Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 17 November 2006 12:02 PM

ಸೋಮ ಶೇಖರ V/S ಚಂದ್ರ ಶೇಖರ


ಶಿವ ಅಂದರೆ ಯಾರು? ರುದ್ರ ಅಂದರೆ ಯಾರು? ಇಬ್ಬರೂ ಒಂದೇನಾ. ವೇದಕಾಲದ ಸೂಕ್ತಿಗಳಲ್ಲಿದೆ ಉತ್ತರ......ಸೂರ್ಯ-ಚಂದ್ರರನ್ನು ಒಂದೇ ಎಂದು ಭಾವಿಸುವುದರಷ್ಟೆ ಪ್ರಮಾಣದ ಪ್ರಮಾದ ಶಿವ-ರುದ್ರರನ್ನು ಒಂದೇ ಎಂದು ತಿಳಿಯುವುದು.
 

-ಲಕ್ಷ್ಮಿಪತಿ ಕೋಲಾರ
 

ಶಿವ ಮತ್ತು ರುದ್ರರು ಅಭಿನ್ನ ದೇವತೆಗಳು ಎಂಬ ಕಲ್ಪನೆ ಇಂದು ಜನಮಾನಸದಲ್ಲಿ ನೆಲೆಯೂರಿವೆ. ಶಿವ ಮತ್ತು ರುದ್ರರ ನಡುವೆ ಕೆಲವು ಸಾಮಾನ್ಯ ಹೋಲಿಕೆಗಳಿರುವುದರ ಹೊರತಾಗಿ ಇವರಿಬ್ಬರೂ ಬೇರೆ ಬೇರೆ ಕಾಲಘಟ್ಟಗಳ, ಭಿನ್ನ ಸಂಸ್ಕೃತಿ ಭೌಗೋಳಿಕತೆಗಳ ಎರಡು ಪ್ರತ್ಯೇಕ ದೈವ ಪರಿಕಲ್ಪನೆಗಳು. ಹಾಗೆ ನೋಡಿದರೆ ರುದ್ರ ದೇವನಲ್ಲ. ಋಗ್ವೇದದ ಪ್ರಕಾರ ಅವನು ಅಸುರ ಮತ್ತು ಅಗ್ನಿ ಸ್ವರೂಪನು. `ಅಗ್ನಿರ್ವೈ ರುದ್ರಃ....' ಹಾಗೂ `ತ್ವಂ ಅಗ್ನೇ ರುದ್ರಃ ಅಸುರಃ'.....ಎಂಬ ಋಕ್‌ಗಳು ರುದ್ರಾಧ್ಯಾಯದಲ್ಲಿವೆ. ಪ್ರಾಚೀನ ಆರ್ಯರ ನಂಬಿಕೆಯ ಪ್ರಕಾರ ವೇದಗಳು ಮೂರೆ. ಅಥರ್ವಣ ವೇದವನ್ನು ಬಹಳ ದಿನಗಳ ಕಾಲ ವೇದವೆಂದು ಮಾನ್ಯ ಮಾಡಿರಲೇ ಇಲ್ಲ. ಮಹಾಭಾರತದ ಆರಂಭದಲ್ಲೇ `ವೇದತ್ರಯ ಮೂರ್ತಯಃ ತ್ರಿಪುರುಷಾಃ ಎಂಬ ಮಾತು ಬಳಸಲ್ಪಟಿದ್ದು, ಆ ಕಾಲಕ್ಕೆ ಮೂರು ವೇದಗಳಿಗಷ್ಟೆ ಮಾನ್ಯತೆ ಇತ್ತೆಂಬುದನ್ನು ಅದು ಸ್ಪಷ್ಟವಾಗಿ ಸೂಚಿಸುತ್ತದೆ.


RudraShiva

 

೧೦,೫೦೦ಕ್ಕೂ ಹೆಚ್ಚಿನ ಋಕ್‌ಗಳ ೧,೦೧೭ ಸೂಕ್ತಗಳಿರುವ ಋಗ್ವೇದದ ಹತ್ತು ಮಂಡಲಗಳಲ್ಲಿ ಎರಡರಿಂದ ಏಳರವರೆಗಿನ ಮಂಡಲಗಳನ್ನು ಮಾತ್ರವೇ ಪ್ರಾಚೀನವೆಂಬುದಾಗಿ ವಿದ್ವಾಂಸರು ವಿವಿಧ ಬಗೆಯ ಸಂಶೋಧನೆಗಳಿಂದ ನಿರ್ಧರಿಸಿದ್ದಾರೆ. ರಾಜೇಶ್ ಕೊಚ್ಚಾರ್ ಎಂಬ ವಿದ್ವಾಂಸ/ವಿಜ್ಞಾನಿಯ ಪ್ರಕಾರ ಕ್ರಿ.ಪೂ. ೧೭೦೦ ರಿಂದ ಕ್ರಿ.ಪೂ. ೯೦೦ವರೆಗಿನ ಅವಧಿಯನ್ನು ತ್ರಯೀ ವೇದಗಳ ಸೃಷ್ಟಿ ಕಾಲವೆಂದು ನಾವು ನಿರ್ಧರಿಸಬಹುದಾಗಿದೆ. ಅದರಲ್ಲೂ ಋಗ್ವೇದದ ಪ್ರಾಚೀನ ಮಂಡಲಗಳ ರಚನೆಯ ಕಾಲವಂತೂ ಬಹುಶಃ ಪ್ರಾರಂಭದ ೨೦೦-೩೦೦ ವರ್ಷಗಳ ಅವಧಿಯದೆಂದೇ ನಾವು ತರ್ಕಿಸಬೇಕಿದೆ. ಯಾಕೆಂದರೆ ಆ ಪ್ರಾಚೀನ ಮಂಡಲಗಳಲ್ಲಿಪ್ರಸ್ತಾಪಿಸಲ್ಪಟ್ಟಿರುವ ಭೌಗೋಳಿಕ ವಿವರಗಳು ಸಿಂಧೂ ನದಿ ನಾಗರಿಕತೆಯ ಪ್ರದೇಶಕ್ಕಿಂತಲೂ ಆಫ್ಘಾನಿಸ್ತಾನದ ಭೌಗೋಳಿಕತೆಯನ್ನೆ ಹೆಚ್ಚು ನಿಖರವಾಗಿ ಹೋಲುತ್ತವೆ. ಉದಾಹರಣೆಗೆ ರುದ್ರನಿಗೆ ಸೋಮನು 'This is your portion, O Rudra...!with this food pass by beyond the Mujavat' ಎಂದು ಹೇಳುತ್ತಾನೆ. ಮೈತ್ರಾಯಿಣೀ ಸಂಹಿತೆಯಲ್ಲೂ ಇದೇ ಅರ್ಥದ ಮಾತಿದೆ. ನಮಗೆ ಇಲ್ಲಿ ಮುಖ್ಯವಾಗುವುದು ರುದ್ರನಿಗೂ ಮುಜಾವತ್ ಪರ್ವತಗಳಿಗೂ ಇರುವ ಸಂಬಂಧದ ಅಂಶವೇ.
 

ಮುಜಾವತ್ ಪರ್ವತ ಶ್ರೇಣಿಗಳಿರುವುದು ಅಫ್ಘಾನಿಸ್ತಾನದಲ್ಲಿ. (ಅಫ್ಘಾನಿಸ್ತಾನದ ಮುಜಾಹಿದ್ದೀನ್‌ಗಳೂ ಇಲ್ಲಿ ನೆನಪಾಗುತ್ತಾರೆ.) ಋಗ್ವೇದದಲ್ಲಿ ರುದ್ರನಿಗೆ ಈ ಮಾತನ್ನು ಹೇಳುತ್ತಿರುವವನು ಸೋಮ. ಸೋಮ ಎಂಬುದು ಒಂದು ನಾಮಪದವಾಗಿದ್ದರೂ ಅದು ಒಂದು ವ್ಯಕ್ತಿಯಲ್ಲ; ಬದಲಿಗೆ ಇಡೀ ಋಗ್ವೇದದಲ್ಲಿ ಅತೀ ಹೆಚ್ಚಿನ ಋಚೆಗಳ ಮೂಲಕ ವರ್ಣಿಸಲ್ಪಟ್ಟಿರುವ ಮಾದಕEphedra ಪಾನೀಯವನ್ನೀಯುವ 'Ephedra' ಎಂಬ ಸಸ್ಯವಿಶೇಷ. ಈ ಸಸ್ಯ ಇಡೀ ಜಗತ್ತಲ್ಲಿ ಬೆಳೆಯುವುದು ಕೇವಲ ಆಫ್ಘಾನಿಸ್ತಾನದ ಮುಜಾವತ್ ಪರ್ವತಗಳ ತಪ್ಪಲಿನಲ್ಲಿ ಮಾತ್ರ.
 

ಆಫ್ಘಾನಿಸ್ತಾನದಿಂದ ಪಾರ್ಸಿಗಳಿದ್ದ ನೆರೆಯ ಇರಾನಿಗೂ ಹಾಗೂ ಇರಾನಿನ ಉತ್ತರಕ್ಕಿರುವ ಮುರ್ಗಾಬ್-ಅಮು ನದಿ ಬಯಲುಗಳವರೆಗೂ ಸೋಮ ಸಂಸ್ಕೃತಿ ಅದರ ಮಾದಕತೆಯ ಕಾರಣದಿಂದಾಗಿ ಜನಪ್ರಿಯಗೊಂಡು ಹಬ್ಬಿತ್ತು. ಇವತ್ತಿನ ಆಧುನಿಕ ಔಷಧಿಗಳಲ್ಲೂ 'Pseudo-Ephedra' ಎಂಬ ಮತ್ತಿನ ರಾಸಾಯನಿಕ ಅಂಶಗಳನ್ನು ಬಳಸಿರುವುದರ ಬಗ್ಗೆ ಅವುಗಳ ಲೇಬಲ್‌ನಲ್ಲಿ ನಾವು ಗಮನಿಸಬಹುದು.
 

ಇಂದಿಗೂ ಆಫ್ಘಾನಿಸ್ತಾನ ಮಾದಕ ವಸ್ತಗಳನ್ನು ಬೆಳೆದು, ಅದರ ಹಣದಿಂದಲೆ ಮುಸ್ಲಿಂ ಮೂಲಭೂತವಾದಿಗಳನ್ನು ಪೋಷಿಸುತ್ತಿದೆಯೆಂಬ ಆಗೀಗಲ ವರದಿಗಳನ್ನೂ ನಾವಿಲ್ಲಿ ನೆನಪಿಸಿಕೊಳ್ಳಬಹುದು. ಮಧ್ಯ ಏಷಿಯಾದ ಸೈಪ್ಪಿಸ್ (ಓಲ್ಗಾ) ನದಿ ಪ್ರದೇಶದಿಂದ ತಮ್ಮ ಕುದುರೆಗಳು ಮತ್ತು ಗೋವುಗಳಿಗೆ ಹುಲ್ಲುಗಾವಲುಗಳನ್ನು ಅರಸುತ್ತ ದಕ್ಷಿಣದತ್ತ ಬಂದ ಆರ್ಯರು ಕ್ರಮೇಣ ಮುಗಾಬ್-ಅಮು ನದಿ ಬಯಲುಗಳು, ಇರಾನ್ (ಆಗಿನ ಪರ್ಷಿಯಾ), ಆಫ್ಘಾನಿಸ್ತಾನಗಳ ಮೂಲಕ ಸಿಂಧು ನದಿಯ ಬಯಲಿಗೆ ಬಂದವರೆಂಬುದಕ್ಕೆ ಅವರ ಈ ಯಾನದ ಉದ್ದಕ್ಕೂ ಯಜ್ಞಕುಂಡಗಳು ಹಾಗೂ ಸೋಮರಸವನ್ನು ತಯಾರಿಸುವ ಸಾಧನಗಳ ಪುರಾತತ್ವ ಅವಶೇಷಗಳ ಸಾಕ್ಷಿ ಹಾಗು ಆಧಾರಗಳಿವೆ. ಇದರ ಜೊತೆಗೆ ನಾವು ಗಮನಿಸಲೇಬೇಕಾದ ಮುಖ್ಯ ಅಂಶವೆಂದರೆ, ಬಯಲು ಪ್ರದೇಶದಲ್ಲಂತೂ ಸೋಮಸಸ್ಯ ಬೆಳೆಯುವುದೇ ಇಲ್ಲವೆಂಬುದು ಹಾಗೂ ಹರಪ್ಪ, ಮೊಹೆಂಜೊದಾರೊ ನಾಗರಿಕತೆ ಬಯಲಿನ ನಾಗರಿಕತೆಯೆ ಆಗಿದೆಯೆನ್ನುವುದು. ಅದಷ್ಟೇ ಅಲ್ಲದೆ ಹರಪ್ಪ ನಾಗರಿಕತೆಯಲ್ಲಿ ಸೋಮಸಸ್ಯದ ಯಾವೊಂದು ಕುರುಹು, ಪುರಾತತ್ವ ಸಾಕ್ಷಿಗಳು ಕೂಡ ಇದುವರೆವಿಗೂ ಸಿಕ್ಕಿಯೇ ಇಲ್ಲ. ಸಿಗುವುದು ಸಾಧ್ಯವೂ ಇಲ್ಲ. ಈ ಆಧಾರದ ಮೇಲೆ ನಾವು ಮಾತನಾಡಬಹುದಾದರೆ ಸೋಮ ಮತ್ತು ಯಜ್ಞದ ಜೊತೆಗೆ ತಳುಕು ಹಾಕಿಕೊಂಡಿರುವ `ರುದ್ರ' ಎಂಬ ಅಸುರೀ ಅಗ್ನಿ ದೈವತಸ್ವರೂಪದ ಪರಿಕಲ್ಪನೆ ಕುಡಿಯೊಡೆದಿದ್ದೆ ಆಫ್ಘಾನಿಸ್ತಾನದಲ್ಲಿ ಎಂಬುದು ವಾದಕ್ಕೆ ಅವಕಾಶವಿಲ್ಲದಂತೆ ತನ್ನಿಂತಾನೆ ಸಾಬೀತಾಗುವುದು.
 

ಅಂದರೆ, ಆಫ್ಘಾನಿಸ್ತಾನದಲ್ಲಿ ರುದ್ರನ ಪರಿಕಲ್ಪನೆಯನ್ನು ರೂಪಿಸಿದ ಋಗ್ವೇದದ ಆರ್ಯ ಋಷಿಗಳಿಗೆ ಆ ಹೊತ್ತಿಗೆ ಭಾರತದ ಶಿವನ ಕಿಂಚಿತ್ತು ಕಲ್ಪನೆಯು ಕೂಡ ಇರಲಿಲ್ಲ. ಹಾಗಿರುವಾಗ ಶಿವ- ರುದ್ರರು ಒಂದೇ ಮೂಲದವರು ಹೇಗಾಗುತ್ತಾರೆ?
 

`ಶಿವ' ಎಂಬುದು ದ್ರಾವಿಡ ಭಾಷಾ ಮೂಲದ ಹೆಸರು. `ರುದ್ರ' ಎಂಬುದು ಆರ್ಯಭಾಷಾ ಮೂಲದ ಹೆಸರು. ಈ ಎರಡೂ ಪದ ನಿಷ್ಪತ್ತಿಯಲ್ಲಿನ ಅರ್ಥಸಮೀಕರಣದ ಮೂಲಕ, ಅವರ ನಡುವೆ ಇದ್ದಿರಬಹುದಾದ ಕೆಲವು ಸಾಮಾನ್ಯ ಅಂಶಗಳ ಹೋಲಿಕೆಯ ಮೂಲಕ ಇಬ್ಬರನ್ನೂ ಒಬ್ಬರೇ ಎಂದು ಸಮರ್ಥಿಸುವುದು ಸತ್ಯ ಸಂಶೋಧನೆಯಾಗುವುದಿಲ್ಲ. ಅನಂತರದಲ್ಲೆಂದೊ ಈ ಎರಡೂ ದೈವತಗಳ ಸಮೀಕರಣ ನಡೆದುಹೋಯಿತೆಂದಾಕ್ಷಣ ಶಿವ ರುದ್ರನಾಗುವುದು ಸಾಧ್ಯವಿಲ್ಲ. ಮೂಲ ಸತ್ಯ ಸುಳ್ಳಾಗುವುದೂ ಸಾಧ್ಯವಿಲ್ಲ. ಈಗಾಗಲೆ ನಾವು ಗಮನಿಸಿರುವಂತೆ ಋಗ್ವೇದದಲ್ಲೆಲ್ಲೂ ಶಿವನ ಹೆಸರಿನ ಪ್ರಸ್ತಾಪವು ಕೂಡ ಇಲ್ಲ; ಬದಲಿಗೆ ರುದ್ರಾಧ್ಯಾಯವೆ ಇದೆ. ನನ್ನ ಗ್ರಹಿಕೆಯ ಪ್ರಕಾರ ಇವನು `ರುದ್ರ'ನಲ್ಲ. ಋಗ್ವೇದದ ಭಾಷೆಗೆ ವಿಶಿಷ್ಟವಾದ `ಋ'ಕಾರದ `ಋದ್ರ', ಈ ಋಕಾರ (ಋ)ವೈದಿಕಾರ್ಯರ ದಾಯಾದಿಗಳಾದ ಝೆಂಡ್ ಅವೆಸ್ತಾದ ಪಾರ್ಸಿಗಳ ಅವೆಸ್ತಾದಲ್ಲೂ ಇಲ್ಲ. (ಈ ಋಕಾರವನ್ನು ಕನ್ನಡ ವರ್ಣಮಾಲೆಯಿಂದ ತೆಗೆಯಬೇಕೆಂಬ ಬಗ್ಗೆ ಡಾ.ಕೆ.ವಿ.ನಾರಾಯಣ್ ಅವರು ಅತ್ಯಂತ ಸ್ಪಷ್ಟ ಹಾಗೂ ಖಚಿತ ವಿವರಣೆಯನ್ನು `ನಮ್ಮ ಕನ್ನಡ' ಪತ್ರಿಕೆಯ ೫೧ ನೆಯ ಸಂಚಿಕೆಯಲ್ಲಿ ಲೇಖನ ಬರೆದಿರುವುದನ್ನು ಗಮನಿಸಬಹುದು).
 

ಋಗ್ವೇದದಲ್ಲಿ ಋಕಾರದ ಬಳಕೆ ಒಂದು ವ್ಯಸನ/ವ್ಯಾಮೋಹವೆಂಬತೆ ಕಂಡುಬರುತ್ತದೆ. ಉದಾಹರಣೆಗೆ ಋಕ್, ಋಚೆ, ಋತ, ಋತು, ಋಷಿ ಇತ್ಯಾದಿ. ಬಹುಶಃ ಈ ಸಾಲಿಗೆ ಸೇರುವಂತಹುದೆ ಈ ಋದ್ರ ಕೂಡ. ಅಲಪಿಯಲ್ಲಿನ ಈ `ಋದ್ರ' ಲಿಪಿಬದ್ಧಗೊಂಡಾಗ `ರುದ್ರ' ನಾಗಿರುಬಹುದಾದ ಸಾಧ್ಯತೆಗಳಿವೆ. ಈ ಕುರಿತು ಇನ್ನಷ್ಟು ಅಧ್ಯಯನ ಅಗತ್ಯವೆನಿಸುತ್ತದೆ. ಋಗ್ವೇದದಲ್ಲಿ `ಸೋಮ'ದಷ್ಟೆ ಪ್ರಾಚೀನವಾದ ರುದ್ರನ ಕುರಿತ ಅನೇಕ ವರ್ಣನೆಗಳು ಋಗ್ವೇದದ ರುದ್ರ ಶಿವನಲ್ಲವೆಂಬ ಅಂಶವನ್ನು ಸ್ಪಷ್ಟಪಡಿಸುವಂತಿವೆ.
 

ರುದ್ರ ಒಬ್ಬನಲ್ಲ; ಹದಿನೆಂಟು ಮಂದಿಯಿದ್ದಾರೆ. ಮತ್ತೊಂದೆಡೆ ಹನ್ನೊಂದು ಮಂದಿ. ಈ ಅಷ್ಟಾದಶ ಹಾಗೂ ಏಕಾದಶ ರುದ್ರರಲ್ಲಿ ಶಿವ ಯಾರು? ರುದ್ರ ಮೇಧಾಪತಿ. ಅಂದರೆ ಯಜ್ಞದ (ಬಲಿಯ) ಒಡೆಯ. ಆ ಮೂಲಕ ಅಗ್ನಿಯ ಒಡೆಯ. ಶಿವನಾದರೂ ಅಗ್ನಿಗೆ ವಿರುದ್ಧವಾದ ಜಲಮೂಲದ ಗಂಗಾಧರ. ಅದಷ್ಟೆ ಅಲ್ಲದೆ ದಕ್ಷ ಯಜ್ಞನ ಧ್ವಂಸಕ. ರುದ್ರ ಗಾಥಾಪತಿ. ಈ ಗಾಥಾ ಎನ್ನುವುದು ಪಾರ್ಸಿಗಳ ಪವಿತ್ರ ಗ್ರಂಥವಾದ ಅವೆಸ್ತಾದ ಪ್ರಾಚೀನ ಭಾಗವೆ ಆಗಿದೆ. ಅಲ್ಲಿ ಝರತುಷ್ಟನೇ ಗಾಥಾಪತಿ. ಶಿವನಿಗೂ ಈ ಗಾಥಾ, ಝರತುಷ್ಟ್ರನಿಗೂ ಎಲ್ಲಿಗೆಲ್ಲಿಯ ಸಂಬಂಧ? ರುದ್ರ ಗೋಗ್ನ. ಅಂದರೆ ಪಶುವಧಕ. ಶಿವ ಪಶುಪತಿ. (ಕೇರಳದ ಮಾಂಸಾಹಾರಿ ಹೋಟೆಲುಗಳಿಗೆ ಇಂದಿಗೂ ಅಶೈವಂ ಹೋಟೆಲುಗಳೆಂದೆ ಕರೆಯಲಾಗುತ್ತದೆ.) ರುದ್ರನಿಗೆ ಆಗಮೋಕ್ತ ಗುಡಿಪೂಜೆಯಿಲ್ಲ. ಶಿವ ಪೂಜನ ಸಂಸ್ಕೃತಿಯ ಮೂಲಪುರುಷನಾಗಿದ್ದಾನೆ. ರುದ್ರ ಉಷಸ್ ಮತ್ತು ಪ್ರಜಾಪತಿಯ ಮಗ. ಶಿವನಿಗೆ ಹೀಗೆ ತಂದೆತಾಯಿಗಳಿಲ್ಲದ ಆದಿಮ ದೈವತದ ಸ್ವರೂಪವಿದೆ.
 

ಋಗ್ವೇದದ ಪ್ರಕಾರವೆ ರುದ್ರನನ್ನು ವರಾಹದೊಂದಿಗೆ ಸಮೀಕರಿಸುವ ಮೂಲಕ ರುದ್ರ ಮತ್ತು ವಿಷ್ಣು-ಇಬ್ಬರೂ ಒಬ್ಬನೆ ಸರ್ವಶಕ್ತನ ಎರಡು ಅಭಿವ್ಯಕ್ತಿಗಳು ಎಂಬುದೂ ಪ್ರಕಟವಾಗುತ್ತದೆ. ವೈದಿಕಾರ್ಯರ ಪರಮ ದೈವತಗಳಲ್ಲೊಬ್ಬನಾದ ಇಂದ್ರನ ತಮ್ಮ ಉಪೇಂದ್ರನಾದ ವಿಷ್ಣುವಿನ ಮಗದೊಂದು ರೂಪವೆ ರುದ್ರನಾದಾಗ ಅಂತಹ ರುದ್ರ ಶಿವನೆಂದು ಹೇಗೆ ಒಪ್ಪಿಕೊಳ್ಳಲಾದೀತು? ತೈತ್ತರೀಯ ಅರಣ್ಯಕದಲ್ಲಿ ರುದ್ರನನ್ನು ಸೂರ್ಯ ಪುರುಷನೊಂದಿಗೂ ಸಮೀಕರಿಸಲಾಗಿದೆ. ಅಂದರೆ ಅಗ್ನಿಯ ಲೋಕರೂಪವಾದ ಸೂರ್ಯನಿಗೂ, ಜಲಸಂಸ್ಕೃತಿಯ ಶಿವನಿಗೂ ಸಂಬಂಧ ಏರ್ಪಡುವುದಾದರೂ ಹೇಗೆ ಸಾಧ್ಯ? ರುದ್ರನನ್ನು ಋಗ್ವೇದದ ಅಗ್ನಿಯೆಂದು ಸಾರುವ ಸ್ಪಷ್ಟ ಋಕ್‌ಗಳಿವೆ. ಆ ಅಗ್ನಿಯ ನೀಲಿಜ್ವಾಲೆಗಳ ರುದ್ರನ ಜಟೆಗಳು ಎಂದು ವರ್ಣಿಸಿ- ಹಾಗಾಗಿಯೆ ರುದ್ರನನ್ನು `ಕಪರ್ದಿನಿ' ಎಂದು ಸಂಬೋಧಿಸಲಾಗಿದೆ.
 

ಋಗ್ವೇದದ ಋಷಿಗಳು ಮತ್ತೂ ಮುಂದುವರೆದು ರುದ್ರ ಸಹಸ್ರಾಕ್ಷನೆಂದೂ, ವಜ್ರಾಯುಧಧಾರಿಯೆಂದೂ ವರ್ಣಿಸಿ ಇಂದ್ರನೊಂದಿಗೆ ಸಂಗೋಪಿತಗೊಳಿಸುತ್ತಾರೆ. ಇಲ್ಲಿಗೆ ಶಿ-ರುದ್ರರು ಒಂದೆ ಎಂಬ ಪರಿಕಲ್ಪನೆ ಛಿದ್ರವಾದಂತೆಯೇ ಸರಿ. ರುದ್ರನೆ ಆರ್ಯಮನ್, ವರುಣ! ದ್ರಾವಿಡ ಶಿವ ಆರ್ಯಮನ್ ಹೇಗಾದಾನು? ತಾನೇ ಆರ್ಯಮನ್ ಆಗಿರುವ ಇಂದ್ರ, ವರುಣ, ವಿಷ್ಣು ಹಾಗೂ ಅಗ್ನಿಸ್ವರೂಪಿ ರುದ್ರ ದಕ್ಷನ ನಿರೀಶ್ವರ ಯಾಗದ ಯಜ್ಞಬೆಂಕಿಯನ್ನು ತುಳಿಯುವುದು ಅಥವಾ ತುಳಿಸುವುದನ್ನಾದರೂ ಕಲ್ಪಿಸಿಕೊಳ್ಳುವುದು ಸಾಧುವೆ? ಸೂರ್ಯನು ಋತದ ಪ್ರಕಾಶಮಾನ ಮುಖ.
 

ಆರ್ಯರಿಗಾಗಿ ಋತುವು ಸಮಿತ್ತುಗಳಿಂದ ಸೃಷ್ಟಿಸಿದ ಋತಜ್ವಾಲೆಯೆ ಅಗ್ನಿ. ಋತಜ್ವಾಲೆಯ ಅಗ್ನಿಸ್ವರೂಪನು ಯಾವನೊ ಅವನೇ ಋದ್ರ! ಋತದ (Truth=ಸತ್ಯ)ಅಧಿದೇವರು ವರುಣ. ಋದ್ರನೆ ವರುಣ ಸ್ವರೂಪಿ. ಋಗ್ವೇದದ ಕಾಲದಲ್ಲಿಯೆ ವರುಣನ ಶಕ್ತಿಮೂಲವಾದ ಋತದ ಸಾರ್ವಭೌಮತ್ವವು ಪತನಗೊಂಡಿತು. ಪತನಾನಂತರದಲ್ಲಿ ಅವೆಸ್ತಾದಲ್ಲಿ ದುಷ್ಟಶಕ್ತಿಯಾಗಿ ಪ್ರತಿ ಬಿಂಬಿಸಲ್ಪಟ್ಟಿರುವ ಇಂದ್ರನೆ ಪ್ರಮುಖ್ಯತೆಗೇರಿದ. ಅನೃತದ ಹರಿಶ್ಚಂದ್ರ ಇಂದ್ರ, ವಿಷ್ಣುಗಳೆ ಋತೋತ್ತರದಲ್ಲಿ ಪ್ರಮುಖರಾದಂತೆಯೆ, ಸಹಜವಾಗಿಯೆ ಋತದ ಅಧಿದೈವತಗಳಾದ ವರುಣ ಹಾಗೂ ಋದ್ರರ ತೆಗಳಿಕೆಗಳೂ ನಡೆದವು. ಅದರ ಜೊತೆಗೆ ಋದ್ರನನ್ನು ದ್ರಾವಿಡ ಶಿವನೊಂದಿಗೆ ಸಮೀಕರಿಸಿದ ಮೇಲಂತೂ ಋದ್ರನ ಹೀಯಾಳಿಕೆ ಹೆಚ್ಚಿತೆನ್ನಬಹುದು. ಶ್ರುತದ ಋದ್ರನಿಗೆ ಸ್ತುತಿಗಳಿವೆ. ಆದರೆ ಸೈಂಧವೋತ್ತರ `ಶಿವಸಮೀಕರಣದ ರುದ್ರ'ನಿಗೆ ನಿಂದನೆಗಳಿವೆ. ಅದು ಯಾವ ಹಂತ ತಲುಪಿತೆಂದರೆ, ಅಗ್ನಿಯೆ ತಾನಾದ ಋದ್ರ ಯಜ್ಞದ ಹವಿಸ್ಸುಗಳಿಂದಲೆ ವಂಚಿತನಾದ! `ಯಜ್ಞಕ್ಕಾಗಿ ಬರಮಾಡಿಕೊಳ್ಳುವ ಇಂದ್ರಾದಿ ಮುಖ್ಯ ದೇವತೆಗಳೊಡನೆ ರುದ್ರನಿಗೆ ಹವಿಸ್ಸು ದೊರೆಯುವುದಿಲ್ಲ. ಯಜ್ಞದ ಕೊನೆಗೆ ಅಲ್ಲಿ ಹರವಿದ ಸಮಿತ್ತು, ದರ್ಭೆಗಳನ್ನೆ ಆಹುತಿ ಹಾಕಿ `ರುದ್ರಾಯ ಪಶುಪತೆಯೆ ಸ್ವಾಹಾ' ಎಂದು ಅದರ ದೋಷ ತೊಳೆದುಕೊಳ್ಳಲು ಕೈ ತೊಳೆದುಕೊಳ್ಳುವರು. ಶಿವದೇವಾಲಯದಲ್ಲಿ ಅರ್ಚಕರಾಗಿರುವುದೂ ಬ್ರಾಹ್ಮಣರಲ್ಲಿ ಅಷ್ಟು ಪ್ರಶಸ್ತವಾದುದಲ್ಲವೆಂಬ ಅರಿಷ್ಟಕ್ಕೆ ಕಾರಣವೆಂಬ ತಿಳಿವಳಿಕೆಯಿದೆ.' (ಶಂಭಾ: ಶಿವರಹಸ್ಯ). ಬ್ರಾಹ್ಮಣ ಗ್ರಂಥಗಳಲ್ಲಂತೂ ರುದ್ರನನ್ನು ಋಗ್ವೇದಕ್ಕಿಂತಲೂ ಹೆಚ್ಚು ನಿಕೃಷ್ಟವಾಗಿ ಚಿತ್ರಿಸಿ ದನಗಡಕ, ಜನಗಡಕನೆಂದು ಹಸಿದು ಹಾತೊರೆವ ತೋಳಗಳಿಗೆ ಹೋಲಿಸಲಗಿದೆ. ರುದ್ರನನ್ನು ಪ್ರಾರ್ಥಿಸಿದ ನಂತರ ನೀರಿನಿಂದ ತೊಳೆದುಕೊಂಡು ಪವಿತ್ರರಾಗಬೇಕೆಂದು ಶಾಂಖ್ಯಾಯನ ಗೃಹ್ಯ ಸೂತ್ರ ನಿಯಮ ವಿಧಿಸಿದೆ. ಋಗ್ವೇದದ ರುದ್ರಾಧ್ಯಯದದಲ್ಲೆ ರುದ್ರನನ್ನು `ದೇವಾ ನೀನು ಕಳ್ಳರೊಡೆಯನು, ಸುಳ್ಳರಲಿ ಸುಳ್ಳನು, ವಂಚಕರಲ್ಲಿ ವಂಚಕನು....' (ಸ್ತೇನಾನಾಂಪತಯೇನಮಃ, ವಂಚತೇ ಪರಿವಂಚತೇ ಸ್ತಾಯೂನಾಂ ಪತಯೇನಮಃ.....) ಎಂದು ಹೀಯಾಳಿಸಿದ್ದಾರೆ.
ಸಾಯಣಾಚಾರ್ಯರಿಂದ ಮೊದಲ್ಗೊಂಡು ಮ್ಯಾಕ್‌ಡೊವೆಲ್ಲರವರೆಗೂ ಇದು ಉತ್ತರವೇ ಸಿಗದ ಪ್ರಶ್ನೆಯಾಗಿ ತೊಡಕಾಗಿ ಕಾಡಿದೆ.
 

ಅಗ್ನಿಗೂ-ನೀರಿಗೂ ಎಷ್ಟು ವಿರೋಧವಿದೆಯೊ ಅಷ್ಟೇ ವೈರುಧ್ಯಗಳು ಋಗ್ವೇದದ ಋದ್ರನಿಗೂ-ಶಿವನಿಗೂ ನಡುವೆ ಇವೆ. ಋದ್ರ ಋಗ್ವೇದದ ಸೋಮದಿಂದ ಸೋಮಶೇಖರನಾದ. ಆದರೆ, ಶಿವ ಈ ನೆಲದ ಚಂದ್ರವಂಶ ಹಾಗೂ ಚಂದ್ರ ಪಂಥಗಳ ಹಿನ್ನಲೆಯಲ್ಲಿ ಚಂದ್ರಶೇಖರನಾದ. ಇವರಿಬ್ಬರ ಸಮೀಕರಣದ ನಂತರ ಸೋಮವೇ ಚಂದ್ರುವಾಗಿ ಶಿವ-ರುದ್ರರ ಸಮನ್ವಯ ಪೂರ್ಣಗೊಂಡಿತು. ಸೂರ್ಯ-ಚಂದ್ರರನ್ನು ಒಂದೇ ಎಂದು ಭಾವಿಸುವುದರಷ್ಟೆ ಪ್ರಮಾಣದ ಪ್ರಮಾದ ಶಿವ-ರುದ್ರರನ್ನು ಒಂದೇ ಎಂದು ತಿಳಿಯುವುದು.
 

ಇನ್ನಷ್ಟು

ಕನ್ನಡಿಗರಿಗೆ ಇಂಗ್ಲಿಷ್ ಬೇಕು

ಕೋಲಾರ-ದಿಕ್ಕೆಟ್ಟ ನದಿಗಳ ನೆಲದಲ್ಲಿ..!!

ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಒಕ್ಕಲಿಗರ ಒಡ್ಡೋಲಗ

ತೃತೀಯ ಶಕ್ತಿ ಇಲ್ಲದ ಸ್ಥಿತಿ ಅಪಾಯಕಾರಿ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com