Monday February 19th 2018

ಉಪ್ಪಿಗಿದು ಕಾಲವಲ್ಲ…!

uppiಸೆಪ್ಟೆಂಬರ್ ಹದಿನೆಂಟು ಉಪೇಂದ್ರರ ಹುಟ್ಟುಹಬ್ಬ. ಅವತ್ತೇ ಅವರ ಹೊಸ ಚಿತ್ರ ‘ರಜನಿ’ಯ ಬಿಡುಗಡೆ. ಈ ರಜನಿ ತೆಲುಗಿನ ಕೃಷ್ಣನ ಯಥಾವತ್ ನಕಲು. ಬರೀ ನಕಲಷ್ಟೆ ಅಲ್ಲ, ಆ ಚಿತ್ರದ ಅತಿ ದುಬಾರಿ ಎನ್ನಿಸುವ ಡ್ಯೂಪ್ ಶಾಟ್ಸ್‌ಗಳನ್ನು ಮತ್ತು ಕೆಲವು ಸೀನ್‌ಗಳನ್ನು ಹಸಿಹಸಿಯಾಗಿಯೇ ಅನಾಮತ್ತಾಗಿ ಎತ್ತಿಕೊಂಡು ಡಬ್ ಮಾಡಲಾಗಿದೆ. ತೆಲುಗಿನಲ್ಲಿ ಹಿಟ್ ಆದ ಆಕ್ಷನ್ ಓರಿಯಂಟೆಡ್ ಚಿತ್ರವನ್ನು ಇಲ್ಲಿ ಕೋಟಿ ರಾಮು, ಉಪ್ಪಿಗೆ ಎಪ್ಪತ್ತು ಲಕ್ಷ ಸಂಭಾವನೆ ಕೊಟ್ಟು, ಗಳಿಕೆಯ ಗುಣಾಕಾರಕ್ಕಿಳಿದು ನಿರ್ಮಿಸಿದ್ದಾರೆ. ನೆಪಕ್ಕೆ ಥ್ರಿಲ್ಲರ್ ಮಂಜುವನ್ನು ನಿರ್ದೇಶಕರನ್ನಾಗಿಸಿದ್ದಾರೆ.

ಅಂದರೆ, ಇಷ್ಟೇ ಸಾಕು ಉಪೇಂದ್ರ ಇವತ್ತು ಎಂತಹ ಹತಾಶ ಸ್ಥಿತಿ ತಲುಪಿದ್ದಾರೆಂದು ತಿಳಿಯಲು. ಆಕ್ಷನ್ ಚಿತ್ರ, ತೆಲುಗಿನ ರೀಮೇಕು, ಥ್ರಿಲ್ಲರ್ ಮಂಜು ನಿರ್ದೇಶಕ… ಅಂದಮೇಲೆ ಅಲ್ಲಿ ಉಪ್ಪಿಗೇನು ಕೆಲಸ? ಕೇವಲ ಕಾಸಿಗಾಗಿ ಒಪ್ಪಿಕೊಂಡಿರುವ ಚಿತ್ರ ಎಂಬುದು ಮೇಲ್ನೋಟಕ್ಕೇ ಅರ್ಥವಾಗುತ್ತದೆ. ಚಿತ್ರಕ್ಕೆ ಅವರೇ ನಾಯಕ-ನಿರ್ದೇಶಕರಾದರೆ, ಆ ಚಿತ್ರದ ಗತ್ತು-ಗಮ್ಮತ್ತೇ ಬೇರೆ. ಬೇರೆಯವರ ಬ್ಯಾನರ್ ಚಿತ್ರವಾದರೆ- ಎಲ್ಲೋ ಒಂದಿಬ್ಬರು ನಾಗ್ತಿಹಳ್ಳಿ, ಡಿ.ಬಾಬು, ಎಸ್.ಮಹೇಂದರ್‌ಗಳಂತಹ ನಿರ್ದೇಶಕರನ್ನು ಬಿಟ್ಟರೆ ಮಿಕ್ಕವರೆಲ್ಲ ಡಮ್ಮಿ ಡೈರೆಕ್ಟರ್‌ಗಳೆ. ಇನ್ನು ಕತೆ ಕೇಳಲೇಬೇಡಿ- ರೀಮೇಕ್. ಇನ್ನು ನಟನೆ ಆಡಿದ್ದೇ ಆಟ. ಇಷ್ಟು ವರ್ಷಗಳ ಕಾಲ ಹೀಗೆಯೇ ಆಡುತ್ತಾ ಬಂದ ಉಪ್ಪಿ ಇವತ್ತು ಹಣಕಾಸಿನ ವಿಷಯದಲ್ಲಿ ಸೇಫ್ ಆಗಿರಬಹುದು. ಆದರೆ ಗುಣಮಟ್ಟದ ದೃಷ್ಟಿಯಲ್ಲಿ ಪಾತಾಳ ಮುಟ್ಟಿದ್ದಾರೆ. ಕಾವಲಿ ಕಾದಾಗ ದೋಸೆ ಹಾಕ್ಕೋಬೇಕು ಎಂಬ ತತ್ವಕ್ಕೆ ಬಿದ್ದು ಕಾವಲಿಯನ್ನೇ ತೂತಾಗಿಸಿಕೊಂಡಿದ್ದಾರೆ.

ಯಾಕೆಂದರೆ, ಇವತ್ತಿನ ಪ್ರೇಕ್ಷಕರು ದಡ್ಡರಲ್ಲ. ಉಪ್ಪಿಯ ಗಿಮಿಕ್ ಎಲ್ಲಾ ಕಾಲಕ್ಕೂ ಅಲ್ಲ. ಉಪ್ಪಿ ಇದನ್ನು ಅರ್ಥ ಮಾಡಿಕೊಳ್ಳದ ದಡ್ಡನೂ ಅಲ್ಲ. ಆದರೂ ಬರುವಷ್ಟು ಬರಲಿ, ನಡೆಯುವಷ್ಟು ನಡೆಯಲಿ ಎಂಬ ಧೋರಣೆ. ಈ ಧೋರಣೆಯೇ ಇವತ್ತಿನ ಕನ್ನಡ ಚಿತ್ರರಂಗದ ಸ್ಥಿತಿ. ಈ ಕರುಣಾಜನಕ ಸ್ಥಿತಿಗೆ ಉಪ್ಪಿಯ ‘ರಜನಿ’ ಇನ್ನಷ್ಟು ಉಪ್ಪು ಸುರಿಯುವುದರಲ್ಲಿ ಅನುಮಾನವೇ ಇಲ್ಲ.

ಅಂದರೆ, ಉಪ್ಪಿಯ ಕಾಲ ಮುಗಿಯಿತೆ?

ಮಧ್ಯಮವರ್ಗದ ಬಡತನ, ಹಸಿವು, ಅಸಹಾಯಕತೆಗಳನ್ನು ಕಂಡುಂಡ ಉಪೇಂದ್ರ, ಮಹತ್ವಾಕಾಂಕ್ಷೆಗಳ ಮೂಟೆ ಹೊತ್ತುಕೊಂಡು ಸಿನಿಮಾ ಫೀಲ್ಡ್‌ಗಿಳಿದರು. ಅದಕ್ಕೆ ತಕ್ಕಂತೆ ಅವತ್ತಿನ ನಾಯಕನಟರ ಸೋಲು ಉಪೇಂದ್ರರ ಗೆಲುವಾಗಿ ಪರಿಣಮಿಸಿತು. ಅನಾಯಾಸವಾಗಿ ಉಪೇಂದ್ರ ನಾಯಕನಟರಾದರು, ನಿರ್ದೇಶಕರಾದರು.

ದುರಂತವೆಂದರೆ, ಕನ್ನಡ ಚಿತ್ರರಂಗ ಅಲ್ಲಿಯವರೆಗೆ ಕಂಡರಿಯದ ವಿಕ್ಷಿಪ್ತ, ವಿಕೃತ, ವಿಚಿತ್ರ ವಿಕಾರಗಳು ಉಪೇಂದ್ರರ ಚಿತ್ರಗಳಲ್ಲಿ ಕಾಣತೊಡಗಿದವು. ಮಹಿಳೆಯನ್ನು ಕೀಳಾಗಿ ಕಾಣುವ ಮತ್ತು ಕಾಸು ಕೊಟ್ಟು ಚಿತ್ರ ನೋಡುವ ಪ್ರೇಕ್ಷಕನ ಬುದ್ಧಿಗೆಡಿಸುವ, ದಾರಿ ತಪ್ಪಿಸುವ ಚಿತ್ರಗಳೇ ‘ಉಪ್ಪಿ ಟ್ರೆಂಡ್’ ಆಯಿತು.

ಉಪ್ಪಿ ಎಂಬ ಕೊಳಕು ಆಲೋಚನೆಗಳ, ಕೆಟ್ಟ ನಟ ಇಷ್ಟು ದಿನ ಇಂಡಸ್ಟ್ರಿಯಲ್ಲಿ ಉಳಿಯಲು ಮಾಧ್ಯಮದವರ ಪಾಲೂ ಇದೆ. ಹುಸಿ ಜನಪ್ರಿಯತೆ ಮತ್ತು ಅನಗತ್ಯ ಪ್ರಚಾರದ ನೆಪದಡಿ ಉಪೇಂದ್ರ ಹತ್ತದಿನೈದು ವರ್ಷಗಳ ಕಾಲ ಮಿಂಚೇಬಿಟ್ಟರು. ಆದರೆ, ಈಗ ಫಾರ್‍ಟಿ ಪ್ಲಸ್ ವಯಸ್ಸಾಗಿದೆ. ಬಾಡಿ ಬಲಿತಿದೆ. ನಟನೆ ಕೈಕೊಡುತ್ತಿದೆ. ಹೊಡ ಪಡ್ಡೆ ಹುಡುಗರ ಪೈಪೋಟಿ ಜೋರಾಗಿದೆ. ಮತ್ತೆ ನಿರ್ದೇಶನದತ್ತ ಮನಸ್ಸು ಹರಿಯುತ್ತಿದೆ. ಮದುವೆ, ಮಕ್ಕಳು, ಬಲಿತ ಬುದ್ಧಿ, ದೇಹ, ಮನಸ್ಸು…ಇವೆಲ್ಲ ವಯಸ್ಸಿಗೆ ತಕ್ಕುದಾದ ಪಾತ್ರ-ಚಿತ್ರಗಳನ್ನು ಮಾಡುವತ್ತ ಪ್ರೇರೇಪಿಸಿದರೆ, ಉಪ್ಪಿ ಇನ್ನಷ್ಟು ದಿನ ಉಳಿಯಬಹುದು, ಇಲ್ಲದಿದ್ದರೆ…

ಬಸವರಾಜು

  • Share/Bookmark