
ಮೂಲಕವೋ, ಹಿಂಸೆ ನೀಡುವ ಮೂಲಕವೋ, ಸತ್ಯ ಬಾಯಿಬಿಡುವಂತೆ
ಮಾಡಲಾಗುತ್ತಿತ್ತು. ಕೆಲವು ಪ್ರಕರಣಗಳಲ್ಲಂತೂ ಆರೋಪಿಗಳಿಗೆ
ಏನೇ ಶಿಕ್ಷೆ ನೀಡಿದರೂ, ತಮ್ಮ ದುಷ್ಕೃತ್ಯಗಳ ಸುಳಿವು
ನೀಡುತ್ತಿರಲಿಲ್ಲ; ಬಲು ಚಾಲಾಕಿತನದಿಂದ ಸುಳ್ಳು ಹೇಳಿ ಬಚಾವಾಗುವ
ಪ್ರಯತ್ನ ಮಾಡಿ, ಅದರಲ್ಲಿ ಯಶಸ್ವಿಯೂ ಆಗುತ್ತಿದ್ದರು.
ವಿಧಿವಿಜ್ಞಾನ ಶಾಸ್ತ್ರ ಬಂದ ನಂತರ ಆರೋಪಿಗಳಿಂದ `ಬಾಯಿ'
ಬಿಡಿಸುವುದು ತುಸು ಸುಲಭವಾಗುತ್ತಾ ಬಂತು. ಪ್ರಾರಂಭದಲ್ಲಿ `ಲೈ
ಡಿಟೆಕ್ಟರ್' ಮೂಲಕ ಅಪರಾಧಿಗಳ ಸುಳ್ಳನ್ನು ಪತ್ತೆ ಹಚ್ಚುವುದು
ಸಾಧ್ಯವಾಯಿತು. ಲೈ ಡಿಟೆಕ್ಟರ್‌ನಲ್ಲಿದ್ದ ತೊಡಕೇನೆಂದರೆ, ಹೆಸರೇ
ಹೇಳುವಂತೆ ಇದು ಸುಳ್ಳನ್ನು ಪತ್ತೆ ಹಚ್ಚುತ್ತಿತ್ತೇ ಹೊರತು
ಸತ್ಯವನ್ನು ಬಯಲಿಗೆಳೆಯುವುದು ಈ ತಂತ್ರಜ್ಞಾನದಿಂದ
ಸಾಧ್ಯವಾಗಲಿಲ್ಲ.
ಅಂದರೆ ಈ ತಂತ್ರಜ್ಞಾನ ವ್ಯಕ್ತಿಯ ದೇಹದಲ್ಲಾಗುವ
ಪರಿಣಾಮಗಳನ್ನು (ಉಸಿರಾಟದಲ್ಲಿ ಏರುಪೇರಾಗುವುದು, ಅಸಹಜ
ಬೆವರು, ನಾಡಿ ಮಿಡಿತ, ರಕ್ತದೊತ್ತಡ ಇತ್ಯಾದಿ) ದಾಖಲಿಸಿ, ವ್ಯಕ್ತಿ
ಸುಳ್ಳು ಹೇಳುತ್ತಿದ್ದಾನೆಯೇ ಎಂದು ತಿಳಿದುಕೊಳ್ಳುವುದಕ್ಕಷ್ಟೇ
ಸೀಮಿತವಾಗಿತ್ತು. ಕೆಲವು ಚಾಲಾಕಿ ಆರೋಪಿಗಳಂತೂ ಈ ಲೈ
ಡಿಟೆಕ್ಟರನ್ನೇ ಯಾಮಾರಿಸಿದ ಉದಾಹರಣೆಗಳಿವೆ! ಈ ತಂತ್ರಜ್ಞಾನದ
ನಂತರ ಬಂದದ್ದೇ ಬ್ರೈನ್ ಮ್ಯಾಪಿಂಗ್.
ಬ್ರೈನ್ ಮ್ಯಾಪಿಂಗ್ ನೇರವಾಗಿ ಅಪರಾಧಿಯ ಮಿದುಳಿನ ಚಿತ್ರಣವನ್ನೇ
ನೀಡುವುದರಿಂದ, ಇಲ್ಲಿ ಸುಳ್ಳು ಹೇಳುವ ಅವಕಾಶವಿಲ್ಲ. ಉದಾಹರಣೆಗೆ
ವ್ಯಕ್ತಿಯೊಬ್ಬ ಕೊಲೆ ಮಾಡುವುದನ್ನು ಕಣ್ಣಾರೆ
ನೋಡಿದ್ದಾನೆಂದಿಟ್ಟುಕೊಳ್ಳೋಣ. ಆ ಘಟನೆ ಅವನ ಮಿದುಳಿನಲ್ಲಿ
ಭದ್ರವಾಗಿ ದಾಖಲಾಗಿರುತ್ತದೆ. ಕೆಲವು ದಿನಗಳ ಬಳಿಕ ಕೊಲೆಗೆ
ಸಂಬಂಧಿಸಿದ ಅಥವಾ ಕೊಲೆ ನಡೆದ ಸ್ಥಳದ ಚಿತ್ರವನ್ನು ಆ ವ್ಯಕ್ತಿಗೆ
ತೋರಿಸಿದಾಗ, ಅವನ ಮಿದುಳು ಅದಕ್ಕೆ ಪ್ರತಿಕ್ರಿಯಿಸುತ್ತದೆ. ಅದನ್ನು
ದಾಖಲಿಸಿಕೊಳ್ಳುವ ಮೂಲಕ ಘಟನೆಯ ಸೂಕ್ಷ್ಮ ವಿವರಗಳನ್ನು
ಪಡೆದುಕೊಳ್ಳಬಹುದು.
ಘಟನೆಯ ಚಿತ್ರವೊಂದೇ ಅಲ್ಲ; ಘಟನೆಗೆ ಸಂಬಂಧಪಟ್ಟ
ಪ್ರಶ್ನೆಗಳನ್ನೂ `ನ್ಯೂರೋಸ್ಕ್ಯಾನ್' ಎಂಬ ಯಂತ್ರದ ಎದುರು
ಕುಳಿತ ವ್ಯಕ್ತಿಯ ಜತೆ ಕೇಳಲಾಗುತ್ತದೆ. ವ್ಯಕ್ತಿಯ
ಪ್ರತಿಕ್ರಿಯೆಯನ್ನು ನ್ಯೂರೋಸ್ಕ್ಯಾನ್ ಯಂತ್ರ
ದಾಖಲಿಸಿಕೊಳ್ಳುತ್ತದೆ. ಬಳಿಕ ಆರೋಪಿಯ ಮಿದುಳಿನಲ್ಲಿ ಎನ್‌ಕೋಡ್ ಆದ
ವಿವರಗಳನ್ನು ಡೀಕೋಡ್ ಮಾಡಿ ಸತ್ಯವನ್ನು
ಹೊರತೆಗೆಯಲಾಗುತ್ತದೆ.
ಬ್ರೈನ್ ಮ್ಯಾಪಿಂಗ್ ವಿಧಾನದಿಂದ ಆರೋಪಿಗಳಿಂದ ಸತ್ಯಾಂಶ ಹೊರಗೆಡವುವ ವಿಧಾನ ಈಗ ಚಾಲ್ತಿಯಲ್ಲಿದೆ. ಇದಲ್ಲದೇ ಇತ್ತೀಚೆಗೆ
ಚಾಲ್ತಿಯಲ್ಲಿರುವ ಇನ್ನೊಂದು ವಿಧಾನ ನಾರ್ಕೋ ಅನಾಲಿಸಿಸ್ ಅಥವಾ
ಮಂಪರು ಪರೀಕ್ಷೆ.
ಮಂಪರು ಪರೀಕ್ಷೆಗೊಳಗಾದ ಆರೋಪಿಗೆ ಸುಳ್ಳು ಹೇಳುವ
ಅವಕಾಶವೇ ಇರುವುದಿಲ್ಲ ಎನ್ನಲಾಗುತ್ತದೆ. ಟ್ರೂತ್ ಸೀರಮ್ ಎಂಬ
ದ್ರವವನ್ನು ಆರೋಪಿಗೆ ನೀಡುವುದು ಮಂಪರು ಪರೀಕ್ಷೆಯ
ಮೊದಲ ಹಂತ. ಈ ದ್ರವ ಶರೀರ ತಲುಪಿದೊಡನೇ ವ್ಯಕ್ತಿ
ಅರೆಪ್ರಜ್ಞಾವಸ್ಥೆಗೆ ತಲುಪುತ್ತಾನೆ. ಅಂದರೆ ಇತ್ತ ಎಚ್ಚರದ ಸ್ಥಿತಿಯೂ
ಅಲ್ಲ; ಅತ್ತ ಗಾಢ ನಿದ್ದೆಯ ಸ್ಥಿತಿಯೂ ಅಲ್ಲ. ಹೆಸರೇ ಹೇಳುವಂತೆ
ಇದು `ಮಂಪರು' ಅವಸ್ಥೆ. ಇದೇ ಸ್ಥಿತಿಯಲ್ಲಿ ಬಿಟ್ಟರೆ ವ್ಯಕ್ತಿ ನಿದ್ದೆಗೆ
ಜಾರುತ್ತಾನೆ. ಆದರೆ ನಿದ್ದೆಗೆ ಜಾರುವ ಮುನ್ನ ಆರೋಪಿಯಿಂದ ಎಲ್ಲ
ವಿಷಯವನ್ನೂ ಹೊರಹಾಕಲಾಗುತ್ತದೆ. ಘಟನೆ ಅಥವಾ ಆರೋಪಕ್ಕೆ
ಸಂಬಂಧಿಸಿದಂತೆ ಪ್ರಶ್ನೆಗಳನ್ನು ಹಾಕಿ, ಉತ್ತರ
ಪಡೆದುಕೊಳ್ಳಲಾಗುತ್ತದೆ. ಈ ಸ್ಥಿತಿಯಲ್ಲಿ ಆರೋಪಿ ನಡೆದ
ಸಂಗತಿಗಳನ್ನೆಲ್ಲ ನೇರವಾಗಿ, ಇದ್ದದ್ದನ್ನು ಇದ್ದಹಾಗೆ ಅತ್ಯಂತ
ಸ್ಪಷ್ಟವಾಗಿ ಹೇಳುತ್ತಾನೆ. ಘಟನೆಯನ್ನು ವಿಶ್ಲೇಷಿಸುವ, ಚಾಲಾಕಿತನ
ತೋರಿಸಿ ಆರೋಪದಿಂದ ತಪ್ಪಿಸಿಕೊಳ್ಳುವ ಅಥವಾ ಸುಳ್ಳು ಹೇಳುವ
ಅವಕಾಶ ಇಲ್ಲಿ ಆರೋಪಿಗೆ ಇರುವುದಿಲ್ಲ. ಆತ ಹೇಳುವುದು `facts
ಮಾತ್ರ. ಯಾವುದೇ ಭಯ-ಆತಂಕ-ಒತ್ತಡಗಳಿಲ್ಲದ ಈ
ಸ್ಥಿತಿಯಲ್ಲಿ ಆರೋಪಿಯ ಮುಕ್ತ ಹೇಳಿಕೆಗಳನ್ನು ಪಡೆದುಕೊಂಡು
ದಾಖಲಿಸಿಕೊಳ್ಳಲಾಗುತ್ತದೆ.
ದೈಹಿಕವಾಗಿ ದಂಡಿಸಿ, ಅವಮಾನವೀಯವಾಗಿ ಹಿಂಸಿಸಿ, ಚಿತ್ರಹಿಂಸೆ ನೀಡಿ
ಅಪರಾಧಿಗಳ ಬಾಯಿ ಬಿಡಿಸುವ ಕ್ರಮ ಈಗಲೂ ಚಾಲ್ತಿಯಲ್ಲಿದ್ದರೂ,
ಭಾರೀ ಪ್ರಕರಣಗಳನ್ನು ಬೇಧಿಸಲು ಪಾಲಿಗ್ರಾಫ್, ಬ್ರೈನ್
ಮ್ಯಾಪಿಂಗ್ ಹಾಗೂ ನಾರ್ಕೋ ಅನಾಲಿಸಿಸ್ತಂತ್ರಜ್ಞಾನವನ್ನು
ಬಳಸಲಾಗುತ್ತಿದೆ. ಆದರೆ ವ್ಯಕ್ತಿಯ ದೇಹಕ್ಕೆ ಔಷಧ ತುರುಕಿ,
ಅವನಿಂದ ಸತ್ಯ ಉತ್ತರ ಪಡೆಯುವಂತೆ, ಸುಳ್ಳು ಉತ್ತರವನ್ನೂ
ಹೇಳಿಸಬಹುದು ಎಂಬ ವಾದವೂ ಇದೆ. ಅಲ್ಲದೆ ನಾರ್ಕೋ ಅನಾಲಿಸಿಸ್
ಸಂದರ್ಭದಲ್ಲಿ
ತನಿಖಾಧಿಕಾರಿಗಳು ನೀಡುವ ಸಲಹೆ ರೂಪದ ಪ್ರಶ್ನೆಗಳಿಗೆ ವ್ಯಕ್ತಿ
ಸಹಮತ ವ್ಯಕ್ತ ಪಡಿಸುವುದೂ ಇದೆ ಎಂಬುದು ಸಾಬೀತಾಗಿದೆ. ಇಂಥ
ಪರೀಕ್ಷೆಗಳಲ್ಲಿ ಹೊರಬೀಳುವ ವಿಷಯಗಳ ಪೈಕಿ ಶೇ. ೯೫ರಷ್ಟು
ಸತ್ಯವಾಗಿರುತ್ತದಂತೆ.
ವ್ಯಕ್ತಿಯ ಮನಃಸಾಕ್ಷಿಯಲ್ಲಿ ದಾಖಲಾದ ಸ್ಪಷ್ಟ ಚಿತ್ರವನ್ನು
ಯಾವುದೇ ಪರೀಕ್ಷೆಯೂ ಹೊರಗೆಡವದು ಎಂಬುದಂತೂ ಸತ್ಯ
ಅಲ್ಲವೇ?
ಇನ್ನಷ್ಟು