|
ಕಂಪ್ನಿ ಬಂಡಿಯ ನೊಗ ಹೊತ್ತ ಮಾಲತಿ ಸುಧೀರ್
ಚಿತ್ರಗಳಲ್ಲಿ ವಿಲನ್ ಆಗಿ ನಟಿಸುತ್ತಿದ್ದ ಅವರು ನಿಜ ಬದುಕಿನಲ್ಲಿ ಹೀರೋ
ಆಗಿದ್ದರು
-ಡಿ.ಸುಮನಾ ಕಿತ್ತೂರು
ಚಿತ್ರರಂಗದಲ್ಲಿದ್ದಾಗಲೂ ರಂಗಭೂಮಿ ನಂಟನ್ನು ಕಳಚಿಕೊಳ್ಳದ
ಸುಧೀರ್ ತಮ್ಮದೇ ಆದ `ಕರ್ನಾಟಕ ಕಲಾ ವೈಭವ' ತಂಡ
ಕಟ್ಟಿಕೊಂಡು ಐವತ್ತಕ್ಕೂ ಹೆಚ್ಚು ಕಲಾವಿದರನ್ನು
ಪೋಷಿಸುತ್ತಿದ್ದರು. ಅವರ ಅಕಾಲ ಕಣ್ಮರೆಯಿಂದ
ತತ್ತರಿಸಿಹೋದವರೆಂದರೆ, ಆ ಕಂಪನಿಯ ಕಲಾವಿದರು. ನಟ
ಸುಧೀರ್ ಇಲ್ಲದ ಬದುಕಿನ ಚಿತ್ರಣವನ್ನು ಅವರ ಪತ್ನಿ
ಮಾಲತಿಯವರು ನೀಡಿದ್ದಾರೆ.
ಕನ್ನಡ ಚಿತ್ರರಂಗದ ಕಂಡ ಧೀಮಂತ ಖಳನಾಯಕ ಸುಧೀರ್.
ವಜ್ರಮುನಿ, ತೂಗುದೀಪ ಶ್ರೀನಿವಾಸ್, ಶಕ್ತಿ ಪ್ರಸಾದ್, ಸುಂದರ
ಕೃಷ್ಣ ಅರಸ್‌ರಂಥ ಅತಿರಥರು ಚಿತ್ರರಂಗಕ್ಕೆ
ಹಳಬರಾಗತೊಡಗಿದಂತೆ ಸುಧೀರ್, ದೇವರಾಜ್ ಥರದವರು
ಅವರುಗಳ ಸ್ಥಾನಕ್ಕೆ ಚಿಗುರಿಕೊಳ್ಳತೊಡಗಿದರು. ಭರವಸೆ
ಹುಟ್ಟಿಸಿದ ಖಳನಟರಲ್ಲಿ ದೇವರಾಜ್ ಏಕಾಏಕಿ ಎದ್ದು ಹೋಗಿ ಹೀರೋ
ಆಗಿಯೂ, ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿಯೂ ಮಿಂಚಿ
ಮಿನುಗಿದರು.
ವಜ್ರಮುನಿ, ಸುಂದರಕೃಷ್ಣ ಅರಸ್.... ಖಳ ಪಾತ್ರ ನಿರ್ವಹಿಸುತ್ತಿದ್ದ
ಕಾಲದಲ್ಲಿ ಅವರ ಪಾತ್ರಗಳ ಧಾಟಿಯೇ ಬೇರೆಯದಾಗಿತ್ತು.
ಅದನ್ನು ಕೊಂಚ ಮಟ್ಟಿಗೆ ಸುಧೀರ್ ಬದಲಾಯಿಸಿಕೊಂಡಿದ್ದರು.
ತಮ್ಮದೇ ಆದ ಶೈಲಿ ರೂಪಿಸಿಕೊಳ್ಳಲೋಸುಗ ತಾವು ನಿರ್ವಹಿಸುತ್ತಿದ್ದ
ವಿಲನ್ ಪಾತ್ರಗಳಿಗೆ ಕಾಮಿಡಿ ಟಚ್ ಕೊಟ್ಟುಕೊಳ್ಳುತ್ತಿದ್ದ ಸುಧೀರ್‌ರ ಆ
ಹೊಸತನವನ್ನೇ ಗಾಂಧಿನಗರಿಗರು ತಪ್ಪಾಗಿ ಅರ್ಥೈಸಿಕೊಂಡರು
ಅನ್ನಿಸುತ್ತದೆ. ಯಾಕೆಂದರೆ, ಇತ್ತೀಚಿನ ಚಿತ್ರಗಳಲ್ಲಿ ವಿಲನ್ ಪಾತ್ರ
ಎಂದರೆ ಅದು ಕಾಮಿಡಿ ಮಾಡುತ್ತಿರುತ್ತದೆ!
ಇನ್ನೂರೈವತ್ತಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಸುಧೀರ್
ಕಣ್ಮರೆಯಾಗಿ ಮೂರು ವರ್ಷಗಳು ತುಂಬಿದೆ.
ಸುಧೀರ್ ಇಲ್ಲದ ಅವರ ಕುಟುಂಬ ಈಗ ಹೇಗಿದೆ ಎನ್ನುವ
ಕುತೂಹಲದೊಂದಿಗೆ ಬೆಂಗಳೂರಿನ ಬಸವೇಶ್ವರನಗರದ ಆ ಮನೆ
ತಲುಪಿದಾಗ, ಬಾಗಿಲಲ್ಲಿ ಕಾದು ನಿಂತಿದ್ದರು ಅವರ ಪತ್ನಿ ಮಾಲತಿ.
ಅದು `ಅಂಬರೀಶ್ ನಿಲಯ' ಮೂರಂತಸ್ತಿನ ಮನೆ, ಕೆಳಗಡೆ ಮತ್ತು
ಮೇಲಗಡೆ ಭಾಗವನ್ನು ಬಾಡಿಗೆಗೆ ನೀಡಿದ್ದಾರೆ. ಮಧ್ಯೆ ಮಹಡಿಯಲ್ಲಿ
ಮಾಲತಿ ತಮ್ಮ ಎರಡು ಗಂಡು ಮಕ್ಕಳೊಂದಿಗೆ ವಾಸವಿದ್ದಾರೆ.
ಸುಧೀರ್ ನಂತರ ಹೇಗೇಗೋ ಆಗಬಹುದಾಗಿದ್ದ ಆ ಕುಟುಂಬವನ್ನು
ಒಂದು ಹಂತದಲ್ಲಿ ಆ ಮನೆಯ ಬಾಡಿಗೆಯಿಂದ ಬಂದ ಹಣವೇ ಕಾಪಾಡಿದೆ.
ಅದೆಲ್ಲ ಸರಿ, ಸುಧೀರ್ ತಮ್ಮ ಮನೆಗ್ಯಾಕೆ `ಅಂಬರೀಷ್ ನಿಲಯ' ಅಂತ
ಹೆಸರಿಟ್ಟರು ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಸುಧೀರ್ ಇಲ್ಲದ
ಅಂಬರೀಷ್ ಚಿತ್ರಗಳೇ ಇಲ್ಲ. ಅಂಬಿ ಸ್ನೇಹ ಗಳಿಸಿಕೊಂಡ ಮೇಲೆ ಸುಧೀರ್
ಅವರೆಲ್ಲಾ ಚಿತ್ರಗಳಲ್ಲೂ ನಟಿಸಿದರು. ಆ ಮೂಲಕ ಗೆಳೆಯನಿಗೆ ಸದಾ
ನೆರವಾಗುತ್ತಿದ್ದರು ಅಂಬಿ. ಆದರೆ, ಒಮ್ಮೆಲೆ ತಮ್ಮ ಕುಟುಂಬ ಒಂದೆಡೆ
ನೆಲೆ ನಿಲ್ಲಲು ಗೂಡು ಮಾಡಿಕೊಳ್ಳಬೇಕು ಅಂತ ಸುಧೀರ್ ಹೊರಟಾಗ,
ಆ ಸಂದರ್ಭದಲ್ಲಿ ಅನಾಮತ್ತು ಐವತ್ತು ಸಾವಿರ ರೂಪಾಯಿ ಕೊಟ್ಟು
ಸುಧೀರ್‌ಗೆ ನೆರವಾಗಿದ್ದರು ಅಂಬರೀಷ್. ೧೯೮೩ರ ಸಮಯವದು.
ಅಂದರೆ ಇಪ್ಪತ್ಮೂರು ವರ್ಷಗಳ ಹಿಂದೆ ಐವತ್ತು ಸಾವಿರ ಅನ್ನೋದು
ದೊಡ್ಡದಲ್ಲವೇ.... ಹಾಗಾಗಿ ತಮ್ಮ ಮನೆಗೆ ಅಂಬರೀಷ್ ಹೆಸರಿರಿಸಿ
ಗೆಳೆಯನ ನೆರವಿಗೆ ಹಾಗೆ ಕೃತಜ್ಞತೆ ಸಲ್ಲಿಸಿದ್ದರು ಸುಧೀರ್
ದಂಪತಿಗಳು.
ಸುಧೀರ್ ಮೂಲತಃ ರಂಗಭೂಮಿ ನಟ. ಸಾಗರದ ಗುಂಡಬಾಳ
ಎನ್ನುವ ಹಳ್ಳಿಯಿಂದ ಬಂದ ಅವರ ನಿಜ ಹೆಸರು ಕೃಷ್ಣಮೂರ್ತಿ.
ಗೆಳೆಯರೆಲ್ಲರಿಗೂ `ಸಾಗರದ ಕಿಟ್ಟಿ' ಎಂದೇ ಪರಿಚಿತರಾಗಿದ್ದ ಅವರು
ಅನಂತರದ ಚಿತ್ರರಂಗಕ್ಕಾಗಿ ಸುಧೀರ್ ಆದರು. ಆ ಹೆಸರಿಗೆ ಕನ್ನಡ
ಚಿತ್ರರಂಗದಲ್ಲಿ ಪ್ರತ್ಯೇಕ ಸ್ಥಾನವನ್ನೂ ಗಿಟ್ಟಿಸಿಕೊಂಡರು.
ನೋಡಲು ಕೆಂಪಗೆ, ಆಜಾನುಬಾಹುವಾಗಿದ್ದ ಮತ್ತು ಸ್ಫುಟವಾದ
ಭಾಷೆಯನ್ನು ಹೊಂದಿದ್ದ ಸುಧೀರ್ ಅವರ ಕಾಲೇಜು ದಿನಗಳಲ್ಲೇ
ನಾಟಕದ ಹುಚ್ಚಿಡಿಸಿಕೊಂಡಿದ್ದರು. ಆ ಕಂಪನಿ-ಈ ಕಂಪನಿ ಅಂತ ಸುತ್ತಾಡಿ,
ಅದರ ಜೊತೆಗೆ `ಮಾಡಿ ಮಡಿದವರು' `ಛಲಗಾರ' ಅಂತನ್ನುವ
ಒಂದೆರಡು ಚಿತ್ರಗಳಲ್ಲಿ ನಟಿಸಿಯೂ ಚಿತ್ರರಂಗದಲ್ಲಿ ಅವಕಾಶ ಸಿಗದೆ
ಬೇಸತ್ತು ನಟಿ ಕಲ್ಪನಾರವರು ಕಟ್ಟಿಕೊಂಡಿದ್ದ `ಮಿನುಗುತಾರೆ'
ಮಿತ್ರಮಂಡಳಿಗೆ ಹೋಗಿ ಸೇರಿಕೊಂಡಿದ್ದರು. ಕಡೆಗೆ ಆ ಕಂಪನಿಯ
ಜೀವಾಳವೇ ಆಗಿ ಹೋಗಿದ್ದ ಸುಧೀರ್ ತಮ್ಮ ಬಾಳ ಸಂಗಾತಿಯನ್ನಾಗಿ
ಮಾಲತಿಯವರನ್ನು ಆರಿಸಿಕೊಂಡದ್ದೂ ಅಲ್ಲೇ.
ಕಲ್ಪನಾರ ಕಂಪನಿ ಹುಬ್ಬಳ್ಳಿಯಲ್ಲಿ ಬೀಡು ಬಿಟ್ಟಿದ್ದಾಗ, ಹದಿನೈದು
ವರ್ಷದ ಮಾಲತಿ ನೃತ್ಯ ಕಲಾವಿದೆಯಾಗಿ ಆ ಕಂಪನಿಗೆ
ಸೇರಿಕೊಳ್ಳುತ್ತಾರೆ. ಅಲ್ಲಿ ಆರಂಭವಾಗುವ ಇವರಿಬ್ಬರ ಸ್ನೇಹ
೧೯೭೭ರಲ್ಲಿ ಮದುವೆಗೆ ತಿರುಗಿದಾಗ, ಅದರ ಪೌರೋಹಿತ್ಯವನ್ನು ಸ್ವತಃ
ಕಲ್ಪನಾರೇ ವಹಿಸಿಕೊಂಡಿದ್ದರಂತೆ.
`ಐದು ಹೆಣ್ಣುಮಕ್ಕಳಿದ್ದ ಬಡ ಕುಟುಂಬ ನನ್ನದಾಗಿತ್ತು. ಗೌಡ
ಸಾರಸ್ವತರಾಗಿಯೂ ತಳವರ್ಗದಿಂದ ಬಂದ ನನ್ನನ್ನು ಮೆಚ್ಚಿ
ಮದುವೆಯಾಗಿದ್ದರು ಸುಧೀರ್. ಕಡೇ ತನಕ ನನ್ನೆಡೆಗೆ
ಅವರದು ಅದೇ ಪ್ರೀತಿ-ಮಮಕಾರ. ಮದುವೆಯಾದ ಮೇಲೆ ನಾನು
ಬಣ್ಣ ಹಚ್ಚುವುದಿಲ್ಲ, ನೆಮ್ಮದಿಯಾಗಿ ಸಂಸಾರ ಮಾಡಿಕೊಂಡಿರುವೆ ಎಂಬ
ಬಯಕೆ ವ್ಯಕ್ತಪಡಿಸಿದಾಗ ಸುಧೀರ್ ನನ್ನ ಆಕಾಂಕ್ಷೆಗಳಿಗೆ
ಎದುರಾಡಲಿಲ್ಲ. ಚಿತ್ರಗಳಲ್ಲಿ ವಿಲನ್ ಆಗಿ ನಟಿಸುತ್ತಿದ್ದ ಅವರು ನಿಜ
ಬದುಕಿನಲ್ಲಿ ಹೀರೋ ಆಗಿದ್ದರು....' ಮಾಲತಿ ಹೀಗೆ ಮಾತು
ಆರಂಭಿಸಿದರು.
`ಭೂಮಿ ತೂಕದ ಹೆಣ್ಣು' ನಾಟಕದ ನಾಯಕಿ ಪಾತ್ರವನ್ನೂ ಮಾಲತಿ
ಬಿಟ್ಟರೆ ಬೇರಿನ್ಯಾರೂ ನಿರ್ವಹಿಸಲು ಸಾಧ್ಯವೇ ಇಲ್ಲ ಅಂತ
ಮಾತನಾಡಿಕೊಳ್ಳುತ್ತದೆ ಉತ್ತರಕರ್ನಾಟಕದ ಮಂದಿ. ದೊಡ್ಡ ದೊಡ್ಡ
ನಾಟಕ ಕಂಪನಿಗಳೇ ಕಣ್ಮುಚ್ಚಿಕೊಂಡಿರುವ ಈ ಸಂದರ್ಭದಲ್ಲಿ ಈ ಮಾಲತಿ
ಸುಧೀರ್ ಮಾತ್ರ ತಮ್ಮದೊಂದು ನಾಟಕ ಕಂಪೆನಿ ಕಟ್ಟಿಕೊಂಡು ಈ
ಕ್ಷಣಕ್ಕೂ ರಾಜ್ಯವ್ಯಾಪಿ ಸುತ್ತಾಡುತ್ತಿದ್ದಾರೆ. ಆ ಮೂಲಕ ತಮ್ಮ ಪತಿಯ
ಕನಸನ್ನು ಜೀವಂತವಾಗಿರಿಸಿದ್ದಾರೆ.
ಚಿತ್ರರಂಗದಲ್ಲಿದ್ದಾಗಲೂ ರಂಗಭೂಮಿ ನಂಟನ್ನು ಕಳಚಿಕೊಳ್ಳದ
ಸುಧೀರ್ ತಮ್ಮದೇ ಆದ `ಕರ್ನಾಟಕ ಕಲಾ ವೈಭವ' ತಂಡ
ಕಟ್ಟಿಕೊಂಡು ಐವತ್ತಕ್ಕೂ ಹೆಚ್ಚು ಕಲಾವಿದರನ್ನು
ಪೋಷಿಸುತ್ತಿದ್ದರು. ಅವರ ಅಕಾಲ ಕಣ್ಮರೆಯಿಂದ
ತತ್ತರಿಸಿಹೋದವರೆಂದರೆ, ಆ ಕಂಪನಿಯ ಕಲಾವಿದರು.
ಇನ್ನೇನು ನಿಂತೇ ಹೋಗಿಬಿಡುತ್ತದೆ ಎನ್ನುವ ಕಂಪನಿಗೆ ಮತ್ತೆ
ಕಾಯಕಲ್ಪ ನೀಡುವಲ್ಲಿ ಮಾಲತಿಯವರ ಶ್ರಮ ಎದ್ದು ಕಾಣುತ್ತದೆ.
`ಯಾವತ್ತೂ ನಮ್ ಕಂಪನಿಯನ್ನು ಮುಚ್ಚಬೇಡಿ.... ಆ
ಕಲಾವಿದರನ್ನು ಬೀದಿಗೆ ದೂಡಬೇಡಿ ...'
ಸುಧೀರ್ ಸದಾ ಕಾಲ ಹೆಂಡತಿಯೊಡನೆ ಹೇಳುತ್ತಿದ್ದ ವಾಕ್ಯ
ಅದಾಗಿತ್ತಂತೆ. ಮದುವೆಯಾದ ಮೇಲೆ ಸಂಪೂರ್ಣವಾಗಿ ಅಡುಗೆ ಮನೆ
ಸೇರಿಕೊಂಡು ಆಗ-ಈಗಲೊಮ್ಮೆ ಅಂತ ಒಂದೊಂದು ಪಾತ್ರ
ನಿರ್ವಹಿಸಿಕೊಂಡು ನೆಮ್ಮದಿಯಾಗಿದ್ದ ಮಾಲತಿಯವರು ನಿಜವಾದ ಅಗ್ನಿ
ಪರೀಕ್ಷೆಗೆ ಒಳಗಾಗಿದ್ದು ಸುಧೀರ್ ಇಲ್ಲದೆ ನಾಟಕ ಕಂಪನಿಯ ಒಡತಿ
ಪಟ್ಟ ಅಲಂಕರಿಸಿದಾಗಲೆ.
`ಈಗ ನಮ್ಮ ಕ್ಯಾಂಪು ಬಾಗಲಕೋಟೆಯಲ್ಲಿದೆ...' ಎಂದ
ಮಾಲತಿಯವರು.
ಸುಧೀರ್‌ರವರೆ ಎಲ್ಲಾ ವ್ಯವಹಾರ ನೋಡಿಕೊಳ್ಳುತ್ತಿದ್ದರಿಂದ ನನಗೆ
ಕಂಪನಿ ಬಗ್ಗೆ ಏನೇನೂ ಗೊತ್ತಿರಲಿಲ್ಲ. ಅವರು ಇದ್ದಕ್ಕಿದ್ದಂತೆ ಒಂದಿನ
ಕಣ್ಮರೆಯಾದರು. ಜೊತೆಗೆ ಕಂಪನಿಯನ್ನು ಯಾವ ಕಾರಣಕ್ಕೂ
ನಿಲ್ಲಿಸಬಾರದು ಅಂತ ಪದೇ ಪದೇ ಹೇಳುತ್ತಿದ್ದರು. ಆ
ಕಾರಣಕ್ಕಾಗಿಯೇ ನಾನು ಕಂಪನಿಯ ಚುಕ್ಕಾಣಿ ಹಿಡಿದೆ.
ತೀರ್ಥಹಳ್ಳಿಯಲ್ಲಿ ಮೊದಲ ಕ್ಯಾಂಪ್ ಮಾಡಿದೆ. ನಾವು
ಹೋಗುವುದಕ್ಕೂ ಕೆಲ ದಿನಗಳ ಹಿಂದೆ ಅಲ್ಲಿ ಜಾತ್ರೆ ಆಗಿದ್ದರಿಂದ
ನಾಟಕದ ಕಂಪನಿಗಳೆರಡು ತಿಂಗಳುಗಟ್ಟಳೆ ಬೀಡುಬಿಟ್ಟಿದ್ದವಂತೆ.
ನಾವಾಡುತ್ತಿದ್ದ ನಾಟಕಗಳನ್ನೇ ಅವು ಫೇಮಸ್ ಮಾಡಿ ಹೋಗಿದ್ದವು.
ಇನ್ನು ನಮ್ಮ ನಾಟಕಕ್ಕೆ ಯಾರು ಬಂದಾರು?
ಕಲೆಕ್ಷನ್ ಇಲ್ಲ, ನಮ್ಮವೂ ಅಂತ ಸ್ವಂತ ಪರಿಕರಗಳಿಲ್ಲ. ಹಾಗಾಗಿ
ನನ್ನದೇ ಎರಡ್ಮೂರು ಲಕ್ಷ ಕೈಬಿಡ್ತು. ಈ ಕಂಪನಿ ಒಡೆತನದ
ನಿರ್ವಹಣೆ ನನ್ನಿಂದ ಸಾಧ್ಯವೇ ಇಲ್ಲ ಅಂತ ತೀರ್ಮಾನಿಸಿ,
ಕಲಾವಿದರನ್ನೆಲ್ಲಾ ಕರೆದು ನನ್ನ ಅಸಹಾಯಕತೆ ತೋಡಿಕೊಂಡು
ಕಂಪನಿ ಮುಚ್ಚಿಬಿಡುವುದಾಗಿ ಪ್ರಕಟಿಸಿದೆ. ಆದರೆ ನನ್ನ ಅದೃಷ್ಟ
ಚೆನ್ನಾಗಿತ್ತು. ಅಲ್ಲೊಬ್ಬರು ಪತ್ರಕರ್ತರು ನನ್ನನ್ನು ಇಂಟರ್‌ವ್ಯೂ
ಮಾಡಲು ಅಂತ ಬಂದಿದ್ದರು. ಅವರು ಮಾತನಾಡಿಸಿಕೊಂಡು ಹೋದ
ಮಾರನೆಯ ದಿನವೇ ಅಲ್ಲಿಯ ಲೋಕಲ್ ಪತ್ರಿಕೆಯಲ್ಲಿ
`ಕಣ್ಣೀರಲ್ಲಿ ತೊಳೆಯುತ್ತಿರುವ ನಮ್ಮೂರ ಸೊಸೆ...' ಅಂತ
ಅವರು ಆರ್ಟಿಕಲ್ ಬರೆದಿದ್ದು ನನಗೆ ಸಹಾಯವಾಯಿತು. ಒಂದಷ್ಟು
ಮಂದಿ ನಮ್ಮ ನಾಟಕ ಕಂಪನಿಗೆ ನೆರವಾಗಲು ಮುಂದೆ ಬಂದರು.
ಅದರಲ್ಲಿ ಹೊದ್ಲ ಹಾಲಪ್ಪ ಎನ್ನುವವರನ್ನು ಮರೆಯುವಂತಿಲ್ಲ. ಐದು
ಹೆಣ್ಣು ಮಕ್ಕಳ ತಂದೆ ಆತ. ಅವರು ತಮ್ಮ ಮನೆಗೆ ಕರೆದು
ನನಗೆ `ಎಷ್ಟು ಸಹಾಯ ಬೇಕಮ್ಮಾ....' ಅಂದರು. `ನಿಮ್ಮಿಷ್ಟ
ಬಂದಷ್ಟು ಕೊಡಿ ಸ್ವಾಮಿ...' ಅಂದೆ ನಾನು ಊಹಿಸಿರಲೂ ಇಲ್ಲ ಅವರು ನನ್ನ
ಕೈಗೆ ಐವತ್ತು ಸಾವಿರವನ್ನಿತ್ತಿದ್ದರು. ಅವರಿವರಿಂದ ಹಾಗೆ ಎರಡು
ಲಕ್ಷದಷ್ಟು ಕಲೆಕ್ಟ್ ಆಗಿತ್ತು. ಕಳೆದು ಹೋಗಿಬಿಡಬಹುದಾಗಿದ್ದ ನಮ್ಮ
ಕಂಪನಿಗೆ ತೀರ್ಥಹಳ್ಳಿ ಮಂದಿ ಇನ್ನೊಂದು ರೀತಿಯಲ್ಲಿ ಜೀವ ನೀಡಿದ್ದರು.
ಅನಂತರ ನಮ್ಮ ಕಂಪನಿ ನ್ಯಾಮತಿಗೆ ಬಂತು. ಅಲ್ಲಿಂದ ನಾನೇ
ಪ್ರಮುಖ ಪಾತ್ರ ನಿರ್ವಹಿಸತೊಡಗಿದೆ. ಸುಧೀರ್ ಹೆಂಡತಿ ಅನ್ನುವ
ಅನುಕಂಪದಿಂದ ಜನ ನನಗೆ ಪ್ರೋತ್ಸಾಹ ನೀಡಿದರು.
ಆನಂತರ ನಮ್ಮ ಕಂಪನಿ ಚೆನ್ನಾಗಿ ನಡೆಯತೊಡಗಿತು. ಅದರಿಂದಲೇ
ನಾನು ಕಂಪನಿಗೆ ಸ್ವಂತ ಸಾಮಗ್ರಿಗಳನ್ನು ಕೊಂಡುಕೊಂಡೆ.
ಮಾಡಿದ್ದ ಸಾಲವನ್ನೂ ತೀರಿಸಿದೆ. `ಏನೇ ಕಷ್ಟನಷ್ಟವಾದರೂ
ಕಂಪನಿಯನ್ನು ನಡೆಸಿಕೊಂಡು ಹೋಗುವ ತಾಖತ್ತು
ಬೆಳೆಸಿಕೊಂಡುಬಿಟ್ಟಿದ್ದೀನಿ.....' ಮಾಲತಿಯವರ ಮಾತಿನ್ನೂ
ಮುಗಿದಿರಲಿಲ್ಲ. ಆನತಿ ದೂರದಲ್ಲಿ ಕೂತು ಮಾಲತಿ ಮಾತು ಆಲಿಸುತ್ತಿದ್ದ
ಅವರ ಹಿರಿಯ ಮಗ ನಂದಾ ದನಿಗೂಡಿಸಿದ್ದರು.
`ನಾನು ಓದಿದ್ದು ಬಿಎಸ್ಸಿ. ಆದರೆ ಅಮ್ಮನ ಜೊತೆ ಕಂಪನೀಲಿ ಇದ್ದೀನಿ.
ಗೆಜ್ಜೆ ಕಟ್ಟುವವರೆಲ್ಲ ಲಜ್ಜೆ ಬಿಟ್ಟವರು ಅಂತ ಮಂದಿ
ತೀರ್ಮಾನಿಸಿಬಿಡುತ್ತದೆ. ಅದರಲ್ಲೂ ಒಬ್ಬ ಹೆಂಗಸು ಕಂಪನಿಯ ಒಡತಿ
ಅಂದರೆ ಕೇಳಬೇಕೆ... ನಮ್ಮನ್ನು ಒಬ್ಬಂಟೆ ಅನ್ನಿಸಬಾರದು ಅಂತ
ತೀರ್ಮಾನಿಸಿ ನಾನು ಓದಿಗೆ ತೀಲಾಂಜಲಿ ಇತ್ತು, ಅವರೊಟ್ಟಿಗೆ
ಕಂಪನಿಯಲ್ಲಿದ್ದೀನಿ. ಈಗ ಒಂದಷ್ಟು ಚಿತ್ರಗಳಲ್ಲಿ ನಟಿಸಲು ನನಗೂ
ಅವಕಾಶ ದೊರೆತಿದೆ.....' ಎಂದ ನಂದಾ ಥೇಟ್ ಸುಧೀರ್‌ರಂತೆಯೇ
ಇದ್ದಾರೆ. ಅವರಂತೆಯೇ ಮೃದು ಸ್ವಭಾವ. ಆದರೆ, ದೇಹ ಮಾತ್ರ
ಅತೀ ದೊಡ್ಡದು!
`ಯಾಕೆ ಹೀಗೆ..? ಎಂದರೆ, `ಸುಧೀರ್ ಕೂಡ ಹಾಗೇ ಇದ್ದರು.
ಅವರ ವಂಶದಲ್ಲಿ ಗುಂಡಗಿರುವವರೇ ಹೆಚ್ಚು....' ಅಂತ ಗುಂಡು
ಗುಂಡಾಗಿದ್ದ ಸುಧೀರ್ ಅಕ್ಕ ತಂಗಿಯರ ಫೋಟೋ ತೋರಿಸಿ
ಸಮಜಾಯಿಸಿ ನೀಡಿದರು ಮಾಲತಿ.
ಅವರ ಎರಡನೆಯ ಮಗ ತರುಣ್ ಕೂಡ ಅಲ್ಲಿಯೇ ಇದ್ದ. ಇನ್ನೂ
ಬಿಡುಗಡೆಯಾಗದ ತನ್ನ ಮೊದಲ ಚಿತ್ರದ ಆಲ್ಬಂ ಒಂದನ್ನು
ಕೈಗಿತ್ತು, ಆ ಸಿನಿಮಾಕ್ಕೆ ಆತ ತೊಡಗಿಸಿಕೊಂಡ ಶ್ರಮದ ಕುರಿತು
ವಿವರಿಸತೊಡಗಿದ.
`ಮಕ್ಕಳು ಕಲಾವಿದರಾಗಬೇಕು ಅನ್ನುವ ಬಯಕೆಯೇನೂ
ಸುಧೀರ್‌ಗಿರಲಿಲ್ಲ. ಆದರೆ, ತರುಣ್ ಒಳ್ಳೆಯ ಕ್ರಿಕೆಟ್ ಪಟು
ಆಗಬೇಕು ಅನ್ನುವ ಹಂಬಲ ಅವರಿಗಿತ್ತು. ಮಗ ಸ್ಟೇಟ್ ಲೆವೆಲ್‌ನಲ್ಲಿ
ಆಡಬೇಕು ಅಂತ ಅವರೇ ಮುಂದೆ ನಿಂತು ಪ್ರೋತ್ಸಾಹಿಸುತ್ತಿದ್ದರು.
ಅವರ ಜೊತೆಯೇ ಅವನ ಕ್ರಿಕೆಟ್ ಪ್ರೀತಿಯೂ ಹೋಯಿತು. ಹಾಗಾಗಿ
ತರುಣ್‌ನನ್ನು ಅಶೋಕ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಸಿದೆ. ಅವನಿಗೆ
ಅಲ್ಲಿ ಸೆಟ್ ಆಗಲಿಲ್ಲ. ಅದು ಬೇಡ ಅಂತ ಕಾಲ್‌ಸೆಂಟರ್‌ಗೂ ಸೇರಿಸಿದೆ.
ಉಹುಂ, ಅವನಿಗೆ ಸಿನಿಮಾ ಹುಚ್ಚು. ಹಾಗಾಗಿ ಬೇರಿನ್ಯಾವ ಕೆಲಸವೂ
ತಲೆಗೆ ಹತ್ತಲಿಲ್ಲ. ನಮ್ಮ ಅದೃಷ್ಟ ಅನ್ನಬೇಕು. ನಾಯ್ಡು ಎನ್ನುವ
ನಿರ್ಮಾಪಕರು ಮುಂದೆ ಬಂದು ತರುಣ್ ಹಾಕಿಕೊಂಡು `ವಿದ್ಯಾರ್ಥಿ'
ಅನ್ನುವ ಚಿತ್ರ ನಿರ್ಮಿಸಿದ್ದಾರೆ. ಇಷ್ಟರಲ್ಲೇ ಆ ಚಿತ್ರ
ಬಿಡುಗಡೆಯಾಗಲಿದೆ. ನನ್ನ ಮಕ್ಕಳು ಅವರ ತಂದೆ ಹೆಸರನ್ನು
ಚಿತ್ರರಂಗದಲ್ಲಿ ಉಳಿಸಬೇಕು ಅನ್ನೋದೆ ನನ್ನ ಬಯಕೆ....'
ಮಕ್ಕಳ ವಿಷಯದಲ್ಲಿ ಮುಳುಗಿದ್ದ ಅವರನ್ನು ಮತ್ತೆ ನಾಟಕದತ್ತ
ಎಳೆತಂದು.
ಈಗ ಕಂಪ್ನಿ ನಾಟಕಗಳ ದಿಕ್ಕು-ದೆಸೆ ಏನು? ಎಂದು ಪ್ರಶ್ನಿಸಿದೆವು. ಜನ
ಮನರಂಜನೆ ಹುಡುಕಿಕೊಂಡು ಎಲ್ಲೂ ಹೋಗಬೇಕಾಗಿಲ್ಲ.
ಮನರಂಜನೆಯೇ ಅವರನ್ನು ಹುಡುಕಿಕೊಂಡು ಬರುವಂಥ ಕಾಲವಿದು.
ಇನ್ನು ನಮ್ಮ ನಾಟಕ ಕಂಪನಿಗಳ ಪಾಡನ್ನು ನೀವೇ ಊಹಿಸಿಕೊಳ್ಳಿ.
ಈಗಾಗಲೇ ಪ್ರಮುಖ ನಾಟಕ ಕಂಪನಿಗಳಷ್ಟೆ ಬಾಗಿಲು ಜಡಿದುಕೊಂಡಿವೆ.
ಅಲ್ಲಿ-ಇಲ್ಲಿ ಅಂತ ಬೆರಳೆಣೆಕೆ ಕಂಪನಿಗಳಷ್ಟೆ ಊರ ತುಂಬಾ
ಅಡ್ಡಾಡುತ್ತಿವೆ. ಜಾತ್ರೆ-ಹಬ್ಬ-ಹರಿದಿನದಂತಹ ಸಂದರ್ಭಗಳಷ್ಟೆ ನಾವು
ಕಾಸಿನ ಮುಖ ನೋಡಬಹುದಿತ್ತು. ಈಗ ಅದಕ್ಕೂ ತಾತ್ಕಾರ. ಅಲ್ಲಿ
ಆರ್ಕೆಸ್ಟ್ರಾ, ಸಿನಿಮಾಗಳೊಟ್ಟಿಗೆ ನಾವು ಸೆಣಸಬೇಕು. ಇನ್ನು ಟೀವಿಯಿಂದಾಗಿ
ಹೆಣ್ಣು ಮಕ್ಕಳು ಕಂಪನಿಯ ಸುತ್ತಲೂ ಸುಳಿಯುವುದಿಲ್ಲ.
ಮೊದಲೆಲ್ಲಾ ಸಂಜೆ ಆರರ ನಂತರ ನಾಟಕ ಪ್ರಾರಂಭಿಸುತ್ತಿದ್ವಿ. ಆರರ
ನಂತರ ನಮ್ಮ ಹೆಣ್ಮಕ್ಕಳು ಟೀವಿ ಹಚ್ಕೊಂಡು ಕೂರುವುದರಿಂದ
ಇತ್ತಿತ್ತಲಾಗಿ ಮಧ್ಯಾಹ್ನವೇ ನಾಟಕ ಆಡಲಾರಂಭಿಸಿದ್ದೀವಿ.
`ಭೂಮಿ ತೂಕದ ಹೆಣ್ಣು' ನಮ್ಮ ಕಂಪನಿಯ ಸೂಪರ್ ಹಿಟ್ ನಾಟಕ.
ಆಗಾಗ ಹೊಸ ಹೊಸ ನಾಟಕಗಳನ್ನೂ ಆಡುತ್ತೀವಿ. ಆದರೆ, ಅದಕ್ಕೆ
ಮಸಾಲೇನೂ ತುಂಬಿಸಿಕೊಳ್ಳಬೇಕು. ಇಲ್ಲದಿದ್ದರೆ ಜನ ಇತ್ತ
ಸುಳಿಯುವುದಿಲ್ಲ. ಸಾಮಾಜಿಕ, ಪೌರಾಣಿಕ ಎಂಥದ್ದೇ ನಾಟಕ ಇರಲಿ,
ನಾವು ಕೂಡ ಸಿನಿಮಾದವರ ಥರ `ಐಟಂ' ಸಾಂಗ್‌ವೊಂದನ್ನು
ಇಟ್ಟುಕೊಂಡಿರ್‍ತೀವಿ. ಹಾಗೆ ಹೇಳಿದರೆ ತಪ್ಪಾಗುತ್ತದೆ. ಆದರೆ, ಅಂಥ
ಅನಿವಾರ್ಯ ಪರಿಸ್ಥಿತಿಯ ಸರ್ಕಸ್ ಮಾಡಬೇಕಾಗಿದೆ.
ಟಿವಿ ಚಾನೆಲ್‌ಗಳು ಜಾಸ್ತಿಯಾಗಿವೆ. ಕಲಾವಿದರು ದಿನಕ್ಕೆ ಸಾವಿರಗಟ್ಟಳೆ
ದುಡಿಯಬಹುದು. ಹಾಗಾಗಿ ನಾಟಕಕ್ಕೆ ಕಲಾವಿದರ ಕೊರತೆ ಇದ್ದೇ ಇದೆ,
ಇನ್ನೊಂದು ಹತ್ತು ವರ್ಷದಲ್ಲಿ ಕಂಪ್ನಿ ನಾಟಕಗಳೂ
ಮಾಯವಾಗಿಬಿಡುತ್ತವೆ. ಮುಂದಿನ ಪೀಳಿಗೆ ಹೀಗ್ಹೀಗೆ ಸೆಟ್
ಹಾಕಿಕೊಂಡು, ಊರೂರು ಅಲೆದುಕೊಂಡು ನಮ್ ಜನ ನಾಟಕಾನೂ
ಮಾಡ್ತಿದ್ರಂತೆ ಅಂತ ಪುಸ್ತಕದ ದಾಖಲೆ ತಿರುವಿಹಾಕುವ ಕಾಲವೂ
ದೂರವಿಲ್ಲ...' ತಮ್ಮ ಕಲ್ಪನೆಗೆ ತಾವೇ ನಗು ಸೂಸಿದರು ಮಾಲತಿ
ಸುಧೀರ್.
`ಸುಧೀರ್‌ರ ಚಿತ್ರರಂಗದ ಬದುಕು ಹೇಗಿತ್ತು.....?' ಎಂದಾಗ
ಮಾಲತಿಯವರ ಮುಖ ಕಪ್ಪಿಟ್ಟಿತು.
ಅವರಿಗೆ ಕಡೇತನಕ ಒಂದು ಕೊರಗು ಇದ್ದೇ ಇತ್ತು. ಎಷ್ಟೇ
ಚಿತ್ರಗಳಲ್ಲಿ ನಟಿಸಿದರೂ, ಒಳ್ಳೆಯ ನಟನೆ ನೀಡಿದರೂ ಸರ್ಕಾರ
ಕರೆದು ಅನ್ನುವುದ್ಕಕಿಂತಲೂ ನೋವು ಅವರೊಳಗಿತ್ತು. `ನನಗಿಂತಲೂ
ಆನಂತರ ಬಂದ ಕಳಪೆ ನಟರಿಗೆಲ್ಲಾ ಎಂಥೆಂಥವೋ
ಪ್ರಶಸ್ತಿ-ಫಲಕಗಳು, ಅವಕಾಶಗಳು ಬರುತ್ತಿವೆ. ಹಾಗಿದ್ರೆ ನಾನು
ಸಮರ್ಥ ಕಲಾವಿದ ಅಲ್ವಾ? ಎನ್ನುವ ಪ್ರಶ್ನೆಯನ್ನು ಪದೇ ಪದೆ
ನನಗೆ ಕೇಳುತ್ತಿದ್ದರು. ನಾನು ಏನಂತ ಉತ್ತರ ಹೇಳಲಿ, ಸುಮ್ಮನೆ
ಕೇಳಿಸಿಕೊಳ್ಳುತ್ತಿದ್ದೆ. ಈಗ ನನ್ನ ಮಕ್ಕಳು ಅವರ ಆಸೆ ಪೂರೈಸಲಿ
ಅಂತ ಹಾರೈಸುತ್ತೀನಿ...'
ಒಬ್ಬ ಕಲಾವಿದನಿಗೆ ಪ್ರಶಸ್ತಿ-ಫಲಕಗಳೂ ಮುಖ್ಯ ಎನ್ನುವ ಸುಧೀರ್
ವಾದ ಮೆಚ್ಚತಕ್ಕದ್ದೆ. ಇವ್ಯಾವೂ ಅವರಿಗೆ ದಕ್ಕದೇ ಹೋದರೂ
ಅವರದೇ ಆದ ಅಭಿಮಾನಿ ಬಳಗವಿತ್ತು. ಅಭಿಮಾನಿಗಳು ಎಂದಾಗ,
ಮಹಿಳೆಯರು ಮಾಲತಿಯವರೊಟ್ಟಿಗೆ ಹೇಗೆ
ನಡೆದುಕೊಳ್ಳುತ್ತಿದ್ದರು ಎನ್ನುವ ಪ್ರಶ್ನೆ ಎದ್ದಿತು. ಯಾಕೆಂದರೆ,
ವಜ್ರಮುನಿಯವರು ಚುನಾವಣೆಗೆ ನಿಂತು ಮತ ಕೇಳಲು ಹೋದಾಗ,
ಬಸವನಗುಡಿ ಮಹಿಳೆಯರೆಲ್ಲಾ ಅವರನ್ನು ನೋಡಿ ಬೆದರಿ ಬೆಂಡಾಗಿ
ಮನೆ ಬಾಗಿಲು ಹಾಕಿಕೊಂಡಿದ್ದರಂತೆ ಹಾಗಿದ್ದರೆ ಸುಧೀರ್ ಬಗೆಗೆ
ಮಹಿಳೆಯರ ಅಭಿಪ್ರಾಯವೇನಿತ್ತು?
`ಪ್ರತಿ ಸಿನಿಮಾದಲ್ಲೂ ನಿಮ್ ಯಜಮಾನ್ರು ಒಂದ್ ಹುಡ್ಗೀನ ರೇಪ್
ಮಾಡ್ತಾರೆ. ಆಮೇಲೆ ನಾಯಕನಿಂದ ಒದೆ ತಿಂತಾರೆ, ಇಲ್ಲಾಂದ್ರೆ ನಾಯಿ
ಕೈಲಿ ಕಚ್ಚಿಸಿಕೊಂಡು ಸಾಯ್ತಾರೆ. ಅದೂ ಇಲ್ಲಾ ಅಂದ್ರೆ ಪೊಲೀಸ್ನೋರ್
ಕೈಗೆ ಸಿಕ್ಕಿಹಾಕಿಕೊಳ್ತಾರೆ..... ಅವರಿಗೆ ಬೇಜಾರಾಗೋದಿಲ್ವೇನ್ರೀ ಹಾಗೆಲ್ಲಾ
ಮಾಡೋದಕ್ಕೆ.....' ಅಂತ ಕೆಲ ಹೆಣ್ಣು ಮಕ್ಕಳು ಮುಗ್ಧವಾಗಿ
ಕೇಳಿದ್ದು ಬಿಟ್ಟರೆ, ಸುಧೀರ್ ಕಂಡು ಹೆದರಿಕೊಂಡವರು ಕಮ್ಮಿ.
ಅವರು ನಾಟಕದಲ್ಲಿ ಹೀರೋ ಪಾತ್ರ ಮಾಡುತ್ತಿದ್ದುದೂ ಅದಕ್ಕೆ
ಕಾರಣವಿರಬಹುದು. ಚಿತ್ರಗಳಲ್ಲಿ ಖಳರಾಗಿದ್ದ ಸುಧೀರ್‌ಗೆ ನಿಜ
ಬದುಕಿನಲ್ಲಿ ಒಂದೇ ಒಂದು ಕೆಟ್ಟ ಚಟವೂ ಇರಲಿಲ್ಲ....' ಎಂದ
ಮಾಲತಿಯವರ ಮಾತಿನಲ್ಲಿ ಹುರುಳಿಲ್ಲದಿಲ್ಲ. ಆ ಕಾರಣಕ್ಕಾಗಿಯೇ
ಚಿತ್ರರಂಗದಲ್ಲಿ ಎಲ್ಲರಿಗೂ ಬೇಕಾಗಿದ್ದ ಒಳ್ಳೆಯ ಮನುಷ್ಯರಾಗಿದ್ದರು
ಸುಧೀರ್. ಅವರೆಂದೂ ಹಣಕ್ಕಾಗಿ ಅಥವಾ ಅವಕಾಶಗಳಿಗಾಗಿ ಯಾರನ್ನೂ
ಪೀಡಿಸಿರಲಿಲ್ಲ.
ಕೊಟ್ಟ ಚೆಕ್ಕು ಬೌನ್ಸ್ ಆದಾಗಲೂ ನಿರ್ಮಾಪಕರನ್ನು ಬೀದಿಗೆಳೆದಿರಲಿಲ್ಲ.
ಅಂಥ ಸುಧೀರ್ ಸಣ್ಣ ವಯಸ್ಸಿಗೇ ಇಹಲೋಕ ತ್ಯಜಿಸಿದರು.
ತಕ್ಷಣವೇ ಡಸ್ಟ್ ಅಲರ್ಜಿಗೆ ಒಳಗಾಗುತ್ತಿದ್ದದು ಸುಧೀರ್‌ರಿಗಿದ್ದ
ಪ್ರಮುಖ ಕಾಯಿಲೆಯಾಗಿತ್ತು.
`ದಂಡನಾಯಕ' ಎನ್ನುವ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ
ಸುಧೀರ್ ಅದಕ್ಕೂ ಹಿಂದೆ ಚುನಾವಣೆ ಪ್ರಚಾರಕ್ಕೆಂದು ಬೆಳಗಾವಿಗೆ
ತೆರಳಿದ್ದರು. ಸುಮಾರು ಹದಿನೈದು ದಿನಗಳ ಕಾಲ ಅಲ್ಲಿದ್ದ
ಸುಧೀರ್ ಅದಾಗಲೇ ಆ ಅಲರ್ಜಿಗೆ ಒಳಪಟ್ಟು
ಕಿರಿಕಿರಿಯನ್ನನುಭವಿಸುತ್ತಿದ್ದರೂ ಅದ್ಯಾವುದನ್ನು ಲೆಕ್ಕಕ್ಕಿಡದೆ ಆ
ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲು ಹೋದರು. ಸುಮಾರು
ಇಪ್ಪತ್ತು ಅಡಿಯಿಂದ ಕೆಳಗೆ ಧುಮುಕುವ ಸನ್ನಿವೇಶದ ಚಿತ್ರೀಕರಣ
ನಡೆಯುತ್ತಿದ್ದಾಗ, ಅವರ ಡ್ಯೂಪ್‌ಗೆ ಅಂತ ಮದ್ರಾಸ್‌ನಿಂದ
ವ್ಯಕ್ತಿಯೊಬ್ಬನನ್ನು ಕರೆಸುವುದಾಗಿ ನಿರ್ದೇಶಕ ಹೇಳಿದರೂ, ಅದೇನೂ
ಅಂಥ ತ್ರಾಸದಾಯಕ ಕೆಲಸವಲ್ಲ ಎಂದು ತಾವೇ ಆ ದೃಶ್ಯದಲ್ಲಿ
ಭಾಗವಹಿಸಿದ ಸುಧೀರ್ ಇಪ್ಪತ್ತು ಅಡಿಯ ಕಟ್ಟಡದ ಮೇಲಿಂದ
ಕೆಳಕ್ಕೆ ಧುಮುಕಿದರು. ಅವರು ಕೆಳಗೆ ಬೀಳಲು ನೆರವಾಗಲು
ಸುಮಾರು ಹತ್ತನ್ನೆರಡು ಹಾಸಿಗೆಗಳನ್ನು ಒಂದರಮೇಲೊಂದರಂತೆ
ಜೋಡಿಸಿಟ್ಟಿದರು. ಹಾಗೆ ಸುಧೀರ್ ಬಿದ್ದ ರಭಸಕ್ಕೆ ಹಾಸಿಗೆಗಳಲ್ಲಿ
ಹಾಸು ಹೊಕ್ಕಿದ್ದ ಧೂಳು ಚಿಮ್ಮತೊಡಗಿತು. ಮೊದಲೇ ಡಸ್ಟ್ ಅಲರ್ಜಿಗೆ
ಒಳಗಾಗಿ ಪರದಾಡುತ್ತಿದ್ದ ವ್ಯಕ್ತಿಗೆ ಆ ಧೂಳು ಉಸಿರುಗಟ್ಟಿಸಿತು.
ತತ್‌ಕ್ಷಣವೆ ಚಿತ್ರತಂಡ ಆಸ್ಪತ್ರೆಗೆ ಅವರನ್ನು ಕೊಂಡೊಯ್ಯಿತು.
ಒಂದೆರಡು ತಾಸಿನ ಚಿಕಿತ್ಸೆಯ ನಂತರ ಸುಧೀರ್ ಕೂಡ
ಸುಧಾರಿಸಿಕೊಂಡು ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸಿದರೇನೋ ಸರಿ.
ಆದರೆ, ಅದೊಂದೆ ನೆವ. ಚಿತ್ರೀಕರಣ ಮುಗಿಸಿಕೊಂಡು ಮನೆಗೆ
ಬರುತ್ತಲೇ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಸೇರಿಕೊಂಡ
ಸುಧೀರ್‌ರವರು, ಅರೆಪ್ರಜ್ಞಾವಸ್ಥೆಯಲ್ಲಿಯೇ ನಾಲ್ಕೈದು
ದಿನಗಳನ್ನು ಅಲ್ಲೆ ಕಳೆದರು. ಅವರಿಗೆ ಪ್ರಜ್ಞೆ ಬಂದು
ಮಾತನಾಡುತ್ತಿದ್ದಾಗಲೇ ಹೃದಯಾಘಾತಕ್ಕೊಳಗಾಗಿ
ಮಾಲತಿಯವರು ನೋಡ ನೋಡುತ್ತಿರುವಂತೆಯೇ ಪ್ರಾಣಬಿಟ್ಟಿದ್ದರು.
ಸುಧೀರ್ ಸಾಯುವುದಕ್ಕೂ ಒಂದು ತಿಂಗಳ ಹಿಂದಿನ ಘಟನೆಯೊಂದು
ಮಾಲತಿಯವರ ಮನಸ್ಸಿನಲ್ಲಿ ಮಡುವುಗಟ್ಟಿತ್ತು.
`ಆಗ ನಾನು ನನ್ನತ್ರ ಇದ್ದ ಎಲ್ಲಾ ಒಡವೆಗಳನ್ನೂ ಮೈಮೇಲೆ
ಹೇರಿಕೊಂಡು ಓಡಾಡುತ್ತಿದ್ದೆ. ನಮ್ಮ ಕಂಪ್ನಿ ಹುಬ್ಬಳ್ಳಿಯಲ್ಲಿ ಕ್ಯಾಂಪ್
ಹಾಕಿತ್ತು. `ಭೂಮಿ ತೂಕದ ಹೆಣ್ಣು' ನಾಟಕದಲ್ಲಿನ ನಾಯಕಿ ಪಾತ್ರ
ನಿರ್ವಹಿಸಬೇಕು. ಅದಕ್ಕಾಗಿ ನನ್ನ ಮೈಮೇಲಿದ್ದ ಒಡವೆಗಳನ್ನೆಲ್ಲಾ
ಮಾಂಗಲ್ಯಸರ, ಕಾಲುಂಗರ ಎಲ್ಲಾನೂ ಸೇರಿಸಿ ಗಂಟು ಕಟ್ಟಿ ಮೇಕಪ್
ರೂಮ್‌ಗೂ ಅನತಿ ದೂರದಲ್ಲಿ ಕೂತಿದ್ದ ಸುಧೀರ್ ಕೈಲಿ ಕೊಡಲು
ಹೋದೆ. ಅವರು ಸ್ನೇಹಿತರೊಟ್ಟಿಗೆ ಮಾತನಾಡುತ್ತಾ ಕೂತಿದ್ದರು.
`ಅಲ್ಲೆ ಯಾರ ಕೈಲಾದ್ರು ಕೊಡಮ್ಮಾ...' ಅಂದುಬಿಟ್ಟರು. ಇನ್ನೇನು
ನಾನು ಸ್ಟೇಜ್‌ಗೆ ಹೋಗುವ ಹೊತ್ತಾದ್ದರಿಂದ ಮೇಕಪ್ ರೂಮಿನಲ್ಲಿ
ನನ್ನ ಬ್ಯಾಗಿನೊಳಕ್ಕೆ ಆ ಒಡವೆ ಗಂಟಿಟ್ಟು ನಾನು ಪಾತ್ರ ನಿರ್ವಹಿಸಲು
ಹೋದೆ. ಅದಾಗಿ ಇಪ್ಪತ್ತು ನಿಮಿಷಗಳಾಗಿಲ್ಲ. ಪಾತ್ರ ಮುಗಿಸಿ ಮೇಕಪ್
ರೂಮಿಗೆ ಬಂದು ಬ್ಯಾಗು ತೆಗೆದರೆ ಎರಡು ಲಕ್ಷ ಬೆಲೆ ಬಾಳುತ್ತಿದ್ದ
ಒಡವೆಗಳಿಲ್ಲ..... ಅಲ್ಲಿದ್ದವರು ಪೊಲೀಸ್‌ಗೆ ಕಂಪ್ಲೆಂಟ್ ಕೊಡಿ
ಅಂದರು. ಪೊಲೀಸ್ನೋರು ಕಲಾವಿದರನ್ನೆಲ್ಲಾ ಸ್ಟೇಷನ್‌ಗೆ
ಕರೆಸಿಕೊಳ್ಳುತ್ತಾರೆ ಅಂತ ಸುಧೀರ್ ಕಂಪ್ಲೆಂಟ್ ಕೊಡಲಿಲ್ಲ.
`ಒಂಡೆರಡು ಚಿತ್ರದಲ್ಲಿ ನಟಿಸಿ ನಿನಗೆ ಒಡವೆ ಮಾಡಿಸಿಕೊಡ್ತೀನಿ.
ಕೊರಗಬೇಡಮ್ಮಾ...' ಅಂತ ನನಗೆ ಸಮಾಧಾನ ಮಾಡಿದರು. ಆ
ಒಡವೆ ಜೊತೆಗೆ ನನ್ನ ಮಾಂಗಲ್ಯದ ಸರ, ಕಾಲುಂಗುರವೂ
ಕಳೆದುಹೋಗಿತ್ತು. `ಮನೇಲಿ ಸತ್ಯನಾರಾಯಣ ಪೂಜೆ ಇಟ್ಟುಕೊಂಡು,
ಆ ದಿನವೇ ನಿನ್ನ ಕೊರಳಿಗೆ ಮಾಂಗಲ್ಯದ ಸರ ಹಾಕ್ತೀನಿ...'
ಅಂದಿದ್ದರು. ಅದರ ಅವಶ್ಯಕತೆ ಇನ್ಯಾವತ್ತೂ ಇಲ್ಲದಂತೆ ಮಾಡಿಬಿಟ್ಟಿತು
ವಿಧಿ...' ಇಷ್ಟು ಹೇಳಿ ಮುಗಿಸುವಷ್ಟರಲ್ಲಿ ಆಕೆ ಕಣ್ಣಾಲಿಗಳು
ತುಂಬಿಕೊಂಡಿದ್ದವು.
ಇನ್ನಷ್ಟು
ಕನ್ನಡಿಗರಿಗೆ ಇಂಗ್ಲಿಷ್ ಬೇಕು
ಕೋಲಾರ-ದಿಕ್ಕೆಟ್ಟ ನದಿಗಳ ನೆಲದಲ್ಲಿ..!!
ವಾರ್ತಾ
ಮತ್ತು ಪ್ರಚಾರ ಇಲಾಖೆಯಲ್ಲಿ ಒಕ್ಕಲಿಗರ ಒಡ್ಡೋಲಗ
ತೃತೀಯ
ಶಕ್ತಿ ಇಲ್ಲದ ಸ್ಥಿತಿ ಅಪಾಯಕಾರಿ
|