|
ಅನನ್ಯ ಬದುಕಿನ ಅದ್ಭುತ ಅಲಂಕಾರಗಳು
ಗೌರಿ ಲಂಕೇಶ್‌ರವರ `ದರವೇಶಿ ಕತೆಗಳು' ಪುಸ್ತಕದ ಬಗ್ಗೆ
ಜಮೀಲಾ ರಹೀಂ ಹೀಗೆ ಬರೆದಿದ್ದಾರೆ

ದರವೇಶಿ ಕತೆಗಳು
ಲೇ: ಗೌರಿಲಂಕೇಶ್
ಪ್ರ: ಸಿವಿಜಿ ಪಬ್ಲಿಕೇಷನ್ಸ್
ಬೆಲೆ : ತೊಂಬತ್ತು ರೂಪಾಯಿ
ಒಮ್ಮೆ ಒಬ್ಬ ಮನುಷ್ಯ ಅಂಗಡಿಯೊಂದಕ್ಕೆ ಹೋಗಿ `ನಿಮ್ಮಲ್ಲಿ ತೊಗಲು
ಸಿಗುತ್ತದೆಯೇ?' ಎಂದು ಮಾಲೀಕನನ್ನು ಕೇಳಿದ.
`ಸಿಗುತ್ತದೆ'
`ಮೊಳೆ?'
`ಇದೆ'
`ದಾರ?'
`ಇದೆ'
`ಸೂಜಿ'
ಇದೆ.
ಹಾಗಾದರೆ ಅವನ್ನೆಲ್ಲ ಉಪಯೋಗಿಸಿ ನೀವೇ ಯಾಕೆ ಪಾದರಕ್ಷೆಗಳನ್ನು
ತಯಾರಿಸಬಾರದು?
ಸೂಫಿ ಕತೆಗೆ ಇದೊಂದು ಸ್ಯಾಂಪಲ್. ಇಷ್ಟೇ ಚಿಕ್ಕದಾದ ಅಥವಾ
ಇದಕ್ಕಿಂತ ತುಸು ದೊಡ್ಡದಾದ ಸುಮಾರು ೪೦ ಕಥೆಗಳನ್ನು
`ದರವೇಶಿ ಕಥೆಗಳು ಹೆಸರಿನಲ್ಲಿ ಕನ್ನಡದ ಓದುಗರಿಗೆ
ಲಭ್ಯವಾಗಿಸಿದ್ದಾರೆ ಗೌರಿ ಲಂಕೇಶ್.
ಗಾತ್ರದಲ್ಲಿ ಚಿಕ್ಕದಾಗಿದ್ದರೂ ದಟ್ಟ ಜೀವನಾನುಭವವನ್ನು
ಒಳಗೊಂಡಿರುವುದು ಇಲ್ಲಿನ ಸೂಫಿ ಕತೆಗಳ ವೈಶಿಷ್ಟ್ಯ.
ಹತ್ತಿಪ್ಪತ್ತು ಪುಟಗಳ ಕತೆಯೂ ಹೇಳದಷ್ಟು
ನೀತಿಬೋಧೆಯನ್ನು ಸೂಫಿ ಕತೆಗಳು ನಾಲ್ಕೇ ಸಾಲಿನಲ್ಲಿ
ಹೇಳಬಲ್ಲವು.
ದರವೇಶಿ ಕತೆಗಳನ್ನು ಓದುತ್ತಾ ಹೋಗುವಾಗ ಇದು ಸೂಫಿ
ಕತೆಗಾರ ಇಂದ್ರೀಸ್ ಶಾರ `ಟೇಲ್ಸ್ ಆಫ್ ದಿ ಡರ್ವಿಶಸ್' ಪುಸ್ತಕದ
ಅನುವಾದ ಎಂಬ ಸಣ್ಣ ಸಂದೇಹವೂ ಕಾಡಲು ಸಾಧ್ಯವಿಲ್ಲ; ಗೌರಿ ಲಂಕೇಶ್
ಅಷ್ಟೊಂದು ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ. ಸೂಫಿ ಕತೆಗಳು
ಸಾವಿರಾರು ವರ್ಷಗಳಷ್ಟು ಹಳೆಯವಾಗಿದ್ದರೂ ಇವತ್ತಿಗೂ ಅವು
ಪ್ರಸ್ತುತ. ಇದಕ್ಕೆ ಅತ್ಯುತ್ತಮ ಉದಾಹರಣೆ `ಫಾತಿಮಾಳ ಡೇರೆ'
ಎಂಬ ಕತೆ. ಫಾತಿಮಾ ಬಡ ನೂಲುಕಾರನೊಬ್ಬನ ಮಗಳು. ಒಮ್ಮೆ
ಅವಳ ತಂದೆ ವ್ಯಾಪಾರಕ್ಕೆ ದೂರದೂರಿಗೆ ಹೊರಡುವಾಗ ಮಗಳನ್ನೂ
ಕರೆದೊಯ್ಯುತ್ತಾನೆ. ಅಲ್ಲೆಲ್ಲಾದರೂ ಒಳ್ಳೆಯ ಹುಡುಗ ಸಿಕ್ಕಿದರೆ
ಮಗಳಿಗೆ ಮದುವೆ ಮಾಡಿಸಬಹುದು ಎಂಬ ದೂರದೃಷ್ಟಿ ಫಾತಿಮಾಳ
ತಂದೆಯದು. ಹಾಗೆ ವ್ಯಾಪಾರದ ನಿಮಿತ್ತ ದೂರದೂರುಗಳಿಗೆ
ತಂದೆಯ ಜತೆ ಹೋಗುತ್ತಿರುವಾಗ ಫಾತಿಮಾ, ತನ್ನ ಭವಿಷ್ಯದ
ಗಂಡನನ್ನು ನೆನೆದು ರೋಮಾಂಚನಗೊಳ್ಳುತ್ತಾಳೆ.
ದುರದೃಷ್ಟವಶಾತ್ ಒಂದು ದಿನ ಅವರು ಪ್ರಯಾಣಿಸುತ್ತಿರುವ
ಹಡಗು ಚಂಡಮಾರುತಕ್ಕೀಡಾಗಿ ದ್ವಂಸವಾಗುತ್ತದೆ.
ಫಾತಿಮಾಳ ತಂದೆ ಅಸುನೀಗುತ್ತಾನೆ. ಫಾತಿಮಾ ಅಲೆಕ್ಸಾಂಡ್ರಿಯ
ಕಡಲ ತೀರಕ್ಕೆ ಬಂದು ಬೀಳುತ್ತಾಳೆ. ಈ ಘಟನೆ ಅವಳನ್ನು
ಅಧೀರಳನ್ನಾಗಿಯೂ, ನಿರ್ಗತಿಕಳನ್ನಾಗಿಯೂ ಮಾಡುತ್ತದೆ. ದಿಕ್ಕು
ದೆಸೆಯಿಲ್ಲದೆ ಸಮುದ್ರ ತೀರದಲ್ಲಿ ಅಲೆಯುತ್ತಿದ್ದ ಫಾತಿಮಾಗಳಿಗೆ
ನೇಕಾರರ ಸಂಸಾರವೊಂದು ದಯೆ ತೋರುತ್ತದೆ. ಅವಳಿಗೆ
ನೇಕಾರಿಕೆಯನ್ನು ಕಲಿಸಿಕೊಡುತ್ತದೆ. ಹೊಸ ವೃತ್ತಿ ಕಲಿತುಕೊಂಡ
ಫಾತಿಮಾ ತನ್ನ ಕಷ್ಟಗಳನ್ನು ಮರೆಯುತ್ತಾಳೆ. ಕಾಲ
ಉರುಳುತ್ತಲೇ ಇರುತ್ತದೆ.
ಒಂದು ದಿನ ಸಮುದ್ರ ತೀರದಲ್ಲಿದ್ದಾಗ ಅವಳನ್ನು ವ್ಯಾಪಾರಿಗಳು
ಹೊತ್ತೊಯ್ಯುತ್ತಾರೆ. ಕರುಣೆ ಎಂಬ ಶಬ್ದವೇ ಅರಿಯದ
ವ್ಯಾಪಾರಿಗಳು, ಫಾತಿಮಾಳನ್ನು ಇಸ್ತಾಂಬುಲ್‌ಗೆ ಕರೆದೊಯ್ದು
ಯಾರಿಗೋ ಮಾರಿ ಬಿಡುತ್ತಾರೆ. ಅವಳನ್ನು ಮಾರಾಟಕ್ಕೆಂದು
ಮಾರುಕಟ್ಟೆಯಲ್ಲಿಟ್ಟಾಗ, ಹಡಗುಗಳಿಗೆ ಮರದ
ಕೊಳವೆಗಳನ್ನು ಮಾಡುವವನೊಬ್ಬ ಅವಳನ್ನು ಖರೀದಿಸುತ್ತಾನೆ.
ತನ್ನ ಹೆಂಡತಿಯ ದಾಸಿಯಾಗಿ ಫಾತಿಮಾ ಕೆಲಸ ಮಾಡಲಿ ಎಂಬುದು
ಅವನ ಉದ್ದೇಶವಾಗಿತ್ತು. ಆದರೆ ಆತ ಮನೆಗೆ ಹಿಂದಿರುಗಿದಾಗ,
ಕಡಲುಗಳ್ಳರು ಅವನ ಸರಕುಗಳನ್ನು, ಹಣವನ್ನು ದೋಚಿದ್ದರು.
ಬೇರೆ ದಾರಿಯೇ ಇಲ್ಲದೆ, ತನ್ನ ಹೆಂಡತಿ ಮತ್ತು ಫಾತಿಮಾಳನ್ನು
ಮರದ ಕೊಳವೆಗಳನ್ನು ತಯಾರಿಸಲು ಹಚ್ಚುತ್ತಾನೆ.
ಫಾತಿಮಾ ತುಂಬಾ ಖುಷಿಯಿಂದಲೇ ತನಗೆ ವಹಿಸಿದ ಕೆಲಸ
ಮಾಡುತ್ತಿರುತ್ತಾಳೆ. ಮಾಲೀಕನಿಗೂ ಅವಳ ಮೇಲೆ ನಂಬಿಕೆ
ಹುಟ್ಟುತ್ತದೆ. ಒಂದು ದಿನ ಮರದ ಕೊಳವೆಗಳನ್ನು ದ್ವೀಪಕ್ಕೆ
ಕೊಂಡೊಯ್ದು ಮಾರುವಂತೆ ಮಾಲೀಕ ಆಕೆಗೆ ಹೇಳುತ್ತಾನೆ.
ಮಾಲೀಕನ ಆದೇಶದಂತೆ ಚೈನಾ ದೇಶಕ್ಕೆ ಹೊರಟು ನಿಂತ
ಫಾತಿಮಾಳಿಗೆ ಮತ್ತೆ ಬದುಕು ಕೈಕೊಡುತ್ತದೆ. ತೂಫಾನೊಂದು
ಬೀಸಿ, ಅವಳು ಅನಾಮಧೇಯ ಕಡಲ ತೀರಕ್ಕೆ ಬಿಸಾಲ್ಪಡುತ್ತಾಳೆ.
ಪ್ರತಿಬಾರಿಯೂ ಎಲ್ಲವೂ ಸರಿಹೋಯಿತು ಅಂದುಕೊಳ್ಳುತ್ತಿರುವಾಗಲೇ
ಯಾವುದಾದರೂ ಅವಘಡ ಸಂಭವಿಸಿ, ತನ್ನ ಬದುಕು ಛಿದ್ರವಾಗುವ
ಪರಿ ನೆನೆದು ಫಾತಿಮಾ ಖಿನ್ನಳಾಗುತ್ತಾಳೆ.
ಇದೇ ಹೊತ್ತಿಗೆ ಚೈನಾದ ಒಂದು ಪ್ರದೇಶದ ಚಕ್ರವರ್ತಿ ಡೇರೆ
ನಿರ್ಮಿಸುವ ಆಳಿಗಾಗಿ ಕಾಯುತ್ತಿರುತ್ತಾನೆ. ಆಗಲೇ ಎರಡು ಮೂರು
ವೃತ್ತಿ ಕಲಿತುಕೊಂಡಿದ್ದ ಫಾತಿಮಾ, ಚಕ್ರವರ್ತಿಯ ಕಣ್ಣಿಗೆ
ಬೀಳುತ್ತಾಳೆ; ಡೇರೆ ನಿರ್ಮಿಸಿಕೊಡಲು ಒಪ್ಪುತ್ತಾಳೆ. ತನಗೆ ಡೇರೆ
ನಿರ್ಮಿಸಲು ಹಗ್ಗ ಬೇಕು ಎನ್ನುತ್ತಾಳೆ. ಆದರೆ ಹಗ್ಗ ಎಂಬುದೇ
ಅಲ್ಲಿರಲಿಲ್ಲ. ತಂದೆಯ ಜತೆ ನೂಲುವ ವೃತ್ತಿ ಕಲಿತುಕೊಂಡಿದ್ದ ಆಕೆ,
ನಾರುಗಳನ್ನು ಸಂಗ್ರಹಿಸಿ ಹಗ್ಗ ತಯಾರಿಸುತ್ತಾಳೆ. ನಂತರ
ತನಗೆ ಗಟ್ಟಿಯಾದ ಬಟ್ಟೆ ಬೇಕು ಅನ್ನುತ್ತಾಳೆ. ಆದರೆ ಯಾರ
ಬಳಿಯೂ ಬಟ್ಟೆ ಇರುವುದಿಲ್ಲ.
ಅಲೆಕ್ಸಾಂಡ್ರಿಯಾದ ನೇಕಾರರೊಂದಿಗೆ ನೇಕಾರಿಕೆ ಕಲಿತುಕೊಂಡಿದ್ದ
ಅವಳಿಗೆ ಬಟ್ಟೆ ಇಲ್ಲದಿದ್ದುದು ಸಮಸ್ಯೆಯೆಂದು ಅನ್ನಿಸುವುದಿಲ್ಲ. ತಾನೇ
ಬಟ್ಟೆಯನ್ನು ನೇಯುತ್ತಾಳೆ. ಡೇರೆ ನಿರ್ಮಿಸಲು ತನಗೆ
ನಿಲುಗಂಬಗಳು ಬೇಕು ಎನ್ನುತ್ತಾಳೆ. ಅಲ್ಲಿ ನಿಲುಗಂಬಗಳೂ ಇರುವುದಿಲ್ಲ.
ಇಸ್ತಾಂಬುಲ್‌ನಲ್ಲಿ ಹಡಗಿನ ಕೊಳವೆಗಳನ್ನು ತಯಾರಿಸಿ
ಅನುಭವವಿದ್ದುದರಿಂದ, ಫಾತಿಮಾಳೇ ಸ್ವತಃ ನಿಲುಗಂಬಗಳನ್ನು
ತಯಾರಿಸುತ್ತಾಳೆ. ಹೀಗೆ ಪ್ರತಿಯೊಂದನ್ನೂ ತಾನೇ ಸಿದ್ಧ
ಪಡಿಸಿಕೊಳ್ಳುತ್ತಾ, ಚಕ್ರವರ್ತಿ ಬಯಸಿದ್ದ ಡೇರೆಯನ್ನು
ತಯಾರಿಸಿಯೇ ಬಿಡುತ್ತಾಳೆ ಫಾತಿಮಾ.
ಆನಂದ ತುಂದಿಲನಾದ ಚಕ್ರವರ್ತಿ, ಏನು ಬೇಕಾದರೂ ಕೇಳೆಂದು
ಫಾತಿಮಾಳಿಗೆ ಹೇಳುತ್ತಾನೆ. ಆಕೆ ಚೈನಾದಲ್ಲೇ ವಾಸಿಸಲು
ಬಯಸುತ್ತಾಳೆ; ಸುಂದರ ರಾಜಕುಮಾರನೊಬ್ಬನನ್ನು ವರಿಸಿ,
ಸುಖವಾಗಿ ಜೀವನ ನಡೆಸುತ್ತಾಳೆ.
ಬದುಕಿನ ತಿರುಳನ್ನು ಗ್ರಹಿಸಲು ಇದೊಂದೇ ಕತೆ ಸಾಕು. ಜೀವನದಲ್ಲಿ
ಸಂಭವಿಸುವ ಅನಿರೀಕ್ಷಿತ ಘಟನೆಗಳು ಆ ಕಾಲಕ್ಕೆ ಸಂಕಷ್ಟ ತಂದರೂ
ಕೊನೆಗೊಮ್ಮೆ ನೆಮ್ಮದಿಯ ಬದುಕಿಗೆ ಅವೇ ತಳಹದಿಯಾಗುವ ಪರಿ
ಇಲ್ಲಿ ನಿಚ್ಚಳವಾಗಿ ಅನಾವರಣಗೊಳ್ಳುತ್ತದೆ.
`ಪಾದರಕ್ಷೆಗಳ ಕುರಿತು' ಎಂಬ ಕತೆ ನೈತಿಕತೆ-ಅನೈತಿಕತೆಯ
ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತಿಳಿಸಿಕೊಡುತ್ತದೆ. ನೈತಿಕ
ಸಿದ್ಧಾಂತವನ್ನು ತನ್ನ ಬಳಿ ಇರಿಸಿಕೊಳ್ಳುವುದಕ್ಕಿಂತ, ನಿಷ್ಕಪಟ
ಅಂತರಂಗ ಶುದ್ಧಿಯೇ ಮೇಲು ಎಂಬುದನ್ನು ಈ ಕತೆ ಸೊಗಸಾಗಿ
ನಿರೂಪಿಸುತ್ತದೆ. `ಕೊಡುಗೈ ದಾನಿಯಾಗಲು ನಿರ್ಧರಿಸಿದ ರಾಜ', `ನೊಣ
ಮತ್ತು ಆನೆ', `ನೂರಿ ಬೆನ ಪುರಾತನ ಪೆಟ್ಟಿಗೆ', `ನೀರನ್ನು
ಬದಲಾಯಿಸಿದಾಗ', `ಚಿನ್ನದ ಭಾಗ್ಯ', `ಪ್ರಮಾಣ', `ಅಮೂಲ್ಯ ಮತ್ತು
ಅಯೋಗ್ಯ', `ಹಕ್ಕಿ ಮತ್ತು ಮೊಟ್ಟೆ' - ಮುಂತಾದ ಕತೆಗಳನ್ನು
ಓದುವಾಗ, ಇವು ನೂರಾರು ವರ್ಷಗಳ ಹಿಂದೆ ಬರೆದ ಕತೆಗಳೆಂದು
ಅನ್ನಿಸುವುದೇ ಇಲ್ಲ. ಕಾರಣ ಇವುಗಳು ಹೊರಸೂಸುವ
ಜೀವನಾನುಭವಗಳು, ಇವು ಕಲಿಸುವ ನೀತಿಬೋಧೆ ಅಷ್ಟೊಂದು
ಪ್ರಸ್ತುತವಾದವುಗಳು.
`ದರವೇಶಿ ಕತೆಗಳು' ಪುಸ್ತಕದಲ್ಲಿ ಇಂತಹ ಒಟ್ಟು ೪೦ ಕತೆಗಳಿವೆ.
ಒಂದೇ ಗಂಟೆಯಲ್ಲಿ ಓದಿ ಮುಗಿಸಬಹುದಾದ, ಒಂದಿಡೀ ಬದುಕಿಗೆ
ದಾರಿದೀಪಗಳಾಗಬಹುದಾದ ಕತೆಗಳಿವು.
ಗೌರಿ ಲಂಕೇಶ್ ಸುಂದರ ನಿರೂಪಣೆಯಲ್ಲಿ ಒಡಮೂಡಿದ ನಲವತ್ತು
ಕತೆಗಳು, ಅನನ್ಯ ಬದುಕಿನ ಅದ್ಭುತ ಅಲಂಕಾರಗಳು. ಇಂಥ
ಇನ್ನಷ್ಟು ಬರಹಗಳು ಈ ಲೇಖಕಿಯಿಂದ ಬರಲಿ.
ಇನ್ನಷ್ಟು
ಅಶ್ವಮೇಧ
|