ಬಾಲ ಶಂಕರ
ಶಂಕರ್ ನಾಗ್ ಗೆ
ಚಿಕ್ಕಂದಿನಲ್ಲಿ ಇಟ್ಟ ಹೆಸರು ಇಷ್ಟು ಹೊಂದುತ್ತಿತ್ತು ನೋಡಿ. ಶಂಕರ=ಶಂ(ಒಳ್ಳೆಯ)+ಕರ(ಹಸ್ತ)
ಅಂದರೆ ಒಳ್ಳೆಯ ಹಸ್ತವುಳ್ಳವನು. ಇನ್ನೊಂದು ತಂದೆ ಕರೆಯುತ್ತಿದ್ದ ಹೆಸರು
ಅವಿನಾಶ ಅಂದರೆ ವಿನಾಶವಿಲ್ಲದವನು, ನಿಜ ಶಂಕರನ ಖ್ಯಾತಿ ಅವನ ಉತ್ಸಾಹ ಎಂದಿಗೂ ನಾಶವಾಗುವಂತದ್ದಲ್ಲ.
ಪುಸ್ತಕದಲ್ಲಿ ಶಂಕರನ ಒಳ್ಳೆಯತನದ ಚಿತ್ರಣ ಸ್ಥೂಲವಾಗಿ ನೀಡಿದ್ದಾರೆ ಅನಂತ್.

ಆಶ್ರಮದಂತಹ
ಗಂಭೀರವಾದ ಪರಿಸರವೂ ಕೂಡ ಹೇಗೆ ಮಗುವಿನ ನಗುವಿನಿಂದ ತಿಳಿಯಾಯಿತು ಎಂಬುದನ್ನು
ಅನಂತ್ ಬರೆದಿದ್ದಾರೆ. ಚಿಕ್ಕಂದಿನಲ್ಲಿ ದೊರೆಯುವ ಒಳ್ಳೆಯ ಸಂಸ್ಕಾರ ಮುಂದೆ ಹೇಗೆ
ಉಪಯೋಗವಾಗುತ್ತದೆ ಎಂಬ ಅರಿವು ಮೂಡಿಸುವಲ್ಲಿ ಅನಂತ್ ಯಶಸ್ವಿಯಗಿದ್ದಾರೆ. ಬಾಲ್ಯದಿಂದಲೇ
ಶಂಕರನಲ್ಲಿ ಮೂಡಿದ್ದ ಕಲಿಕೆಯ ಹಂಬಲ, ಅವನ ಧೈರ್ಯದ ಸ್ವಭಾವ , ಗುರು ಹಿರಿಯರಲ್ಲಿನ
ತೋರುತ್ತಿದ್ದ ಗೌರವ ಎಲ್ಲವನ್ನೂ ಅನಂತ್‌ನಾಗ್ ವಿವರಿಸಿದ್ದಾರೆ.
ವಿಭಿನ್ನ ಪರಿಸರಗಳ
ಪ್ರಭಾವ
ಕರಾವಳಿಯ ವಿಶಾಲವಾದ
ಪರಿಸರದಲ್ಲಿ ಬೆಳೆದ ಮೇಲೆ ಮುಂಬಯಿಯ ಸಂಕುಚಿತ ಗಲ್ಲಿಗಳಲ್ಲಿ ಇಕ್ಕಟ್ಟಿನ
ಚಾಳಿಯಲ್ಲಿ ವಾಸ ಮಾಡಿದ ಅನುಭವಗಳು ನಿಜಕ್ಕೂ ಸುಂದರವಾಗಿ ನಿರೂಪಿತವಾಗಿದೆ. ಶಂಕರನ
ಬಾಲ್ಯದಲ್ಲಿ - ಸಂಪ್ರದಾಯನಿಷ್ಠವಾದ ಚಿತ್ರಾಪುರಮಠ ಒಂದೆಡೆಯಾದರೆ, ಎಲ್ಲಾ ಕಟ್ಟುಪಾಡುಗಳಿಮ್ದ
ಮುಕ್ತವಾದ ಆನಂದಾಶ್ರಮ ಮತ್ತೊಂದೆಡೆ. ಕರಾವಳಿ ಹಾಗೂ ಮುಂಬಯಿ, ಬೆಂಗಳೂರಿನ
ಗಡಿಬಿಡಿ ಜೀವನ. . .ಹೀಗೆ ಎಲ್ಲಾ ತರದ ಪರಿಸರದ ಅನುಭವ ಇವರ ಬದುಕಲ್ಲಿ ಪರಿಣಾಮಕಾರಿಯಾಗಿತ್ತು.
ಇದರ ಜೊತೆಗೆ
ಆಯಾ ಪ್ರದೇಶದ ಭಾಷಾ ಸೊಗಡನ್ನು ಯಥೇಚ್ಛವಾಗಿ ಅನಂತ್ ಬಳಸಿದ್ದಾರೆ. ಕೊಂಕಣಿ,
ಮರಾಠಿ, ಹಿಂದಿ ಹೀಗೆ ಅನೇಕ ಭಾಷೆಗಳ, ಸಂಸ್ಕೃತಿಯ ಪರಿಚಯದ ಲಾಭ ಮುಂದೆ ಶಂಕರನ
ಜೀವನದ ಹೆಜ್ಜೆಯಲ್ಲಿ ಪ್ರತಿಬಿಂಬಿತವಾಗಿದೆ.
ಅಣ್ಣನ ಸಂಗಡ
ಶಂಕರ್ ಹಾಗೂ ಅನಂತ್‌ರ
ಒಡನಾಟ ಬಗ್ಗೆ ಸುವಿಸ್ತಾರವಾಗಿರುವ ಕಥನದಲ್ಲಿ ಕಾಣಬರುವ ಅಂಶವೆಂದರೆ ಭಾವನಾಜೀವಿಯಾದ
ಅನಂತ್ ತಾವು ಕಲಿತ ಸದ್ವಿದ್ಯೆಗಳನ್ನೆಲ್ಲಾ ತನ್ನ ಪ್ರೀತಿಯ ತಮ್ಮನಿಗೆ ಒಂದೊಂದಾಗಿ
ಧಾರೆಯೆರೆದಿದ್ದು. ಅಣ್ಣ ತಮ್ಮನ ಪ್ರೀತಿಯ ಒಡನಾಟದ ಬಗ್ಗೆ ಪುಸ್ತಕದಲ್ಲಿ ಹಲವು
ಘಟನೆಗಳಿವೆ.
ವೃತ್ತಿಪರತೆ ನಾಟಕ,
ಸಿನಿಮಾ
ಸದಾ ಹೊಸತನ
ಕನಸುಗಳ ಬೆನ್ನತ್ತಿ ಸುತ್ತುತ್ತಿದ್ದ ಶಂಕರನು ಹಾಕಿಕೊಂಡ ಯೋಜನೆಗಳು ಅನೇಕ.
ಸ್ಟುಡಿಯೋ ಆಯಿತು, ತೋಟದ ಮನೆ ಮಾಡಿ ವಾಸಮಾಡಿಯಾಗಿತ್ತು, ಡೈರಿ ಆರಂಭಿಸಿದ್ದು
ಆಯಿತು ಇದಕ್ಕಿಂತಲೂ ಹೆಚ್ಚಿನ ರೀತಿಯ ಯೋಜನೆಗಳ ಸರಮಾಲೆ ಶಂಕರನ ತಲೆಯಲ್ಲಿ
ತುಂಬಿತ್ತು. ಆತನ ಯೋಜನೆಗಳನ್ನು ಪಟ್ಟಿ ಮಾಡುವುದಾದರೆ :
-
ಕಂಟ್ರಿ ಕಬ್ಲ್ -ಸಾರ್ವಜನಿಕರಿಗಾಗಿ,
-
ಅಮ್ಯೂಸ್‌ಮೆಂಟ್ ಪಾರ್ಕ್-ನಂದಿ
ಬೆಟ್ಟದ ಕೆಳಗೆ
-
ನಂದಿ ಬೆಟ್ಟಕ್ಕೆ
ರೋಪ್‌ವೇ
-
ನಂದಿಬೆಟ್ಟದ ಪಕ್ಕದ
ಬೆಟ್ಟದಲ್ಲಿ ಮೈಸೂರಿನ ಬೆಟ್ಟದಲ್ಲಿ ಸಿಗುವ ಮಾದರಿಯಲ್ಲಿ ಭರ್ಜರಿ ಹೋಟೆಲ್(ವಿದೇಶಿ ವಿನ್ಯಾಸದಲ್ಲಿ)
-
ವಿದ್ಯುತ್ ಬಳಸದೆ
ಇಟ್ಟಿಗೆ ತಯಾರಿಸುವ ಜರ್ಮನ್, ಹಾಲೆಂಡ್‌ನ ವಿಧಾನ ಅಳವಡಿಕೆ
-
ಅಸ್ಟ್ರಿಯಾ ದೇಶದ
ತಂತ್ರಜ್ಞಾನದ ಉಪಯೋಗಿಸಿ ಫ್ಯಾಬ್ರಿಕೇಟೆಡ್ ಶೀಟುಗಳ ಸಹಾಯದಿಂದ ಅಗ್ಗವಾಗಿ
(೪೫,೦೦೦) ಮನೆ ತಯಾರಿಸುವುದು.
-
ಸಿದ್ಧ ಉಡುಪು
ತಯಾರಿಕಾ ಘಟಕ ವಿದೇಶಿ ರಫ್ತು ಹೆಚ್ಚಿಸುವ ಯೋಜನೆ
-
ಮೆಟ್ರೋ ರೈಲಿಗೆ
ಚಾಲನೆ ನೀಡಲು ಪ್ರಯತ್ನ
ಶಂಕರ್, ಗಾಂಧೀಜಿ
ತತ್ವಪಾಲಕ ಎಂದರೆ ಅಚ್ಚರಿ ಆಯಿತೇ...ಗಾಂಧಿ ಹೇಳಿದಂತೆ ಬ್ಯಾಕ್ ಟು ವಿಲೇಜ್ ಅಂದ್ರೆ ನಗರದಿಂದ
ದೂರದಲ್ಲಿ ಮನೆ ಮಾಡಿ ಸ್ವಾವಲಂಬಿಯಾಗಿ ಎನ್ನುವ ಸಂದೇಶವನ್ನು ಶಂಕರ್ ಇಷ್ಟಪಟ್ಟಿದ್ದರು.
ಅನಂತ್ ಈ ಹೊತ್ತಿಗೆಗೆ
ನನ್ನ ತಮ್ಮ ಶಂಕರ ಎಂದು ಹೆಸರಿಟ್ಟು ತಮ್ಮನ ಜೊತೆಗಿನ ಒಡನಾಟದ ಬಗ್ಗೆ ಹೆಚ್ಚು ಬರೆದಿದ್ದಾರೆ.
ಆದರೆ ಶಂಕರನ ವೈಯಕ್ತಿಕ ಬದುಕು, ಅವನ ಮಡದಿ, ಮಗು, ಅವಿರತ
ದುಡಿಮೆಯ ನಡುವೆ ಸಾಂಸರಿಕವಾಗಿ ಅವನು ತೊಡಗಿಸಿಕೊಂಡ ರೀತಿ, ಮನೆಯವರ ಬೆಂಬಲದ
ಬಗ್ಗೆ ಒಂದಿಷ್ಟು ಮಾಹಿತಿ ಇದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಅನಿಸುತ್ತದೆ.
ಜೀವನ ಬಂದಂತೆ ನಾವು
ಅನುಭವಿಸಬೇಕು, ಕೆರೆಯ ನೀರನ್ನು ಕೆರೆಗೆ ಚೆಲ್ಲಿ... ಈ ರೀತಿಯ ತತ್ವಗಳು ಶಂಕರನ
ಜೀವನದಲ್ಲಿ ಹಾಸುಹೊಕ್ಕಾಗಿರುವುದನ್ನು ಅನಂತ್ ಎತ್ತಿಹಿಡಿದಿದ್ದಾರೆ.
`ಒಂದಾನೊಂದು ಕಾಲದಲ್ಲಿ
ಗೀತಾ -ಸಂಗೀತಾ ಎನ್ನುತ್ತಾ,
ಜನ್ಮ ಜನ್ಮದ ಅನುಬಂಧ ಬೆಸೆದು, ಮಾಲ್ಗುಡಿ ಡೇಸ್ ಗೆ ಕರೆದೊಯ್ದು
ನೋಡಿ ಸ್ವಾಮಿ ನಾವಿರೋದೆ
ಹೀಗೆ ಎಂದು ಜೀವನ ದರ್ಶನ ಮಾಡಿಸಿ, ತರ್ಕಕ್ಕೆ ಬಂಧಿಯಾಗದಿರುವಂತೆ ಚಿಂತನೆ
ನಡೆಸಿ, ದುಷ್ಟರ ಮಟ್ಟಹಾಕಲು ಸಾಂಗ್ಲಿಯಾನನ ಪಾತ್ರವಹಿಸಿ, ನಿಗೂಢ ರಹಸ್ಯವ ಬೇಧಿಸಿ,
ಇದು ಸಾಧ್ಯವೆಂದು ತೋರಿಸಿ ಮಿಂಚಿನ ಓಟದಂತೆ ಸಾಗಿ ಕೊನೆಗೆ ಆಕ್ಸಿಡೆಂಟ್ ನಲ್ಲಿ ಮುಕ್ತಾಯವಾಗಿದ್ದು
ದುರ್ದೈವವೇ ಸರಿ.