ಇಡೀ ಕಾದಂಬರಿಯಲ್ಲಿ ಆಧುನೀಕರಣದ ಪ್ರತೀಕವಾಗಿ
ವಿವಿಧ ರೂಪಗಳಲ್ಲಿ ಕಾಣುವುದು ವಿದ್ಯುತ್. ಅದರ ಈ ವಿವಿಧ ರೂಪಗಳ
ನಿರ್ವಹಣೆಯಲ್ಲಿ ಎದುರಾಗುವ ತೊಂದರೆ-ತಾಪತ್ರಯಗಳೇ ಕುಂಟ
ರಾಮನ ಪ್ರಕರಣದಿಂದ ಆರಂಭವಾಗಿ ಇಡೀ ಕಾದಂಬರಿಯ ನಾಟಕವನ್ನು
ಸೃಷ್ಟಿಸುತ್ತವೆ. ಆ ಮೂಲಕ ಈಗ ಜಾಗತಿಕ ರಾಜಕಾರಣದ ಹೊಸ
ಕೇಂದ್ರಬಿಂದುವಾಗಿ ಹೊರಮೂಡುತ್ತಿರುವ ನೀರಿನ ಹಾಹಾಕಾರದ ಸಮಸ್ಯೆಯನ್ನು
ಸಾಂಕೇತಿಕವಾಗಿ ತೆರೆದಿಡುತ್ತದೆ. ಆದರೆ ಈ ನಾಟಕದಲ್ಲಿ ಭಾಗಿಯಾಗುವ
ಎಲ್ಲರೂ ಬದುಕಿನ ಕೇಂದ್ರ ಕಳೆದುಕೊಂಡವರಂತೆ ವಾಸನಾ (ಅದೂ ನಿರ್ದಿಷ್ಟವಾಗಿ
ಮಾಂಸ-ಮದ್ಯಗಳ ವಾಸನೆ!) ಪ್ರಜೆಗಳಾಗಿ ಯಾವುದರಲ್ಲೂ
ನಿಶ್ಚಿತವಾಗಿ ತೊಡಗಿಕೊಂಡು ಗುರಿ ಮುಟ್ಟಲಾಗದೆ ಪರಸ್ಪರ ಸಂವಹನ
ಕಳೆದುಕೊಂಡು ಕ್ಷುಲ್ಲಕ ಜಗಳಗಳ ಗೊಂದಲದಲ್ಲಿ ಸಿಲುಕಿದ್ದಾರೆ. ಈ
ಗೊಂದಲವನ್ನು ವಿವರಿಸಲೆತ್ನಿಸುವ ಇತಿಹಾಸ (`ಅದು ನಮ್ಮೆಲ್ಲರ
ಕೈಮೀರಿದ ಚರಿತ್ರೆಗೆ, ಚಾರಿತ್ರಿಕ ಒತ್ತಡಗಳಿಗೆ ಸಂಬಂಧಪಟ್ಟದ್ದು'-
ಕಾರ್ಮಿಕ ನಾಯಕ ಡೆಲ್ಫಿ), ವಿಜ್ಞಾನ (ವಿಜ್ಞಾನಿಗಳ ಮಾತು
ಕೇಳಿಕೊಂಡು ನಾನು ಮಾತ್ರ ಯಾವುದನ್ನೂ ತಿನ್ನಕ್ಕೆ ಹೋಗಲ್ಲ-
ಜಗ್ಗಣ್ಣ) ಹಾಗೂ ರಾಜಕಾರಣದ (ರೈತ ಚಳುವಳಿ) ಚರ್ಚೆಗಳು ಈ
ಗೊಂದಲವನ್ನು ನೆಪ ಒದಗಿಸುವಂತೆ ಕಾಣುತ್ತವೆಯೆ ಹೊರತು,
ಗೊಂದಲವನ್ನು ಪರಿಹರಿಸುವ ಹೊಸ ಬೆಳಕನ್ನು ಒದಗಿಸದಾಗಿವೆ.
ಬಲವುಳ್ಳವರೇ ಬದುಕಬಲ್ಲರು ಎಂಬ ಹಳೆಯ ಸತ್ಯ ಹೊಸರೂಪದಲ್ಲಿ
(ಚಿಕ್ರೀರಯ್ಯನ ರೌಡಿ ಗ್ಯಾಂಗು) ಕಾಣತೊಡಗಿದೆ. ನಾಗರಿಕತೆಯ ಚಕ್ರ
ಒಂದು ಸುತ್ತನ್ನು ಮುಗಿಸುತ್ತಿರುವಂತಿದೆ.
ಆಧುನೀಕರಣದ ಒಂದು ಎಳೆಯನ್ನು ಹಿಡಿದುಕೊಂಡು
ಇಂಥ ಸಂದಿಗ್ಧವನ್ನು ಚಿತ್ರಿಸಿರುವ ತೇಜಸ್ವಿ ಇದಕ್ಕೆ ಪ್ರತಿಕ್ರಿಯಿಸುವ
ರೀತಿಯೂ ವಿಶಿಷ್ಟವಾಗಿದೆ; ಅವರ ಪ್ರಕಾರ ನಮ್ಮ ಇಂದಿನ ಇಡೀ ನಾಗರಿಕತೆಯೆ
ಆಧುನೀಕರಣದ ಈ ರೂಪದಲ್ಲಿ (ಅದು ಮತಾಂತರದ ಕ್ರಿಶ್ಚಿಯನ್ನೀಕರಣ
ಭೀತಿಯ ಹಾಸ್ಯಾಸ್ಪದ ರೂಪದಲ್ಲೂ ವ್ಯಕ್ತವಾಗಬಲ್ಲದು!) ಜೀವ ಪರಿಸರದ
ಸಮತೋಲನವನ್ನು-ಅದರ ಎಲ್ಲ ನೆಲೆಗಳಲ್ಲಿ-ಪ್ರತಿನಿಧಿಸುವ ಒಂದು ಸಾಮಾಜಿಕ
ವಿವೇಕದ ವಿರುದ್ಧ ಯುದ್ಧ ಸಾರಿದಂತಿದ್ದು, ಇದರಲ್ಲಿ ಅವರಿವರೆನ್ನದೆ
ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ - ಸಕ್ರಿಯವಾಗಿಯೋ, ಮುಗ್ಧವಾಗಿಯೋ,
ಬೇಜವಾಬ್ದಾರಿತನದಿಂದಲೋ, ಭಾಗಿಯಾಗುತ್ತಿರುವುದರಿಂದ ಇಡೀ ಸಾಮಾಜಿಕಜಗತ್ತೆ
ಪ್ರತಿಭಟನೆಗೆ ಅರ್ಹವಾದ ಒಂದುವ್ಯವಸ್ಥೆಯಾಗಿದೆ.
ಇಂತಹ ಆತ್ಮವಿನಾಶಕಾರಿ ವ್ಯವಸ್ಥೆ ವಿರುದ್ಧ ಪ್ರತಿಭಟನೆಯೆಂದರೆ
ಆತ್ಮಶೋಧನೆಯೆ ಆಗಿದೆ: ಜಗತ್ತಿನ ಧಾರಣಶಕ್ತಿಯ ರೂಪಗಳ ಅನ್ವೇಷಣೆಯೆ
ಆಗಿದೆ. ಹಾಗಾಗಿಯೇ ತೇಜಸ್ವಿ ಈ ಕೃತಿಯಲ್ಲಿ ಅವರ ಈ ಮೊದಲಿನ
ಕೃತಿಗಳಲ್ಲಿದ್ದಂತೆ ಸರ್ಕಾರಿ ಕಚೇರಿ, ನೌಕರರು, ಪೊಲೀಸು,
ಜಾತಿ-ಧರ್ಮ ಇತ್ಯಾದಿಗಳನ್ನು ಪ್ರತಿನಿಧಿಸುವ ಸಾಂಪ್ರದಾಯಿಕ ವ್ಯವಸ್ಥೆಯ
ಟೀಕಾಕಾರರಾಗಿ ಕಾಣಿಸದೆ, ಅದರ ತೊಡಕುಗಳನ್ನು ಅರ್ಥ
ಮಾಡಿಕೊಳ್ಳಲು ಅದರೊಂದಿಗೆ ಅನುಸಂಧಾನದಲ್ಲಿ ತೊಡಗಿದವರಂತೆ
ಕಾಣುತ್ತಾರೆ. ಸಮಾಜದ ಚಲನಶೀಲತೆಯ ಗುಟ್ಟುಗಳನ್ನು ಭೇದಿಸುವ
ಉತ್ಸಾಹದ ಬಲಿಗೆ ಅದನ್ನು ಅರಿಯುವ ವ್ಯವಧಾನ ತೋರುತ್ತಾರೆ. ಹಾಗಾಗಿಯೆ
ಈ `ವ್ಯವಸ್ಥೆ' ವಿರುದ್ಧ ಪ್ರತಿಭಟನೆಗೆ ತೊಡಗಿರುವ ರೈತ
ಚಳುವಳಿಯ ವಿರೋಧಾಭಾಸಗಳು, ಅಸಂಬದ್ಧತೆಗಳೂ ಇಲ್ಲಿ ಢಾಳಾಗಿ
ಕಾಣತೊಡಗುತ್ತವೆ.
ಆತ್ಮಶೋಧನೆಯ ಇಂತಹ ವ್ಯವಧಾನದಲ್ಲಿ
ಮಾತ್ರ ಸದ್ಯದ ಸಂದಿಗ್ಧದಿಂದ ನಮ್ಮನ್ನು ಪಾರುಮಾಡುವ ಆಧುನೀಕರಣದ
ಭರಾಟೆಯಲ್ಲಿ ಮುಸುಕಾಗಿಬಿಟ್ಟಿರುವ ಜಗತ್ತಿನ ಧಾರಣ ಶಕ್ತಿಯ ರೂಪುಗಳು
ಪುನರ್‌ಗೋಚರಿಸಬಲ್ಲವು ಎಂಬುದು ತೇಜಸ್ವಿಯವರ ಈ ಕೃತಿಯ
ಕಾಣ್ಕೆಯಾಗಿದೆ. ಹಾಗಾಗಿಯೆ ಅವರು ತಾರಕಕ್ಕೇರುವ ಜನ ಸಾಮಾನ್ಯರ
ಜಗಳದ ಮಾನವೀಯ ಮುಖವನ್ನೂ ಗುರುತಿಸಬಲ್ಲವರಾಗಿದ್ದಾರೆ: ಜಲೀಲನೊಂದಿಗೆ
ಬಜ್ಜಿ ತಯಾರಿಸಲು ಹಿಂದಿನ ದಿನ ಖಾರವಿಲ್ಲದ ಮೆಣಸಿನಕಾಯಿ (ಇದಕ್ಕೆ
ರೈತರು ಗೌರ್‍ಮೆಂಟು ಗೊಬ್ರ ಹಾಕೋದಕ್ಕೆ ಶುರುಮಾಡಿದ್ದೇ ಕಾರಣ
ಎಂಬ ವಿವರಣೆಯೂ ಇದೆ) ಪೂರೈಸಿದ್ದಕ್ಕಾಗಿ ಜಗಳ ತೆಗೆಯುವ ಫಾತಿಮಾ,
ಆರೋಪವನ್ನು ನಿರಾಕರಿಸಲು ಈಗ ಮೆಣಸಿನಕಾಯಿ ಕಚ್ಚಿ ತಿಂದು ಪ್ರಾಣ ಹೋಗುವಷ್ಟು
ಬಾಯಿ ಖಾರ ಮಾಡಿಕೊಂಡ ಜಲೀಲನ ಮಗ ಹಮೀದನಿಗೆ ಬಾಳೆಹಣ್ಣು
ತಿಂದು ಖಾರ ಪರಿಹರಿಸಿಕೊಳ್ಳಲು ಪ್ರೀತಿಯಿಂದ ಹಣ ನೀಡಿ ಕಳಿಸುತ್ತಾಳೆ.
ಅರಳಿಕಟ್ಟೆ ಬಳಿ ಊರಳ್ಳಿ-ಮಕ್ಕಿಗದ್ದೆಯವರ ನಡುವಣ
ರಸ್ತೆ ಮೇಲೆ ಕುಡಿದು ಬಿದ್ದಿದ್ದ ಸುಬ್ಬನನ್ನು ಎರಡು ಕಡೆಯವರೂ
ಸೇರಿ ಕರುಣೆಯಿಂದ ಎತ್ತಿ ರಸ್ತೆಯಾಚೆ ಮಲಗಿಸಿ ವಾಹನಾಪಘಾತದಿಂದ
ರಕ್ಷಿಸುತ್ತಾರೆ. ಹಂದಿ ಬೇಟೆ ಪ್ರಕರಣದಲ್ಲಿ ಬಾಯಮ್ಮನ ಹೊಲಸು ಬಾಯಿಯನ್ನೂ
ಸಮಾಧಾನದಿಂದ ಮುಚ್ಚಿಸುವವನು ಅವಳೊಂದಿಗೆ ಅವಳ ಬೆಂಬಲಕ್ಕೆ ಬಂದ
ಅವಳ ಊರಾತನೇ. ಇನ್ನು ಈ ಮುಗ್ಧತೆಯನ್ನು
ಉಳಿಸಿಕೊಂಡಿರುವುದರಿಂದಾಗಿಯೇ ಆ ಹಳ್ಳಿಗಳ ಜನ ಮನೆಯ ಆವರಣದಲ್ಲಿ
ಕುರೂಪಿ ಎನಿಸಿದ್ದ ಬಾತಿನ ಮರಿಗಳು ತಮ್ಮ ಸ್ವಸ್ಥಾನವಾದ
ನೀರಿಗಿಳಿದೊಡನೆ ತೇಲುವ ಮೋಡಗಳಾಗಿ ಬೆಳೆಯುವ ಬೆರಗನ್ನು ಆನಂದಿಸಬಲ್ಲವರಾಗಿದ್ದಾರೆ.
ಆದರೆ ವಾಸನಾ ಪ್ರಪಂಚಕ್ಕೆ ಸಿಕ್ಕಿ ಈ ನಿಸರ್ಗ ಸಹಜತೆಯ ಗುಟ್ಟನ್ನು
ಮರೆತವರಂತೆ ವರ್ತಿಸುತ್ತಾರೆ; ಅಣ್ಣಪ್ಪಣ್ಣನ ಮಾತು ಕೇಳಿ ಹುಂಡು
ಕೋಳಿಗಳ ಶಿಕಾರಿ ಮಾಡಿಸಿ ತಮ್ಮೂರಿನ ಜಲಮೂಲವನ್ನೇ ಒಣಗಿಸಿಕೊಂಡು ಹವಾಮಾನ
ವೈಪರೀತ್ಯವನ್ನು ಆಹ್ವಾನಿಸಿಕೊಳ್ಳುವ ಮೂಲಕ ಸಲ್ಲದ ಪಡಿಪಾಟಲುಗಳಲ್ಲಿ
ಸಿಕ್ಕಿಹಾಕಿಕೊಂಡಿದ್ದಾರೆ.
ಈ ಅಣ್ಣಪ್ಪಣ್ಣ ಯಾರು? ಪರ ಊರಿನವನು.
ಸ್ಥಳೀಯ ನಿಸರ್ಗದ ಗುಟ್ಟುಗಳಿಗೆ ಅಪರಿಚಿತನಾದವನು. ಈ ಸೂಚನೆಯ
ಮೂಲಕ ತೇಜಸ್ವಿ, ತಾವು ಚಿತ್ರಿಸುತ್ತಿರುವ ಆಧುನೀಕರಣದ ಸಂದಿಗ್ಧ
ನಿರ್ಮಾಣವಾದುದರ ಕಾರಣದ ಕಡೆಗೂ ಬೊಟ್ಟು ಮಾಡುತ್ತಿದ್ದಾರೆಂದೆನಿಸುತ್ತದೆ.
ಈ ಕಾದಂಬರಿಯಲ್ಲಿ ಘರ್ಷಣೆಯನ್ನುಂಟುಮಾಡುವ ಎಲ್ಲ ಶಕ್ತಿಗಳೂ
ಅಣ್ಣಪ್ಪಣ್ಣನಂತೆ ಜಗತ್ತಿನ ಧಾರಣಾಶಕ್ತಿಯ ಸ್ಥಳೀಯ ರೂಪಗಳಿಗೆ
ಅಪರಿಚಿತರಾದ ಅನ್ಯರೇ-ಕೆಲಸದ ಮೇಲೆ ವಲಸೆ ಬಂದ ಕರೀಂಸಾಬು, ವರ್ಗವಾಗಿ
ಬಂದ ಜೆ.ಇ.ಮಲ್ಲಿಕರ್ಜುನರಿಂದ ಹಿಡಿದು ಅತಿಕ್ರಮ ಪ್ರವೇಶ ಮಾಡುವ
ಕೋತಿ ಮತ್ತು ಆಮದಾದ ಯುಪಟೋರಿಯಂ ಬಳ್ಳಿಯವರೆಗೆ, ಹಾಗಾಗಿ
ಆಧುನೀಕರಣದ ಶಕ್ತಿಗಳು ಅದರೆಲ್ಲ-ಯಂತ್ರತಂತ್ರ, ಆಡಳಿತ, ಜನಸಂಘಟನೆ-ರೂಪಗಳಲ್ಲಿ
ನೀರೊಳಗಿನ ಬಾತು ಮರಿಗಳಂತೆ `ಸ್ಥಳೀಯ' ಸೌಂದರ್ಯ ಸೃಷ್ಟಿಸಲಾಗದವರೆಗೆ
ಜಗತ್ತಿನ ಜೀವ ಪರಿಸರ ಕೇಂದ್ರಕ್ಕೆ ಧಕ್ಕ ತಪ್ಪಿದ್ದಲ್ಲ ಎಂಬುದು ಈ
ಕೃತಿಯಲ್ಲಿ ತೇಜಸ್ವಿ ಕಾಣಿಸುವ ದರ್ಶನವಾಗಿದ್ದಂತೆ ತೋರುತ್ತದೆ.
ಈ ದರ್ಶನದ ಕೇಂದ್ರಬಿಂದು ಕರಾಟೆ ಮಂಜ. ಈ
ದರ್ಶನವನ್ನು ಕಾಣಿಸಲು ತೇಜಸ್ವಿ, ಕರಾಟೆ ಮಂಜನ ಪಾತ್ರವನ್ನು
ಕಥೆಯ ಸನ್ನೆಗೋಲಿನಂತೆ ನಿರ್ವಹಿಸುವುದನ್ನೂ ನಾವು ಗಮನಿಸದೆ
ಹೋದರೆ ದರ್ಶನ ಜಡವಾಗಷ್ಟೇ ಉಳಿದುಬಿಡುತ್ತದೆ. ಹಾಗೆ ನೋಡಿದರೆ
ಈ ಕರಾಟೆ ಮಂಜನ ಕಾದಂಬರಿಯ ಶಿಲ್ಪವನ್ನು ನಿರ್ಧರಿಸುವ ಸಾಕ್ಷಿಭೂತಪ್ರಜ್ಞೆಯ
ಪ್ರತೀಕವಾಗಿದ್ದಾನೆ. ಇಡೀ ಕಾದಂಬರಿಯ ಹಿನ್ನಲೆಯಲ್ಲಿ ನಿಂತು, ಅದರ
ಗತಿ, ಲಯ ಹಾಗೂ ದೃಷ್ಟಿಗಳನ್ನು ನಿಯಂತ್ರಿಸುವಂತೆ ತೋರುವ
ಕರಾಟೆ ಮಂಜ ದಲಿತ ಹುಡುಗ. ಸರ್ಕಾರಿ ನೌಕರಿಯ ಬಲೆಗೆ
ಬೀಳುವುದನ್ನು ತಪ್ಪಿಸಿಕೊಂಡು ತನಗಿಷ್ಟವಾದ ಕೆಲಸಗಳನ್ನು ಮಾಡುತ್ತಾ
ನಿರ್ಮಮ ನಿರುದ್ವಿಗ್ನವಾದ ಕರಾಟೆ ಆನಂದದಲ್ಲಿರುವನು-ಅವನ
ಕರಾಟೆ ಹೊಡೆತ ಸೃಷ್ಟಿಸುವುದೂ ಬೆರಗಿನಿಂದ ತುಂಬಿದ ಶಾಂತಿ ಸಮಾಧಾನಗಳನ್ನೆ!
ಹಾಗಾಗಿಯೇ ಅವನ ಅಂತರಾತ್ಮ ಒಮ್ಮೆ ಮಳೆ ಬಂದರೆ ಸಾಕು ಕೇಂದ್ರ
ಕಳಕೊಂಡವನಂತೆ ಅಡ್ಡಾದಿಡ್ಡಿಯಲ್ಲಿರುವ ಈ ಜನ ಒಂದು ಕೇಂದ್ರಕ್ಕೆ
ಸಿಕ್ಕುತ್ತಾರೆ ಎಂದು ಹೇಳುತ್ತದೆ.
ಆ ಮಳೆಯೇನೂ ಬರುತ್ತದೆ, ಆದರೆ ಅಣ್ಣಪ್ಪಣ್ಣನ
ಕಿತಾಪತಿಯಿಂದಾಗಿ ಅದು ಅಕಾಲ ಮಳೆಯಾಗಿ ಜಲಪ್ರಳಯವನ್ನೇ ಸೃಷ್ಟಿಸುತ್ತದೆ.
ಗೊಂದಲಗೇರಿಯ ಪ್ರಾದೇಶಿಕ ಭೂಗೋಳವನ್ನೆ
ಪಲ್ಲಟಗೊಳಿಸುವಷ್ಟರ ಮಟ್ಟಿಗೆ, ಮಳೆಗೆ ಸಿಕ್ಕಿ ದಾರಿ ತಪ್ಪುವ ಭೀತಿಯಲ್ಲಿ
ಬಂದ ದಾರಿಯಲ್ಲೆ ವಾಪಸ್ ಹೋಗುವ ವಿವೇಕ ಮೂಡುವ ಮಟ್ಟಿಗೆ!
ಹೀಗೆ ತೇಜಸ್ವಿಯವರ ಅವಿಶ್ರಾಂತ ಅನ್ವೇಷಣೆಯ
ಕಥನಕ್ರಮದ ತುತ್ತತುದಿಯಂತಿರುವ ಈ ವಿಶ್ರಾಂತ ಪ್ರಯತ್ನ
ಆಧುನೀಕರಣವನ್ನು ಕುರಿತ ಒಂದು ಸಂಕೀರ್ಣ `ಸಂಕಥನ'ವೇ ಆಗಿದೆ.