ಕನ್ನಡಿಗರಿಗೆ ಇಂಗ್ಲಿಷ್ ಬೇಕು
ನಮ್ಮದಲ್ಲದ
ಈ ಇಂಗ್ಲಿಷ್ ಭಾಷಾ ವ್ಯಾಮೋಹಕ್ಕೆ ಕಾರಣವೇನು? ಇಂಗ್ಲಿಷ್ ಜಗತ್ತಿಗೆ
ಕಿಂಡಿಯಾಗಬಹುದಾದ ಭಾಷೆ. ಇದು ಭಾವನಾತ್ಮಕ ಸಮಸ್ಯೆಯಲ್ಲ;
ಆಯ್ಕೆಯ ಸಮಸ್ಯೆ. ಈ ಸಂಗತಿಗಳು ಒಂದನೇ ತರಗತಿಯಿಂದಲೇ
ಇಂಗ್ಲಿಷ್ ಬೇಡವೆಂದು ಅಗ್ರಹಿಸುತ್ತಿರುವವರಿಗೆ ತಿಳಿದಿಲ್ಲವೆ? ತಿಳಿದಿದೆ.
ಆದರೆ ಅವರು ಸಮಸ್ಯೆಯನ್ನು ಇರುವುದಕ್ಕಿಂತಲೂ ಭೀಕರವಾಗಿ
ಕಲ್ಪಿಸಿಕೊಂಡಿರುವ ಹಾಗೆ ಕಾಣುತ್ತಿದೆ. ಮತ್ತೊಂದು ಭಾಷೆ ಕಲಿಕೆ
ಶ್ರಮವಾಗಬಹುದೆಂದು ಪ್ರತಿಪಾದಿಸಿದರೆ ಅದು ಸಹಜ.
ಆದರೆ, `ಕನ್ನಡ ದ್ರೋಹ', `ಜಾಗತೀಕರಣ',
`ನಮ್ಮ ಸಂಸ್ಕೃತಿ' `ಸ್ವಾಭಿಮಾನ'-ಮುಂತಾದ ಈ ಸಮಸ್ಯೆಗೆ
ಅಗತ್ಯವೆನಿಸಿದ ಪರಿಕರಗಳನ್ನು ವಾದಕ್ಕೆ ಎಳೆದು ತರುವುದು
ಸರಿಯಲ್ಲ.
ಸರ್ಕಾರಿ ಶಾಲೆಗಳಲ್ಲಿ ಒಂದನೆ ತರಗತಿಯಿಂದಲೇ
ಇಂಗ್ಲಿಷ್ನನ್ನು ಕಡ್ಡಾಯಗೊಳಿಸುವುದಾಗಿ ಸರ್ಕಾರ ಆದೇಶ ಹೊರಡಿಸಿದ
ಕ್ಷಣದಿಂದ ಪರ-ವಿರೋಧ ಧ್ವನಿಗಳು ಸಂಘರ್ಷಕ್ಕಿಳಿದಿವೆ; ಕಳೆದ
ವರ್ಷದ ಪುನರಾವರ್ತನೆಯಾಗುತ್ತಿದೆ.
ಆದರೆ, ಈ ಬಾರಿ ಸರ್ಕಾರದ ಆದೇಶವನ್ನು
ಅನುಮೋದಿಸಿ ಹೆಚ್ಚು ಧ್ವನಿಗಳು ಕೇಳಿಸತೊಡಗಿವೆ. ಅದನ್ನು
ವಿರೋಧಿಸುವ ಗುಂಪಿನಲ್ಲಿ ಚಂಪಾರವರ ಹೊರತಾಗಿ ಉಳಿದೆಲ್ಲರ
ಧ್ವನಿಗಳು ಕ್ಷೀಣವೆನಿಸತೊಡಗಿವೆ.
ಹೌದು, ಈ ಬಾರಿಯೂ ನನ್ನ ಅಭಿಪ್ರಾಯ ಬದಲಾಗಿಲ್ಲ: ಒಂದನೇ ತರಗತಿಯಿಂದ
ಇಂಗ್ಲಿಷ್ ಬೋಧಿಸುವುದಕ್ಕೆ ನನ್ನ ಸಂಪೂರ್ಣ ಸಹಮತವಿದೆ.
ಒಂದೆರಡು ನಿಮಿಷ ಕನ್ನಡವನ್ನು ಪಕ್ಕಕ್ಕಿಡಿ. ನನ್ನ ಸುತ್ತಲೂ ಮುಸ್ಲಿಮರ
ದೊಡ್ಡ ಬಳಗವಿದೆ. ಅವರಲ್ಲಿ ತಮ್ಮ ಮಕ್ಕಳನ್ನು ಉರ್ದು ಶಾಲೆಗಳಿಗೆ
ಸೇರಿಸಿರುವವರು ಆರ್ಥಿಕವಾಗಿ ಹಿಂದುಳಿದಿರುವವರು ಮಾತ್ರ. ಅದರಲ್ಲೂ
ಗ್ರಾಮೀಣ ಪ್ರದೇಶಗಳಲ್ಲಿರುವ ಮುಸ್ಲಿಮರು ತಮ್ಮ ಮಕ್ಕಳನ್ನು
ಉರ್ದು ಶಾಲೆಗಳಿಲ್ಲದಿದ್ದಾಗ ಕನ್ನಡ ಶಾಲೆಗಳಿಗೆ ಸೇರಿಸಿದ್ದಾರೆ. ಆದರೆ,
ಅವರಲ್ಲೂ ವಿದ್ಯಾಭ್ಯಾಸದ ಭಾರ ಹೊರಲು ಶಕ್ತರಿರುವವರು
ಹತ್ತಿರದ ಟೌನ್‌ಗಳಲ್ಲಿರುವ ಕಾನ್ವೆಂಟ್‌ಗಳಿಗೆ ಮಕ್ಕಳನ್ನು
ಕಳಿಸುತ್ತಿದ್ದಾರೆ. ಬೆಂಗಳೂರಿನಂತಹ ಸಿಟಿಗಳಲ್ಲಿರುವ
ಮುಸ್ಲಿಮರು-ಆಟೊ ಚಾಲಕ ವೃತ್ತಿಯಲ್ಲಿದ್ದರೂ- ಕಷ್ಟಪಟ್ಟು ತಮ್ಮ
ಮಕ್ಕಳನ್ನು ಕಾನ್ವೆಂಟ್‌ಗಳಿಗೆ ಕಳಿಸುತ್ತಿದ್ದಾರೆಯೆ ಹೊರತು
ಭಾವನಾತ್ಮಕವಾಗಿ ತಾವು ಪ್ರೀತಿಸುವ ಉರ್ದು ಶಾಲೆಗಳಿಗಲ್ಲ.
ಅಷೆಲ್ಲಾ ನಿಯಮ ನಮ್ಮ ದೇಶದ ಎಲ್ಲ ಪ್ರಾದೇಶಿಕ ಭಾಷೆಗಳಿಗೂ
ಅನ್ವಯಿಸುತ್ತದೆ. ಹಿಂದಿ ಸೇರಿದಂತೆ ತಮ್ಮ ಭಾಷೆಗೆ `ಶಾಸ್ತ್ರೀಯ
ಭಾಷೆ' ಸ್ಥಾನಮಾನ ಸಿಗಲೆಂದು ಉಗ್ರ ಹೋರಾಟ ನಡೆಸಿದ, ಭಾಷಾ
ಸಮಸ್ಯೆಗಳಲ್ಲಿ ಯೋಧರಂತೆ ತೊಡಗುವ ತಮಿಳರೂ ಸಹ
ತಮ್ಮ ಮಕ್ಕಳನ್ನು ಕಾನ್ವೆಂಟ್‌ಗಳಿಗೆ ಕಳಿಸಲು ಹಾತೊರೆಯುತ್ತಾರೆ.
ಇಂಡಿಯಾದಲ್ಲಿ ಬಹುಜನ ಮಾತನಾಡುವ, ರಾಷ್ಟ್ರೀಯ ಭಾಷೆಯೆಂದು
ಮನ್ನಣೆ ಪಡೆದಿರುವ ಹಿಂದಿ ಭಾಷಿಕರೂ ಸಹ ಮಕ್ಕಳನ್ನು ಹೆಚ್ಚು
ಹೆಚ್ಚು ಸಂಖ್ಯೆಯಲ್ಲಿ ಕಾನ್ವೆಂಟ್‌ಗಳಿಗೆ ಸೇರಿಸುತ್ತಿದ್ದಾರೆ. ಈ ಕ್ಷಣದಲ್ಲಿ
ಇದು ರಾಷ್ಟ್ರೀಯ ಅಗತ್ಯವಾಗಿ ರೂಪುಗೊಂಡಿರುವುದನ್ನು ನಾವು
ಕಂಡೂ ಕಾಣದಂತಿರಲು ಸಾಧ್ಯವಿಲ್ಲ. ನಾವು ಅದಕ್ಕೆ
ಕುರುಡಾಗುವುದೆಂದರೆ ನಮ್ಮ ಪರಿಸರಕ್ಕೆ ಕುರುಡಾದಂತೆ.
ನಮ್ಮದಲ್ಲದ ಈ ಇಂಗ್ಲಿಷ್ ಭಾಷಾ ವ್ಯಾಮೋಹಕ್ಕೆ ಕಾರಣವೇನು? ಕಾರಣ ಅತೀ
ಸರಳ:
ಇಂಗ್ಲಿಷ್ ಜಗತ್ತಿಗೆ ಕಿಂಡಿಯಾಗಬಹುದಾದ ಭಾಷೆ. ಪ್ರಪಂಚದ
ಎಲ್ಲೆಡೆಯೂ ಇಂಗ್ಲಿಷ್ ಇಲ್ಲದಿರಬಹುದು. ಆದರೆ, ಇಂಗ್ಲಿಷ್ ಬಲ್ಲವನು ಎಲ್ಲಿ
ಬೇಕಾದರೂ, ಯಾವ ದೇಶಕ್ಕೆ ಬೇಕಾದರೂ ಹೋಗಿ, ಒಂದಷ್ಟು ಕಾಲ
ಇರಬಹುದೆನ್ನುವುದಂತೂ ಸತ್ಯ.
ಇದು ಭಾವನಾತ್ಮಕ ಸಮಸ್ಯೆಯಲ್ಲ; ಆಯ್ಕೆಯ ಸಮಸ್ಯೆ. ಇಂಗ್ಲಿಷನ್ನು
ಕಲಿತವರಿಗೆ ಉದ್ಯೋಗದಲ್ಲಿ ಹೇರಳ ಅವಕಾಶವಿದೆಯೆನ್ನುವ
ವಾಸ್ತವತೆಯ ತಳಹದಿಯ ಮೇಲೆ ಇಂಗ್ಲಿಷ್ ಭಾಷೆ ನಮ್ಮ
ದೇಶದಲ್ಲಿ ಎಲ್ಲೆಡೆ ಹರಡತೊಡಗಿದೆ.
ಈ ಸಂಗತಿಗಳು ಒಂದನೇ ತರಗತಿಯಿಂದಲೇ ಇಂಗ್ಲಿಷ್ ಬೇಡವೆಂದು
ಆಗ್ರಹಿಸುತ್ತಿರುವವರಿಗೆ ತಿಳಿದಿಲ್ಲವೆ? ಖಂಡಿತವಾಗಿಯೂ ತಿಳಿದಿದೆ. ಆದರೆ,
ಅವರು ಸಮಸ್ಯೆಯನ್ನು ಇರುವುದಕ್ಕಿಂತಲೂ ಭೀಕರವಾಗಿ
ಕಲ್ಪಿಸಿಕೊಂಡಿರುವ ಹಾಗೆ ಕಾಣುತ್ತಿದೆ. ಆ ಗುಂಪಿನವರು ಮಕ್ಕಳ
ಬೌದ್ಧಿಕ ಬೆಳವಣಿಗೆಗೆ ಮತ್ತೊಂದು ಭಾಷೆಯನ್ನು ಕಲಿಯುವುದು
ಶ್ರಮವಾಗಬಹುದೆಂದು ಮಾತ್ರ ಪ್ರತಿಪಾದಿಸಿದರೆ ಅದು ಸಹಜ,
ಗಂಭೀರ ಚಿಂತನೆಗೆ ಹಚ್ಚಬಹುದೆ ಹೊರತು `ಕನ್ನಡ ದ್ರೋಹ',
`ಜಾಗತೀಕರಣ', `ನಮ್ಮ ಸಂಸ್ಕೃತಿ', `ಸ್ವಾಭಿಮಾನ',- ಮುಂತಾದ
ಈ ಸಮಸ್ಯೆಗೆ ಅಗತ್ಯಯವೆನಿಸುವ ಪರಿಕರಗಳನ್ನು ವಾದಕ್ಕೆ
ಎಳೆದು ತರುವುದರಿಂದ ಅಲ್ಲ. ಯಾವುದೇ ಹಂತದಲ್ಲಿಯೂ
ನಮ್ಮಲ್ಲಿ ಇಂಗ್ಲಿಷ್ ಭಾಷಾ ಕಲಿಕೆ ಇಲ್ಲದಿದ್ದರೆ ಆ ಪರಿಕಲ್ಪನೆಗಳಿಗೆ ಬೆಲೆ
ಇರುತ್ತಿತ್ತು. ಆದರೆ ಐದನೆ ತರಗತಿಯಿಂದ ಇಂಗ್ಲಿಷನ್ನು
ಕಲಿಸುವುದಕ್ಕೆ ಇವರಲ್ಲಿ ಯಾರೂ, ಎಂದೂ ವಿರೋಧ
ವ್ಯಕ್ತಪಡಿಸಿರುವ ಹಾಗೆ ಕಾಣುವುದಿಲ್ಲ.
ಇನ್ನು ಜರ್ಮನಿ, ಫ್ರಾನ್ಸ್ ಮುಂತಾದ ದೇಶಗಳಲ್ಲಿ ಇಂಗ್ಲಿಷ್‌ಗೆ ಬೆಲೆಯಿಲ್ಲವೆಂದು
ಈ ವಿದ್ವಾಂಸರುಗಳು ವಾದಿಸುವುದು ಅವರ ಬಾಲಿಶ ಗ್ರಹಿಕೆಗಳಿಗೆ ಹಿಡಿದ
ಕನ್ನಡಿಯಾಗಿದೆ. ಜಗತ್ತಿನ ಅತೀ ಬಡ ರಾಷ್ಟ್ರಗಳಲ್ಲಿ ಒಂದಾದ
ಕ್ಯಾಮರೂನ್‌ನಲ್ಲೂ ಇಂಗ್ಲಿಷ್ ಇಲ್ಲ. ಹಾಗೆಯೆ `ಜಗತ್ತಿನ ವೇಶ್ಯಾವಾಟಿಕಾ
ದೇಶ' ಎಂದು ಕುಖ್ಯಾತಿ ಗಳಿಸಿರುವ ಥಾಯ್‌ಲ್ಯಾಂಡ್‌ನಲ್ಲೂ ಹಂತಕ್ಕೆ
ಇಳಿಯುವಂತಾದರೆ ಏನು ಮಾಡಬೇಕು? ವಿಶ್ವದ ಶ್ರೇಷ್ಠ ಆರ್ಥಿಕ
ತಜ್ಞರು ಆ ದೇಶಗಳ ಬಡತನಕ್ಕೆ ವಿದ್ಯಾಭ್ಯಾಸದ ವೈಫಲ್ಯ,
ಅದರಲ್ಲೂ ಹೊರಜಗತ್ತಿನೊಡನೆ ವ್ಯವಹರಿಸಲು ಸಾಧ್ಯವಾಗದಿರುವ
ಸಂಪರ್ಕ ಭಾಷೆಯ ಕೊರತೆಯನ್ನು ಎತ್ತಿ ಹೇಳತೊಡಗಿದ್ದಾರೆ.
ಯಾವುದೇ ಆರ್ಥಿಕವಾಗಿ ಸದೃಢವಾಗಿರುವ, ಸ್ವಾವಲಂಬಿಯಾಗಿರುವ
ರಾಷ್ಟ್ರಕ್ಕೆ ತನ್ನ ಪ್ರಾದೇಶಿಕ ಭಾಷೆಯ ಹೊರತಾಗಿ ಇತರ ಯಾವ
ಭಾಷೆಯ ಅನಿವಾರ್ಯತೆ (ಅಗತ್ಯವಲ್ಲ)ಯಿರುವುದಿಲ್ಲ. ಇಂದು
ಏಷಿಯಾದಲ್ಲಿ ಆ ಹಂತವನ್ನು ಜಪಾನ್ ಮತ್ತು ದಕ್ಷಿಣ ಕೊರಿಯಾ
ತಲುಪಿಸಿವೆ. ನಾವಿರಲಿ, ಜಗತ್ತಿನ ಅತ್ಯಂತ ಬಲಾಢ್ಯ ರಾಷ್ಟ್ರಗಳಲ್ಲಿ
ಒಂದೆಂದು ಕಳೆದ ದಶಕದಿಂದ ಪರಿಗಣಿತವಾಗಿರುವ ಚೈನಾ ಸಹ ಆ
ಪ್ರಮಾಣದ ಸ್ವಾವಲಂಬನೆಯನ್ನು ಬೆಳೆಸಿಕೊಳ್ಳುವ ಸಾಧ್ಯವಾಗಿಲ್ಲ.
ಇದಕ್ಕೆ ಕಾರಣ ಸ್ಪಷ್ಟ: ಚೈನಾ ಮತ್ತು ನಮ್ಮಲ್ಲಿರುವ ಅಗಾಧ
ಜನಸಮೂಹ ಇಲ್ಲಿ ಅನ್ನಕ್ಕಾಗಿ ಪರದಾಡುವ ಕೋಟ್ಯಂತರ
ಬಾಯಿಗಳಿರುವುದನ್ನು ನಾವು ಮರೆಯಬಾರದು.
೧೯೭೮ಕ್ಕೆ ಮುಂಚೆ, ಮಾವೊ ಜೀವಿತಾವಧಿಯಲ್ಲಿ, ಚೈನಾ ಜಗತ್ತಿಗೆ
ತೆರೆದುಕೊಂಡಿರಲಿಲ್ಲ. ಆಗ ಅಲ್ಲಿನ ಜನ ಬಡತನದಿಂದ, ಹಸಿವಿನಿಂದ,
ಕ್ಷಾಮದಿಂದ ಕನಲಿಹೋದರು. ದೇಶ ದಾರಿದ್ರ್ಯದ ಪಾತಾಳವನ್ನು
ತಲುಪಿತು. ಆ ಕಾಲಘಟ್ಟದಲ್ಲಿ ಅಲ್ಲಿನ ಚಿಂತಕರು ತೆಗೆದುಕೊಂಡಿರಲಿಲ್ಲ;
ಇಂಗ್ಲಿಷ್ ಭಾಷೆಯನ್ನು ಹತ್ತಿರ ಬಿಟ್ಟುಕೊಂಡಿರಲಿಲ್ಲ. ಆಗ ಅಲ್ಲಿನ ಜನ
ಬಡತನದಿಂದ, ಹಸಿವಿನಿಂದ, ಕ್ಷಾಮದಿಂದ ಕನಲಿಹೋದರು. ದೇಶ
ದಾರಿದ್ರ್ಯದ ಪಾತಾಳವನ್ನು ತಲುಪಿತು. ಆ ಕಾಲಘಟ್ಟದಲ್ಲಿ ಅಲ್ಲಿನ
ಚಿಂತಕರು ತೆಗೆದುಕೊಂಡ ದೃಢ ನಿರ್ಧಾರಗಳಿಂದಾಗಿ ಚೈನಾ ಜಗತ್ತಿಗೆ
ತೆರೆದುಕೊಂಡಿತು; ಇಂಗ್ಲಿಷನ್ನು ಬರಮಾಡಿಕೊಂಡಿತು.
ಇಂದು ಅಲ್ಲಿ ವೈದ್ಯಕೀಯ ವ್ಯಾಸಂಗಕ್ಕಾಗಿ ಇಂಡಿಯಾ ಸೇರಿದಂತೆ,
ಮುಂದುವರಿದ ರಾಷ್ಟ್ರಗಳಿಂದಲೂ ಲಕ್ಷಾಂತರ ವಿದ್ಯಾರ್ಥಿಗಳು ಪ್ರತೀ
ವರ್ಷ ಹೋಗುತ್ತಿದ್ದಾರೆ. ಇಂದು ಆರ್ಥಿಕವಾಗಿ ಆ ದೇಶ ಜಗತ್ತಿನ ಮೊದಲ
ಹತ್ತು ದೇಶಗಳ ಪಟ್ಟಿಗೆ ಸೇರ್ಪಡೆಯಾಗಿದೆ.
ಇಂದು ನಾವು ಜಾಗತೀಕರಣದ ಪರಿಣಾಮಗಳನ್ನು ಆಳವಾಗಿ ಅರಿಯದೆ
ಟೀಕಿಸುವುದರಲ್ಲಿಯೆ ಬೆನ್ನು ತಟ್ಟಿಕೊಳ್ಳುತ್ತಿದ್ದೇವೆ. ಅದನ್ನು
ಟೀಕಿಸುತ್ತಿರುವ ಎಲ್ಲರೂ ಅದರ ಕೊಡುಗೆಗಳಾದ ಬಿಸ್ಲೇರಿ,
ಸೆಲ್‌ಪೋನ್‌ಗಳು, ಡಿವಿಡಿಗಳು, ಕಾರ್‌ಗಳು-ಎಲ್ಲವನ್ನೂ ಎಗ್ಗಿಲ್ಲದೆ,
ಯಾವುದೆ ಅಳುಕಿಲ್ಲದೆ ಬಳಸುತ್ತಿದ್ದೇವೆ. ಜಾಗತೀಕರಣದ
ಕೇಂದ್ರಗಳಂತಿರುವ ಶಾಪಿಂಗ್ ಮಾಲ್‌ಗಳಿಗೆ, ಪಿವಿಆರ್‌ಗಳಿಗೆ ಹೋಗಿ
ಅಡ್ಡಾಡಿ ಬರುತ್ತಿದ್ದೇವೆ.
ಇಂದು ಜಾಗತೀಕರಣದ ಪರಿಣಾಮದಿಂದಾಗಿ ಐಟಿ ವಲಯದಿಂದ ಹರಿದು ಬರುತ್ತಿರುವ
ಲಕ್ಷಾಂತರ ಕೋಟಿ ಹಣವನ್ನು ಅಭಿವೃದ್ಧಿಗಾಗಿ ಬಳಸಿಕೊಳ್ಳುತ್ತಿದ್ದೇವೆ.
ನಮಗರಿವಿಲ್ಲದಂತೆ ನಾವು ಜಾಗತೀಕರಣದ ಬಲೆಯಲ್ಲಿ ಸಿಲಿಕಿದ್ದೇವೆ.
ನಾವೆಷ್ಟೆ ಪರದಾಡಿದರೂ ಅದರಿಂದ ಹೊರಬರಲು ಸಾಧ್ಯವೇ ಇಲ್ಲ. ಆದರೆ
ಜಾಗತೀಕರಣವನ್ನು ನಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ಚತುರತೆ,
ಒಗ್ಗಟ್ಟು ಮತ್ತು ಸ್ಥೈರ್ಯಗಳನ್ನು ನಾವು ಬೆಳೆಸಿಕೊಳ್ಳಬೇಕಿದೆ.
ಜಾಗತೀಕರಣದ ದುಷ್ಟರಿಣಾಮಗಳ ಬಗ್ಗೆ ನಮ್ಮಂತಹ ರಾಷ್ಟ್ರಗಳಲ್ಲಿ
ಅರಿವು ಮೂಡುತ್ತಿರುವುದರಿಂದಲೇ `ದೇಸಿ' ಸಂಸ್ಕೃತಿ ಹಿಂದೆಂದಿಗಿಂತಲೂ
ಉಜ್ವಲವಾಗಿ ಬೆಳಗತೊಡಗಿರುವುದನ್ನು ನಾವು
ಅರ್ಥಮಾಡಿಕೊಳ್ಳಬೇಕಿದೆ.
ಅಂತಹ ಜಾಗತೀಕರನದ ಪ್ರಯೋಜನವನ್ನು ಸಂಪೂರ್ಣವಾಗಿ ಪಡೆಯುವ
ನಿಟ್ಟಿನಲ್ಲಿ ಇಂಗ್ಲಿಷ್ ಕಲಿಕೆ ಒಂದು ಮೆಟ್ಟಿಲು. ಅದರ ಮೇಲೆ ಹಿಡಿತ
ಬಿಗಿಯಾದಷ್ಟು ಕನ್ನಡಿಗ ಬಲಶಾಲಿಯಾಗುತ್ತಾನೆ. ನಾವು ತಮಿಳು,
ತೆಲುಗು, ಹಿಂದಿಯನ್ನು ಸಾಮೂಹಿಕವಾಗಿ ಕಲಿತರೆ `ನಮ್ಮತನ'
ಕಳೆದುಹೋಗುವ ಸಾಧ್ಯತೆಗಳಿರುತ್ತವೆ. ಆದರೆ, ಇಂಗ್ಲಿಷ್‌ನಲ್ಲಿ
ಅಖಂಡ ಕನ್ನಡಿಗರೆಲ್ಲರೂ ಪರಿಣಿತರಾದರೂ, ನಾವು
`ಕನ್ನಡಿಗ'ರಾಗಿಯೆ ಉಳಿಯುತ್ತೇವೆಯೆ ಹೊರತು `ಇಂಗ್ಲಿಷ' ರಾಗಿ
ಅಲ್ಲ. ಇಂಗ್ಲಿಷ್ ನಾವು ಏನೇ ಹೇಳಿದರೂ ಅಂತಿಮವಾಗಿ ನ್ಯೂಟ್ರಲ್ ಭಾಷೆ.
ಹಾಗಾಗಿ ಮಕ್ಕಳಿಗೆ ಎಳೆಯ ವಯಸ್ಸಿನಿಂದಲೇ
ಸಮರ್ಪಕವಾಗಿ ಇಂಗ್ಲಿಷ್ ಕಲಿಸಬೇಕಾದ ಅಗತ್ಯ ಹಿಂದೆಂದಿಗಿಂತಲೂ
ಹೆಚ್ಚಾಗಿದೆ. ಐಟಿ, ಬಿಟಿಗಳು ನಮ್ಮಲ್ಲಿ ವ್ಯಾಪಕವಾಗಿ
ಬೇರೂರುತ್ತಿರುವುದರಿಂದ ಇತರರಿಗಿಂತಲೂ ನಮಗೆ ಇಂಗ್ಲಿಷ್ ಹೆಚ್ಚು
ಅಗತ್ಯವಾಗಿದೆ;
ಅನಿವಾರ್ಯವಾಗಿದೆ.
ಕನ್ನಡ ಉಳಿಯಬೇಕಾದರೆ,
ಬೆಳೆಯಬೇಕಾದರೆ, ಕನ್ನಡಿಗ ಶಕ್ತಿಶಾಲಿಯಾಗಬೇಕು; ಅದಕ್ಕಾಗಿ
ಇಂಗ್ಲಿಷ್.
(ಕೃಪೆ: ಅಗ್ನಿ ವಾರಪತ್ರಿಕೆ)