Monday February 19th 2018

ಅರೆ ಹುಚ್ಚರ ‘ಮನಸಾರೆ’

‘ತಲಿ ಯಾರ್‍ದು ರಿಪೇರಿ ಮಾಡ್ಲಿಕ್ಕೆ ಬರ್ತದೋ ಅವರು ಹುಚ್ಚಾಸ್ಪತ್ರೆನಾಗಿರ್ತಾರ, ತಲಿ ಯಾರ್‍ದು ರಿಪೇರಿ ಮಾಡ್ಲಿಕ್ಕೆ ಬರೋದಿಲ್ಲೋ ಅವರು ಹೊರಗಿರ್ತಾರ…’

‘ಫಸ್ಟ್ ನೈಟು ಹೂವು ಹಾಸಿಗೆ ಮೇಲಿರುತ್ತೆ, ಸತ್ತಾಗ ಅದೇ ಹೂವು ಎದೆ ಮೇಲಿರುತ್ತೆ…’

ಯೋಗರಾಜ್ ಭಟ್‌ರ ‘ಮನಸಾರೆ’ ಚಿತ್ರದ ಇಂತಹ ಕೆಲವು ಡೈಲಾಗ್‌ಗಳು ಒಂದು ವರ್ಗದ ಪ್ರೇಕ್ಷಕರಿಗೆ ಇಷ್ಟವಾಗಿವೆ. ಪಡ್ಡೆ ಹುಡುಗರ ನಾಲಗೆಯ ಮೇಲೆ ನಲಿದಾಡುತ್ತಿವೆ. ಇದನ್ನೇ ಮೀಡಿಯಾದ ಮಂದಿ ಯೋಗರಾಜ್ ಭಟ್ಟರ ಪ್ರತಿಭೆ ಎಂದು ಬಣ್ಣಿಸಿದರೆ, ಭಟ್ರೆ ಬೆಟರ್ರು ಎಂದು ಹೊಗಳಿದರೆ ಭಟ್ಟರನ್ನು ಕೊಂದಂತೆ.

vkoct0909  ಮುಖಪುಟಯಾಕೆಂದರೆ, ಮನಸಾರೆ ಚಿತ್ರದ ಕೆಲವು ಸಂಭಾಷಣೆಗಳು ನಿಮಗೆ ಉಪೇಂದ್ರರ ಪಾಲಿಷ್‍ಡ್, ಮಾಡಿಫೈಡ್ ವರ್ಷನ್ ಥರ ಕಂಡರೆ ಆಶ್ಚರ್ಯವಿಲ್ಲ. ಇದನ್ನು ಯಾಕೆ ಹೇಳಬೇಕಾಯಿತೆಂದರೆ, ಉಪೇಂದ್ರ ಇವತ್ತು ಏನಾದರೂ ಗೆದ್ದಿದ್ದೇನೆ ಅಂದುಕೊಂಡಿದ್ದರೆ ಅದು ಅವರ ಡೈಲಾಗ್ ಮತ್ತು ಡೆಲಿವರಿಯ ಮೂಲಕವೆ. ಉಪೇಂದ್ರರ ಗೆಲುವನ್ನು ಭಟ್ಟರ ಗೆಲುವಿನೊಂದಿಗೆ ಥಳಕು ಹಾಕುವುದು ಅಷ್ಟು ಸರಿಯಾದ ಕ್ರಮವಲ್ಲದಿದ್ದರೂ, ಭಟ್ಟರು ತಮ್ಮ ಹಿಂದಿನೆರಡು ಚಿತ್ರಗಳಾದ ಮುಂಗಾರು ಮಳೆ ಮತ್ತು ಗಾಳಿಪಟಗಳಲ್ಲಿ ಗೆದ್ದಿರುವುದರಲ್ಲಿ ಸಂಭಾಷಣೆಯ ಪಾತ್ರವಿರುವುದರಿಂದ ಮತ್ತು ಅದನ್ನು ಇಲ್ಲಿ, ಈ ಚಿತ್ರದಲ್ಲಿ ಇನ್ನೂ ಹೆಚ್ಚು ಮಾಡಿರುವುದರಿಂದ, ನಾಲ್ಕೈದು ಸೀನ್‌ಗಳಿಗಾಗುವ ಡೈಲಾಗನ್ನು ಒಂದೇ ಸೀನ್‌ನಲ್ಲಿ
ತುರುಕಿರುವುದರಿಂದ, ಆಡಿಯೋ ಟ್ರ್ಯಾಕ್ ಕೇಳಿದರೆ ಸಾಕು ಚಿತ್ರ ನೋಡಿದ ಅನುಭವವಾಗುತ್ತದೆ ಎಂಬಷ್ಟರ ಮಟ್ಟಿಗೆ ಸಂಭಾಷಣೆ ತುಂಬಿಹೋಗಿರುವುದರಿಂದ ಹೀಗೆ ಅರ್ಥೈಸುವುದು ಅನಿವಾರ್ಯವಾಗಿದೆ.

‘ಮನಸಾರೆ’ಯಲ್ಲಿ ಸಂಭಾಷಣೆ ವಿಭಿನ್ನವಾಗಿದೆ, ನಿಜ. ಅದೇ ಚಿತ್ರದ ನಾಯಕ, ಜೀವಾಳ, ಆತ್ಮ ಎನ್ನುವುದೂ ನಿಜ. ಹಾಗೆಯೇ ಭಟ್ಟರಿಗೆ ಸಂಭಾಷಣೆ ಮೂಲಕ ಮಿಂಚಬೇಕೆಂಬ ಉತ್ಕಟ ಆಸೆಯೂ ಇದೆ. ತಮ್ಮನ್ನು ತಾವು ನಿಯಂತ್ರಿಸಿಕೊಂಡು ಬದಲಾಗಿದ್ದೇನೆಂದು ತೋರಿಸಿಕೊಳ್ಳುವ ತುಡಿತವೂ ಇದೆ. ಹೀಗಾಗಿ ಬುದ್ಧಿಯ ಕಸರತ್ತಿಗಿಳಿದ ಯೋಗರಾಜ್ ಭಟ್ ವಿಭಿನ್ನವಾಗಿ ಕಾಣಲು, ತಮ್ಮನ್ನೇ ತಾವು ಮೀರಲು ಪ್ರಯತ್ನಿಸಿದ್ದಾರೆ. ತಮ್ಮ ಹಳೆಯ ಚಿತ್ರಗಳ ಪ್ರಭಾವದಿಂದ ಹೊರಬರಲು ತಿಣುಕಿದ್ದಾರೆ. ಇದು ನಿಜಕ್ಕೂ ಬೆಳೆಯಬಲ್ಲ ನಿರ್ದೇಶಕನಲ್ಲಿರಬೇಕಾದ ಗುಣಸ್ವಭಾವಗಳೆ.

ಹಾಗೆಯೇ ‘ಮನಸಾರೆ’ಯಲ್ಲಿ ಮಳೆಯಿಲ್ಲ; ಹುಚ್ಚುಪ್ರೀತಿಯ ಮಳೆಯಿದೆ. ತಮ್ಮ ಪೆಟ್ ನಟರಾದ ಅನಂತ್‌ನಾಗ್-ರಂಗಾಯಣ ರಘುವಿಲ್ಲ; ಕಾಮಿಡಿಯಿದೆ. ಬೇರೆ ಭಾಷೆಯಿಂದ ಕತೆ ಕದ್ದಿಲ್ಲ; ಆಂಟನ್ ಚೆಕಾವ್‌ನ ಕತೆ, ಕೆನ್ ಕೆಸೇನ ಒನ್ ಫ್ಲ್ಯೂ ಒವರ್ ಎ ಕುಕೂಸ್ ನೆಸ್ಟ್, ಕತ್ತಲೆ ದಾರಿ ದೂರ ಎಂಬ ನಾಟಕಗಳ ಸ್ಫೂರ್ತಿ, ಪ್ರೇರಣೆ, ಛಾಯೆಗಳಿವೆ.

ಹೀಗೆ ತಮ್ಮ ಬುದ್ಧಿಯನ್ನೆಲ್ಲ ಬಸಿದು ಕತೆ ಕಟ್ಟಿದ್ದಾರೆ, ಪವನ್‌ಕುಮಾರ್‌ರಿಂದ ಅಷ್ಟೇ ಸತ್ವಯುತವಾದ ಚಿತ್ರಕಥೆ ಹೆಣೆಸಿದ್ದಾರೆ. ತಾವೇ ಕೂತು ಪದಗಳೊಂದಿಗೆ ಪಗಡೆಯಾಟಕ್ಕಿಳಿದು ಸಂಭಾಷಣೆಯ ಸರಪಳಿ ಜೋಡಿಸಿದ್ದಾರೆ. ಯಥಾಪ್ರಕಾರ ಜಯಂತ ಕಾಯ್ಕಿಣಿಯವರಿಂದ ಗೀತರಚನೆಯನ್ನು, ಮನೋಮೂರ್ತಿಯವರಿಂದ ಮೆಲೋಡಿ ರಾಗಸಂಯೋಜನೆಯನ್ನು, ಕೃಷ್ಣರಿಂದ ಕ್ಯಾಮರಾ ಕೆಲಸವನ್ನು ಎಷ್ಟು ತೆಗೆಯಲಿಕ್ಕೆ ಸಾಧ್ಯವೋ ಅಷ್ಟೆಲ್ಲವನ್ನೂ ಹೊರತೆಗೆದಿದ್ದಾರೆ. ಒಟ್ಟಾರೆ ಚಿತ್ರತಂಡವೇ ಪ್ರಾಮಾಣಿಕವಾಗಿ ಶ್ರಮ ಸುರಿದಿದೆ. ತಂಡವನ್ನು ಸಮರ್ಪಕವಾಗಿ ಬಳಸಿಕೊಂಡ ಕ್ಯಾಪ್ಟನ್ ಭಟ್ಟರು ಗಾಂಧಿನಗರದ ಫಾರ್ಮುಲಾದಿಂದ ಹೊರತಾದ ಚಿತ್ರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಅಭಿರುಚಿ ಮತ್ತು ಮನರಂಜನೆಯನ್ನು ಮುಖ್ಯವಾಗಿಟ್ಟುಕೊಂಡು ನೋಡಬಹುದಾದ ಚಿತ್ರವನ್ನೇ ಕೊಟ್ಟಿದ್ದಾರೆ. ಆದರೆ ಅದಕ್ಕಾಗಿ ಒಂದೂವರೆ ವರ್ಷ ತೆಗೆದುಕೊಂಡಿದ್ದಾರೆ, ನಿರ್ಮಾಪಕರಿಂದ ಮೂರೂವರೆ ಕೋಟಿ ಖರ್ಚು ಮಾಡಿಸಿದ್ದಾರೆ, ಮೀಡಿಯಾ ಮ್ಯಾನೇಜ್ ಮಾಡಿದ್ದಾರೆ.

ಚಿತ್ರ ಬಿಡುಗಡೆಯಾದ ಈ ಗಳಿಗೆಯಲ್ಲಿ, ಎಲ್ಲರೂ ಹೇಳುವಂತೆ ಪ್ರೇಕ್ಷಕನ ಮೇಲೆ ಬಿಟ್ಟಿದ್ದೇನೆ ಎಂದಿದ್ದಾರೆ. ಪ್ರೇಕ್ಷಕ ಏನಾದರೂ, ‘ನೋಡ್ ತಮ್ಮಾ ಯಾರ್‍ನ ರಿಪೇರಿ ಮಾಡಾಕ್ ಆಗೂದಿಲ್ಲೋ ಅವ್ರೆಲ್ಲ ಥೇಟರ್ ಹೊರಗ್ ಇರ್ತಾರ, ನಮ್ಮಂಥೋರು ಒಳಗಿರ್ತಾರ…’ ಅಂತಂದ್ರೆ ಕೊಂಚ ಕಷ್ಟವಾಗಬಹುದು. ಅದು ಈಗಾಗಲೇ ಬೆಂಗಳೂರಿನ ಕೆಜಿ ರಸ್ತೆಯ ಸಾಗರ್ ಥಿಯೇಟರ್‌ನಲ್ಲಿ ಕಾಣುತ್ತಿದೆ. ಭಟ್ಟರ ಕೆಲ ಸಂಭಾಷಣೆಗಳನ್ನು ಬಾಲ್ಕನಿ ಆಡಿಯನ್ಸ್ ಎಂಜಾಯ್ ಮಾಡುತ್ತಿದ್ದಾರೆ. ಗಾಂಧಿ ಕ್ಲಾಸ್ ಖಾಲಿ ಹೊಡೆಯುತ್ತಿದೆ. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಗಟ್ಟಿಕುಳ ಆಗಿರುವುದರಿಂದ, ಮೀಡಿಯಾಗಳಿಂದ ಬಂದ ವಿಮರ್ಶೆ ಆಲ್‌ಮೋಸ್ಟ್ ಚೆನ್ನಾಗಿರುವುದರಿಂದ ಮುಂದಿನ ದಿನಗಳಲ್ಲಿ ಪಿಕಪ್ ಆಗಬಹುದೆಂಬ ನಿರೀಕ್ಷೆ ಇದೆ.

ಯೋಗರಾಜ್ ಭಟ್ ಕನ್ನಡ ಚಿತ್ರರಂಗ ಕಂಡ ಸಂವೇದನಾಶೀಲ ನಿರ್ದೇಶಕರಲ್ಲಿ ಒಬ್ಬರು ಎನ್ನುವುದರಲ್ಲಿ ಅನುಮಾನವಿಲ್ಲ. ‘ಮುಂಗಾರು ಮಳೆ’ಯಂತಹ ಸದಭಿರುಚಿಯ ಚಿತ್ರ ಕೊಟ್ಟ ಕಾರಣಕ್ಕಾಗಿ, ಆ ಚಿತ್ರದಿಂದುಂಟಾದ ಸಂಚಲನದಿಂದಾಗಿ ಸದ್ಯಕ್ಕೆ ಭಾರೀ ಬೇಡಿಕೆಯ ನಿರ್ದೇಶಕರು ಕೂಡ. ಹವಸೆಗಟ್ಟಿ ಕೂತಿದ್ದ ಚಿತ್ರರಂಗಕ್ಕೆ ‘ಮುಂಗಾರು ಮಳೆ’ಯಿಂದ ಹೊಸ ಪೀಳಿಗೆಯೇ ಹರಿದುಬರುವಂತಾಯಿತು, ಚಿತ್ರರಂಗದ ದಿಕ್ಕು ದೆಸೆಯೇ ಬದಲಾಯಿತು, ನಿಜ.

ಆದರೆ, ಇವತ್ತು ಮೀಡಿಯಾಗಳಲ್ಲಿ ಭಟ್ಟರು ಮಿಂಚುತ್ತಿರುವ ಪರಿ ನೋಡಿದರೆ, ಕನ್ನಡದಲ್ಲಿ ಈ ಹಿಂದೆ ಇಂತಹ ನಿರ್ದೇಶಕರು ಬಂದೇ ಇಲ್ಲವೇನೋ, ಉತ್ತಮ ಚಿತ್ರಗಳು ತೆರೆ ಕಂಡೇ ಇಲ್ಲವೇನೋ ಎಂಬ ಅನುಮಾನ ಹುಟ್ಟುತ್ತದೆ. ಭಟ್ಟರು ತಮ್ಮನ್ನು ತಾವು ಹಾಡಿ ಹೊಗಳಿ ಎಂದು ಯಾರಿಗೂ ದುಂಬಾಲು ಬೀಳದೆಯಿರಬಹುದು. ಆದರೆ ಮಾಧ್ಯಮಗಳಲ್ಲಿರುವ ಮಂದಿಯ ಮಂದಬುದ್ಧಿಯೋ ಅಥವಾ ಇನ್ನಾವುದೋ ‘ಪ್ರೀತಿ’ಯೋ ಅವರನ್ನು ಅಟ್ಟದ ಮೇಲೆ ಕೂರಿಸಿದೆ. ಅವರಿಂದ ಬೆಟ್ಟದಷ್ಟನ್ನು ನಿರೀಕ್ಷಿಸುತ್ತಿದೆ. ಮಾಧ್ಯಮಗಳ ಹೊಗಳಿಕೆಗೆ ತುತ್ತಾದವರು, ಭಟ್ಟಂಗಿಗಳ ಭೋಪರಾಕ್‌ಗೆ ಕಿವಿಗೊಟ್ಟವರು ಭೂಗತರಾದ ಉದಾಹರಣೆಗಳು ನಮ್ಮ ಕಣ್ಣಮುಂದೆ ಸಾಕಷ್ಟಿವೆ.

ಇದನ್ನು ಭಟ್ಟರು ಆದಷ್ಟು ಬೇಗ ಅರಿತುಕೊಂಡರೆ, ಅವರೂ ಉಳಿಯುತ್ತಾರೆ, ಒಂದಷ್ಟು ಒಳ್ಳೆಯ ಚಿತ್ರಗಳಿಗೂ ದಾರಿಯಾಗುತ್ತದೆ.

–ಬಸವರಾಜು

  • Share/Bookmark