ತೃತೀಯ ಶಕ್ತಿ ಇಲ್ಲದ ಸ್ಥಿತಿ ಅಪಾಯಕಾರಿ
ರಾಜ್ಯ ರಾಜಕಾರಣದ ಸ್ಥಿತಿ-ಗತಿಯ ಬಗ್ಗೆ ಸಾಹಿತಿ ದೇವನೂರು ಮಹಾದೇವರೊಡನೆ
ಒಂದು ಚರ್ಚೆ
ಎಂ.ಅದ್ದೆ
# ಸಿದ್ಧರಾಮಯ್ಯನವರು ಕಾಂಗ್ರೆಸ್ ಸೇರುವಾಗ
ತೃತೀಯ ಶಕ್ತಿ ಮುಗಿಯಿತು ಅಂತಾ ಹೇಳಿದ್ದಾರೆ. ನಿಮಗೆ ಏನು ಅನ್ಸುತ್ತೆ?
-ಒಂದು ಮಾತಿದೆ, `ಗಾಣಗಿತ್ತಿ ಅಯ್ಯೊ ಅಂದ್ರೆ ನೆತ್ತಿ ತಣ್ಣಗಾಗುತ್ತಾ' ಅಂತ.
ಅವಳ ಬಳಿ ಎಣ್ಣೆ ಇದೆ.
ಎಣ್ಣೆ ಕೊಟ್ರೆ ತಾನೆ ನೆತ್ತಿ ತಣ್ಣಗೆ ಆಗುವುದು. ಅದು ಬಿಟ್ಟು ಬರೀ ಮಾತಲ್ಲಿ
`ಅಯ್ಯೊ' ಅಂದ್ರೆ! ಈ ರೀತಿ ಇದೆ ಸಿದ್ಧರಾಮಯ್ಯನವರ ಮಾತು.
ಯಾಕೆ ಅಂದ್ರೆ, ತೃತೀಯ ಶಕ್ತಿ ಕಟ್ಟಲು ಸಿದ್ಧರಾಮಯ್ಯನವರಿಗೆ
ಅಪಾರ ಸಾಧ್ಯತೆ ಇತ್ತು. ಅವರು ತಮ್ಮ ಶಕ್ತಿ ವಿಚಾರದಲ್ಲಿ ಸ್ವಯಂ
ಅವರೇ ಈ ರೀತಿ ವರ್ತಿಸಿರುವಾಗ, ಅದನ್ನು ದುರ್ಬಲಗೊಳಿಸಲು
ದೇವೇಗೌಡರಷ್ಟೇ ಕಾರಣರೂ ಆಗಿರುವಾಗ ಅವರ ಇಂಥ ಮಾತುಗಳನ್ನು
ಆಡಿರುವುದೆ ಅರ್ಥಹೀನ.
# ಹಾಗಾದರೆ ದೇವೇಗೌಡರನ್ನು ತೃತೀಯ ಶಕ್ತಿ
ಎಂದು ಭಾವಿಸುತ್ತೀರಾ?
-ಜೆಡಿಎಸ್ ತೃತೀಯ ಶಕ್ತಿ ಆಗುವ ಎಲ್ಲಾ ಸಾಧ್ಯತೆ
ಪಡೆದಿತ್ತು. ಯಾವಾಗ ಬಿಜೆಪಿ ಒಟ್ಟಿಗೆ ಸಖ್ಯ ಮಾಡ್ತೊ ಆವಾಗ ಆ ಸಾಧ್ಯತೆ
ಕಳಕೊಳ್ತು. ಇವೊತ್ತು ಜೆಡಿಎಸ್‌ನ ಗ್ರಾಮಾಳೆಯನ್ನು
ದೇವೇಗೌಡರ ಕುಟುಂಬ ರಾಜಕಾರಣ ದುರಾಸೆ ಕಾರಣಕ್ಕಾಗಿ ಧ್ವಂಸ
ಆಗ್ತಿದೆ. ಅಲ್ಲಿರುವ ಸ್ಪೀಕರ್ ಶ್ರೀ.ಕೆ.ಆರ್.ಪೇಟೆ ಕೃಷ್ಣ, ಶ್ರೀ. ಪುಟ್ಟೇಗೌಡ,
ಎಂ.ಪಿ. ಪ್ರಕಾಶ್ ತರದವರು ಅಸಹಾಯಕರಾಗಿದ್ದಾರೆ. ಜೆಡಿಎಸ್
ದೇವೇಗೌಡರ ಕುಟುಂಬ ರಾಜಕಾರಣ, ಬಿಜೆಪಿ ಸಖ್ಯದಿಂದ ಬಿಡಿಸಿಕೊಳ್ಳದೆ
ತೃತೀಯ ಶಕ್ತಿ ಆಗಲು ಹೇಗೆ ಸಾಧ್ಯ?
# ಕೋಮುವಾದಿಗಳ ಜೊತೆ ಹೋದ ಜೆಡಿಎಸ್ ಮತ್ತೆ
ಆ ಜಾಗ ತುಂಬಲು ಸಾಧ್ಯವೇ?
-ಸಾಧ್ಯ. ಕುಮಾರಸ್ವಾಮಿ ತಮ್ಮ ತಾಯಿತಂದೆ,
ಅಣ್ಣ ತಮ್ಮ, ಹೆಂಡತಿಮಕ್ಕಳು, ಜೊತೆಗೆ ಬಿಜೆಪಿ ಎಲ್ಲರನ್ನೂ ಧಿಕ್ಕರಿಸಿ,
ಶತ್ರುಗಳು ಅಂತ ಭಾವಿಸಿದರೆ ಜೆಡಿಎಸ್ ಸಹ ಕೂಡಿದರೆ ಕಾಂಗ್ರೆಸ್ ಮತ್ತು
ಬಿಜೆಪಿಗೆ ಅಧಿಕಾರ ಕನಸಾಗಬಹುದು.
# ಇವೊತ್ತಿನ ರಾಜಕೀಯ ಬೆಳವಣಿಗೆಗಳ ನಡುವೆ
ತೃತೀಯ ಶಕ್ತಿಗೆ ಅಂಥಾ ಸ್ಪೇಸ್ ಇದೆಯಾ?
-ತೃತೀಯ ಶಕ್ತಿಯನ್ನು ನಿರ್ನಾಮ ಮಾಡಲು
ಕಾಂಗ್ರೆಸ್, ಬಿಜೆಪಿ ಎರಡು ಪಕ್ಷಗಳೂ ಸರಿಸಮನಾಗಿ ಸಂಚು ಮಾಡ್ತಿವೆ.
ತೃತೀಂii ಶಕ್ತಿ ಇರಬಾರದು ಎನ್ನೋದೇ ಇವುಗಳ ಹೋರಾಟ. ಈ ಸಂಚಿಗೆ
ಸಹಕಾರಿಯಗಿ ನಿಂತು ದೇವೇಗೌಡರು, ಅವರಷ್ಟೇ ಸಮಪಾಲಾಗಿ
ಸಿದ್ಧರಾಮಯ್ಯನವರು ದ್ರೋಹ ಬಗೆದು ಹೊಡೆತ ಕೊಟ್ಟರು. ಈ
ಕಾರಣಕ್ಕೆ ತೃತೀಯ ಶಕ್ತಿಯ ಸ್ಪೇಸ್ ಖಾಲಿ ಖಾಲಿ ಇದೆ. ಆದರೆ, ಸರ್ವೋದಯ
ಕರ್ನಾಟಕ, ಎಸ್‌ಪಿ, ಸಿಪಿಎಂ, ಸಿಪಿಐ, ಬಿಎಸ್‌ಪಿ ಕೂಡಿದರೆ,
ಸಮಯ-ಸಂದರ್ಭಗಳು ಆ ಕೊರತೆಯನ್ನು ತುಂಬುವ ಸಾಧ್ಯತೆ
ಇದೆ. ಎರಡು ಪಾರ್ಟಿ ಸಿಸ್ಟಮ್ ಅಪಾಯಕಾರಿ ಎಂದು ಕಂಡಿದ್ದೇವೆ. ಇದು
ಅವರೊಂದು ಸಲ, ಇವರೊಂದು ಸಲ ಹಂಚಿಕೊಂಡು ಅಧಿಕಾರ ನಡೆಸುವುದಾಗಿದೆ.
ಇಂಥದ್ದು ಭ್ರಷ್ಟಾಚಾರಕ್ಕೆ ಲೈಸನ್ಸ್ ಕೊಟ್ಟಂತೆ. ರಾಜ್ಯ
ಹೇಳುವವರು, ಕೇಳುವವರು ಇಲ್ಲದಂತೆ ಆಗುತ್ತದೆ. ಆದ್ದರಿಂದ ನಾವು
ತೃತೀಯ ಶಕ್ತಿಗೆ ಪ್ರಯತ್ನಿಸಲೇ ಬೇಕಿದೆ. ತೃತೀಯ ಶಕ್ತಿ ಇಲ್ಲದ
ಸ್ಥಿತಿ ಅಪಾಯಕಾರಿ.
# ಕುಮಾರ ಸ್ವಾಮಿಯವರ ಹಳ್ಳಿ ವಾಸ್ತವ್ಯಕ್ಕೆ
ನಿಮ್ಮ ಪ್ರತಿಕ್ರಿಯೆ ಏನು?
-ಕುಮಾರ ಸ್ವಾಮಿಯವರ ನಡಾವಳಿ ಕರ್ನಾಟಕ
ಆಳಲು ಲಂಡನ್‌ನಲ್ಲಿ ಹುಟ್ಟಿಬಂದ ರಾಜಕುಮಾರನ ಥರ ಇದೆ. ಇವರು
ವಾಸಿಸುವುದು ಬೆಂಗಳೂರಿನಲ್ಲಿ, ಹುಟ್ಟಿರುವುದು ಹಾಸನ ಜಿಲ್ಲೆಯಲ್ಲಿ
ಅನ್ನೊದನ್ನ ನೆನಪಿಟ್ಟುಕೊಂಡರೆ ಒಳ್ಳೆಯದು. ಇವರ ಹಳ್ಳಿ ವಾಸ್ತವ್ಯ
ಇದೆಯಲ್ಲ ಅದು ಹಳ್ಳಿ ಮತ್ತು ಬಡತನ ಎರಡನ್ನೂ ಗೇಲಿ ಮಾಡೋತರ
ಇದೆ. ಆಡಳಿತದ ಸಮಸ್ಯೆಗಳಿಗೆ ಮುಖಾಮುಖಿ ಆಗಿ, ಹಳ್ಳಿಗಳಿಗೆ ಅನುಕೂಲವಾಗುವ
ನೀತಿ ರೂಪಿಸಬೇಕೇ ಹೊರತು ಈ ರೀತಿ ಶೋ ಕೊಡುವುದು ಮುಖ್ಯಮಂತ್ರಿ
ಮಾಡುವ ಕೆಲಸವಲ್ಲ. ಸೂಕ್ಷ್ಮವಾಗಿ ನೋಡುವುದಾರೆ ಇದು ಹಳ್ಳಿ ಮತ್ತು
ಬಡತನ ಎಡನ್ನೂ ಗೇಲಿ ಮಾಡುವ ಕೆಲಸ. ಕುಮಾರ ಸ್ವಾಮಿ ಅವರು
ಮತ್ತು ಅವರ ಕುಟುಂಬದ ಮೇಲೆ ಇರುವ ಭ್ರಷ್ಟಾಚಾರದ ಆರೋಪವನ್ನು
ಸಿಬಿಐ ಗೆ ಒಪ್ಪಿಸುವುದರಿಂದ ನುಣುಚಿಕೊಳ್ಳಲಿಕ್ಕೆ ಹಳ್ಳಿ ಆಸರೆ ಪಡೆದಂತೆ
ಕಾಣುತ್ತದೆ.
ಹೋಗಲಿ ಇವರಿಗೆ ಅನುಭವ ಇಲ್ಲಾ ಅಂತ
ರಿಯಾಯಿತಿ ಕೊಡುವುದಾದ್ರೂವೇ ಅನ್ನ ಬೆಂದಿದೆಯಾ ಅಂತ ನೋಡೊಕ್ಕೆ
ಒಂದು ಅಗುಳನ್ನ ಮಾತ್ರ ಹಿಚುಕಿದರೆ ಸಾಕಲ್ಲವೆ? ಇವರು ಎಲ್ಲಾ
ಅಗುಳನ್ನು ಹಿಚುಕುವ ಕೆಲ್ಸ ಮಡ್ತಿದಾರೆ. ಇದನ್ನು ಯಾವ ತರ
ಅರ್ಥ ಮಾಡಿಕೊಳ್ಳಬೇಕೊ ನನಗೆ ತಿಳಿಯುತ್ತಿಲ್ಲ.
(ಕೃಪೆ: ಅಗ್ನಿ ವಾರಪತ್ರಿಕೆ)