|
ಅಶ್ವಮೇಧ
ಲೇಖಕ ಅಶೋಕ ಹೆಗಡೆಯವರ ಮೊದಲ ಕಾದಂಬರಿ `ಅಶ್ವಮೇಧ'
ಕುರಿತು ಖ್ಯಾತ ವಿಮರ್ಶಕ ಜಿ.ಎಸ್.ಅಮೂರ ರವರು ನೀಡಿದ ಚಿತ್ರಣ.
ಅಶ್ವಮೇಧ (ಕಾದಂಬರಿ)
ಲೇ : ಅಶೋಕ ಹೆಗಡೆ
ಅಕ್ಷರ ಪ್ರಕಾಶನ
ಹೆಗ್ಗೋಡು,
ಸಾಗರ - ೫೭೭ ೪೧೭
ಫೋನ್ : ೦೮೧೮೩-೨೬೫೪೭೬೧
ವೃತ್ತಿಯಿಂದ ಅರ್ಥಶಾಸ್ತ್ರಜ್ಞರಾದ ಅಶೋಕ ಹೆಗೆಡೆಯವರು, ಸಾಹಿತ್ಯ
ಕ್ಷೇತ್ರವನ್ನು ಪ್ರವೇಶಿಸಿದ್ದು ಸಣ್ಣಕತೆಯ ಮೂಲಕ. ಅವರ
ಎರಡು ಕಥಾಸಂಗ್ರಹಗಳು ಈಗಾಗಲೆ ಪ್ರಕಟವಾಗಿವೆ. ಈಗ ಅವರು
ಸಹಜವಾಗಿಯೇ ಕಾದಂಬರಿಯ ಪ್ರಕಾರದತ್ತ ಆಕರ್ಷಿತರಾಗಿದ್ದಾರೆ.
ಅಶ್ವಮೇಧ ಅವರ ಮೊದಲ ಕಾದಂಬರಿ. ಕನ್ನಡ ಕಾದಂಬರಿ ತನ್ನ
ಪ್ರಾರಂಭದ ಕಾಲದಿಂದಲೂ ಸಾಮಾಜಿಕ ಸ್ಥಿತ್ಯಂತರಗಳಲ್ಲಿ ವಿಶೇಷವಾದ
ಆಸಕ್ತಿ ತೋರಿದೆ. ಅಶೋಕರ ಕಾದಂಬರಿಯೂ ಈ ಮಾತಿಗೆ ಅಪವಾದವಲ್ಲ.
ಅಘನಾಶಿನಿ ತಪ್ಪಲಿನ ವಲ್ಲಿಗದ್ದೆಯೆಂಬ ಒಂದು ಹಳ್ಳಿಯನ್ನೆ
ಕೇಂದ್ರವಾಗಿರಿಸಿಕೊಂಡು ಕಳೆದ ಶತಮಾನದ ಎಪ್ಪತ್ತು ಹಾಗೂ
ಎಂಬತ್ತರ ದಶಕಗಳ ಸುಮಾರಿಗೆ ನಡೆದಿರಬಹುದಾದ ಸಾಮಾಜಿಕ
ಪರಿವರ್ತನೆಯ ಒಂದು ಸ್ಪಷ್ಟ ಚಿತ್ರವನ್ನು ಅವರು ಇಲ್ಲಿ
ಒದಗಿಸಿದ್ದಾರೆ. ಈ ಚಿತ್ರದಲ್ಲಿ ಸಮಗ್ರತೆಯೊಡನೆ ಸಾಕಷ್ಟು
ಒಳನೋಟಗಳೂ ಇವೆ.
ವಲ್ಲಿಗದ್ದೆಯಲ್ಲಿ ನಾವು ನೋಡುವ ಸಮಾಜ ಒಂದು
ಶ್ರೇಣೀಕೃತವಾದ ಫ್ಯೂಡಲ್ ವ್ಯವಸ್ಥೆಯನ್ನು ಸಾಕಷ್ಟು
ಭದ್ರವಾಗಿಯೇ ಉಳಿಸಿಕೊಂಡ ಸಮಾಜ. ದೂರದಲ್ಲಿದ್ದರೂ ಈ
ಸಮಾಜವನ್ನು ನಿಯಂತ್ರಿಸುವ ಮಠ, ಗದ್ದೆ-ತೋಟಗಳ ಕೃಷಿಯಿಂದ
ಸ್ಥಿತಿವಂತರಾದ ಬ್ರಾಹ್ಮಣರು, ಸಾಮಾಜಿಕ ವ್ಯವಸ್ಥೆಯಲ್ಲಿ ಇವರಿಗಿಂತ
ಕೆಳಗಿನವರಾದರೂ ಪೂರ್ತಿಯಾಗಿ ಬ್ರಾಹ್ಮಣರನ್ನೇ ಅವಲಂಬಿಸದ
ಈಡಿಗರು, ಈ ಎರಡೂ ಸಮುದಾಯಗಳನ್ನು ಅವಲಂಬಿಸಿದ ಹರಿಜನರು -
ಹೀಗೆ ಈ ಸಮುದಾಯದ ರಚನೆಯಿದೆ. ಭೂ ಸುಧಾರಣೆಗಳ
ಮೂಲಕ ಪರಿವರ್ತನೆಯ ಪ್ರಕ್ರಿಯೆ ಈಗಾಗಲೇ ಈ ಸಮಾಜದಲ್ಲಿ
ಪ್ರಾರಂಭವಾಗಿದೆ. ಈಡಿಗರಿಗೂ ತಮ್ಮದೆ ಆದ ಭೂಮಿಗಳಿವೆ.
ಸುಬ್ರಾಯ ಹೆಗಡೆಯ ಮಗ ಶ್ರೀಧರನಂಥ ಹುಡುಗರು ಶಾಲೆ,
ಕಾಲೇಜುಗಳನ್ನು ಕಂಡಿದ್ದಾರೆ.
ಕೋರ್ಟ್ ತಿಮ್ಮಪ್ಪನ ಮೂಲಕ ಕೋರ್ಟು ಕಚೇರಿಗಳೊಡನೆಯೂ
ಹಳ್ಳಿಯ ಜನರ ಸಂಬಂಧವಿದೆ. ಆದರೆ ನಿಜವಾದ ಚಲನೆಯನ್ನು ಈ
ಸಮಾಜ ಇನ್ನೂ ಕಂಡಿಲ್ಲ. ಜನರ ಧಾರ್ಮಿಕ ಭಾವನೆಗಳನ್ನು
ಜಾಗೃತವಾಗಿರಿಸುವ ಮೂಲಕ ಹಾಗು ಆರ್ಥಿಕ ವ್ಯವಸ್ಥೆಯ ಮೇಲಿನ
ಹಿಡಿತದಿಂದ ಬ್ರಾಹ್ಮಣರು ಇನ್ನೂ ಪ್ರಬಲರಾಗಿಯೇ ಇದ್ದಾರೆ. ಅವರ
ಸಾಮಾಜಿಕ ಧೋರಣೆಗಳೂ ಮೊದಲಿನಂತೆಯೆ ಇವೆ.
ಊರಿಗೆ ಸಂಪೂರ್ಣವಾಗಿ ಅಪರಿಚಿತನಾದ ರಾಜೀವ ಗಾಯತೊಂಡೆಯ
ಆಗಮನದಲ್ಲಿ ಮೊದಮೊದಲು ಪರಿವರ್ತನೆಯ ಯಾವ
ಮುನ್ಸೂಚನೆಗಳು ಕಾಣುವದಿಲ್ಲ. ಆದರೆ ಅದೇ ಈ ಕ್ರಿಯೆಯ
ಪ್ರಬಲವಾದ ಕಾರಣವಾಗುತ್ತದೆ. ಶಿವರಾಮಜ್ಜನ ಮೊಮ್ಮಗನಿಂದ ಅವನ
ಆಸ್ತಿಯನ್ನು ಹರಾಜಿನಲ್ಲಿ (ಈ ಕ್ರಮ ಕೂಡ ಊರಿಗೆ ಹೊಸತಾದುದು)
ಖರೀದಿಸಿದ ರಾಜೀವನನ್ನು ಊರು ಸ್ವೀಕರಿಸುವುದೇ ಇಲ್ಲ. ಅವನ
ಪೂರ್ವಾಪರಗಳನ್ನು ತಿಳಿಯದ ಜನ ಹೀಗೆ ವರ್ತಿಸುವುದು
ಅಸಹಜವಲ್ಲವಾದರೂ ಅವನನ್ನು ಪೂರ್ತಿ ಹೊರಗಿಡುವುದೂ ಸರಿ
ಎನಿಸುವುದಿಲ್ಲ. ರಾಜೀವನಿಗೆ ಈ ಯಾವುದರ ಪರಿವೆ ಇಲ್ಲ. ಅವನು
ತನ್ನಷ್ಟಕ್ಕೆ ತಾನಿದ್ದುಬಿಡುತ್ತಾನೆ. ಆದರೆ ಒಂದು ಘಟನೆಯಿಂದಾಗಿ ಅವನು
ಬ್ರಾಹ್ಮಣ ಸಮುದಾಯದ ವಿರೋಧ ಕಟ್ಟಿಕೊಳ್ಳುವಂತಾ ಗುತ್ತದೆ.
ರಾಜೀವನಿಗೆ ಸೇರಿದ ಜಾಗವೊಂದನ್ನು ಊರಿನ ಪ್ರಮುಖರಲ್ಲೊಬ್ಬರಾದ
ಸುಬ್ರಾಯ ಹೆಗಡೆ ಆಕ್ರಮಿಸಿ ಬೇಲಿ ಕಟ್ಟಿದಾಗ ರಾಜೀವನ ಪ್ರತಿಕ್ರಿಯೆ
ತೀರ ಅನಿರೀಕ್ಷಿತವಾಗಿರುತ್ತದೆ. ಉಳಿದವರಂತೆ ಕೋರ್ಟು ಕಚೇರಿ ಹತ್ತದೆ
ಅವನು ನೇರವಾಗಿ ಹೆಗಡೆಯವರನ್ನು ಶಿಕ್ಷಿಸುತ್ತಾನೆ. ಇದು ಅವನ
ವ್ಯಕ್ತಿತ್ವದಲ್ಲಿ ನಮಗೆ ದೊರೆಯುವ ಮೊದಲನೆಯ ಒಳನೋಟ.
ಮುಂದೆ ನಮಗೆ ಗೊತ್ತಾಗುವಂತೆ ರಾಜೀವನಿಗೂ ಅಸ್ಪಷ್ಟವಾದ
ಹಿನ್ನಲೆಯೊಂದಿದೆ. ಅವನು ಗುರು ಎಂದು ಕರೆಯುವ ಕೊಂಕಣ್
ಸೇನ್ ಧಾರಾವಿಯ ಕೊಳೆಗೇರಿಯಲ್ಲಿ ಕೆಲಸ ಮಾಡುವ ಸಮಾಜ
ಸೇವಕ. ಆದರೆ ಅವನು ಮುಂಬಯಿಯಲ್ಲಿ ಏನು ಮಾಡುತ್ತಿದ್ದ?
ಅದನ್ನು ಬಿಟ್ಟು ದೂರದ ಮೂಲೆಯೊಂದರಲ್ಲಿರುವ ಹಳ್ಳಿಗೆ ಹೇಗೆ
ಬಂದ, ಶಿವರಾಮಜ್ಜನ ತೋಟವನ್ನು ಕೊಳ್ಳಲು ಅವನಿಗೆ ಹಣ ಎಲ್ಲಿಂದ
ಬಂತು ಮುಂತಾದ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ.
ಅವನ ಕೃತಿಗಳಲ್ಲಿಯೇ ಅವನ ವ್ಯಕ್ತಿತ್ವವನ್ನು ನಾವು ಅರ್ಥ
ಮಾಡಿಕೊಳ್ಳಬೇಕಾಗುತ್ತದೆ.
ಅಶೋಕರ ಕಾದಂಬರಿಯನ್ನೋದುವಾಗ ಮೇಲಿಂದ ಮೇಲೆ
ನೆನಪಾಗುವ ಎರಡು ಕೃತಿಗಳೆಂದರೆ ಯು. ಆರ್
ಅನಂತಮೂರ್ತಿಯವರ ಭಾರತೀಪುರ ಹಾಗು ಶಾಂತಿನಾಥ
ದೇಸಾಯಿಯವರ ಬೀಜ. ಆದರೆ ಜಗನ್ನಾಥ ಹಾಗೂ ಶ್ರೇಯಾಂಸರ
ಬೌದ್ಧಿಕ ಆಸಕ್ತಿಗಳು ರಾಜೀವನಲ್ಲಿ ಇದ್ದಂತಿಲ್ಲ. ಅವನು ಕ್ರಾಂತಿಯಲ್ಲಿ
ತೊಡಗಿಕೊಳ್ಳುವುದು ಉದ್ದೇಶಪೂರ್ಣವಾಗಿ ಅಲ್ಲ. ಆದರೆ ಒಮ್ಮೆ
ತೊಡಗಿಕೊಂಡ ನಂತರ ಸಂಪೂರ್ಣವಾಗಿ ಕ್ರಿಯಾಶೀಲನಾಗುತ್ತಾನೆ.
ಅಶ್ವಮೇಧದ ಸಮಾಜ ಭಾರತೀಪುರ ಹಾಗು ಬೀಜಗಳ
ಸಮಾಜಗಳಿಗೆ ಹೋಲಿಸಿದರೆ ಆಧುನಿಕತೆಯಿಂದ ಹೆಚ್ಚು
ದೂರವಾದುದು. ಅಶ್ವಮೇಧದಲ್ಲಿ ರಾಷ್ಟ್ರೀಯ ಅಂತಾರಾಷ್ಟ್ರೀಯ
ಘಟನೆಗಳಿಗೆ ಆಸ್ಪದವಿಲ್ಲ. ಅಶೋಕರು ವಲ್ಲಿಗದ್ದೆಯಂಥ
ಹಳ್ಳಿಯನ್ನು ಆಯ್ದುಕೊಂಡುದುದು ಇದಕ್ಕೆ ಮುಖ್ಯ ಕಾರಣವೆಂದು
ತೋರುತ್ತದೆ. ಅವರ ಕಾದಂಬರಿಯ ಧಾಟಿಯೂ ಅನಂತಮೂರ್ತಿ ಹಾಗು
ದೇಸಾಯಿಯವರ ಕಾದಂಬರಿಗಳ ಧಾಟಿಗಿಂತ ಭಿನ್ನವಾಗಿದೆ. ಅಶೋಕರ
ಕಾದಂಬರಿಯಲ್ಲಿ ಎದ್ದು ಕಾಣುವ ವಸ್ತುನಿಷ್ಟತೆ ಇರುವುದು ಅವರ
ವೈಶಿಷ್ಟ್ಯವಾಗಿದೆ. ಇಲ್ಲಿಯ ಯಾವ ಪಾತ್ರಗಳೂ ಕೇಂದ್ರ
ಪಾತ್ರಗಳಲ್ಲ. ಆದ್ದರಿಂದ ದೃಷ್ಟಿಕೋನವೂ ವಸ್ತುನಿಷ್ಟವಾಗಿದೆ.
ಕಾದಂಬರಿಯ ತಂತ್ರದಲ್ಲಿ ಅಶೋಕರು ಹೊಸ
ಪ್ರಯೋಗಗಳನ್ನೇನೂ ಮಾಡುವುದಿಲ್ಲ. ಆದರೆ ಅದರ ಆದ್ಯತೆಗಳ
ಅರಿವು ಅವರಲ್ಲಿ ಗಟ್ಟಿಯಾಗಿದೆ. ಕಾದಂಬರಿಯ ಯಶಸ್ಸು ಅದು
ತನ್ನದೆ ಆದ ವಿಶ್ವಾಸನೀಯ ಜಗತ್ತನ್ನು ಸೃಷ್ಟಿಸುವದನ್ನು
ಆವಲಂಬಿಸಿರುತ್ತದೆ. ಈ ಕಾಯಕದಲ್ಲಿ ಅವರು ಸಂಪೂರ್ಣವಾಗಿ
ಯಶಸ್ವಿಯಾಗಿದ್ದಾರೆ. ಕಾದಂಬರಿಯ ಮಾಧ್ಯಮ ಅವರ ಪ್ರತಿಭೆ
ಹಾಗು ಉದ್ದೇಶಗಳಿಗೆ ಒಗ್ಗಿದೆ. ಹೀಗಾಗಿ ಅವರಿಂದ ಇದಕ್ಕೂ ಹೆಚ್ಚಿನ
ಪರಿಣಿತಿಯ ಕೃತಿಗಳನ್ನು ನಿಶ್ಚಿತವಾಗಿಯೂ ಅಪೇಕ್ಷಿಸಬಹುದಾಗಿದೆ.
ವಿಪ್ರೋದಂಥ ದೊಡ್ಡ ಸಂಸ್ಥೆಯಲ್ಲಿ ಮಹತ್ವದ
ಸ್ಥಾನದಲ್ಲಿದ್ದುಕೊಂಡು ಅಶೋಕರು ತಮ್ಮ ಅಭಿವ್ಯಕ್ತಿಗಾಗಿ
ಸಾಹಿತ್ಯದತ್ತ ತಿರುಗಿದುದು ಕನ್ನಡದ ದೃಷ್ಟಿಯಿಂದ ಬಹಳ ಒಳ್ಳೆಯ
ಲಕ್ಷಣ. ಅವರು ತಮ್ಮ ಸಮಕಾಲೀನ ಅನುಭವಗಳಿಗೂ
ಕಾದಂಬರಿಯಲ್ಲಿ ಭಾಷೆ ಮತ್ತು ಆಕಾರಗಳನ್ನು ಕೊಡಲಿ ಎಂದು
ಹಾರೈಸುತ್ತೇನೆ.
|