ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಒಕ್ಕಲಿಗರ
ಒಡ್ಡೋಲಗ
-ಬಸವರಾಜು
ಈ ಸರ್ಕಾರದಲ್ಲಿ ವಾರ್ತಾ ಮತ್ತು ಪ್ರಚಾರ
ಇಲಾಖೆಯ ಮಂತ್ರಿಯಿಂದ ಹಿಡಿದು ಡೆಪ್ಯೂಟಿ ಡೈರೆಕ್ಟರ್‌ವರೆಗಿನ
ಆಯಕಟ್ಟಿನ ಸ್ಥಾನಗಳಲ್ಲೆಲ್ಲ ಒಕ್ಕಲಿಗರೆ ತುಂಬಿಹೋಗಿದ್ದಾರೆ. ಇದನ್ನು
ನೋಡಿ ಬೇರೆ ಜಾತಿಯ ಜನ ಏನಂದುಕೊಂಡಾರು ಎಂಬ ಬಗ್ಗೆ ಕನಿಷ್ಠ
ಅಂಜಿಕೆ, ನಾಚಿಕೆಯೂ ಇದ್ದಂತಿಲ್ಲ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ
ಅಣಕಿಸುವ ಅಸಹ್ಯ......
ಪ್ರಜೆಗಳು ಪ್ರಭುಗಳು, ಸರ್ವರಿಗೂ ಸಮಪಾಲು,
ಸಮಬಾಳು ಎನ್ನುವುದು ಪ್ರಜಾಪ್ರಭುತ್ವದ ಘೋಷವಾಕ್ಯ. ಈ ವ್ಯವಸ್ಥೆಯಲ್ಲಿ
ಸ್ವಜನಪಕ್ಷಪಾತ ಒಂದು ಅಪರಾಧ. ಅದರಲ್ಲೂ ಪ್ರಬಲ ಜಾತಿಯಿಂದ ಬಂದಿರುವ
ಈಗಿನ ಮುಖ್ಯಮಂತ್ರಿಗಳು ವರ್ತಿಸುತ್ತಿರುವ ರೀತಿ ಸಂವಿಧಾನದ
ಜಾತ್ಯತೀತ ತತ್ವಕ್ಕೆ ಕಳಂಕ ತರುವಂತದ್ದು.
ಕುಮಾರಸ್ವಾಮಿಯವರು ಆರಿಸಿ ಬಂದಿರುವುದು
ಎಲ್ಲ ಜಾತಿ ಜನಾಂಗಗಳ ಜನರಿಂದ. ಆದರೆ, ಆ ಸತ್ಯವನ್ನು ಅವರೇ ಮರೆತಿದ್ದಾರೆ.
ಅಧಿಕಾರದ ಕುರ್ಚಿ ಮೇಲೆ ಕೂತ ಕ್ಷಣದಿಂದ ಇತರೆ ಜಾತಿ, ಜನಾಂಗಗಳನ್ನು
ಪ್ರಜ್ಞಾಪೂರ್ವಕವಾಗಿ ಮರೆತು ತಮ್ಮದೇ ಜಾತಿಯ ಜನರನ್ನು ತನ್ನ
ಸುತ್ತ ಪ್ರತಿಷ್ಠಾಪಿಸಿಕೊಂಡಿದ್ದಾರೆ.
ಇದಕ್ಕೊಂದು ಉದಾಹರಣೆ ವಾರ್ತಾ ಮತ್ತು ಪ್ರಚಾರ
ಇಲಾಖೆ.
ಸರ್ಕಾರದ ಉದ್ದೇಶ, ಕಾರ್ಯಕ್ರಮ ಮತ್ತು
ಸಾಧನೆಗಳು ನಾಡಿನ ಜನರಿಗೆ ತಲುಪಲಿಕ್ಕಾಗಿ ಇರುವ ಇಲಾಖೆಯೇ ವಾರ್ತಾ
ಮತ್ತು ಪ್ರಚಾರ ಇಲಾಖೆ. ಈ ನಿಟ್ಟಿನಲ್ಲಿ ವಾರ್ತಾ ಇಲಾಖೆ ಹತ್ತು ಹಲವಾರು
ಮಾಧ್ಯಮಗಳ ಮುಖಾಂತರ ಪ್ರಚಾರ ಕಾರ್ಯ ಕೈಗೊಳ್ಳುತ್ತದೆ.
ಸರ್ಕಾರ ಈ ಇಲಾಖೆಗೆ ವರ್ಷಕ್ಕೆ ೮ ಕೋಟಿ ರೂಪಾಯಿಗಳನ್ನು ಪ್ರಚಾರ
ಕಾರ್ಯಗಳಿಗಾಗಿಯೇ ಬಜೆಟ್‌ನಲ್ಲಿ ಮೀಸಲಿಡುತ್ತದೆ. ಮತ್ತು
ಇಲಾಕೆಯಲ್ಲಿರುವ ಸುಮಾರು ೬೦೦ ಜನ ನೌಕರರ ಸೇವೆಯನ್ನು ಈ
ಕೆಲಸ ಕಾರ್ಯಗಳಿಗಾಗಿಯೇ ವಿನಿಯೊಗಿಸಿಕೊಳ್ಳುತ್ತದೆ.
ಇದು ವಾರ್ತಾ ಇಲಾಖೆಯ ಮೂಲ ಉದ್ದೇಶ. ಇದು
ಈಡೇರಿದೆಯೇ, ಸಾರ್ವಜನಿಕ ಹಣ ಸದುಪಯೋಗವಾಗುತ್ತಿದೆಯೇ
ಎಂಬುದು ನಮ್ಮ ಪ್ರಶ್ನೆ. ಈ ಅನುಮಾನ ಮೂಡಲು ಕಾರಣವೇನೆಂದರೆ,
-
ವಾರ್ತಾ ಮತ್ತು ಪ್ರಚಾರ ಮಂತ್ರಿ - ಎಚ್.ಡಿ.
ಕುಮಾರ ಸ್ವಾಮಿ- ಒಕ್ಕಲಿಗ.
-
ಇಲಾಖೆಯ ಕಾರ್ಯದರ್ಶಿ - ಐ.ಎಂ. ವಿಠ್ಠಲಮೂರ್ತಿ-
ಒಕ್ಕಲಿಗ.
-
ಇಲಾಖೆಯ ಕಮೀಷನರ್ - ಕೆ.ವಿ.ಆರ್.
ಠಾಗೂರ್- ಒಕ್ಕಲಿಗ.
-
ಇಲಾಖೆಯ ನಿರ್ದೇಶಕ - ವಿಶುಕುಮಾರ್-
ಒಕ್ಕಲಿಗ.
-
ಜಾಯಿಂಟ್ ಡೈರೆಕ್ಟರ್ - ಶಿವರಾಂ- ಒಕ್ಕಲಿಗ.
-
ಡೆಪ್ಯೂಟಿ ಡೈರೆಕ್ಟರ್ - ಐದು ಜನ- ಒಕ್ಕಲಿಗರು.
ಹೀಗೆ ಇಲಾಖೆಯ ಉನ್ನತ ಹುದ್ದೆಯಲ್ಲಿರುವವರೆಲ್ಲ
ಒಕ್ಕಲಿಗರು, ಒಂದೇ ಜಾತಿಯವರು. ಇದು ಒಂದು ರೀತಿಯಲ್ಲಿ ದಾಖಲೆಗೆ
ಸೇರಬೇಕಾದಂತಹ ಸಂಗತಿ. ಯಾಕೆಂದರೆ, ಯಾವುದೇ ಸರ್ಕಾರದಲ್ಲೂ
ಈ ರೀತಿ ಒಂದೇ ಜಾತಿಯವರು, ಒಂದೇ ಇಲಾಖೆಯಲ್ಲಿ ಆಯಕಟ್ಟಿನ ಸ್ಥಾನಗಳನ್ನು
ಆಕ್ರಮಿಸಿಕೊಂಡಿದ್ದಿಲ್ಲ.
ಇವರೆಲ್ಲ ಒಂದೆಡೆ ಸೇರಿದರೆ ಆ ಇಲಾಖೆ ಏನಾಗಬಹುದು,
ಎಂತಹ ಕೆಲಸಗಳಾಗಬಹುದು, ಜನರಿಗೆ ಎಂಥ ಸೇವೆ ಸಿಗಬಹುದು, ಸರ್ಕಾರಕ್ಕೆಂತಹ
ಹೆಸರು ಬರಬಹುದು?
ಅದಕ್ಕಿಂತಲೂ ಹೆಚ್ಚಾಗಿ ಇತರೆ ಜಾತಿ, ಜನಾಂಗಗಳ
ಜನ ಏನೆಂದುಕೊಂಡಾರು ಎಂಬ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಗೆ
ಕಿಂಚಿತ್ ಅಂಜಿಕೆ, ನಾಚಿಕೆಯೇ ಇದ್ದಂತಿಲ್ಲ.
ಸರ್ಕಾರಿ ತುತ್ತೂರಿ
ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಮತ್ತು
ಅಧಿಕಾರವಧಿ ಮುಗಿದು ಮತ್ತೊಂದು ಚುನಾವಣೆಯನ್ನು ಎದುರಿಸಲು
ಸಜ್ಜಾಗುತ್ತಿದ್ದಾಗ, ತಮ್ಮ ಸರ್ಕಾರದ ಸಾಧನೆಗಳನ್ನು ಸಾರಲು,
ತಮ್ಮನ್ನು ತಾವು ಬೂಸ್ಟ್ ಮಾಡಿಕೊಂಡು ಮತ್ತೊಂದು ಅವಧಿಗೂ ಮುಖ್ಯಮಂತ್ರಿಯಾಗಿ
ಮುಂದುವರೆಯಲು ಯೋಚಿಸಿದರು. ಆಗ ಕೃಷ್ಣರ ಪತ್ರಿಕಾ
ಕಾರ್ಯದರ್ಶಿಯಾಗಿದ್ದ ದಿನೇಶ್ ಪ್ರಳಯಾಂತಕ ಐಡಿಯಾ ಕೊಟ್ಟರು.
ಕೃಷ್ಣರಿಗೆ ಅತ್ಯಂತ ಆಪ್ತರಾದ ಐಎಎಸ್ ಅಧಿಕಾರಿ ಐ.ಎಂ. ವಿಠ್ಠಲಮೂರ್ತಿಯವರು
ಕಣ್ಣಿಗೆ ಬಿದ್ದರು. ಅಲ್ಲಿಯವರೆಗೆ ಇಲ್ಲದಿದ್ದ ವಾರ್ತಾ ಇಲಾಖೆಗೆ ಕಮೀಷನರ್
ಹುದ್ದೆಯನ್ನು ಅವರಿಗಾಗಿ ಸೃಷ್ಟಿಸಲಾಯಿತು. ಕೇವಲ ಒಂದೇ ತಿಂಗಳಲ್ಲಿ
ಆರು ಕೋಟಿ ರೂಪಾಯಿಗಳನ್ನು ಜಾಹೀರಾತಿಯಾಗಿಯೇ ಖರ್ಚು ಮಾಡಲಾಯಿತು.
ವಾರ್ತಾ ಇಲಾಖೆಯ ಕಮಿಷನರ್ ಆದ
ವಿಠ್ಠಲಮೂರ್ತಿಗಳು ಆಗ ನಿರ್ದೇಶಕರಾಗಿದ್ದ ಬಿಎನ್‌ಎಸ್ ರೆಡ್ಡಿಯವರನ್ನು
ಪಕ್ಕಕ್ಕೆ ತಳ್ಳಿ ವಾರ್ತಾ ಇಲಾಖೆಯನ್ನು ತಮ್ಮ ತೆಕ್ಕೆಗೆ
ತೆಗೆದುಕೊಂಡರು. ಜಾತ್ಯತೀತ ಮುಖವಾಡ ಹೊತ್ತ ಸಾಹಿತಿ, ಕಲಾವಿದರನ್ನು
ಕರೆಸಿ ಕೈ ಕುಲುಕಿದರು. ಅವರು ಬೀದಿಗಿಳಿದು ಕೃಷ್ಣರ ಪರ ಭಾಷಣ
ಬಿಗಿಯತೊಡಗಿದರು. ಸ್ಟಾರ್‍ಕ್ ಕಮ್ಯುನಿಕೇಷನ್ ಎಂಬ ಮಲಯಾಳಿಯ
ಜಾಹೀರಾತು ಸಂಸ್ಥೆಗೆ ಕೋಟ್ಯಂತರ ರೂಪಾಯಿ ಕೊಟ್ಟು ಜಾಹೀರಾತು ಬಿಡುಗಡೆ
ಮಾಡಿಸಿದರು. ನಾಡಿನ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ, ಬೀದಿ ನಾಟಕಗಳಲ್ಲಿ,
ಪೋಸ್ಟರ್, ಬ್ಯಾನರ್‌ಗಳಲ್ಲಿ ಕೃಷ್ಣ ಮತ್ತವರ ಕರ್ನಾಟಕ
ಕಂಗೊಳಿಸಿತು. ಆರು ಕೋಟಿ ಒಂದೇ ತಿಂಗಳಲ್ಲಿ ಹುಡಿಯೆದ್ದುಹೋಯಿತು.
ಇದರ ಫಲವಾಗಿ, ಚುನಾವಣೆಯಲ್ಲಿ ಕಾಂಗ್ರೆಸ್
೧೬೫ ರಿಂದ ೬೬ಕ್ಕಿಳಿಯಿತು. ಕರ್ನಾಟಕದಿಂದ ಕೃಷ್ಣ ಕಣ್ಮರೆಯಾದರು. ಹಾಗೆಯೇ
ಅವರನ್ನು ಬೆಂಬಲಿಸಿದ ವಿಠ್ಠಲಮೂರ್ತಿ ಕೂಡ ಅಜ್ಞಾತವಾಸಕ್ಕೆ
ಅಟ್ಟಲ್ಪಟ್ಟರು. ಸುಮಾರು ಎರಡು ವರ್ಷಗಳ ಕಾಲ ಹೀಗೆಯೇ ಮೂಲೆಗುಂಪಾದ
ಐಎಂವಿಎಂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ
ಎದ್ದುನಿಂತರು. ಕೃಷ್ಣರಿಗೆ ಪತ್ರಿಕಾ ಕಾರ್ಯದರ್ಶಿಯಾಗಿದ್ದ ದಿನೇಶ್
ಕುಮಾರಸ್ವಾಮಿಗೂ ನಿಷ್ಠಾವಂತ ಅಧಿಕಾರಿಯಂತೆ ಕಂಡು, ಅದೇ ಸ್ಥಾನದಲ್ಲಿ
ಮುಂದುವರೆದರು. ಕೃಷ್ಣರ ಪರಮಾಪ್ತ ಅಧಿಕಾರಿ ವಿಠ್ಠಲಮೂರ್ತಿ
ಕುಮಾರಸ್ವಾಮಿಗೂ ಕ್ಲೋಸ್ ಆದರು, ನೋಡುನೋಡುತ್ತಿದ್ದಂತೆ ವಾರ್ತಾ
ಇಲಾಖೆಗೆ ಕಾರ್ಯದರ್ಶಿಯಾದರು.
ಇದಷ್ಟೇ ಅಲ್ಲ, ಕುಮಾರಸ್ವಾಮಿ ಐಎಂವಿಎಂಗಳ
ವಿನಯ-ವಂತಿಕೆಗೆ ಕರಗಿ ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮದ
ಇಲಾಖೆಗಳಿಗೂ ಅವರನ್ನೇ ಕಾರ್ಯದರ್ಶಿಗಳನ್ನಾಗಿ ಮಾಡಿದರು. ಕರ್ನಾಟಕ
ಸುವರ್ಣ ಸಂಭ್ರಮ ಆಚರಣೆಯ ಉಸ್ತುವಾರಿಯನ್ನೂ ಅವರಿಗೇ
ವಹಿಸಿಕೊಟ್ಟರು.
ಕೃಷ್ಣರ ಕರ್ನಾಟಕವನ್ನು ಕಂಗೊಳಿಸಿದ,
ಕೃಷ್ಣರನ್ನು ಕರ್ನಾಟಕದಿಂದ ಕಣ್ಮರೆಯಾಗಿಸಿದ, ಖಜಾನೆಯ ಆರು
ಕೋಟಿಗಳನ್ನು ಖಾಲಿ ಮಾಡಿದ ಕುಖ್ಯಾತಿ ಬೆನ್ನಿಗಿದ್ದರೂ, ಇವತ್ತು
ಕುಮಾರಸ್ವಾಮಿಯವರ ಸರ್ಕಾರದಲ್ಲಿ ವಿಠ್ಠಲಮೂರ್ತಿಗಳದೇ
ಕಾರುಬಾರು. ಯಾಕೆಂದರೆ, ಕುಮಾರಸ್ವಾಮಿ ಮತ್ತು ವಿಠ್ಠಲಮೂರ್ತಿ
ಇಬ್ಬರ ಜಾತಿಯೂ ಒಂದೇ. ಇಬ್ಬರೂ ಒಕ್ಕಲಿಗರೇ!
ದಿಬ್ಬಣದ ಡೌಲು
ವಿಠ್ಠಲಮೂರ್ತಿ ವಾರ್ತಾ ಇಲಾಖೆಗೆ ಬಂದಿದ್ದೇ
ಇತ್ತೀಚೆಗೆ. ಬರುತ್ತಿದ್ದಂತೆ ಕರ್ನಾಟಕ ಸುವರ್ಣ ಸಂಭ್ರಮಾಚರಣೆಯ
ನೆಪದಲ್ಲಿ ಕರ್ನಾಟಕದ ಪರಂಪರೆ ಸಾರುವ ಒಂದು ಕಾರ್ಯಕ್ರಮವನ್ನು
ಹಮ್ಮಿಕೊಂಡರು. ಅದಕ್ಕೆ `ಸಾಂಸ್ಕೃತಿಕ ದಿಬ್ಬಣ' ಎಂಬ ಹೆಸರು
ಕೊಟ್ಟರು. ಆ ಕಾರ್ಯಕ್ರಮಕ್ಕಾಗಿ ಬೇಕಾಗುವ ೪೫ ಲಕ್ಷಗಳಿಗಾಗಿ
ಕನ್ನಡ ಸಂಸ್ಕೃತಿ ಇಲಾಖೆಗೆ ಬೇಡಿಕೆಯಿಟ್ಟರು. ಇನ್ನು ಆ ದಿಬ್ಬಣದಲ್ಲಿ
ಯಾವ್ಯಾವ ಸಾಹಿತಿ, ಕಲಾವಿದರು ನೆರೆಯುತ್ತಾರೆ, ನೆನೆಯುತ್ತಾರೆ,
ನಗುತ್ತಾರೆ, ನಗಿಸುತ್ತಾರೆ ಎಂಬುದನ್ನು ಕಾದುನೋಡಿ.
ಇದಲ್ಲದೇ ಐಎಂವಿಎಂಗಳ ಇನ್ನೊಂದು ಯೋಜನೆಯನ್ನು
ಹುಟ್ಟುಹಾಕಿದ್ದಾರೆ. ಅದು ಕೂಡ ಸುವರ್ಣ ಕರ್ನಾಟಕಕ್ಕಾಗಿಯೇ. ೩೫
ಎಂಎಂನಲ್ಲಿ ಕರ್ನಾಟಕ ಕುರಿತು ಒಂದು ಫಿಲಂ ತಯಾರಿಸುವುದು.
ಅದರ ಬಜೆಟ್ ೨೫ ಲಕ್ಷ ರೂಪಾಯಿಗಳು. ಇದನ್ನು ತಯಾರಿಸಿ ಕೊಡಲು
ಸ್ಟಾರ್‍ಕ್ ಕಮ್ಯುನಿಕೇಷನ್‌ನ ಮಲಯಾಳಿ ಶಿಷ್ಯ ಆಗಲೇ
ಸಿದ್ಧವಾಗಿದ್ದಾನೆ. ಈತ ವಿಠ್ಠಲಮೂರ್ತಿಗಳ ಹಿಂದೆಯೇ ಇರುತ್ತಾನೆ.
ಅವರು ಹೋದ ಇಲಾಖೆಗಳಲ್ಲೆಲ್ಲ ಕೆಲಸ ಮಾಡುತ್ತಾನೆ. ಕೋಟ್ಯಂತರ
ಕಬಳಿಸುತ್ತಾನೆ. ಇವರ ವ್ಯವಹಾರಿಕ ಸಂಬಂಧ ಎಷ್ಟು ಗಟ್ಟಿಯಾಗಿದೆ
ಎಂದರೆ, ಐಎಂವಿಎಂರ ಆಪ್ತೆ, ಚಿತ್ರನಟಿ ತಾರ ನಟಿಸಿದ್ದ, ಪ್ರಶಸ್ತಿ ವಿಜೇತ
ಚಿತ್ರ `ಹಸೀನಾ'ಗೆ ಈ ಮಲಯಾಳಿ ಸಹ ನಿರ್ಮಾಪಕ.
ಇಂಥದ್ದೇ ಹತ್ತು ಹಲವು ಅಸಂಬದ್ಧ ಯೋಜನೆಗಳು,
ನೂರಾರು ಕಳ್ಳಕಾಕರನ್ನು ಕಟ್ಟಿಕೊಂಡು ಖಜಾನೆಯನ್ನು ಖಾಲಿ ಮಾಡುತ್ತಿರುವ
ವಿಠ್ಠಲಮೂರ್ತಿಗಳ ಐಲುತನಕ್ಕೆ ಅವರದೇ ಒಕ್ಕಲಿಗ ಜಾತಿಯ
ಮುಖ್ಯಮಂತ್ರಿಗಳು ಬೆನ್ನಿಗೆ ನಿಂತು ಬೆಂಬಲಿಸುತ್ತಿದ್ದಾರೆ. ಇವರ ಆಜ್ಞೆ,
ಆದೇಶಗಳನ್ನು ಅವರದೇ ಜಾತಿಯ ಇಲಾಖೆಯ ಹತ್ತೆಂಟು ಉನ್ನತ
ಅಧಿಕಾರಿಗಳು ಶಿರಸಾವಹಿಸಿ ಪಾಲಿಸುತ್ತಿದ್ದಾರೆ. ಎಲ್ಲರೂ ಶಕ್ತಿಮೀರಿ
ಕುಮಾರಸ್ವಾಮಿಯವರ ಸರ್ಕಾರವನ್ನು ಮಾಧ್ಯಮಗಳಲ್ಲಿ ಮಿಂಚುವಂತೆ
ಮಾಡುತ್ತಿದ್ದಾರೆ, ಕುಮಾರರ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತಿದ್ದಾರೆ.
ಇದರಿಂದ ಇವತ್ತು ವಾರ್ತಾ ಇಲಾಖೆ ಒಕ್ಕಲಿಗರ
ಒಡ್ಡೋಲಗದಂತೆ ಗೋಚರಿಸುತ್ತಿದೆ. ಹಾಗೆಯೇ ಇತರೆ ಜಾತಿ,
ಜನಾಂಗಗಳ ಜನರಲ್ಲಿ ಒಕ್ಕಲಿಗರು ಎಂದರೆ ಅಸಹ್ಯ ಹುಟ್ಟಿಸುವ ವಾತಾವರಣ
ಸೃಷ್ಟಿಯಾಗುತ್ತಿದೆ.
ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ
ಅಣಕಿಸುವಂತಹ ಅಧ್ವಾನಗಳು, ಅಸಹ್ಯಗಳು
ಕುಮಾರಸ್ವಾಮಿಯವರ ದರ್ಬಾರಿನ ನಡೆಯುತ್ತಿವೆ. ಉದ್ದೇಶವನ್ನೇ
ಮರೆತ ವಾರ್ತಾ ಇಲಾಖೆ ಇದ್ದೇನು ಪ್ರಯೋಜನ?
ಇರಲೇಬೇಕು ಎಂದರೆ, ವಾರ್ತಾ ಇಲಾಖೆ ಎಂಬ ಬೋರ್ಡನನ್ನು
ಕಿತ್ತುಹಾಕಿ ಆದಿಚುಂಚನಗಿರಿ ಶಾಖಾ ಮಠ ಎಂದು ಘೋಷಿಸುವುದು ಸೂಕ್ತ
ಮತ್ತು ಸಕಾಲಿಕ!
(ಕೃಪೆ: ಅಗ್ನಿ ವಾರಪತ್ರಿಕೆ)