`ಮಾಸ್ತಿ'ಚಿತ್ರದ ಹೆಸರು
ಬದಲಾವಣೆಗೆ ರಾಮು ಅಸ್ತು
ಚಿತ್ರದ ಮುಹೂರ್ತದ
ಸಂದರ್ಭದಲ್ಲಿ ಗಲಾಟೆ
ಬೆಂಗಳೂರು:
ಮಾಸ್ತಿ ಚಿತ್ರ ಶೀರ್ಷಿಕೆಯನ್ನು ಬದಲಾಯಿಸಲು ನಿರ್ಮಾಪಕ ರಾಮು ಒಪ್ಪಿಕೊಳ್ಳುವ ಮೂಲಕ
ಮಾಸ್ತಿ ಚಿತ್ರ ವಿವಾದ ಅಂತ್ಯಗೊಂಡಿದೆ.
`ಮಾಸ್ತಿ' ಚಿತ್ರದ ಹೆಸರನ್ನು
ಬದಲಾಯಿಸದೆ ಚಿತ್ರೀಕರಣಕ್ಕೆ ಮುಂದಾದರೆ ಉಗ್ರ ಹೋರಾಟ ನಡೆಸುವುದಾಗಿ ಕನ್ನಡ ಸಾಹಿತ್ಯ
ಪರಿಷತ್ ಶುಕ್ರವಾರ ಎಚ್ಚರಿಕೆ ನೀಡಿತ್ತು. ಇದನ್ನು ಕಡೆಗಣಿಸಿದ ನಿರ್ದೇಶಕ ಶಿವಮಣಿ
ಶೀರ್ಷಿಕೆ ಬದಲಾಯಿಸಲು ನಿರಾಕರಿಸಿ ಶನಿವಾರ ಚಿತ್ರದ ಮುಹೂರ್ತ ನಡೆಸಲು ಎಲ್ಲ
ತಯಾರಿಗಳನ್ನೂ ನಡೆಸಿದ್ದರು.
ಆದರೆ ಪ್ರಕರಣವನ್ನು
ಗಂಭೀರವಾಗಿ ಪರಿಗಣಿಸಿದ ರಕ್ಷಣಾ ವೇದಿಕೆ ಮತ್ತು ಕನ್ನಡ ಸಂಘದ ಪ್ರತಿಭಟನಾಕಾರರು
ಚಿತ್ರದ ಮುಹೂರ್ತ ಸ್ಥಳಕ್ಕೆ ಧಾವಿಸಿ ಪ್ರತಿಭಟನೆ ನಡೆಸಿದ್ದಲ್ಲದೆ ಚಿತ್ರ ನಿರ್ಮಾಪಕರ ಮೇಲೆ
ಹಲ್ಲೆಗೆ ಯತ್ನಿಸಿದರು. ಚಿತ್ರೀಕರಣ ಸ್ಥಳದಲ್ಲಿ ವಾತಾವರಣ ಉದ್ವಿಗ್ನಗೊಂಡಾಗ, ಕರ್ನಾಟಕ
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಗಂಗಾರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು
ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರನಿರ್ಮಾಪಕ
ರಾಮು ಹಾಗೂ ನಿರ್ದೇಶಕ ಶಿವಮಣಿ ಚಿತ್ರದ ಹೆಸರನ್ನು ಬದಲಾಯಿಸಲು ಒಪ್ಪಿಕೊಂಡ ಮೇಲೆ
ಪ್ರತಿಭಟನಾಕಾರರು ಶಾಂತರಾದರು.
ಘಟನೆಯ ಹಿನ್ನೆಲೆ:
ಉಪೇಂದ್ರ ಅಭಿನಯಿಸುತ್ತಿರುವ
ರಾಮು ನಿರ್ಮಾಣದ ಹೊಸ ಚಿತ್ರಕ್ಕೆ ಮಾಸ್ತಿ ಎಂದು ಹೆಸರಿಡಲಾಗಿತ್ತು. ಆದರೆ ಕನ್ನಡಕ್ಕೆ
ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರರ ಊರಿನ ಹೆಸರನ್ನು
ಚಿತ್ರವೊಂದಕ್ಕೆ ಇಡುವುದು ಶೋಭೆಯಲ್ಲ ಎಂದು ಚಂದ್ರಶೇಖರ ಪಾಟೀಲ್ ನೇತೃತ್ವದ
ಸಾಹಿತಿಗಳ ಬಳಗ ಅಭಿಪ್ರಾಯಪಟ್ಟಿತ್ತು.