Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 06 October 2006 12:11 PM

ಕೋಲಾರ-ದಿಕ್ಕೆಟ್ಟ ನದಿಗಳ ನೆಲದಲ್ಲಿ..!!

ಇಲ್ಲಿನ ಭೂಮಿಯೊಳಗೆ ಚಿನ್ನದ ಹೊಳೆಗಳೇ ಹರಿದಿವೆ. ಹಾಗೆಯೆ ಭೂಮಿಯ ಮೇಲೆ ಎಂದೂ ತೀರದ ಹಸಿವು, ದಾರಿದ್ರ್ಯಗಳೂ ನಿತ್ಯ ನಿರಂತರ ಹರಿಯುತ್ತಲೇ ಇವೆ. ಚಿನ್ನದ ಥಳಕುಗಳ ಆಚೆಗಿನ ತಣ್ಣಗಿನ ಈ ಕ್ರೌರ್ಯ ಮಾತ್ರ ಸುದ್ದಿಗಳ ಮುಖಪುಟಕ್ಕೆ ಎಂದೂ ಬರುವುದೇ ಇಲ್ಲ.

  • ಲಕ್ಷ್ಮೀಪತಿ ಕೋಲಾರ

ನನ್ನ ತವರು ಜಿಲ್ಲೆ ಎಂಬ ಕಾರಣಕ್ಕಾಗಿ ಅಲ್ಲ; ಅನೇಕ ಅನನ್ಯವಾದ ಸಾಂಸ್ಕೃತಿಕ ಅಂಶಗಳಿಂದಾಗಿ ಕೋಲಾರ ನನ್ನ ಕುತೂಹಲಗಳ ತಣಿಯದ ಗಣಿ. ಚಿಕ್ಕಂದಿನಲ್ಲೆಂದೊ ನನ್ನ ಸೋದರತ್ತೆ ಸುಬ್ಬಮ್ಮ ಎಂಬುವವರು ಕೆಜಿಎಫ್ ಕಡೆಯ ಕಲ್ಲುಗಳ ಮೇಲೆಲ್ಲಾ ಚಿನ್ನದ ರೇಖುಗಳು ಬಳ್ಳಿಯಂತೆ ಹಬ್ಬಿಕೊಂಡಿದ್ದವೆಂಬ ಪುರಾತನ ಕಾಲದಿಂದಲೂ ಮಾತೃ ಪರಂಪರೆಯಲ್ಲಿ ಮೌಖಿಕವಾಗಿ ಹರಿದುಬಂದಂತಿದ್ದ ಸಂಗತಿಗಳನ್ನೇ ಕಥೆಗಳಂತೆ ಹೇಳುತ್ತಿದ್ದುದು ನೆನಪಿದೆ. ಈ ಕಥೆಯಲ್ಲಿ ಆಕೆಯ ಮುಗ್ಧತೆ, ಕಥಾನಕತೆಯ ಪ್ರೀತಿಯೂ ಸಮ ಸಮನಾಗಿ ಬೆರೆತಿರುವಂತೆ ತೋರುತ್ತದೆ. ಅದೇನೆ ಇದ್ದರೂ ಇಂತಹ ಕಥೆಗಳ ಮೂಲಕವೆ ನನ್ನ ಕುತೂಹಲವೂ ಹುಟ್ಟಿ, ಬೆಳೆಯುತ್ತಾ ಬಂದಿತೆಂಬುದಂತೂ ನಿಜ. ಇಲ್ಲಿನ ಭೂಮಿಯೊಳಗೆ ಚಿನ್ನದ ಹೊಳೆಗಳೇ ಹರಿದಿವೆ. ಹಾಗೆಯೆ ಭೂಮಿಯ ಮೇಲೆ ಎಂದೂ ತೀರದ ಹಸಿವು, ದಾರಿದ್ರ್ಯಗಳೂ ನಿತ್ಯ ನಿರಂತರ ಹರಿಯುತ್ತಲೆ ಇವೆ. ಚಿನ್ನದ ಥಳಕುಗಳ ಆಚೆಗಿನ ತಣ್ಣಗಿನ ಈ ಕ್ರೌರ್ಯ ಮಾತ್ರ ಮಾತ್ರ ಸುದ್ದಿಗಳ ಮುಖಪುಟಕ್ಕೆ ಎಂದೂ ಬರುವುದೇ ಇಲ್ಲ.

ಕೋಲಾರದ ಭೂಗರ್ಭವನ್ನೇ ಬಗೆದು ಇದುವರೆಗೂ ಐವತ್ತು ಸಾವಿರ ಟನ್ನುಗಳಿಗೂ ಅಧಿಕವಾದ ಬಂಗಾರವನ್ನು ಲೂಟಿ ಮಾಡಿಕೊಂದು ಹೋದ ವ್ಯವಸ್ಥೆ ಅದಕ್ಕೆ ಬದಲಿಯಾಗಿ ಇಲ್ಲಿನ ಜನರ ಬದುಕುಗಳನ್ನು ಕಿಂಚಿತ್ತೂ ಕೂಡ ಸುಧಾರಿಸಲು ಪ್ರಯತ್ನಿಸಿಲ್ಲ. ಜಗತ್ತಿನಲ್ಲಿ ಇದಕ್ಕಿಂತ ಹಗಲು ದರೋಡೆ ಇನ್ನೊಂದುಂಟೆ? ಭಾರತದ ಕರೆನ್ಸಿ ವ್ಯವಸ್ಥೆಯ ಬೆನ್ನುಮೂಳೆಯನ್ನು ನೆಟ್ಟಗಾಗಿಸುವ ಶತಮಾನಕ್ಕೂ ಮಿಗಿಲು ಅವಧಿಯಲ್ಲಿ ನಾಲ್ಕಾರು ತಲೆಮಾರುಗಳ ಗಣಿ ಕಾರ್ಮಿಕರ ಬದುಕಿನ ಬೆನ್ನುಮೂಳೆಗಳೇ ಇಂದು ಮುರಿದುಬಿದ್ದಿವೆ. ಇಲ್ಲಿನ ಕಷ್ಟಜೀವಿಗಳಾದ ತಮಿಳು ಕಾರ್ಮಿಕರ ಗೋಳು ಸಯನೈಡ್ ಧೂಳಲ್ಲಿ ಧೂಳಾಗಿದೆ.

ಕರ್ನಾಟಕದಲ್ಲಿ ಮೂರು ಸ್ಥಳಗಳನ್ನು ಅತ್ಯಂತ ಪುರಾತನ ನಾಗರಿಕತೆಯ ಸ್ಥಳಗಳೆಂದು ಗುರುತಿಸಲಾಗಿದೆ. ಬ್ರಹ್ಮಗಿರಿ, ಚಂದ್ರವಳ್ಳಿ ಹಾಗೂ ಕೋಲಾರದ ಬಳಿಯ ಹುನುಕುಂದ ಪಟ್ಟಣಗಳೆ ಆ ಸ್ಥಳಗಳು. ಕೆಜಿಎಫ್‌ನ ಚಿನ್ನದ ಗಣಿಗಳು ಬ್ರಿಟೀಷರ ಕಾಲದವು. ಆದರೆ, ಹುನುಕುಂದದ ಚಿನ್ನದ ಗಣಿಗಳು ಅತ್ಯಂತ ಪ್ರಾಚೀನವಾದವು.

ಹರಪ್ಪ, ಮೊಹೆಂಜೋದಾರೋನ ಉತ್ಖನನಗಳಲ್ಲಿ ಹುನುಕುಂದದ ಚಿನ್ನ ದೊರೆತಿರುವುದನ್ನು ಪುರಾತತ್ವ ಶಾಸ್ತ್ರಜ್ಞರು ಖಚಿತಪಡಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ ೪೮೦೦ ವರ್ಷಗಳ ಹಿಂದೆಯೆ ಹುನುಕುಂದ ಪಟ್ಟಣವು ಭಾರತದ ವಾಯುವ್ಯ ಭಾಗದ ನಾಗರಿಕತೆಗಳೊಂದಿಗೆ ವ್ಯಾಪಾರಿ ಸಂಬಂಧಗಳನ್ನು ಇಟ್ಟುಕೊಂಡಿತ್ತು. ಇಂದಿಗೂ ಕೆಜಿಎಫ್ ಕಡೆಯಿಂದ ಬರುವ ಚಿನ್ನದ ವ್ಯಾಮೋಹಿಗಳು ಹುನುಕುಂದ ಪಟ್ಟಣದ ಘಟ್ಟಗಳ ಇಳಿಜಾರುಗಳಲ್ಲಿ ಮಳೆಯಲ್ಲಿ ಹರಿದುಬರುವ ಮಣ್ಣಿಂದ ಚಿನ್ನದ ಪುಡಿಯನ್ನು ಸೋಸಿ ತೆಗೆಯುತ್ತಾರೆ. ಇದೇ ಹುನುಕುಂದದ ಬಳಿ ಗುಹಾಮಾನವರಿದ್ದರೆಂದು ಹೇಳಲಾಗಿರುವ ಸ್ಥಳಗಳಿಗೆ ನಾನು ಹಲವಾರು ಬಾರಿ ಭೇಟಿ ನೀಡಿದ್ದೇನೆ. ಚಿನ್ನದೊಂದಿಗೆ ಎಂತೆಂತಹ ಚರಿತ್ರೆಗಳು ಅಲ್ಲಿ ಅಡಗಿವೆಯೊ ಬಲ್ಲವರಾರು?

ದುರಂತವೆಂದರೆ, ಇಂದಿಗೂ ಅಲ್ಲಿ ಉತ್ಖನನದ ಕೆಲಸವೇ ಶುರುವಾಗಿಲ್ಲ. ಎಂ.ಎಚ್. ಕೃಷ್ಣರಂತಹ ಪ್ರಾಕ್ತನ ತಜ್ಞರೂ ಈ ಬಗ್ಗೆ ವಿಷಾದಿಸಿದ್ದಾರೆ. ಗೊಂಡ್ವಾನ ಭೂಭಾಗ (ದಕ್ಷಿಣ ಅಮೆರಿಕೆಯಿಂದ ಆಸ್ಟ್ರೇಲಿಯಾದವರೆಗೆ) ಮುಳುಗಡೆಯಾದ ಸಂದರ್ಭದಲ್ಲೆಂದೊ ಆಸ್ಟ್ರೇಲಿಯಾ ಹಾಗೂ ಆಫ್ರಿಕಾದ ಎರಡು ಭೂಖಂಡಗಳು ಸೇರಿ ದಕ್ಷಿಣ ಭಾರತ ರೂಪುಗೊಂಡಿತೆಂಬ ಸಿದ್ಧಾಂತವೊಂದು ಚಾಲ್ತಿಯಲ್ಲಿದೆ. ಎರಡು ದಿಕ್ಕುಗಳು ಈ ಭೂಖಂಡಗಳನ್ನು ಬೆಸೆದ ನಿಸರ್ಗವೆ ಅದರ ಬೆಸುಗೆ ಸಡಿಲವಾಗದಿರಲೆಂದು ಭೂಗರ್ಭದಲ್ಲಿ ಚಿನ್ನದ ಹೊಲಿಗೆ ಹಾಕಿತೆಂಬ ಅತ್ಯಂತ ಸ್ವಾರಸ್ಯಕರವೂ, ರಂಜಕವೂ ಆದ ಕಥೆಗಳು ಕೂಡ ನಾವು ಕೇಳಿರುವಂಥವೆ. ಈ ಕಥೆಗಳೇನೆ ಇದ್ದರೂ ಇಂದು ಕೋಲಾರದ ಭೂಗರ್ಭವಿಡೀ ಟೊಳ್ಳಾಗಿದೆ.

ಈ ಹುನುಕುಂದವನ್ನು `ಹೊನ್ನಿನ ಕುಂಡ ಎಂಬ ಅರ್ಥದಲ್ಲಿ ವಿವರಿಸುವ ನಾಮ ವ್ಯಾಖ್ಯಾನದ ಪ್ರಯತ್ನಗಳೂ ನಡೆದಿವೆ. ಆದರೆ, ಇಂತಹ ಪ್ರಯತ್ನಗಳು ಕೇವಲ ಸಾಂಸ್ಕೃತೀಕರಣದ ದುಷ್ಫಲಗಳೇ ಹೊರತು ವಾಸ್ತವದ ಮೂಲದವಲ್ಲ. ಯಾಕೆಂದರೆ, ತಮಿಳು ಶಾಸನಗಳಲ್ಲಿ ಈ ಹುನುಕುಂದವನ್ನು ಪೋರ್ ಕುನ್ತಮ್--> ಪೋರ್ ಕುಂದಮ್ ಎಂದು ಪ್ರಸ್ತಾಪಿಸಲಾಗಿದೆ.ಪೋರ್ ಎಂಬುದು ಪೊನ್ ಎಂಬುದರ ಪ್ರಾಚೀನ ರೂಪವಿದ್ದಿರಬೇಕು. ಅದರರ್ಥವು ಕೂಡ ಚಿನ್ನದ ಬೆಟ್ಟಗಳು ಎಂದೇ ಇದೆ.

ಕೋಲಾರದ ಪದ ನಿಷ್ಪತ್ತಿಯನ್ನು ಕೂಡ ಹೀಗೆಯೆ ದಿಕ್ಕುತಪ್ಪಿಸಲಾಗಿದೆ. ಪರಶುರಾಮ ಕಾರ್ತವೀರ್‍ಯಾರ್ಜುನನ್ನು ಕೊಂದು ವಿಜಯದ ಕೇಕೆ ಹಾಕಿ ಕೋಲಾಹಲ ಎಬ್ಬಿಸಿದ್ದರಿಂದ ಆ ಜಾಗದ ಪುರವನ್ನು ಕೋಲಾಹಲಪುರವೆಂದು ಕರೆಯಲಾಯಿತೆಂಬ ಕಾಕಮ್ಮ ಗುಬ್ಬಮ್ಮನ ಕಥೆಯನ್ನೇ ನಂಬಿಸುತ್ತ ಬರಲಾಗಿದೆ. ಕೋಲಾಹಲ-->ಕುವಲಾಲ ಕೋಲಾರ ಎಂಬ ನಿಷ್ಪತ್ತಿ ಮೇಲ್ನೋಟಕ್ಕೆ ಯಾರೂ ನಂಬು ವಂತೆಯೆ ಇದೆಯಾದ್ದರಿಂದ ಅದರ ಬಗ್ಗೆ ತಕರಾರುಗಳೇ ಏಳಲಿಲ್ಲವೆಂದು ಕಾಣುತ್ತೆ. ಆದರೆ, ಈ ನಿಷ್ಟತ್ತ ಸಂಸ್ಕೃತ ಭಾಷಾ ಮೂಲದ್ದಾಗಿದೆ. ಸಾಮಾನ್ಯ ಜ್ಞಾನವಿರುವವರು ಯಾರೂ ದಕ್ಷಿಣ ಭಾರತದ ಪ್ರಾಚೀನ ಗ್ರಾಮನಾಮಗಳನ್ನು ಸಂಸ್ಕ್ರತ ಪದಗಳ ನಿಷ್ಟತ್ತಿ ಮೂಲಕ್ಕೆ ಕೊಂಡೊಯ್ಯಲಾರರು. ಕನ್ನಡ ತಮಿಳು ಹಾಗೂ ತೆಲುಗಿನಂತಹ ದ್ರಾವಿಡ ಭಾಷೆಗಳಾಡುತ್ತ ಬಂದ ಪ್ರದೇಶವೊಂದರ ಗ್ರಾಮನಾಮವು ಸಂಸ್ಕೃತ ಭಾಷೆಯ ನಾಮವನ್ನೆ ಯಾಕೆ ಆರಿಸಿಕೊಂಡಿರುತ್ತದೆ? ದ್ರಾವಿಡ ಭಾಷೆಗಳು ಪ್ರಾಚೀನ ಸ್ಥಳವೊಂದಕ್ಕೆ ಹೆಸರನ್ನಿಡಲಾಗದಷ್ಟು ದುರ್ಬಲವಾಗಿದ್ದವೆ? ಅದೂ ಸಂಸ್ಕೃತ ಭಾಷೆಯ ಪ್ರವೇಶವೇ ಆಗದಿದ್ದ ಕಾಲದಲ್ಲಿ? ಇಂತಹ ಸಂಸ್ಕೃತ ಭೂಯಿಷ್ಠ ಸಂಶೋಧನೆಗಳ ಹಿಂದೆ ನನಗಂತೂ ವೈದಿಕ ದುರ್ನಾತದ ಸಾಂಸ್ಕೃತಿಕ ಪಿತೂರಿಗಳೇ ಮೂಗಿಗೆ ಹೊಡೆದು ಕಸಿವಿಸಿಯಾಗುತ್ತದೆ. ಉತ್ತಮ ಚೋಳನ ಕಾಲದಲ್ಲಿ ಕೋಲ ಎಂಬ ದೊರೆ ಹಲ ಹಿಡಿದು ಉಳುವಾಗ ಕೋಲಾರಮ್ಮನ ವಿಗ್ರಹ ದೊರೆತು, ಅದರ ಪ್ರತಿಷ್ಟಾಪನೆಯಾಗಿ ಅಂದಿನಿಂದ ಆ ಸ್ಥಳಕ್ಕೆ ಕೋಲಾಹಲ ಪುರ ಎಂಬ ನಾಮಕರಣವಾಯಿತಂತೆ.

ಇದು ಮೊದಲ ಕಟ್ಟುಕಥೆಯನ್ನು ನಂಬದಿರುವವರನ್ನು ಪುನಃ ದಿಕ್ಕುತಪ್ಪಿಸುವ ಪ್ರಯತ್ನದಂತೆಯೇ ಕಾಣಿಸುತ್ತದೆ. ಈ ನಿಷ್ಟತ್ತಿಯ ಮೂಲವನ್ನೇ ನಂಬಬೇಕೆಂದಾದಾಗಲೂ ದ್ರಾವಿಡಪೂರ್ವ ಜನಾಂಗವಾದ ಕೋಲಾ ಬುಡಕಟ್ಟಿನಿಂದಾಗಿ ಈ ಸ್ಥಳಕ್ಕೆ ಕೋಲಾರ ಎಂಬ ಹೆಸರು ಬಂದಿರಬಹುದೆಂಬ ವಾದವು ನಮ್ಮೆದುರಿಗಿದೆ. ಕೆಲವು ಶತಮಾನಗಳ ಹಿಂದಿನ ಶಾಸನಗಳು ಕೋಲಾರ ಎಂಬ ಊರಿನ ಬಗ್ಗೆ ಯಾವ ಪ್ರಾಚೀನ ನಾಮಗಳನ್ನು ಪ್ರಸ್ತಾಪಿಸಿದ್ದರೂ ನಮಗೆ ನಿಜಕ್ಕೂ ಮುಖ್ಯವಾಗುವುದು ಹನ್ನೊಂದನೆ ಶತಮಾನದ ಶಾಸನದಲ್ಲಿ ಈ ಸ್ಥಳವನ್ನು `ನಿಕರಿಲಿ ಚೋಳಮಂಡಲಂ ಎಂದು ಕರೆಯಲಾಗಿತ್ತೆಂಬ ಶಾಸನಾಧಾರವೇ.

ಕೊಲ್ಲು+ಹಾರ=ಕೋಲಾರ ಎಂಬ ವಿವರಣೆಗಳೂ ಅನೇಕ ಬಾರಿ ನಮ್ಮ ನಡುವೆ ಚರ್ಚೆಗೆ ಬಂದಿವೆ. ಕೋಲಾರಮ್ಮ ದೇವತೆ ಮೂಲದಲ್ಲಿ ಪಿಡಾರಿ ಎಂಬ ತಂತ್ರಪಂಥದ ಅಧಿದೇವತೆಯಾಗಿದ್ದಳೆಂಬ ಬಗ್ಗೆ ವಿದ್ವಾಂಸದಲ್ಲಿ ಭಿನ್ನಮತವಿದ್ದಂತಿಲ್ಲ. ಇಲ್ಲಿ ತಂತ್ರಪಂಥದ ಬಲಿ, ರಕ್ತ, ಮಾಟದಂತಹ ಎಲ್ಲ ಅತಿ ವಾಮಾಚರಣೆಗಳೂ ನಡೆಯುತ್ತಿದ್ದವು. ಈಗಲೂ ಕೋಲಾರಮ್ಮನ ಗುಡಿಯ ಮುಂಭಾಗದ ಬಯಲಲ್ಲಿ ಬಲಿಗಂಭಗಳು ಅನಾಥವಾಗಿ ಸಾಕ್ಷಿ ನುಡಿಯುತ್ತಾ ಬಿದ್ದಿವೆ. ಹೀಗಾಗಿ ಈ ಕೋಲಾರಮ್ಮ ಎಂಬ ದೇವತೆ ಯಾವುದೊ ತಂತ್ರಪಂಥದ ಶಾಖೆಯಿಂದ ವಲಸೆ ಬಂದ ದೈವತವೇ ಆಗಿರಬಹುದು. ಬಹುಶಃ ಕೊಲ್ಹಾಪುರ, ಕೊಲ್ಲೂರು ಹಾಗೂ ಕೋಲಾರಗಳ ಮೂಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೊಂಡಿಗಳು ಹಿಂದೊಮ್ಮೆ ಬೆಸೆದುಕೊಂಡಿದ್ದರೂ ಏನಚ್ಚರಿಯಿಲ್ಲವೆನಿಸುತ್ತೆ. ಕೋಲಾರಮ್ಮನನ್ನು ಚೋಳೂರಮ್ಮನೆಂತಲೂ ಕರೆಯುವ ವಾಡಿಕೆ ಇದೆ. ಗುಡಿಯಲ್ಲಿನ ನಗ್ನ ಕಾಲಭೈರವಿಯ ಪ್ರತಿಮೆಯಡಿ ಈಗಲೂ ಚೇಳುಗಳು ಹರಿದಾಡುವ ಸದ್ದು ಕೇಳಿಸುತ್ತದೆಂದು ಭಕ್ತರು ನಂಬುತ್ತಾರೆ. ಅಥವಾ ಹಾಗೆ ನಂಬಿಸಲಾಗಿದೆ. ಬಹುಶಃ ಚೋಳರು ಪ್ರತಿಷ್ಟಾಪಿಸಿದ ಈ ಮಾತೃದೇವತೆಯನ್ನು ಚೋಳರ ಅಮ್ಮ > ಚೋಳೂರಮ್ಮ > ಚೇಳೂರಮ್ಮ ಎಂದು ಗುರುತಿಸುತ್ತ ಬಂದಿರಬೇಕೆನ್ನುವುದೆ ಹೆಚ್ಚು ಸಮಂಜಸ ವಿವರಣೆಯಾಗಿ ನನಗೆ ಕಾಣಿಸುತ್ತದೆ. ಅದೇನೇ ಇದ್ದರೂ ೯೯೬ರ ತಮಿಳು ಶಾಸನವೊಂದರಲ್ಲಿ ಕೂಡ ಕೋಲಾರಮ್ಮನನ್ನು `ಪಿಡಾರಿ' ಎಂದೇ ಸಂಬೋಧಿಸಲಾಗಿದೆ.

ಈ ಕೋಲಾರಮ್ಮ ಉಗ್ರದೇವತೆ. ಗರ್ಭಗುಡಿಯಲ್ಲಿರುವ ಈ ಉಗ್ರದೇವತೆ ಭಕ್ತರಿಗೆ ನೇರ ಮುಖಾಮುಖಿಯಾಗಿ ಕಾಣಿಸುವುದಿಲ್ಲ. ಬದಲಿಗೆ ಬೇರೊಂದು ದಿಕ್ಕಿಗೆ ಮುಖ ಮಾಡಿರುವ ಆಕೆಯ ಮುಖವನ್ನು ಕನ್ನಡಿಯಲ್ಲಿ ನೋಡುವ ವ್ಯವಸ್ಥೆ ಮಾಡಲಾಗಿದೆ. ಅದಕ್ಕೆ ನೀಡಿರುವ ವಿವರಣೆ ದೇವತೆಯ ಉಗ್ರ ಮುಖವನ್ನು ಭಕ್ತರು ನೇರವಾಗಿ ನೋಡಬಾರದೆಂಬುದು! ಆದರೆ, ನನಗಿರುವ ಅನುಮಾನವೆಂದರೆ ಈ ಮೂಲ ದೇವತೆಯನ್ನು ವೈದಿಕೇತರ ಸಂಪ್ರದಾಯಕ್ಕನುಗುಣವಾಗಿ ಉದ್ದೇಶಪೂರ್ವಕವಾಗಿಯೆ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಪ್ರತಿಷ್ಠಾಪಿಸಿರುವುದನ್ನು ಹೀಗೆ ತಿರುಚಿ ಕನ್ನಡಿಯಲ್ಲಿ ಪೂರ್ವಾಭಿಮುಖ ದರ್ಶನ ಸಿಗುವಂತೆ ಮಾಡಿ, ಅದಕ್ಕೆ ಉಗ್ರತೆಯ ಸಮಾಧಾನಕರವಾದ ವಿವರಣೆಯೊಂದನ್ನು ಸಿದ್ದಪಡಿಸಿ ಮಾಡಿ, ವೈದಕೀಕರಿಸಲಾಗಿದೆ ಎಂಬುದು. ಕಂಚಿಯ ಮೂಲ ಕಾಮಾಕ್ಷಿಯಾಗಿದ್ದ ಕಾಳಮ್ಮನ ಸ್ಥಿತಿಯನ್ನೂ ಹೀಗೆಯೆ ಶಂಕರಾಚಾರ್ಯರು ಯಶಸ್ವಿಯಾಗಿ ದಿಕ್ಕುತಪ್ಪಿಸಿದ್ದಾರೆ. ಆದರೆ, ಶಾಕ್ತ ದೇವತೆ ದಕ್ಷಿಣಾಭಿಮುಖವಾಗಿರುವುದು ಅತ್ಯಂತ ಸಹಜವೆ ಆಗಿದೆಯೆನ್ನಿಸುತ್ತದೆ. ಈಕೆ ಮುಕ್ಕಣ್ಣಿ. ಪ್ರಾಚೀನ ಕಾಲದಲ್ಲಿ ಮಂಗಳವಾರದಂದು ಈ ಕೋಲಾರಮ್ಮನ ಗುಡಿಯಲ್ಲಿ ಕನ್ಯಾಪೂಜೆಗಳು ನಡೆಯುತ್ತಿದ್ದವೆಂಬುದಕ್ಕೆ ಸಹ ಶಾಸನಾಧಾರಗಳಿವೆ. ಕೆಂಡದ ಮೇಲೆ ನಡೆಯುವುದು, ಯೋಗಿನಿ-ಯೋಗೀಶ್ವರರ ಪೂಜೆ, ಮದ್ಯಸೇವನೆ ಪ್ರಾಣಿಬಲಿ (ನರಬಲಿಯೂ ಇತ್ತೆಂದು ಹೇಳಲಾಗುತ್ತದೆ) ಗಳಂತೂ ಸಹಜ ಆರಾಧನಾ ಶೈಲಿಗಳಾಗಿದ್ದವು. ಈ ಕೋಲಾರಮ್ಮನ ಮೂಲಸ್ಥಳ ಸಮೀಪದ ದೊಡ್ಡಹಸಾಳ ಎಂಬ ಗ್ರಾಮ. ದೊಡ್ಡಹಸಾಳೆ ಚಿಕ್ಕಹಸಾಳ, ದಿಂಬ, ಕೊಟೇರಿ, ಉಣಿಕಿ, ಟಮಕ ಹಾಗೂ ಕಣ್ಣೂರಗಳೆಂಬ ಏಳೂರಿನ ಜನರು ಇಂದಿಗೂ ಕೋಲಾರಮ್ಮನ ಜಾತ್ರೆ ನಡೆಸುತ್ತಾರೆ. ಆಗ ಬಲಿ ಕೊಡುವ ಪದ್ಧತಿ ಆಚರಣೆಗೊಳಪಡುತ್ತದೆ. ಇದು ಕೋಲಾರಮ್ಮನ ಕುರಿತು ಕುತೂಹಲಗಳು. ಆದರೂ ನನಗೆ `ಕೋಲಾರ ಪದದ ಮೂಲ ಮಾತ್ರ ಬಗೆಹರಿದಿರಲಿಲ್ಲ. ಒಮ್ಮೆ ಕೆಜಿಎಫ್‌ನ ವಕೀಲರೂ, ಪ್ರಗತಿಪರ ಮಿತ್ರರೂ ಆದ ಭಾಕ್ಯನಾಥನ್ ಎಂಬುವವರನ್ನು `ಕೋಲಾರಎಂಬುದಕ್ಕೆ ತಮಿಳಿನಲ್ಲಿ ಅರ್ಥವೇನೆಂದು ವಿಚಾರಿಸಿದೆ. ಅವರು ಕೋಲಾರ ಎಂದರೆ Disturbed Rivers ಎಂಬ ಅರ್ಥ ನೀಡಿದರು. Disturbed Rivers ಎಂಬುದು ಕಾವ್ಯಾತ್ಮಕವಾಗಿರುವಂತೆಯೆ ಎಷ್ಟೆಲ್ಲ ಅರ್ಥದಾಯಾಮ ಗಳಿಗೆ ತನ್ನನ್ನು ತೆರೆದುಕೊಳ್ಳುವಂತಿದೆಯಲ್ಲ ಎನಿಸಿ ಕುತೂಹಲ ಈಗ ಇನ್ನಷ್ಟು ಹೆಚ್ಚಿದೆ. ಆದರೂ `ಕೋ' ಎಂದರೇನೇ ತಮಿಳಿನಲ್ಲಿ ದೇವರು ಎಂದರ್ಥವಲ್ಲವೆ?

(ಕೃಪೆ: ಅಗ್ನಿ ವಾರಪತ್ರಿಕೆ)

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com