Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 19 October 2006 03:45 PM

ಮೌನಿಯೊಡನೆ ಒಂದು ಮಂಥನ

ಹಳ್ಳಿಯ ವ್ಯವಸ್ಥೆಯಲ್ಲಿ ರೂಪುಗೊಳ್ಳುವ ತೆರೆದ ಪುಸ್ತಕದಂತಹ ಬದುಕು, ಅಲ್ಲಿ ನೆಲೆಗೊಂಡಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಗುವ ದೈನಂದಿನ ಬದುಕಿನ ಏರುಪೇರುಗಳು ಹಾಗೂ ಅಂತ್ಯದಲ್ಲಿ ದಕ್ಕುವ ಆಧ್ಯಾತ್ಮದ ಅರಿವನ್ನು ಎರಡು ಎಕ್ಸ್‌ಟ್ರೀಮ್ ಪಾತ್ರಗಳ ಮೂಲಕ ಬಿಡಿಸಿಟ್ಟ ಚಿತ್ರ ಮೌನಿ.
ಹೀರೋಯಿನ್ ಇಲ್ಲ, ಹಾಡಿಲ್ಲ, ಟಿಟಿಲೇಷನ್ ಹುಟ್ಟಿಸಬಲ್ಲ ಅತ್ತೆ ಸೊಸೆ ಜಗಳಗಳಿಲ್ಲ, ಎಕ್ಸೈಟ್‌ಮೆಂಟ್‌ಗೆ ಅಂತ ಫೈಟ್ ಇಲ್ಲ....


ಕೆ. ರಾಜಲಕ್ಷ್ಮಿ, kodibettu@gmail.com


ಮೌನಿ ಒಂದು ಆರ್ಟ್ ಫಿಲ್ಮ್.
ವರ್ಲ್ಡ್ ಪನೋರಮಾ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವ `ಮೌನಿ' ಚಿತ್ರ ಅಲ್ಲಿ ಪ್ರದರ್ಶನವನ್ನೂ ಕಂಡಿದೆ. ಚಿತ್ರದಲ್ಲಿ ಕುಪ್ಪಣ್ಣನ ಪಾತ್ರಧಾರಿ ದತ್ತಣ್ಣ ರಾಷ್ಟ್ರಮಟ್ಟದಲ್ಲಿ ಶ್ರೇಷ್ಟ ನಟ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದಾರೆ.

ಕಳೆದ ಭಾನುವಾರ (ಅಕ್ಟೋಬರ್ ೧೫ರಂದು) ಮಲ್ಲೇಶ್ವರಂನ ಶ್ರೀಗಂಧ ಪ್ರಿವ್ಯೂ ಮಂದಿರದಲ್ಲಿ ಈ ಚಿತ್ರವನ್ನು ಪ್ರದರ್ಶಿಸಲಾಯಿತು. ಅಲ್ಲಿದ್ದವರೆಲ್ಲರೂ ಆರ್ಟ್ ಫಿಲ್ಮ್ ಸ್ಕೂಲ್‌ನವರು ಎಂದರೆ ತಪ್ಪಾಗದು. ಯಾಕೆಂದರೆ ಇಂತಹ ಅಪರೂಪದ ಆರ್ಟ್ ಸಿನೆಮಾಗಳು ಶ್ರೀಗಂಧ ಚಿತ್ರ ಮಂದಿರದಲ್ಲಿ ಆಗಾಗ ಪ್ರದರ್ಶನ ಕಾಣುತ್ತಿರುತ್ತದೆ. ಅಂತಹ ಚಿತ್ರಗಳಿಗೆಂದೇ ಖಾಯಂ ವೀಕ್ಷಕರ ದಂಡೇ ಇದೆ.

ಇಂತ ವೀಕ್ಷಕರ ಬೆಂಬಲಿಸುವುದಕ್ಕಾಗಿಯೇ ಈ-ಕವಿ ಸಂಸ್ಥೆ ಕಳೆದ ಒಂದು ವರ್ಷದಿಂದ ಇಂತಹ ಅರ್ಥಪೂರ್ಣ ಚಿತ್ರಗಳನ್ನು ಪ್ರದರ್ಶಿಸುತ್ತಾ ಬಂದಿದೆ.

ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಯು. ಆರ್. ಅನಂತಮೂರ್ತಿ ಬರೆದಿರುವ `ಮೌನಿ' ಕಥೆಯನ್ನಾಧರಿಸಿ ತೆಗೆದ ಚಿತ್ರ ಇದು. ಚಿತ್ರದಲ್ಲಿ ಸಿನಿಮೀಯ ಗುಣಗಳಿಗನುಗುಣವಾಗಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಲಾಗಿದೆ. ಚಿತ್ರದಲ್ಲಿ ಕಾಣಿಸುವ ಎರಡು ಎಕ್ಸ್‌ಟ್ರೀಮ್ ಪಾತ್ರಗಳು ಅಪ್ಪಣ್ಣ(ಅನಂತನಾಗ್) ಮತ್ತು ಕುಪ್ಪಣ್ಣ(ದತ್ತಾತ್ರೇಯ). ಇಬ್ಬರೂ ಘಟ್ಟದ ಕೆಳಗಿನಿಂದ ಬಂದಿರುವ ಬ್ರಾಹ್ಮಣರು. ಮಠದ ಉಂಬಳಿ ಆಸ್ತಿಯನ್ನು ಪಡೆದುಕೊಂಡು ಕೃಷಿ-ಗಿಷಿ ಮಾಡಿಕೊಂಡು ಇರುವವರು. ಆದರೆ ಸ್ವಭಾವತಃ ಅಪ್ಪಣ್ಣ ಒಬ್ಬ ಚಾಣಾಕ್ಷ ಮನುಷ್ಯನಾದರೆ, ಕುಪ್ಪಣ್ಣ ಕಂಡದ್ದನ್ನು ಕಂಡ ಹಾಗೆ ವದರುವ, ಎಲ್ಲದಕ್ಕೂ ಎಲ್ಲರಿಗೂ ರೇಗಾಡಿಕೊಂಡು ಬದುಕು, ದುಡಿಮೆಯತ್ತ ಕಡಿಮೆ ಆಸಕ್ತಿ ಹೊಂದಿರುವ ಮನುಷ್ಯ.
ಹಾಗಾಗಿ ಅಪ್ಪಣ್ಣನ ತೋಟ ನಳನಳಿಸುತ್ತಿದ್ದರೆ ಕುಪ್ಪಣ್ಣನ ತೋಟ ಕುಸಿದು ಬಿದ್ದಿರುತ್ತದೆ. ಕುಪ್ಪಣ್ಣನ ಸಾಲ ಮಿತಿ ಮೀರುತ್ತದೆ. ತೋಟದ ಕೆಲಸಗಳಿಗೆ ಆಳುಗಳು ಬಾರರು. ಕಿರಾಣಿ ಅಂಗಡಿಯಾತ (ಕಮ್ತಿಯಾಗಿ ಅಚ್ಯುತ ರಾವ್) ಸಾಲ ಕೊಡಲ್ಲ ಅಂತಾನೆ. ಮಠಕ್ಕೆ ಕಟ್ಟಬೇಕಾದ ಹಣದ ಬಾಕಿ ಬೆಳೆಯುತ್ತದೆ. ಸೋಲು ಬೆನ್ನು ಹತ್ತಿದ ಶನಿಯಾಗುತ್ತದೆ. ಕಟ್ಟಕಡೆಗೆ ಹೆಂಡತಿ ಮತ್ತು ಮಗಳು ತೌರೂರ ಹಾದಿ ಹಿಡಿಯುತ್ತಾರೆ. ಮನೆ ಹರಾಜಾಗುತ್ತದೆ. ಮನೆಯೊಳಗಿನ ಅಡಕೆಗಾಗಿ ಮಠದವರು ಮತ್ತು ಉದ್ರಿ ಅಂಗಡಿಯವನ ನಡುವೆ ಜಟಾಪಟಿ ನಡೆಯುತ್ತದೆ.

ಮಾನವೀಯತೆಯನ್ನು ಮೆರೆಯಬೇಕಾಗಿದ್ದ ಮಠದ ಆಡಳಿತ `ವಸೂಲಿ'ಗಾಗಿ ಕಿತ್ತಾಡುತ್ತದೆ. ಎಲ್ಲರ ಮೇಲೂ ರೇಗಾಡುತ್ತಲೇ ಇದ್ದ ಕುಪ್ಪಣ್ಣ ಈ ಸಂದರ್ಭದಲ್ಲಿ ಮಾತ್ರ ಬಿಗಿ ಮೌನ ಆಚರಿಸುತ್ತಾನೆ. ಕೊನೆಯಲ್ಲಿ ಎಲ್ಲವನ್ನೂ ಕಳಕೊಂಡು ಜಗುಲಿ ಮೇಲೆ ಭಂಗಿ ಬದಲಿಸದೇ ಕುಳಿತ ಕುಪ್ಪಣ್ಣನನ್ನು ಅಪ್ಪಣ್ಣ ಭೇಟಿಯಾಗುತ್ತಾನೆ. ಇಬ್ಬರೂ ಒಟ್ಟಿಗೇ ಘಟ್ಟದ ಕೆಳಗಿನಿಂದ ಬರಿಗೈಲಿ ವಲಸೆ ಬಂದ ದಿನಗಳನ್ನು, ಕಷ್ಟಗಳನ್ನು ನೆನೆಸಿಕೊಳ್ಳುತ್ತಾನೆ. `ನನಗೆ ನಿಮ್ಮ ಮೇಲೆ ದ್ವೇಷವಿಲ್ಲ ಎನ್ನುತ್ತಾ ಹರಾಜಾದ ಮನೆಯ ಬೀಗದ ಕೈಯನ್ನು ಕುಪ್ಪಣ್ಣನ ಕೈಗಿಡುತ್ತಾನೆ.

ಆಗ ಕಾಣಿಸುತ್ತದೆ ಆತನಿಗೆ ಕುಪ್ಪಣ್ಣನ ಮುಷ್ಟಿಯೊಳಗೆ ಕವಡೆಗಳು !

ಅದೇ ಸಿನೆಮಾದ ಅದ್ಭುತ ಅಂತ್ಯ.

ಮೌನವಾಗಿದ್ದ ಕುಪ್ಪಣ್ಣನ ಬಳಿಗೆ ಹರಾಜಾದ ಮನೆ ಮಠ ವಾಪಾಸಾದಾಗ ಏನನಿಸಿರಬಹುದು ಎಂಬ ಪ್ರಶ್ನೆಯೊಂದಿಗೆ ಚಿತ್ರ ಅಂತ್ಯವಾಗುತ್ತದೆ. ಅಂತ್ಯದಲ್ಲಿ ಪ್ರೇಕ್ಷಕರ ಮನಸ್ಸಿನಲ್ಲಿ ತರಹೇವಾರಿ ಪ್ರಶ್ನೆಗಳನ್ನೂ ಹುಟ್ಟಿಸುತ್ತದೆ. ಅದೇ ಅಲ್ಲವೇ ಆರ್ಟ್ ಫಿಲ್ಮ್‌ನ ಫಾರ್ಮ್ಯುಲಾ.

ಮಾತಿನಲ್ಲಿ ಗೆಲ್ಲಲಾಗದ್ದನ್ನು ಮೌನದಲ್ಲಿ ಗೆದ್ದಾಗ, ಕುಪ್ಪಣ್ಣನಿಗೆ ಎಲ್ಲ ಐಹಿಕ ಸಂಪತ್ತೂ ಕವಡೆಗೆ ಸಮ ಎನಿಸಿತೇ... ? ಎಂಬುದು ಚಿತ್ರದ ಸಂದೇಶವಿದ್ದಂತಿದೆ. ಮೂಲಕಥೆಯಲ್ಲಿ ಕವಡೆಯ ಪ್ರಸ್ತಾಪವಿಲ್ಲದಿದ್ದರೂ ಸಿನೆಮಾಕ್ಕಾಗಿ ಈ ಹೊಸ ಅಂತ್ಯವನ್ನು ನೀಡಿ ಚಿತ್ರಕ್ಕೆ ತಾತ್ವಿಕ ಎಳೆಯನ್ನೂ ನಿರ್ದೇಶಕ ಲಿಂಗದೇವರು ಜೋಡಿಸಿದಂತಾಗಿದೆ. ಅಥವಾ ಕವಡೆಗೆ ಸಮಾನವಾದ ಈ ದುಡ್ಡು ಕಾಸು ಮನೆ ಮಠಗಳನ್ನು ಕಟ್ಟ ಕಡೆ ಗಳಿಗೆಯಲ್ಲಿಯೂ ಮನುಷ್ಯ ಭದ್ರವಾಗಿ ಹಿಡಿದುಕೊಳ್ಳಲು ಯತ್ನಿಸುತ್ತಾನಲ್ಲ ಎಂಬ ವ್ಯಂಗ್ಯಾರ್ಥದ ಸಂದೇಶವೂ ಇಣುಕಿದಂತೆ ಭಾಸವಾಗುತ್ತದೆ.

ಮಾತಿನ ಭರಾಟೆಯಲ್ಲಿ ಮುಳುಗಿ ಹೋದ ವ್ಯಕ್ತಿಗೆ ಬಹಿರ್ಮುಖ ಬದುಕಿನಲ್ಲಿ ಕಣ್ಣಿಗೆ ಕಾಣಿಸದೇ ಇದ್ದದ್ದು, ಅಂತರ್ಮುಖನಾದಾಗ ಹೊಳೆಯುತ್ತದೆ ಎನ್ನುವ ಅಂಶ ಚಿತ್ರದಲ್ಲಿ ಎದ್ದು ಕಾಣುವ ವಿಶೇಷ. ಸಾಮಾಜಿಕ ವ್ಯವಸ್ಥೆಯ ಪ್ರತೀಕವಾಗಿ ಮಠ ಉದಾರತೆಯನ್ನು, ಮಾನವೀಯತೆಯನ್ನು ಮೆರೆಯುವುದು ಕಾಣಿಸುವುದಿಲ್ಲ.

ಗೆಲ್ಲುವ ಸೂತ್ರವನ್ನು ಅರೆದು ಕುಡಿದ ಅಪ್ಪಣ್ಣ ಹಾಗೂ ಒಣ ಪ್ರತಿಷ್ಠೆಗೆ ಜೋತು ಬಿದ್ದ ಕುಪ್ಪಣ್ಣ ಎಂಬ ಎರಡು ಅತಿರೇಕದ ಪಾತ್ರಗಳ ನಡುವೆ ಮುಂಡೇದೇ ಮುಂಡೇದೇ ಎನ್ನುತ್ತಾ ಎರಡು ಮನೆಗಳ ನಡುವೆ ಓಡಾಡಿಕೊಂಡಿರುವ ಸೀತಜ್ಜಿ(ಲಕ್ಷ್ಮೀ ಚಂದ್ರಶೇಖರ್) ಇದ್ದಾರೆ. ಕುಪ್ಪಣ್ಣನ ಮಗಳು ಮತ್ತು ಅಪ್ಪಣ್ಣನ ಮೈದುನನ ನಡುವೆ ಮೌನವಾಗಿ ಸಾಗುವ ಹೃದಯ ಸ್ಪಂದನ ಚಿತ್ರಕ್ಕೊಂದಿಷ್ಟು ನವಿರು ಭಾವವನ್ನು ಹಚ್ಚಿದೆ. ಒಂದು ಹಾಡಿದ್ದರೆ ಚೆನ್ನಿತ್ತು ಅಂತ ಆಗಾಗ ಅನಿಸುವುದೂ ಉಂಟು.

ಯಾವ ಪಾತ್ರಕ್ಕೂ ನ್ಯಾಯ ಸಲ್ಲಿಸುತ್ತಾರೆ ಎನ್ನುವ ಭಾವನೆಯನ್ನು ಅಚ್ಯುತ ರಾವ್ ಅಭಿನಯದ ವಿಚಾರದಲ್ಲಿ ನಿಜಗೊಳಿಸಿದ್ದರೆ, ಭಾಷೆಯ ವಿಚಾರದಲ್ಲಿ ಮಾತ್ರ ಸುಳ್ಳಾಗಿಸಿದ್ದಾರೆ. ಸಿನೆಮಾದ ಹಿನ್ನೆಲೆ ಸಂಗೀತದೊಂದಿಗೆ ಬೆಸೆದುಕೊಳ್ಳದೇ ಬೇರೆಯಾಗಿಯೇ ಉಳಿದುಕೊಳ್ಳುವ ಮಾಧವನ ಯಕ್ಷಗಾನದ ಪದಗಳು ಅಷ್ಟಾಗಿ ನೆನಪಿನಲ್ಲಿ ಉಳಿಯುವ ಮಿಸ್ಟೇಕ್ ಅಲ್ಲ.
ಚಿತ್ರ ಪ್ರದರ್ಶನದ ನಂತರ ದತ್ತಣ್ಣನ ಜೊತೆಗೆ ಪುಟ್ಟ ಸಂವಾದ ಇತ್ತು.

ದತ್ತಣ್ಣನ ಮಾತುಗಳ ಸಾರಾಂಶ :
ಪುಟ್ಟ ಬದಲಾವಣೆಗಳೊಂದಿಗೆ ತೆರೆ ಏರಿದ ಚಿತ್ರವನ್ನು ಅನಂತಮೂರ್ತಿ ಮೆಚ್ಚಿಕೊಂಡಿದ್ದಾರೆ. ಆದರೆ ಚಿತ್ರಕ್ಕೆ ಸಲ್ಲಬೇಕಾದ ಮಾನ್ಯತೆ ಸಂದಿಲ್ಲ ಎಂಬ ಬಗ್ಗೆ ಬೇಜಾರು ಮಾಡಿಕೊಂಡಿದ್ದಾರೆ. ಉತ್ತಮ ಕಥೆ ಪ್ರಶಸ್ತಿ ಸಿಕ್ಕಾಗಲೂ ಅನಂತಮೂರ್ತಿಯವರು ಅದನ್ನು ನಿರಾಕರಿಸಿದ್ದಾರೆ. ಯಾಕಂದರೆ ಕಥೆ ಬರೆದಾಗ ಅದಕ್ಕೆ ಸಲ್ಲಬೇಕಾದ ಗೌರವ ದಕ್ಕಿದೆ. ಈಗೇನಿದ್ದರೂ ಚಿತ್ರಕ್ಕೆ ಗೌರವ ಸಲ್ಲಬೇಕು ಎಂಬುದು ಅವರ ಆಸೆ. ಬೆಂಗಳೂರಲ್ಲಿ ಪ್ರದರ್ಶನಕ್ಕಾಗಿ ಚಿತ್ರಮಂದಿರಗಳಲ್ಲಿ ಅವಕಾಶ ಸಿಕ್ಕಲಿಲ್ಲ. ಆದರೆ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಚಿತ್ರ ಪ್ರದರ್ಶನಗೊಂಡಿದೆ. ಚಿತ್ರ ನಿರ್ದೇಶಕ ಲಿಂಗದೇವರಿಗೆ ಒಳ್ಳೇ ಚಿತ್ರ ಮಾಡಬೇಕು ಎಂಬ ತುಡಿತವೇ ಈ ಚಿತ್ರದ ಹಿಂದಿರುವ ಪ್ರೇರಣೆ !

 

ಪೂರಕ ಓದಿಗೆ:

ಈ ಕವಿ ಮತ್ತೆ ಚಿಗುರೊಡಿದಿದೆ `ಬೇರು' ನಂತರ `ಮೌನಿ'ಯಾಗಿ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com